More

    ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ

    ಬಾಗಲಕೋಟೆ: ಎರಡು ಕುಟುಂಬಗಳ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ.

    ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಹೊರವಲಯದ ತೋಟದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಮುದರಡ್ಡಿ(ಉದಗಟ್ಟಿ) ಕುಟುಂಬದ ಸಹೋದರರಾದ ಹನಮಂತ ಮಹಾದೇವ ಮುದರಡ್ಡಿ(45), ಮಲ್ಲಪ್ಪ(42) ಬಸಪ್ಪ(37) ಹಾಗೂ ಈಶ್ವರ(35)ಕೊಲೆಯಾಗಿರುವ ದುರ್ದೈವಿಗಳು.

    ಮುದರಡ್ಡಿ ಕುಟುಂಬದವರು ಗ್ರಾಮದ ಪುಟಾಣಿ ಕುಟುಂಬದವರಿಂದ ಜಮೀನು ಖರೀದಿ ಮಾಡಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ವಿವಾದ ಸ್ಫೋಟಗೊಂಡು ನಾಲ್ವರ ಕೊಲೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
    ಮಾರಕಾಸ್ತ್ರಗಳೊಂದಿಗೆ ತೋಟದ ಮನೆಗೆ ನುಗ್ಗಿ ನಾಲ್ವರು ಸಹೋದರರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಗ್ರಾಮದಿಂದ ಕೊಲೆಯಾದ ಸ್ಥಳ ಎರಡ್ಮೂರು ಕಿ.ಮೀ. ದೂರದಲ್ಲಿದ್ದು, ರಾತ್ರಿ ಹಾಗೂ ಮಳೆ ಆರಂಭವಾಗಿದ್ದರಿಂದ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಿಲ್ಲ.

    ಕೊಲೆಯಾಗಿರುವ ಸುದ್ದಿ ತಿಳಿದು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿದ್ದರಿಂದ ರಾತ್ರಿಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ದೌಡಾಯಿಸಿದ್ದಾರೆ. ಸಿಪಿಐ ಐ.ಎಂ.ಮಠಪತಿ, ಪಿಎಸ್‌ಐ ಬಸವರಾಜ ಅವಟಿ ಸೇರಿ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಜಮೀನು ಬಿಟ್ಟುಕೊಡದಿದ್ದಕ್ಕೆ ಆಕ್ರೋಶ
    ಪುಟಾಣಿ ಕುಟುಂಬದವರಿಂದ ಖರೀದಿಸಿದ್ದ 3ಎಕರೆ 21 ಗುಂಟೆ ಜಮೀನಿನಲ್ಲಿ 21 ಗುಂಟೆ ಜಾಗವನ್ನು ಬಿಟ್ಟು ಕೊಡುವುದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುದರಡ್ಡಿ ಕುಟುಂಬದವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಆ ಜಮೀನು ಬಿಟ್ಟು ಕೊಡದೆ ಸತಾಯಿಸಿದ್ದರಿಂದ ಪುಟಾಣಿ ಕುಟುಂಬದವರು ದುಷ್ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಘಟನೆಯಿಂದಾಗಿ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಗ್ರಾಮಸ್ಥರು ಸದ್ಯ ಘಟನೆ ಬಗ್ಗೆ ಏನೊಂದು ಹೇಳುತ್ತಿಲ್ಲ. ಕೊಲೆ ಮಾಡಿದ್ದಾೃರು? ಯಾಕಾಗಿ ಈ ಭೀಕರ ಹತ್ಯೆ ನಡೆಸಿದ್ದಾರೆ? ಜಮೀನು ವಿವಾದವೇ ಅಥವಾ ಬೇರೆ ಏನಾದರೂ ಕಾರಣ ಇರಬಹುದಾ ಎನ್ನುವುದು ತಡರಾತ್ರಿವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಲಿಲ್ಲ.

    ಆರೋಪಿ ಕುಟುಂಬದವರು ಪರಾರಿ
    ಕೊಲೆ ಮಾಡಿದ ಆರೋಪಿ ಕುಟುಂಬದವರೆಲ್ಲರೂ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಯಾರೂ ಒಳಹೋಗದಂತೆ ಭದ್ರತೆ ಒದಗಿಸಲಾಗಿದೆ. ಕೊಲೆ ಆಗಿರುವ ಮುದರಡ್ಡಿ (ಉದಗಟ್ಟಿ) ಕುಟುಂಬ ಹಾಗೂ ಪುಟಾಣಿ ಕುಟುಂಬಗಳ ನಡುವೆ ಜಮೀನಿಗೆ ಸಂಬಂಧಿಸಿದಂತೆ ವೈರತ್ವವಿತ್ತು. ಆಸ್ತಿ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆದಿದೆ. ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts