More

    ಪರಮೀಶನ್-ಪ್ರೋಮೋಷನ್‌ಗೂ ‘ಲಂಚ’

    ಬಾಗಲಕೋಟೆ: ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಲಂಚಾವತಾರ ಇದೆ. ದಲ್ಲಾಳಿಗಳ ದರ್ಬಾರ್ ಜೋರಾಗಿದೆ. ಶಾಲೆಗಳಿಗೆ ಪರಮೀಶನ್ ಕೊಡುವದರಿಂದ ಸಿಬ್ಬಂದಿಗೆ ಪ್ರೋಮೋಷನ್ ವರೆಗೂ ‘ಲಂಚ್’….‘ಲಂಚ್’…‘ಲಂಚ್’ !

    ಹೀಗೆ ಶಿಕ್ಷಣ ಇಲಾಖೆ ವಿರುದ್ಧ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಸೆಪ್ಟೆಂಬರ್ ಮಾಹೆಯ ಪ್ರಗತಿ ಪರಿಶೀಲನಾ(ಮಾಸಿಕ ಕೆಡಪಿ) ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಮಹಾಂತೇಶ ಉದಪುಡಿ ಗಂಭೀರ ಆರೋಪ ಮಾಡಿದ್ದು ತಲ್ಲಣ ಸೃಷ್ಟಿ ಮಾಡಿತು.

    ಶಿಕ್ಷಣ ಇಲಾಖೆ ಸಮಾಜಕ್ಕೆ ಮಾದರಿಯಾಗಬೇಕಿತ್ತು. ಆದರೇ ಪ್ರತಿ ಹಂತದಲ್ಲಿಯೂ ವ್ಯಾಪಕ ಪ್ರಮಾಣದಲ್ಲಿ ಭಷ್ಟಾಚಾರ ತಾಂಡವಾಡುತ್ತಿದೆ. ಲಂಚವಿಲ್ಲದೆ ಯಾವುದೇ ಕೆಲಸಗಳು ಆಗುವುದಿಲ್ಲ. ಜಿಲ್ಲೆಯಲ್ಲಿ ಹೊಸ ಶಾಲೆಗಳಿಗೆ ಪರವಾಣಿಗೆ ನೀಡಬೇಕಾದರೇ ಒಂದು ಲಕ್ಷ ರೂ. ಲಂಚ ಕಡೊಬೇಕು. ನಿಮ್ಮ ಇಲಾಖೆ ಸಿಬ್ಬಂದಿ ಮುಂಬಡ್ತಿ ಹೊಂದಬೇಕಾದರು ದಲ್ಲಾಳಿಗಳ ಮೂಲಕ ಹಣ ಕೊಟ್ಟರೇ ಕೆಲಸ ಆಗುತ್ತದೆ. ಸರ್ಕಾರದ ನಿಯಮ, ಕಾನೂನು, ಮಾನದಂಡಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಕ್ಷಿ ಸಮೀತ ನಾನು ಸಾಬೀತು ಪಡಿಸುತ್ತೇನೆ. ನನ್ನ ಆರೋಪ ದೃಢಪಟ್ಟರೇ ನೀವು ರಾಜೀನಾಮೆ ಕೊಡ್ತಿರಾ ಅಂತ ಡಿಡಿಪಿ ಶ್ರೀಶೈಲ ಬಿರಾದಾರ ಅವರಿಗೆ ಗರಂ ಆಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ಶ್ರೀಶೈಲ ಬಿರಾದಾರ ರಾಜೀನಾಮೆ ನಾನೇಕೆ ನೀಡಬೇಕು. ಬೇಕಾದರೇ ತನಿಖೆ ಮಾಡಿ ಎಂದು ಪ್ರತ್ಯುತ್ತರ ನೀಡಿದರು.

    ಈ ವೇಳೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಹೊಸ ಶಾಲೆಗಳಿಗೆ ಪರವಾಣಿಗೆ ನೀಡುವಲ್ಲಿ ಕೇಳಿ ಬಂದಿರುವ ಆರೋಪ ಗಂಭೀರ ಸ್ವರೂಪದಿಂದ ಕೂಡಿದೆ. ಕಾನೂನು ಬಾಹೀರವಾಗಿ ನಡೆದುಕೊಂಡಿರುವುದು ಮೇಲ್ನೂಟಕ್ಕೆ ಕಂಡು ಬಂದಿದೆ. ಶಾಲೆ ಪ್ರಾರಂಭಿಸಲು ಅನುಮತಿ ಕೋರಿ ಬಂದ ಒಟ್ಟು 25 ಅರ್ಜಿಗಳಲ್ಲಿ 18 ಶಾಲೆಗಳಿಗೆ ಪರವಾನಿಗೆ ನೀಡಲಾಗಿದೆ. ತಿರಷ್ಕೃತಗೊಂಡ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡದಿರುವುದು ಸಲ್ಲ. ಪರವಾಣಿಗೆ ನೀಡಿದ ಶಾಲೆಗಳ ದಾಖಲಾತಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಸೂಚಿಸಿದರು.

    ಅಲ್ಲದೆ ಹೊಸದಾಗಿ ಪರವಾಣಿಗೆ ನೀಡಿದ ಶಾಲೆಗಳ ದಾಖಲಾತಿ ಪಡೆದು ಪರವಾನಿಗೆ ನೀಡಲು ಬೇಕಾದ ಮಾನದಂಡಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ತಪ್ಪುಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಬಳಿಕ ಸಭೆ ಶಾಂತವಾಯಿತು.

    ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ಖೋತ್, ಕೃಷಿ ಮತ್ತು ಕೈಗಾರಿಕೆ ಸಮಿತಿಯ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ ಸೇರಿದಂತೆ ವಿವಿಧ ಇಲಾಖೆಯ ಅಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

    ಕಳೆದ ಎರಡು ಮೂರು ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತೊಗರಿ, ಸೂರ್ಯಕ್ರಾಂತಿ ಬೆಳೆ ಹಾಳಾಗಿದೆ. ಈ ಬಾರಿ ಜೋಳ ಬಿತ್ತನೆ ಸಾಧ್ಯತೆ ಕಡಿಮೆ ಇದೆ. ಹಿಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲವೆಂದು ಜಿಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಭೆಗೆ ತಿಳಿಸಿದರು. ಈ ವೇಳೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ ರೈತರಿಗೆ ಬೀಜ ಮತ್ತು ಸರಗೊಬ್ಬರದ ಕೊರತೆಯಾಗದಂತೆ ವಿಶೇಷ ಗಮನ ಹರಿಸುವಂತೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ 332 ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನರೇಗಾದಡಿ ಕೈತೋಟ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಈಗಾಗಲೇ 155 ಕಾಮಗಾರಿಗಳು ಆರಂಭಿಸಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಸಹ ಶೀಘ್ರದಲ್ಲಿಯೇ ಪ್ರಾರಂಭಿಸಲು ತಾಲೂಕಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಹುಲ್‌ಕುಮಾರ ಭಾವಿದೊಡ್ಡಿ ತಿಳಿಸಿದರು.

    ನರೇಗಾ ಯೋಜನೆಯಡಿ ವಾರ್ಷಿಕ ಗುರಿಗೆ ಶೇ.64 ರಷ್ಟು ಸಾಧನೆ ಮಾಡಲಾಗಿದೆ. ಸಪ್ಟೆಂಬರ ಅಂತ್ಯದ ಗುರಿಗೆ ಶೇ.106 ರಷ್ಟು ಪ್ರಗತಿ ಸಾಧಿಸಲಾಗಿದೆ. ಆರ್ಥಿಕವಾಗಿ ಶೇ.48 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ತಿಳಿಸಿದರು. ನಂತರ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ, ಶಿಕ್ಷಣ, ಆಹಾರ, ಕೈಮಗ್ಗ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts