More

    ಮಹಾಶಿವರಾತ್ರಿಗೆ ಕೋಟೆನಾಡು ಸಜ್ಜು

    ಬಾಗಲಕೋಟೆ: ಮಹಾಶಿವರಾತ್ರಿ ಸಂಭ್ರಮಕ್ಕೆ ಕೋಟೆನಾಡು ಸಜ್ಜುಗೊಂಡಿದೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಮುಖ ಪ್ರದೇಶಗಳಲ್ಲಿರುವ ಶಿವಾಲಯಗಳಲ್ಲಿ ಗುರುವಾರ ಶಿವರಾತ್ರಿ ದಿನದಂದು ವಿಶೇಷ ಪೂಜೆ, ಆರಾಧಾನೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಕೋಟೆನಾಡಿನಲ್ಲಿ ಐತಿಹಾಸಿಕ ದೇವಾಲಯಗಳಾದ ಮಹಾಕೋಟೇಶ್ವರ, ಕೂಡಲಸಂಗಮ, ಚಿಕ್ಕ ಸಂಗಮ, ಶಿವಯೋಗಿ ಮಂದಿರ ಸೇರಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉಪವಾಸ ವ್ರತ ಮಾಡಿ ಶಿವನನ್ನು ಪೂಜೆಸಲಾಗುತ್ತದೆ. ಬಿಲ್ವ ಪತ್ರೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಗುರುವಾರ ಮನೆ ಮನೆಗಳಲ್ಲಿ ಲಯಕರ್ತನ ಜಪ ನಡೆಯಲಿದೆ.

    ಸತ್ಯ ಶಿವಂ ಸುಂದರಂ ದೇವಸ್ಥಾನ
    ನಗರದ ಕಲಾದಗಿ ರಸ್ತೆಯಲ್ಲಿರುವ ಮುಚಖಂಡಿ ಕ್ರಾಸ್ ಸಮೀಪದ ಶಿವಾಲಯ ಸತ್ಯಂ ಶಿವಂ ಸುಂದರಂ ನಗರದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ಒಂದಾಗಿದೆೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಿತ್ಯವು ಭಕ್ತರು ಆಗಮಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿ ದಿನ ದೇವಾಲಯಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಸಂಜೆ ಅದ್ದೂರಿಯಾಗಿ ಜಾತ್ರೆ ಜರುಗಲಿದೆ. ರಾತ್ರಿ ಶಿವರಾತ್ರಿ ಜಾಗರಣೆ ಹಮ್ಮಿಕೊಳ್ಳಲಾಗಿದ್ದು, ಶಿವನ ನಾಮ ಸ್ಮರಣೆ ಮಾಡುತ್ತ ವೇದ ಘೋಷಗಳ ನಡುವೆ ಶಿವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಫೆ.12 ರಂದು ಬೆಳಗ್ಗೆ ವಿಶೇಷ ಪೂಜೆ ನಂತರ ಶಿವರಾತ್ರಿಗೆ ಮಂಗಳ ಹಾಡಲಾಗುತ್ತದೆ.

    ಸೌರಾಷ್ಟ್ರ ಸೋಮಲಿಂಗೇಶ್ವರ ಮಂದಿರ
    ನವನಗರದ ಸೆಕ್ಟರ್ 25 ರಲ್ಲಿರುವ ಸೌರಾಷ್ಟ್ರ ಸೋಮಲಿಂಗೇಶ್ವರ ಶಿವಾಲಯ ಈಚೆಗಿನ ದಿನಗಳಲ್ಲಿ ಆಕರ್ಷಿಸುತ್ತಿದೆ. ಮಹಾ ಶಿವನೇ ಇಲ್ಲಿ ಬಂದು ನೆಲಿಸಿದ್ದಾನೆ ಎನ್ನುವ ಭಾವ ದೇವಸ್ಥಾನದಲ್ಲಿ ಹೊರ ಹೊಮ್ಮುತ್ತದೆ. ಶಿವರಾತ್ರಿ ದಿನ ಬೆಳಗ್ಗೆಯಿಂದ ವಿವಿಧ ಪೂಜೆ ಜರುಗಲಿವೆ. ವಿವಿಧ ಮಠಾಧೀಶರು, ಪಂಡಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯ, ಮಹಾರುದ್ರಾಭಿಷೇಕ ನಡೆಯಲಿದೆ.

    ಮೆಡಿಕಲ್ ಕಾಲೇಜಿನ ಶಿವಾಲಯ
    ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಆವರಣದಲ್ಲಿರುವ ಶಿವಾಲಯದಲ್ಲಿ ಪಿಎಂಎನ್‌ಎಂ ದಂತ ಕಾಲೇಜು, ಸಜ್ಜಲಶ್ರೀ ನರ್ಸಿಂಗ್ ಕಾಲೇಜು ಹಾಗೂ ಫಿಜಿಯೋಥೆರಪಿ ಕಾಲೇಜು ಸಹಯೋಗದೊಂದಿಗೆ ಮಾ.11 ರಂದು ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಲಿದೆ. ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ನಂತರ 11 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಅಕ್ಕನ ಬಳಗದ ಸದಸ್ಯೆಯರಿಂದ ಶ್ರೀರುದ್ರ ಪಾರಾಯಣ ನಡೆಯಲಿದೆ. ಸಂಜೆ 6 ಗಂಟೆಗೆ ಮಹಾಪ್ರಸಾದ ವಿತರಣೆ ಜರುಗಲಿದೆ.

    ಸಂಜೆ 6.30 ರಿಂದ ನಡೆಯಲಿರುವ ಸಂಗೀತ ಶಿವರಾತ್ರಿ ಕಾರ್ಯಕ್ರಮದಲ್ಲಿ ಬಸವೇಶ್ವರ ಕಲಾ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಸಿದ್ದರಾಮಯ್ಯ ಮಠಪತಿ (ಗೊರಟಾ) ಅವರಿಂದ ‘ನಾದ ವೈಭವ’ ನಡೆಯಲಿದ್ದು, ಡಾ.ಕಾಶಿಲಿಂಗ ಮಠ ಹಾರ್ಮೋನಿಯಂ, ಡಾ.ರೇವಣಸಿದ್ದೇಶ ಬೆಣ್ಣೂರ ಮತ್ತು ಪ್ರಸಾದ ಉಮರ್ಜಿ ತಬಲಾ ಸಾಥ್ ನೀಡಲಿದ್ದಾರೆ. ಅಲ್ಲದೆ, ಮೆಡಿಕಲ್ ಕಾಲೇಜಿನ ಡಾ.ಅಶ್ವಿನಿ ಮುತಾಲಿಕ್ ಮತ್ತು ತಂಡದಿಂದ ಭಜನಾ ಸಂಧ್ಯಾ-ಶಿವಸ್ತೋತ್ರ ವಿಶೇಷ ಕಾರ್ಯಕ್ರಮ ಜರುಗಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ) ತಿಳಿಸಿದ್ದಾರೆ.

    ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ
    ಹಳೇ ನಗರದ ಎಂ.ಜಿ. ರಸ್ತೆಯಲ್ಲಿ ಶಿವನ ಸ್ವರೂಪಿಯಾದ ಶ್ರೀಶೈಲ ಮಲ್ಲಿಕಾರ್ಜುನನ್ನು ಸ್ಥಾಪಿಸಲಾಗಿದೆ. ಸ್ವಾಮಿ ಮಲ್ಲಿಕಾರ್ಜುನನಿಗೆ ಶಿವರಾತ್ರಿ ದಿನದಂದು ವಿಶೇಷ ಪೂಜೆ ಜರುಗಲಿದೆ. ಬೆಳಗ್ಗೆ ಅಮೃತ ಮೂಹೂರ್ತದಲ್ಲಿ ರುದ್ರಾಭಿಷೇಕ, ಸಂಜೆ ಬಿಲ್ವಾರ್ಚನೆ ಪೂಜಾ ಕೈಂಕರ್ಯಗಳು ನಡೆಯಲಿವೆ. ರಾತ್ರಿ ಜಾಗರಣೆ, ಬೆಳಗ್ಗೆ ರುದ್ರಾಭಿಷೇಕದ ನಂತರ ಬುತ್ತಿ ಪೂಜೆ ನಡೆಯಲಿದೆ.

    ಆನಂದೇಶ್ವರ ದೇಗುಲ
    ಹಳೇ ನಗರದ ಟೀಕಿನಮಠ ಹತ್ತಿರ ಇರುವ ವಿಷ್ಣು ಆನಂದೇಶ್ವರ ದೇವಸ್ಥಾನ ನಗರದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಪೇಶ್ವೆಗಳ ಆಡಳಿತ ಅವಧಿಯಲ್ಲಿ ನಿರ್ಮಾಣವಾಗಿರುವ ಆನಂದೇಶ್ವರ ದೇವಸ್ಥಾನ ಪುರತಾನ ಶಿಲ್ಪಗಳಲ್ಲಿ ಇದೆ. ಇಲ್ಲಿ ಆನಂದಮಯವಾಗಿ ಕಂಗೂಳಿಸುವ ಶಿವನು, ಶಾಂತಮಯವಾಗಿ ನೆಲೆಸಿದ್ದಾನೆ. ಶಿವರಾತ್ರಿ ದಿನದಂದು ವಿಶೇಷವಾಗಿ ಪೂಜೆ, ಮಂತ್ರಘೋಷಗಳು ಮೊಳಗುತ್ತವೆ. ಹಳೇ ನಗರದ ಅಸಂಖ್ಯಾತ ಭಕ್ತರು ಆರಾಧ್ಯ ದೈವವಾಗಿದ್ದಾನೆ. ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ಜರುಗಲಿವೆ.

    ಕೇದಾರೇಶ್ವರ ಮಂದಿರ
    ಹಳೇ ಬಾಗಲಕೋಟೆ ಕಿಲ್ಲಾ ಗಲ್ಲಿಯಲ್ಲಿರುವ ಕೇದಾರೇಶ್ವರ ದೇವಸ್ಥಾನದಲ್ಲಿ ಶಿವಾರಾತ್ರಿ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗುತ್ತವೆ. ರುದ್ರಾಭೀಷೇಕ, ರುದ್ರ ಪಠಣ ನಡೆಯಲಿದೆ. ಹರ ಹರ ಮಹಾದೇವ ಎನ್ನುವ ಭಕ್ತಿಯ ಘೋಷಣೆ ಮೊಳಗಲಿದೆ. ಶಿವ ಜಾಗರಣೆ ನಡೆಯಲಿದೆ. ಅಲ್ಲದೆ, ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಶಿವನಾಮ ಜಪಿಸಲು ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಜತೆಗೆ ರಾತ್ರಿ ಜಾಗರಣೆ ನಡೆಸಲಿದ್ದಾರೆ. ಇದಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ ಸಾಕಷ್ಟು ಭಕ್ತರು ಶಿವರಾತ್ರಿ ಅಂಗವಾಗಿ ನಿರಾಹಾರ ವ್ರತ ನಡೆಸಲಿದ್ದಾರೆ.

    ಮಾಧವ ಸೇವಾ ಕೇಂದ್ರದಿಂದ
    ನಗರದ ಬಸವ ವೃತ್ತದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಾಧವ ಸೇವಾ ಕೇಂದ್ರದಿಂದ ಗುರುವಾರ ಸಂಜೆ 7 ಗಂಟೆಗೆ ಶಿವಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಂಗೀತಗಾರ ನಾರಾಯಣ ತಾಸಗಾಂವ ಹಾಗೂ ಜಯತೀರ್ಥ ತಾಸಗಾಂವ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಭರತನಾಟ್ಯ ಕಲಾವಿದೆ ಶ್ರೇಯಾ ಪ್ರಹ್ಲಾದ ಕುಲಕರ್ಣಿ ಭರತನಾಟ್ಯ ಪ್ರದರ್ಶನ ಜರುಗಲಿದೆ ಮಾಧವ ಸೇವಾಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ, ಕಾರ್ಯದರ್ಶಿ ಅರವಿಂದ ನಾವಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



    ಮಹಾಶಿವರಾತ್ರಿಗೆ ಕೋಟೆನಾಡು ಸಜ್ಜು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts