More

    ಪ್ರಚಾರದ ಭರಾಟೆ ಬಲು ಜೋರು !

    ಸಂತೋಷ ದೇಶಪಾಂಡೆ
    ಬಾಗಲಕೋಟೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ಜಮಖಂಡಿ ಉಪವಿಭಾಗ ವ್ಯಾಪ್ತಿಯ ಪಂಚಾಯಿತಿಗಳ ಚುನಾವಣೆ ನಾಮಪತ್ರ ಹಿಂಪಡೆಯುವ ಕಸರತ್ತು ಸೋಮವಾರ ಪೂರ್ಣಗೊಂಡಿದ್ದು, ಅಂತಿಮ ಅಖಾಡ ಸಿದ್ಧವಾಗಿದೆ. ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ ಎರಡನೇ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆದಿದ್ದು, ಕೋಟೆನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಭರಪೂರ ರಂಗೇರಿದೆ.!

    ಅಧಿಕಾರ ಇದ್ದಾಗ ಮತದಾರರ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸುವ ಜನಪ್ರತಿನಿಧಿಗಳಿಗೆ ಗ್ರಾಪಂ ಚುನಾವಣೆ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಎಲ್ಲಿಲ್ಲದ ನೆನಪು ಶುರುವಾಗಿದೆ. ಪಂಚಾಯಿತಿ ಕಲಿಗಳ ದೃಷ್ಟಿಕೋನ ಮತದಾನದತ್ತ ನೆಟ್ಟಿದ್ದು, ಅಖಾಡದಲ್ಲಿ ಇರುವ ಅಭ್ಯರ್ಥಿಗಳು ಮತದಾರರ ಪಟ್ಟಿ ಹಿಡಿದುಕೊಂಡು ಪ್ರತಿಯೊಬ್ಬರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

    ಮತದಾರರ ಪ್ರಭುಗಳೇ ಪ್ರತ್ಯಕ್ಷ ದೇವರು
    ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿರುವ ಅಭ್ಯರ್ಥಿಗಳು ಗೆಲುವಿನ ಅದೃಷ್ಟ ತಮ್ಮದಾಗಿಸಿಕೊಳ್ಳಲು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಮತದಾರ ಪ್ರಭುಗಳನ್ನು ಪ್ರತ್ಯಕ್ಷ ದೇವರಂತೆ ಕಾಣ ತೊಡಗಿದ್ದು, ಯಾವ ಸಮಯಕ್ಕೆ ಹೋದರೆ ಭೇಟಿ ಆಗುತ್ತಾರೆ. ಅವರು ಮನೆ, ಜಮೀನು ಎಲ್ಲಿ ಇರುತ್ತಾರೆ ಎನ್ನುವುದನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕ ಮತ್ತೆ ಕಾರ್ಮಿಕರು ಮಹಾರಾಷ್ಟ್ರ, ಗೋವಾ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗಿದ್ದಾರೆ. ಅವರನ್ನು ಮರಳಿ ಕರೆತರುವ ಪ್ರಯತ್ನ ಭರದಿಂದ ಸಾಗಿದೆ. ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆಂದು ಹೊಲ, ತೋಟಗಳಿಗೆ ತೆರಳುವ ಮತದಾರರನ್ನು ಸೆಳೆಯಲು ಅವರಿದ್ದಲ್ಲಿಯೇ ಹೋಗುತ್ತಿದ್ದಾರೆ. ಕಬ್ಬಿನ ಗದ್ದೆ, ತೋಟಗಳಿಗೆ ತೆರಳಿ ಕಾರ್ಮಿಕರಿಗೆ ಭೇಟಿ ಮಾಡಿ ಮತಯಾಚನೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪ್ರಚಾರದಲ್ಲಿ ಪೈಪೋಟಿಗೆ ಇಳಿದಿರುವ ಅಭ್ಯರ್ಥಿಗಳು ಯಾವ ಒಬ್ಬ ಮತದಾರನನ್ನು ಬಿಡುತ್ತಿಲ್ಲ. ನಿಮಗೆ ಮತ ನೀಡುತ್ತೇವೆ ಎಂದರೂ ಅಭ್ಯರ್ಥಿಗಳು ಆಣೆ, ಪ್ರಮಾಣ ಮಾಡಿಸುವ ತನಕ ಬಿಡುತ್ತಿಲ್ಲ.

    ಪ್ರಚಾರದಲ್ಲಿ ಮಹಿಳೆಯರೂ ಜೋರು
    ಗ್ರಾಪಂ ಚುನಾವಣೆಯಲ್ಲಿ ಶೇ. 50 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಪ್ರಚಾರದಲ್ಲಿ ನಾರಿಯರ ದರ್ಬಾರ್ ಜೋರಾಗಿದೆ. ಮನೆ ಯಜಮಾನರು ಅಷ್ಟೇ ಅಲ್ಲದೆ, ತಾವೇ ಖುದ್ದು ತಂಡ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಬೆಳಗ್ಗೆ ಮನೆಗಳಿಗೆ ಭೇಟಿ ನೀಡಿ ಮತದಾರರ ಕುಶಲೋಪರಿ ವಿಚಾರಿಸುವುದರ ಜತೆಗೆ ನಮ್ಮ ಯಜಮಾನ್ರು ಸಂಜೆ ವೇಳೆಗೆ ಸಾವಕಾರಗ ಭೇಟಿ ಆಗ್ತಾರ ಅಕ್ಕಾವ್ರ..; ನೀವು ನಮಗೆ ಮತ ಹಾಕುದ ಮರಿ ಬ್ಯಾಡರೀ ಅಂತ ಬೇಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳು ತಾವು ಅಷ್ಟೇ ಅಲ್ಲದೆ ಮಕ್ಕಳು, ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರನ್ನು ಪ್ರಚಾರದ ಕಣಕ್ಕೆ ಇಳಿಸುತ್ತಿದ್ದಾರೆ.

    ಜಾಲತಾಣಕ್ಕೆ ಮೊರೆ ಹೋದ ಯುವಕ ಅಭ್ಯರ್ಥಿಗಳು
    ಪಂಚಾಯಿತಿ ಚುನಾವಣೆಯಲ್ಲಿ ಬಹಿರಂಗ ಸಭೆ, ಸಮಾವೇಶಗಳ ಬದಲು ಹಿರಿಯರು, ಮುಖಂಡರು, ಮಹಿಳೆಯರು ನೇರವಾಗಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ. ಇದರ ಜತೆಗೆ ಯುವ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದಾರೆ. ಫೇಸ್‌ಬುಕ್, ವಾಟ್ಸ್ ಆ್ಯಪ್, ಟ್ವಿಟ್ಟರ್ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ವಾರ್ಡ್ ಮತದಾರರು, ಮುಖಂಡರು ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿದ್ದು, ಭರವಸೆಗಳ ಮಹಾಪೂರವೇ ಹರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts