More

    ವಿಎಂ ಶಿಕ್ಷಣ ಸಂಸ್ಥೆಯಿಂದ ಒತ್ತುವರಿ

    ಬಾಗಲಕೋಟೆ: ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಇರುವ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಿ.ವಿ. ಚರಂತಿಮಠ ಪಾಲಿಟೆಕ್ನಿಕ್ ಕಾಲೇಜಿನ ಜಮೀನಿಗೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ ಆರೋಪಿಸಿದರು.

    ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬದ್ನೂರ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ವಿಎಂ ಶಿಕ್ಷಣ ಸಂಸ್ಥೆಯು ಸರ್ಕಾರದ ಜಾಗೆಯನ್ನು ಅತಿಕ್ರಮಣ ಮಾಡಿಕೊಂಡಿದೆ ಎಂದು ದೂರಿದರು.

    ಲೋಕೋಪಯೋಗಿ ಇಲಾಖೆಗೆ ಸೇರಿರುವ ಸರ್ವೇ ನಂ. 162/ಬಿ ಹಾಗೂ 220 ಸರ್ವೇ ನಂಬರ್‌ನಲ್ಲಿ ಕ್ರಮವಾಗಿ 3 ಎಕರೆ 18 ಗುಂಟೆ ಹಾಗೂ 22 ಗುಂಟೆ ಜಮೀನು ಇದ್ದು, ಅದರಲ್ಲಿ ಅತಿಕ್ರಮಣ ಮಾಡಿದ್ದಾರೆ. 1983ರಲ್ಲಿ ಇಲ್ಲಿ ಕಾಲೇಜು ಕಟ್ಟಡ ಕಟ್ಟಲಾಗಿದೆ. ಇದೇ ಜಮೀನಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಧಾಬಾ ಹಾಕಿದ್ದು, ಅದೂ ಸಹ ಅತಿಕ್ರಮಣವಾಗಿದೆ. ಆ ಜಾಗ ತಮ್ಮದೆಂದು ಸಂಸ್ಥೆಯೂ 1995ರಿಂದ ಬಾಡಿಗೆ ಪಡೆದುಕೊಂಡಿದೆ. ಈ ಬಗ್ಗೆ 2017ರಲ್ಲಿ ಕರವೇ ತಹಸೀಲ್ದಾರ್‌ಗೆ ದೂರು ನೀಡಿತ್ತು. ಈ ಬಗ್ಗೆ ಕಂದಾಯ ಇಲಾಖೆ ಮೋಜಣಿ ಮಾಡಿ 1 ಎಕರೆ 20 ಗುಂಟೆ ಅತಿಕ್ರಮಣ ಆಗಿದೆ ಎಂದು ವರದಿ ನೀಡಿತ್ತು. ಆದರೆ, ಲೋಕೋಪಯೋಗಿ ಇಲಾಖೆ ಧಾಬಾವನ್ನು ಮಾತ್ರ ತೆರವುಗೊಳಿಸುವುದಾಗಿ ಹೇಳಿದೆ. ಇತ್ತ ಶಿಕ್ಷಣ ಸಂಸ್ಥೆಯೂ ಜಮೀನು ಲೀಜ್ ಪಡೆಯಲು ಪ್ರಸ್ತಾವನೆ ಸಲ್ಲಿಸಿದೆ ಎಂದು ಸಬೂಬು ಹೇಳುತ್ತಿದೆ ಎಂದರು.

    ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಕೋರಿಕೆಯಂತೆ 5.88 ಲಕ್ಷ ರೂ. ಶುಲ್ಕಕ್ಕೆ 20 ವರ್ಷಗಳ ಮಟ್ಟಿಗೆ ಜಮೀನು ಲೀಜ್ ನೀಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಅವರು ಶಾಸಕರಿದ್ದಾರೆ. ಅಲ್ಲದೆ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಮೇಲೆ ಪ್ರಭಾವ ಬೀರಿ ಲೀಜ್ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಒತ್ತುವರಿ ಜಾಗೆಯಲ್ಲಿ ಇರುವ ಕಟ್ಟಡ ತೆರವುಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಕರವೇ ಹುನಗುಂದ ತಾಲೂಕು ಘಟಕದ ಅಧ್ಯಕ್ಷ ರಮ್ಜಾನ್ ನದಾಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ಮಲ್ಲು ಕಟ್ಟಿಮನಿ ಮತ್ತಿತರರು ಇದ್ದರು.

    ಒತ್ತುವರಿ ಅಭ್ಯಾಸ ನಮಗಿಲ್ಲ
    ಇನ್ನು ಕರವೇ ಆರೋಪವನ್ನು ಸಂಸ್ಥೆ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ತಳ್ಳಿಹಾಕಿದ್ದು, ಇದು ಶುದ್ಧ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ. ನಮ್ಮ ಸಂಸ್ಥೆಯ ಜಮೀನು ಸಾಕಷ್ಟು ಇದೆ. ಬೇರೆಯವರು ಜಮೀನು ಒತ್ತುವರಿ ಮಾಡುವಂತ ಅಭ್ಯಾಸ ನಮಗೆ ಇಲ್ಲ. ಯಾರಾದರೂ ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸುವವರು ನಾವು, ನಾವೇ ಒತ್ತುವರಿ ಮಾಡುವವರಲ್ಲ. ಸಂಸ್ಥೆಗಳ ಅಭಿವೃದ್ಧಿಗಾಗಿ ಸರ್ಕಾರಿ ಜಮೀನು ಕೇಳಿರುತ್ತೇವೆ. ಈಗ ಗೋಶಾಲೆಗೆ ಜಮೀನು ಕೇಳಿದ್ದೇವೆ. ಪಿಡಬ್ಲುೃಡಿಗೆ ಬೇರೆ ಬೇರೆ ಕೆಲಸಕ್ಕೆ ಕೇಳಿರುತ್ತೇವೆ. ಅದನ್ನು ಸರ್ಕಾರ ಶುಲ್ಕ ನಿಗದಿ ಪಡಿಸಿ, ಇಲಾಖೆ ವತಿಯಿಂದ ಸಂಪುಟದಲ್ಲಿ ಇಟ್ಟು ನಿರ್ಧಾರ ಆಗುತ್ತದೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳುವವರು. ನನಗೆ ತಿಳಿದಮಟ್ಟಿಗೆ ಹುನಗುಂದದಲ್ಲಿ ನಮ್ಮ ಸಂಸ್ಥೆಯಿಂದ ಯಾವುದೇ ಒತ್ತುವರಿ ಆಗಿಲ್ಲ. ಆರೋಪವೆಲ್ಲ ನಿರಾಧಾರ. ಇಂತಹ ಸುಳ್ಳು ಆರೋಪಗಳಿಗೆ ಪ್ರತಿಸಲವೂ ಪ್ರತಿಕ್ರಿಯೆ ಕೊಡಲು ಆಗಲ್ಲ. ನಮ್ಮದೇನಿದ್ದರೂ ಅಭಿವೃದ್ಧಿ, ಕೆಲಸದ ಕಡೆಗೆ ಗಮನ ಎಂದು ಶಾಸಕ ಚರಂತಿಮಠ ಪ್ರತಿಕ್ರಿಯಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts