More

    ಸ್ವತಂತ್ರ ಸರ್ಕಾರ ಕೊಡಿ ಪರಿಪೂರ್ಣ ಸೇವೆ ಮಾಡುವೆ

    ಬಾಗಲಕೋಟೆ: ಜನರ ಆಶೀರ್ವಾದದಿಂದ ಎರಡು ಸಾರಿ ಮುಖ್ಯಮಂತ್ರಿ ಆಗಲಿಲ್ಲ. ಬೇರೆಯವರ ಹಂಗಿನಲ್ಲಿ ಅಧಿಕಾರ ಹಿಡಿದೆ. ಆದರೂ ಸಾವಿರಾರು ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ವರ್ಷಕ್ಕೆ ಕೇವಲ 6 ಸಾವಿರ ರೂ. ನೀಡುತ್ತಿರುವ ನರೇಂದ್ರ ಮೋದಿ ನೆನೆಯುತ್ತೀರಿ. ಒಂದು ಸಾರಿ ಸ್ವತಂತ್ರ ಸರ್ಕಾರ ರಚಿಸಲು ಪೂರ್ಣ ಬಹುಮತ ಕೊಡಿ. ಪರಿಪೂರ್ಣ ಸೇವೆ ಮಾಡುವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

    ನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಭಾನುವಾರ ಜೆಡಿಎಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸಂಘಟನಾ ಸಮಾವೇಶ, ನೂತನ ಗ್ರಾ.ಪಂ ಸದಸ್ಯರಿಗೆ ಸನ್ಮಾನ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    2006 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ 2500 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಕಬ್ಬು ಕಟಾವು ಆಗದೇ ಒಣಗಿ ಹೋಗುತ್ತಿತ್ತು. ಈ ವೇಳೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ನೀಡಿದೆ. 2018 ರಲ್ಲಿ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ನಲ್ಲಿ ರಾಜ್ಯದ 25 ಲಕ್ಷ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೇವಲ ವರ್ಷಕ್ಕೆ 6 ಸಾವಿರ ರೂ. ನೀಡುತ್ತಿದ್ದಾರೆ. ಪೆಟ್ರೋಲ್, ಡಿಸೇಲ್, ಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಆದರು ಅವರನ್ನೇ ನೆನೆಯುತ್ತೀರಿ. ನಾನು ಏನು ತಪ್ಪು ಮಾಡಿದ್ದೇನೆ ಹೇಳಿ ಎಂದು ಮಾರ್ಮಿಕವಾಗಿ ನುಡಿದರು.

    ದೇಶದಲ್ಲಿ 7 ಲಕ್ಷ ಕೋಟಿ ರೂ. ನಷ್ಟು ಮಕ್ಕಳ ಆಟಿಕೆ ವಹಿವಾಟು ನಡೆಯುತ್ತದೆ. ಇದನ್ನು ಮನಗಂಡು ಕಾಂಪಿಟ್ ವಿತ್ ಚೀನಾ ಯೋಜನೆ ಜಾರಿಗೆ ತಂದು ಕೊಪ್ಪಳದಲ್ಲಿ ಆಟಿಕ ತಯಾರಿಸುವ ಕ್ಲಸ್ಟರ್ ಸ್ಥಾಪಿಸಲು ಅನುಮತಿ ನೀಡಿದೆ. ಮೊನ್ನೆ ಸಿಎಂ ಯಡಿಯೂರಪ್ಪ ಹೋಗಿ ಭೂಮಿ ಪೂಜೆ ಮಾಡಿದರು. ಅದನ್ನೇ ಪ್ರಧಾನಿ ನರೇಂದ್ರ ಮೋದಿ ಇದೀಗ ಆತ್ಮನಿರ್ಭರ ಅಂತ ಹೇಳುತ್ತಿದ್ದಾರೆ ಲೇವಡಿ ಮಾಡಿದರು.

    ಕೊಡಗು ಪ್ರವಾಹವಾದಾಗ ಪ್ರತಿ ಮನೆಗೆ 9 ಲಕ್ಷ ರೂ. ವೆಚ್ಚದಲ್ಲಿ ನೂರಾರು ಮನೆ ನಿರ್ಮಿಸಿದೆ. ನಂತರದಲ್ಲಿ ರಾಜ್ಯದಲ್ಲಿ ಪ್ರವಾಹ ಉಂಟಾಗಿ ಹಾನಿಯಾದ ಮನೆಗಳಿ ಬಿಜೆಪಿ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.ಆದರೇ ಇದು ವರೆಗೂ ಅನೇಕ ಜನರಿಗೆ ಪರಿಹಾರ ತಲುಪಿಲ್ಲ. ನೀರಾವರಿ ಯೋಜನೆಗಳಿಗೆ ಬಿಡಿಗಾಸು ನೀಡಿಲ್ಲ. ನಾನು ಮೊದಲ ಸಾರಿ ಸಿಎಂ ಇದ್ದಾಗ ಲಾಟರಿ, ಸರಾಯಿ ನಿಷೇಧ ಮಾಡಿದೆ. ಇಂದು ರಾಜ್ಯದಲ್ಲಿ ಒಸಿ, ಮಟ್ಕಾ ದಂಧೆಯಿಂದಾಗ ಬಡವರ ಮಕ್ಕಳು ಬೀದಿ ಪಾಲಾಗುತ್ತಿದ್ದಾರೆ. ಇದು ಬಿಜೆಪಿ ಸಾಧನೆ. ಇಂತಹ ಸರ್ಕಾರ ಬೇಕಾ ಎಂದು ಪ್ರಶ್ನಿಸಿದರು.

    ಪುಕ್ಕಟ್ಟೆ ಅಕ್ಕಿ ಕೊಡ್ತೀನಿ ಜಾಗಟೆ ಹೊಡೆದು ಕೊಂಡು ಒಡಾಡಿದರು. ಆದರೇ ಜನರ ಸಮಸ್ಯೆ ಇತ್ಯರ್ಥ ಪಡಿಸಲಿಲ್ಲ. ನಾನು ವಿಧವಾ ವೇತನ, ವೃದ್ಧಾಪ್ಯ ವೇತನ ಹೆಚ್ಚಳ ಮಾಡಿದೆ. ಭೀಮಾ ತೀರದಲ್ಲಿ ಬಿಗಿ ಇಟ್ಟಿದ್ದರಿಂದ ಕೊಲೆಗಳು ನಿಂತು ಹೋದವು. ಇಂದು ಅಲ್ಲಿನ ಪರಿಸ್ಥಿತಿ ಏನಾಗಿದೆ. ನಮ್ಮನ್ನ ಬಿ ಟೀಂ ಅಂತ ಕರೆದರು. ಆದರೇ ಮೊನ್ನೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೇ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೆ ಅಂತ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಪರಿಹಾರ, ವಿಮೆ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ. ಶೇ.20 ಕಮಿಷನ್ ಕೊಡಿ ಅಂತಾರೆ. ಖಜಾನೆಯಲ್ಲಿ ಹಣದ ಕೊರತೆ ಇಲ್ಲ. ಸೇವೆ ಮಾಡುವ ಪ್ರಮಾಣಿಕತೆ ಬೇಕು. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಡವರ ಬಗ್ಗೆ ಚಿಂತನೆ ಇಲ್ಲ. ಕೇವಲ ತೋರಿಕೆಯಿಂದ ಜನರಿಗೆ ಒಳಿತು ಆಗಲ್ಲ. ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡಬೇಕು ಎಂದು ತಮ್ಮ ಸರ್ಕಾರದಲ್ಲಿ ಮಾಡಿದ ಸಾಧನೆ ವಿವರಿಸುತ್ತಾ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ, ಶಾಸಕ ಬಂಡೆಪ್ಪ ಕಾಂಶಪುರ, ಶಾಸಕ ದೇವಾನಂದ ಚೌಹಾನ್, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರ, ಮುಖಂಡರಾದ ಶರಣು ಹುರಕಡ್ಲಿ, ಘನಶಾಮ ಭಾಂಡಗೆ, ಸಲೀಂ ಮೋಮಿನ್, ರೇಣುಕಾ ಭಜಂತ್ರಿ, ಅಶೋಕ ಪೂಜಾರ, ಸಿದ್ದು ಬಂಡಿ, ಭೀಮಪ್ಪಾ ಗಡಾದ ಇತರರು ಇದ್ದರು.

    ಪಂಚ ರತ್ನ ಜಾರಿಗೆ ತರದಿದ್ದರೇ ಪಕ್ಷ ವಿಸರ್ಜನೆ..
    ಮುಂದಿನ ಸಾರಿ ಜೆಡಿಎಸ್‌ಗೆ ಪೂರ್ಣ ಸರ್ಕಾರದ ಅವಕಾಶ ನೀಡಿದಲ್ಲಿ. ಪ್ರತಿ ಕುಟುಂಬಕ್ಕೊಂದು ಒಂದು ಮನೆ, ಪಿಯುಸಿ ವರೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ, ಪ್ರತಿಯೊಂದು ಮನೆಗೆ ಉದ್ಯೋಗ, ರೈತರಿಗೆ ಮೂಲ ಸೌಕರ್ಯ ಒದಗಿಸುವ ಯೋಜನೆ ಹಾಕಿಕೊಂಡಿದ್ದೇನೆ. ಈ ಪಂಚ ರತ್ನ ಯೋಜನೆ ಜಾರಿಗೆ ತರದಿದ್ದರೇ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

    ಯುಕೆಪಿಗೆ ಶೂನ್ಯ ಕೊಡುಗೆ…
    ಆಮಗತಿಯಲ್ಲಿ ಸಾಗುತ್ತಿದ್ದ ಆಲಮಟ್ಟಿ ಜಲಾಶಯಕ್ಕೆ ದೇವೇಗೌಡರು ವೇಗ ನೀಡಿದರು. ಮುಖ್ಯಮಂತ್ರಿ, ಪ್ರಧಾನಿಯಾಗಿದ್ದಾಗ ಮಾಡಿದ ಸೇವೆಯಿಂದ 15 ರಿಂದ 20 ಸಾವಿರ ರೂ. ಕೋಟಿ ಬಂದಿತು. ಉತ್ತರ ಕರ್ನಾಟಕದಲ್ಲಿ ನೀರಾವರಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. 2006 ರಲ್ಲಿ ನಾನೇ ಸಿಎಂ ಇದ್ದಾಗ ಅಂದಿನ ರಾಷ್ಟ್ರಪತಿ ಅಬ್ದಲ್ ಕಲಾಂ ಆಹ್ವಾನಿಸಿ ಜಲಾಶಯ ಉದ್ಘಾಟಿಸಿದೆ. ನಂತರ ಕಾಂಗ್ರೆಸ್ ಪಕ್ಷವು ಹೊಸಪೇಟೆಯಿಂದ ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದರು ಬಿಡಿಗಾಸು ನೀಡಲಿಲ್ಲ. ಇದೀಗ ಅಧಿಕಾರದಲ್ಲಿದ್ದರು ಬಿಜೆಪಿ ಚಕಾರ್ ಎತ್ತುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಯಾವ ಕೊಡುಗೆ ನೀಡಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

    ಕಾರ್ಯಕ್ರಮದಲ್ಲಿ ವಿ.ಪ ಸದಸ್ಯ ಧರ್ಮಗೌಡ, ಶಾಸಕ ಎಂ.ಸಿ.ಮನಗೂಳಿ ನಿಧನಕ್ಕೆ ಮೌನಾಚರಣೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಮುಧೋಳ ಭಾಗದ ಕಾಂಗ್ರೆಸ್ ಮುಖಂಡ ಡಾ.ರವಿ ಲೆಚ್ಚನ್ನವರ ಹಾಗೂ ವಿವಿಧ ಪಕ್ಷ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನೂತನ ಗ್ರಾ.ಪಂ ಸದಸ್ಯರು, ಪುರಸಭೆ, ನಗರಸಭೆ ಸದಸ್ಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲಾಧ್ಯಕ್ಷ ಹನುಮಂತ ಮಾವಿನ ಮರದ ಅವರನ್ನು ಹಾಡಿ ಹೊಗಳಿದರು. ಉತ್ತರ ಕರ್ನಾಟಕದ ಭರವಸೆ ನಾಯಕ ಎಂದು ಬಣ್ಣಿಸಿದರು.

    ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಹೇಳಿದೆ. ಆದರೇ 38 ಸೀಟು ಮಾತ್ರ ಬಂದವು. ಇಷ್ಟ ಇಲ್ಲದಿದ್ದರೇ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಒತ್ತಡದಿಂದ ಮುಖ್ಯಮಂತ್ರಿಯಾದೆ. 14 ತಿಂಗಳು ಕಾಲ ಸಾಕಷ್ಟು ಕಷ್ಟ ಕೊಟ್ಟರು. ಆದರೇ ಬಡವರ, ರೈತರ, ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದೇನೆ. ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೇ ಮಟ್ಕಾ, ಓಸಿ ಬಂದ್ ಮಾಡುತ್ತೇನೆ. ಹಳ್ಳಿ ಹಳ್ಳಿ ಹೋಗಿ ಪಕ್ಷ ಬಲ ಪಡಿಸುತ್ತೇನೆ. –ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಕುಮಾರಸ್ವಾಮಿ ಅವರ ಸಾಲ ಮನ್ನಾ ಯೋಜನೆಯಲ್ಲಿ ಬಾಗಲಕೋಟೆ ಜಿಲ್ಲೆಗೆ 1,40,000 ರೈತರ 762 ಕೋಟಿ ರೂ. ಮನ್ನಾ ಆಗಿದೆ. ಅವರ ಯೋಜನೆಗಳಿಂದ ಬಡವರ, ರೈತರ, ಕಾರ್ಮಿಕರ ಬದುಕು ಹಸನಾಗಿದೆ. ಜಿಲ್ಲೆಯಲ್ಲಿ ಬಲಿಷ್ಠವಾಗಿ ಪಕ್ಷ ಸಂಘಟಿಸಲಾಗುವುದು. ಜಿ.ಪಂ, ತಾ.ಪಂ, ವಿಧಾನ ಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು.
    – ಹನುಮಂತ ಮಾವಿನಮರದ ಜೆಡಿಎಸ್ ಜಿಲ್ಲಾಧ್ಯಕ್ಷ

    ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದಾಗಲೊಮ್ಮೆ ಉತ್ತಮ ಆಡಳಿತ ನೀಡಿದೆ. ಜನರಿಗೆ ನಮ್ಮ ಸಾಧನೆ ತಿಳಿಸಲು ವಿಫಲರಾಗಿದ್ದೇವೆ. ಇದನ್ನು ಸವಾಲ್ ಆಗಿ ಸ್ವೀಕರಿಸಬೇಕು. ಸದೃಢವಾಗಿ ಪಕ್ಷ ಕಟ್ಟಿ ಬೆಳೆಸಬೇಕು. ತಪ್ಪು ಮರುಕಳಿಸಂತೆ ಎಚ್ಚರ ವಹಿಸಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಜನಪರ ಕಾರ್ಯಕ್ರಮಗಳು ಜಾರಿಯಾಗಲಿವೆ.
    – ಬಸವರಾಜ ಹೊರಟ್ಟಿ ವಿ.ಪ ಸದಸ್ಯ



    ಸ್ವತಂತ್ರ ಸರ್ಕಾರ ಕೊಡಿ ಪರಿಪೂರ್ಣ ಸೇವೆ ಮಾಡುವೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts