More

    ಕೈ-ಕಮಲ ಪಕ್ಷಗಳ ಪ್ರತಿಷ್ಠೆ ಕಾಳಗ

    ಅಶೋಕ ಶೆಟ್ಟರ
    ಬಾಗಲಕೋಟೆ: ಪ್ರತಿಷ್ಠಿತ, ಸಾವಿರಾರು ಕೋಟಿ ರೂ. ವಹಿವಾಟಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ತಾರಕಕ್ಕೇರಿದೆ. ಅಖಾಡದಲ್ಲಿ ಕೈ- ಕಮಲ ಪಕ್ಷಗಳು ನೇರವಾಗಿ ಭಾಗಿ ಆಗಿದ್ದರಿಂದ ಎಂಎಲ್ಎ, ಎಂಪಿ ಚುನಾವಣೆಗೆ ಕಡಿಮೆ ಇಲ್ಲದಂತೆ ಜಿದ್ದಾಜಿದ್ದಿಗೆ ಈ ಚುನಾವಣೆ ಸಾಕ್ಷಿಯಾಗಲಿದೆ.

    ಆರ್ಥಿಕವಾಗಿ ಬಲಾಢ್ಯವಾಗಿರುವ ಡಿಸಿಸಿ ಬ್ಯಾಂಕ್‌ನ ಅಧಿಕಾರ ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳ ನಾಯಕರು ತಂತ್ರ, ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದಕ್ಕಾಗಿ ಈ ಚುನಾವಣೆಯಲ್ಲಿ ಝಣಝಣ ಸದ್ದು ಹೆಚ್ಚುತ್ತಿರುವುದು ಸಹಕಾರಿ ಬಂಧುಗಳಲ್ಲಿ ಅಚ್ಚರಿ ಮತ್ತು ಹೌಹಾರುವಂತೆ ಮಾಡಿದೆ.

    ಅಂದಾಜು 3 ಸಾವಿರ ಕೋಟಿ ರೂ. ಠೇವಣಿ ಹೊಂದಿರುವ ಜಿಲ್ಲೆಯ ಅತ್ಯಂತ ದೊಡ್ಡ ಸಹಕಾರಿ ಬ್ಯಾಂಕ್ ಇದಾಗಿದೆ. ಇದರಿಂದ ಪೈಪೋಟಿ ತೀವ್ರಗೊಳ್ಳಲು ಕಾರಣವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು ಎನ್ನಲಾಗುತ್ತಿದ್ದರೂ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಅಖಾಡಕ್ಕೆ ಇಳಿಸಿರುವುದು ಸಹಜವಾಗಿಯೇ ಚುನಾವಣೆ ರಂಗೇರಿದೆ.

    ಡಿಸಿಸಿ ಬ್ಯಾಂಕ್‌ಗೆ ರಾಜಕೀಯ ಮುಖಂಡರು ಸ್ಪರ್ಧೆ ಮಾಡುವುದು, ಗೆದ್ದು ಅಧಿಕಾರ ಗದ್ದುಗೆ ಹಿಡಿದಿರುವುದು ಹೊಸದೇನು ಅಲ್ಲ. ಆದರೆ, ಈ ಸಲ ಜಿಲ್ಲೆಯಲ್ಲಿ ಬಲಾಢ್ಯವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಜಂಗಿ ಕುಸ್ತಿ ಜೋರಾಗಿ ನಡೆಯುತ್ತಿದೆ. ಒಟ್ಟು 13 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು ಈಗಾಗಲೇ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಕಾವು ರಂಗೇರುವಂತೆ ಮಾಡಿದೆ.

    ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಐದು ವರ್ಷ ಅಧಿಕಾರ ನಡೆಸಿರುವ ಹತ್ತು ಜನ ನಿರ್ದೇಶಕರು ಮರು ಆಯ್ಕೆ ಬಯಸಿ ಅಖಾಡಕ್ಕೆ ಇಳಿದಿದ್ದಾರೆ. ಅಧ್ಯಕ್ಷರಾಗಿದ್ದ ಮಾಜಿ ಸಚಿವ ಅಜಯಕುಮಾರ ಸರನಾಯಕ, ಉಪಾಧ್ಯಕ್ಷರಾಗಿದ್ದ ಶಿವಾನಂದ ಉದಪುಡಿ, ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಎನ್ನುವ ಹೆಗ್ಗಳಿಕೆಯ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಡಾ. ಎಂ.ಎಸ್. ದಡ್ಡೇನವರ, ರಾಮಣ್ಣ ತಳೇವಾಡ, ಭೀಮಸಿ ಮುಗದುಂ, ಕುಮಾರ ಜನಾಲಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಇವರಲ್ಲಿ ಬಿಜೆಪಿ ಬೆಂಬಲಿತರಾಗಿದ್ದ ಭೀಮಸಿ ಮುಗದುಮ್ ಹಾಗೂ ಕುಮಾರ ಜನಾಲಿ ಅವರಿಗೆ ಈ ಸಲ ಪಕ್ಷ ಬೆಂಬಲಿಸಿಲ್ಲವಾದರೂ ಸ್ವತಂತ್ರವಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಖಾಡಕ್ಕೆ ಜಮಖಂಡಿ, ತೇರದಾಳ ಶಾಸಕರು
    ಇನ್ನು ಮೊದಲ ಭಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಜಮಖಂಡಿ ಪಿಕೆಪಿಎಸ್ ಕ್ಷೇತ್ರದಿಂದ ಶಾಸಕ ಆನಂದ ನ್ಯಾಮಗೌಡ, ರಬಕವಿ- ಬನಹಟ್ಟಿ ಪಿಕೆಪಿಎಸ್‌ನಿಂದ ಶಾಸಕ ಸಿದ್ದು ಸವದಿ ಸ್ಪರ್ಧೆ ಮಾಡಿದ್ದಾರೆ. ಜಮಖಂಡಿ ಪಿಕೆಪಿಎಸ್ ಕ್ಷೇತ್ರಕ್ಕೆ ಶಾಸಕ ಆನಂದ ನ್ಯಾಮಗೌಡ ವಿರುದ್ಧ ಸಿದ್ದು ಸವದಿ ಅವರ ಸಹೋದರ ಯೋಗಪ್ಪ ಸವದಿ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಜಮಖಂಡಿ ಪಿಕೆಪಿಎಸ್‌ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೀಮಸಿ ಮುಗದುಮ್ ಅವರು ಈ ಸಲ ತಮ್ಮದೆ ಪಕ್ಷದ ಶಾಸಕ ಸಿದ್ದು ಸವದಿ ವಿರುದ್ಧ ನಾನಾ, ನೀನಾ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

    ಅವಿರೋಧ ಆಯ್ಕೆಗೆ ಕಸರತ್ತು !
    ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 28 ಕೊನೆಯ ದಿನವಾಗಿದೆ. ಅ. 30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇದೀಗ ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಆಗುವ ಸಂಭವ ಇದ್ದು, ಆ ನಿಟ್ಟಿನಲ್ಲಿ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಬಹುತೇಕ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಇದು ಯಶಸ್ವಿಯಾಗುವ ಸಾಧ್ಯತೆ ಇದ್ದು, ಉಳಿದ ಕ್ಷೇತ್ರಗಳಲ್ಲಿ ಚುನಾವಣೆ ಜಂಗಿ ಕುಸ್ತಿ ತಾರಕಕ್ಕೇರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ.

    ಹಣ, ಆಭರಣದ ಸೌಂಡ್!
    ಚುನಾವಣೆ ಕಾವು ತೀವ್ರವಾಗಿದೆ. ಗೆಲುವಿನ ಸರಮಾಲೆಗಾಗಿ ಸಾಕಷ್ಟು ಕಸರತ್ತುಗಳನ್ನು ನಡೆಸಬೇಕಿದೆ. ಸೀಮಿತ ಮತದಾರರು ಇರುವುದರಿಂದ ಬೇಡಿಕೆಯೂ ದುಭಾರಿ ಆಗುತ್ತಿದೆ. ನಗದು ಹಣ, ಚಿನ್ನದುಂಗರದ ಬೇಡಿಕೆಗಳು ಹೆಚ್ಚಿದೆ. ಕೆಲವರ ಬೇಡಿಕೆ ಈಡೇರಿಸುವುದು ಅಷ್ಟು ಸುಲಭವಾಗಿಲ್ಲ. ಸಹಕಾರಿ ಬ್ಯಾಂಕ್ ಚುನಾವಣೆಗೆ ಇಷ್ಟೊಂದು ಖರ್ಚು ಮಾಡಬೇಕಾ? ಬ್ಯಾಂಕ್ ಚುನಾವಣೆಗಳು ಇಷ್ಟೊಂದು ದುಭಾರಿನಾ ಎನ್ನುವ ಅಂತೆ, ಕಂತೆಗಳ ಚರ್ಚೆಗಳು ಸಹ ಇದೀಗ ಜಿಲ್ಲೆಯಲ್ಲಿ ಸಾರ್ವಜನಿಕರ ಬಾಯಲ್ಲಿ ಎಲೆಅಡಿಕೆ ಆಗಿದೆ.

    ದೊಡ್ಡ ಕ್ಷೇತ್ರದಲ್ಲಿ ಪೈಪೋಟಿ
    ಇನ್ನು 13 ಸ್ಥಾನಗಳ ಪೈಕಿ ಅತಿ ಹೆಚ್ಚು ಮತದಾರರು ಇರುವ ಪಟ್ಟಣ ಹಾಗೂ ಪತ್ತಿನ ಸಹಕಾರಿ ಬ್ಯಾಂಕ್‌ಗಳ ಕ್ಷೇತ್ರದಿಂದ ಶಿವಾನಂದ ಉದಪುಡಿ ಮರು ಆಯ್ಕೆ ಬಯಸಿದ್ದರೆ ಅವರ ವಿರುದ್ಧ ಜಿಲ್ಲೆಯ ಮತ್ತೊಂದು ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ನಲ್ಲಿ ಈ ಹಿಂದೆ ಎರಡು ಅವಧಿಯಲ್ಲಿ ನಿರ್ದೇಶಕರಾಗಿದ್ದ ಪ್ರಕಾಶ ತಪಶೆಟ್ಟಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts