More

    ಗುಳೆ ಹೋದವರಿಗೆ ರಾಜಾತಿಥ್ಯ !

    ಬಾಗಲಕೋಟೆ: ಅಕ್ಕಾರ, ಅಣ್ಣಾರ ಬರ‌್ರಿ..ಈಗ ಬಂದ್ರೇನ್… ಪ್ರಯಾಣ ಬರೋಬರ್ ಆಯ್ತಿಲ್ಲೋ, ನಮ್ಮ ಹುಡಗ ಚಲೋ ನೋಡಕೊಂಡೋ ಇಲ್ರಿ… ಬ್ಯಾಗ್, ಚೀಲ ನಮಗ ಕೈಯಾಗ ಕೊಡ್ರಿ… ಮೊದಲ ವೋಟ್ ಹಾಕ್ರಿ. ನಂತರ ಮನಿಗಿ ಹೋಗವಂತ್ರಿ..!

    ಇದು ಮದುವೆ, ಉಪನಯನ ಇತರ ಶುಭ ಕಾರ್ಯಕ್ಕೆ ಬೀಗರನ್ನು ಬರಮಾಡಿಕೊಂಡ ಕ್ಷಣವಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಹಿನ್ನೆಲೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಪಂ ವ್ಯಾಪ್ತಿಯ ಪುಟ್ಟ ಗ್ರಾಮ ತಿಮ್ಮಸಾಗರದಲ್ಲಿ ಗುಳೆ ಹೋಗಿದ್ದ ಮತದಾರರನ್ನು ಸ್ವಾಗತಿಸಿದ ಪರಿ ಇದು. ಹೊಟ್ಟೆ ಪಾಡಿಗಾಗಿ ಬೆಂಗಳೂರು, ಮಂಗಳೂರಿಗೆ ಗುಳೆ ಹೋದವರನ್ನು ಖಾಸಗಿ ಬಸ್‌ಗಳ ಮೂಲಕ ಮತದಾನಕ್ಕೆ ಕರೆ ತಂದ ವೇಳೆ ಮತದಾರರಿಗೆ ಅಭ್ಯರ್ಥಿಗಳು, ಗ್ರಾಮದ ಮುಖಂಡರು ರಾಜಾತಿಥ್ಯ ನೀಡಿದರು.

    ಬರಗಾಲ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪಕ್ಕೆ ತಿಮ್ಮಸಾಗರ ಗ್ರಾಮವೇ ನಲುಗಿದ್ದು, ಎಲ್ಲರೂ ತಮ್ಮ ಕುಟುಂಬ ಸಮೇತರಾಗಿ ಜಮೀನು, ಮನೆ, ಮಠ ಬಿಟ್ಟು ಬೆಂಗಳೂರು, ಮಂಗಳೂರು ಭಾಗಕ್ಕೆ ತೆರಳಿ ದುಡಿಮೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ 1304 ಮತದಾರರು ಇದ್ದಾರೆ. ಅರ್ಧದಷ್ಟು ಮತದಾರರು 15-20 ವರ್ಷಗಳಿಂದ ಮಹಾನಗರಿಗಳಿಗೆ ವಲಸೆ ಹೋಗುತ್ತಿದ್ದಾರೆ. ವಿಧಾನಸಭೆ, ಲೋಕಸಭೆ, ತಾಪಂ, ಜಿಪಂ, ಗ್ರಾಪಂ ಯಾವುದೇ ಚುನಾವಣೆ ಇರಲಿ ರಾಜಕೀಯ ಪಕ್ಷಗಳ ನಾಯಕರು, ಚುನಾವಣೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಬಸ್‌ಗಳಲ್ಲಿ ಮತದಾರರನ್ನು ಕರೆ ತರುತ್ತಾರೆ. ಮತದಾರರು ಕೂಡ ಗ್ರಾಮದ ಅಭಿವೃದ್ಧಿ, ಯೋಜನೆ ಬಗ್ಗೆ ಪ್ರಶ್ನಿಸದೆ ತಮ್ಮನ್ನು ಕರೆದುಕೊಂಡ ಬಂದ ಅಭ್ಯರ್ಥಿ ಪರ ಮತದಾನ ಮಾಡುತ್ತಾರೆ.

    ಬಸ್‌ನಿಂದ ಇಳಿಯುತ್ತಲೆ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಮ್ಮ ಹಿರೇಮಠ, ಈರಮ್ಮ ಕುರಿ ನಮ್ಮ ಗ್ರಾಮದಲ್ಲಿ ಏನಿದೆ ಹೇಳ್ರಿ ಸಾಹೇಬ್ರ… ಒಣ ಬೇಸಾಯ ಕೃಷಿ ಇದೆ. ಮಳೆಯಾದರೆ ಬೆಳೆ. ಇಲ್ಲ ಅಂದರೆ ಏನೂ ಇಲ್ಲ. ಕೆಲಸ ಮಾಡೋನ ಅಂದ್ರೆ ಯಾವುದೇ ಕಾರ್ಖಾನೆ ಇಲ್ಲ. ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಿಸಲಾಗಿದೆ. 20 ವರ್ಷವಾದರೂ ಒಂದು ಹನಿ ನೀರು ಹರಿದಿಲ್ಲ. ಹಿಂಗ ಆದ್ರ ಹೆಂಗ ಜೀವನ ಮಾಡೋದ ಹೇಳಿ. ಹೊಟ್ಟೆ ತುಂಬಿಸಿಕೊಳ್ಳಲು ಮಂಗಳೂರಿಗೆ ಹೋಗಿದ್ದೇವೆ. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ಇದರಿಂದ ಜೀವನ ಉತ್ತಮವಾಗಿ ಸಾಗುತ್ತಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ ಎಂದರು.

    ಇದು ಕೇವಲ ತಿಮ್ಮಸಾಗರ ದೃಶ್ಯವಲ್ಲ. ಐತಿಹಾಸಿಕ ತಾಣ ಪಟ್ಟದಕಲ್ಲು, ಐಹೊಳೆ, ಗುಡೂರು ಸೇರಿದಂತೆ ಹುನಗುಂದ, ಬಾದಾಮಿ, ಗುಳೇದಗುಡ್ಡ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯ. ಹೊಟ್ಟೆಗಾಗಿ ವಲಸೆ ಹೋದರೂ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಲು ಪ್ರತಿ ಚುನಾವಣೆಗೂ ಗ್ರಾಮಕ್ಕೆ ಮರಳುತ್ತಾರೆ.

    ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ದೊಡ್ಡ ಸಂಸಾರ ನೀಗಿಸುವುದು ಕಷ್ಟ. ಅದಕ್ಕೆ ಗುಳೇ ಹೋಗಿದ್ದೇವೆ. ಚುನಾವಣೆ ಬಂದರೆ ಗ್ರಾಮದ ಮುಖಂಡರು, ಅಭ್ಯರ್ಥಿಗಳು ಬಸ್‌ಗಳ ಮೂಲಕ ನಮ್ಮನ್ನು ಕರೆಸಿಕೊಳ್ಳುತ್ತಾರೆ. ಬಂದು ಮತದಾನ ಮಾಡುತ್ತೇವೆ. ಕೋವಿಡ್ ಬಂದ ಮೇಲೆ ಅಲ್ಲಿಯೂ ತೊಂದರೆಯಾಗಿತ್ತು. 10 ತಿಂಗಳಿನಿಂದ ಊರಿಗೆ ಬಂದಿರಲಿಲ್ಲ. ಮಹಾ ಮಳೆಗೆ ಹಿರಿಯರು ಕಟ್ಟಿಸಿದ ಮನೆ ಏನಾಗಿದೆ ಎನ್ನುವ ಚಿಂತೆಯಲ್ಲಿ ಕಾಲ ಕಳೆದಿದ್ದೇವೆ. ವೋಟ್ ಹಾಕಿ ಮನೆ ನೋಡಿಕೊಂಡು ಸಂಜೆ ವೇಳೆ ಮತ್ತೆ ಇದೇ ಬಸ್‌ನಲ್ಲಿ ಮಂಗಳೂರಿಗೆ ವಾಪಸ್ ಹೋಗುತ್ತೇವೆ.
    ಶೌರವ್ವ ಸಬ್ಬಸಣಸಗಿ, ಗ್ರಾಮಸ್ಥೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts