More

    ಹಿಂಗಾರು ಹಂಗಾಮಿನ ಬಿತ್ತನೆ ಚುರುಕು

    ಸಂತೋಷ ದೇಶಪಾಂಡೆ
    ಬಾಗಲಕೋಟೆ: ಕಳೆದ ವರ್ಷ ಪ್ರವಾಹದ ಹೊಡೆತಕ್ಕೆ ನಲುಗಿ ಅಪಾರ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರು ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಫಸಲು ಬಂದರೂ ವರುಣಾಘಾತಕ್ಕೆ ಬೆಳೆಗಳು ನುಲುಗಿದವು. ಇದೀಗ ಹಿಂಗಾರು ಹಂಗಾಮಿನಲ್ಲಿ ಮಳೆರಾಯನ ಸಿಂಚನ ಹೊಸ ಚೈತನ್ಯ ತುಂಬಿದೆ. ಕೋಟೆನಾಡಿನಲ್ಲಿ ಹಿಂಗಾರು ಬಿತ್ತನೆ ಚುರುಕುಗೊಂಡಿದೆ.

    ಲಾಕ್‌ಡೌನ್ ಹೊಡೆತಕ್ಕೆ ಹೈರಾಣಾಗಿದ್ದ ಜಿಲ್ಲೆಯ ರೈತರು ಈ ಸಾರಿ ಮುಂಗಾರು ಹಂಗಾಮು ಉತ್ತಮ ಸಾಥ್ ನೀಡಲಿದೆ ಎಂದುಕೊಂಡಿದ್ದರು. ಆದರೆ, ಅತಿವೃಷ್ಟಿ ಎಲ್ಲವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿತು. ಇದೀಗ ಪ್ರಕೃತಿ ವಿಕೋಪದ ಹೊಡೆತದಿಂದ ಕೊಂಚ ಸುಧಾರಿಸಿಕೊಂಡಿರುವ ರೈತರು ಭೂಮಿ ಹದ ಮಾಡಿಕೊಂಡಿದ್ದು, ಉತ್ಸಾಹದಿಂದ ಬಿತ್ತನೆಯಲ್ಲಿ ತೊಡಗಿದ್ದಾರೆ.

    ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3,10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಒಟ್ಟು 136.6 ಮಿ.ಮೀ. ಸಾಮಾನ್ಯ ಮಳೆಯಿದ್ದು, 192.3 ಮಿ.ಮೀ. ಮಳೆಯಾಗಿದೆ. ಶೇ. 100ಕ್ಕಿಂತ ಹೆಚ್ಚು ಮಳೆಯಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿಯೂ ಉತ್ತಮವಾಗಿ ಮಳೆ ಸುರಿದಿದೆ. ಹೀಗಾಗಿ ಕೋಟೆನಾಡಿನ ವಿವಿಧ ಭಾಗದಲ್ಲಿ ಮುಂಗಾರು ಬಿತ್ತನೆ ಚುರುಕು ಪಡೆದುಕೊಂಡಿದೆ. ರೈತರು ಈಗಾಗಲೇ ಬಿತ್ತನೆಗೆ ಬೇಕಾದ ಅಗತ್ಯ ಬೀಜ, ಗೊಬ್ಬರ ಖರೀದಿ ಮಾಡಿ ಸಂಗ್ರಹಿಸಿಕೊಂಡಿದ್ದಾರೆ. ವಾತಾವರಣ ಇದೇ ರೀತಿ ಮುಂದುವರಿದಲ್ಲಿ ಬಿತ್ತನೆ ಕಾರ್ಯ ಯಶಸ್ವಿಯಾಗಲಿದೆ.

    ಹಿಂಗಾರು ಹಂಗಾಮಿನ ಬಿತ್ತನೆ ಪ್ರಮಾಣ
    ಏಕದಳ ಧಾನ್ಯಗಳು
    ಜಿಲ್ಲೆಯಲ್ಲಿ 98000 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 25400 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, 28000 ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಜೋಳ, ಗೋವಿನ ಬಿತ್ತನೆ ಆರಂಭವಾಗಿದೆ. ಗೋಧಿ ಬಿತ್ತನೆ ಕಾರ್ಯ ಅಕ್ಟೋಬರ್ ಕೊನೆಯವಾರ ಹಾಗೂ ನವೆಂಬರ್‌ನಲ್ಲಿ ನಡೆಯಲಿದೆ. 151400 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳ ಬಿತ್ತನೆ ನಡೆಯಲಿದೆ.

    ದ್ವಿದಳ ಧಾನ್ಯಗಳು
    109000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೀಜ, ಹುರುಳಿ 1000 ಹೆಕ್ಟೇರ್, ಅಲಸಂದಿ 600 ಹೆಕ್ಟೇರ್ ಸೇರಿ ಒಟ್ಟು 110600 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ಹೊಂದಲಾಗಿದೆ.

    ಎಣ್ಣೆಕಾಳುಗಳು
    21000 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, ಕುಸಬಿ 1500 ಹೆಕ್ಟೇರ್ ಪ್ರದೇಶ, 2000 ಹೆಕ್ಟೇರ್ ಪ್ರದೇಶದಲ್ಲಿ ಅಗಸಿ ಸೇರಿ ಒಟ್ಟು 24500 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಗುರಿ ಹೊಂದಲಾಗಿದೆ.

    ವಾಣಿಜ್ಯ ಬೆಳೆಗಳು
    400 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ, 23100 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು (ಪಿ) ಸೇರಿ ಒಟ್ಟು 23500 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.

    ಹಿಂಗಾರು ಹಂಗಾಮಿನ ಬಿತ್ತನೆಗೆ ಬೀಜ, ಗೊಬ್ಬರ ಸಾಕಷ್ಟು ಸಂಗ್ರಹವಿದೆ. ಜಿಲ್ಲೆಯಲ್ಲಿ ಅಕ್ಟೋಬರ್ ಮೊದಲ ವಾರದಿಂದ ಹಿಂಗಾರು ಬಿತ್ತನೆ ಆರಂಭಗೊಂಡಿದೆ. ಈ ಸಾರಿ ಉತ್ತಮ ಮಳೆಯಾಗಿದೆ. ಆರಂಭದಲ್ಲಿ ಮಳೆ ಉತ್ತಮವಾಗಿ ಸುರಿದಿದೆ. ಬಿತ್ತನೆ ಕಾರ್ಯ ಭರದಿಂದ ಸಾಗಲಿದೆ ಎನ್ನುವ ನಿರೀಕ್ಷೆ ಇದೆ.
    – ಚೇತನಾ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts