More

    ಒಪ್ಪಿದರೆ ವಿಜಯೋತ್ಸವ ಇಲ್ಲವಾದರೆ ಹೋರಾಟ

    ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ನೀಡುವ ಬಗ್ಗೆ ಜ. 14ರೊಳಗೆ ಸರ್ಕಾರ ಸ್ಪಷ್ಟ ಪಡಿಸಬೇಕು. ಒಪ್ಪಿದರೆ ಸಂಕ್ರಾಂತಿ ದಿನ ವಿಜಯೋತ್ಸವ ಇಲ್ಲವಾದಲ್ಲಿ ಬೃಹತ್ ಪಾದಪಾತ್ರೆ ಮೂಲಕ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಂಚಮಸಾಲಿ ಸಮಾಜಕ್ಕೆ ನಿಗಮ ಮಂಡಳಿ, ಸಚಿವ ಸ್ಥಾನ ಕೇಳುತ್ತಿಲ್ಲ. ಶೈಕ್ಷಣಿಕ, ಉದ್ಯೋಗದಲ್ಲಿ ಮೀಸಲಾತಿ ಕೇಳುತ್ತಿದ್ದೇವೆ. ಈ ಹಿಂದೆ ಅನೇಕ ಸಾರಿ ಹೋರಾಟ ನಡೆಸಿದಾಗ ಸಿಎಂ ಬಿ.ಎಸ್. ಯಡಿಯೂರಪ್ಪ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ. ಈಚೆಗೆ ಸಚಿವ ಸಿ.ಸಿ. ಪಾಟೀಲ ನೇತೃತ್ವದ ಸರ್ಕಾರದ ನಿಯೋಗಕ್ಕೆ ನಮ್ಮ ಬೇಡಿಕೆ ತಿಳಿಸಿದ್ದೇವೆ. ಸರ್ಕಾರದಿಂದ ಈ ವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜ.14 ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಆರಂಭವಾಗಲಿದೆ. 1 ತಿಂಗಳ ವರೆಗೆ ಪಾದಯಾತ್ರೆ ನಡೆಯಲಿದ್ದು, ಇಳಕಲ್ಲ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪಹಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮಾರ್ಗವಾಗಿ ವಿಧಾನಸೌಧ ತಲುಪಿ ಮುತ್ತಿಗೆ ಹಾಕಲಾಗುವುದು ಎಂದರು.

    ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ವಿರೋಧದ ಧ್ವನಿ ಮೊಳಗಿಸಿದವರ ಬಾಯಿಗೆ ಸಿಹಿ ಹಾಕುತ್ತೇನೆ. ಹೋರಾಟಕ್ಕೆ ಮುಳ್ಳಾದವರ ಮನೆ, ಮಠಕ್ಕೆ ಹೂ ಮಾಲೆ ಹಾಕಿ ಮುಂದೆ ಸಾಗುತ್ತೇವೆ ಎಂದ ಅವರು, ಹರಿಹರ ಪೀಠದ ವಚನಾನಂದ ಸ್ವಾಮೀಜಿ ಕೂಡ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
    ಅಖಿಲ ಭಾರತೀಯ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಲಿಂಗಾಯತ ಮುಖ್ಯಮಂತ್ರಿ ಎಂದು ಕರೆಯಿಸಿಕೊಂಡಿದ್ದಾರೆ. ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಮಾತಿಗೆ ತಪ್ಪಿ ನಡೆದರೆ ಜೀವವನ್ನಾದರು ಕೊಡುತ್ತೇವೆ ಮೀಸಲಾತಿ ಬಿಡುವುದಿಲ್ಲ ಎಂದು ಹೇಳಿದರು.

    ಸಮಾಜದ ಮುಖಂಡರಾದ ಚನ್ನವೀರ ಅಂಗಡಿ, ಮಂಜುನಾಥ ಪುರತಗೇರಿ, ಸಂಗಮೇಶ ದೊಡ್ಡಮನಿ, ಬಸವರಾಜ ಶಿರೂರ ಇದ್ದರು.

    ಪ್ರತಿ ವರ್ಷ ಸಂಕ್ರಾಂತಿ ದಿನ ಶ್ರೀಮಠದಿಂದ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿ 2012 ದಿಂದ ನೀಡುತ್ತ ಬರಲಾಗಿದೆ. ಈ ಸಾರಿ ಮೀಸಲಾತಿ ಹೋರಾಟ ನಡೆಯುತ್ತಿರುವ ಕಾರಣ ಪಾದಯಾತ್ರೆ ಪೂರ್ಣಗೊಂಡ ಬಳಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ 1 ಲಕ್ಷ ರೂ. ನಗದು ಪುರಸ್ಕಾರ, ತಾಮ್ರ ಪತ್ರ ಸ್ಮರಣಿಕೆ ಒಳಗೊಂಡಿದ್ದು, ಈ ಸಾರಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಗಾರರ ಪರವಾಗಿ ಮುಂಚೂಣಿಯಲ್ಲಿರುವ ನಾಯಕರಿಗೆ ಪ್ರಶಸ್ತಿ ನೀಡಲಾಗುವುದು.
    ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠದ ಜಗದ್ಗುರುಗಳು ಕೂಡಲಸಂಗಮ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts