More

    ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ

    ಬಾಗಲಕೋಟೆ: ಕೋವಿಡ್ ಹಿನ್ನೆಲೆ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಸಂಕಷ್ಟಕ್ಕೆ ಒಳಗಾದ ಅಸಂಘಟಿತ 11 ವಲಯದ ಕಾರ್ಮಿಕರು 2 ಸಾವಿರ ನೆರವು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

    ಜಿಲ್ಲಾಡಳಿತ ಭವನದಲ್ಲಿರುವ ಹಾಲ್‌ನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ 11 ವಲಯಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೇಲರ್ಸ್‌, ಹಮಾಲರು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಮೆಕಾನಿಕಲ್, ಕುಂಬಾರರು, ಕಂಬಾರರು, ಅಕ್ಕಸಾಲಿಗರಿಗೆ ಒಂದು ಬಾರಿ 2 ಸಾವಿರ ರೂ. ನೆರವು ನೀಡಲು ಸರ್ಕಾರ ಘೋಷಿಸಿದೆ ಎಂದು ಹೇಳಿದರು.

    ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗಲಿದೆ. ಆದರೆ, ನೋಂದಾಯಿತವಲ್ಲದ ಕಾರ್ಮಿಕರು ಮಾತ್ರ ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕೋವಿಡ್-19 ಅಡಿ ಕಟ್ಟಡ ಕಾರ್ಮಿಕರು ಹಾಗೂ ಘೋಷಿತ 11 ವರ್ಗಗಳಲ್ಲಿ ಕೇವಲ ಒಂದು ವೃತ್ತಿಗೆ ಮಾತ್ರ ಕುಟುಂಬದಲ್ಲಿನ ಒಬ್ಬ ಸದಸ್ಯರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸುವವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರಬೇಕು. ತಮ್ಮ ವ್ಯಾಪ್ತಿಯ ಸಂಬಂಧಿಸಿದ ಅಧಿಕಾರಿಗಳಿಂದ ಉದ್ಯೋಗ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

    ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡೋಂಬರ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ, ಬಾಲಕಾರ್ಮಿಕ ಯೋಜನಾ ಸಂಸ್ಥೆ ಯೋಜನಾಧಿಕಾರಿ ಸುಧಾಕರ ಬಡಿಗೇರ, ಕಾರ್ಮಿಕ ನಿರೀಕ್ಷಕ ಅವಿನಾಶ ನಾಯಕ, ಕಾರ್ಮಿಕ ಇಲಾಖೆಯ ಶಿವಾನಂದ ಮಾದರ ಇತರರು ಉಪಸ್ಥಿತರಿದ್ದರು.

    ಉದ್ಯೋಗ ಪ್ರಮಾಣ ಪತ್ರ ಕಡ್ಡಾಯ
    ಅಸಂಘಟಿತ 11 ವಲಯದ ಕಾರ್ಮಿಕರು ಉದ್ಯೋಗ ಪ್ರಮಾಣ ಪತ್ರಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರಿಂದ, ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆ ತಹಸೀಲ್ದಾರ್, ಉಪ ತಹಸೀಲ್ದಾರ್, ಕಂದಾಯ ಅಧಿಕಾರಿಗಳು, ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿ, ಹಿರಿಯ ಕಾರ್ಮಿಕ ನಿರೀಕ್ಷಕ, ಕಾರ್ಮಿಕ ನಿರೀಕ್ಷಕ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ಪಡೆಯಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮುರಗಿ ಹೇಳಿದರು.

    ಹಮಾಲಿ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರು ಮೇಲ್ಕಂಡ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ, ನಿಗಮ ಅಧಿಕೃತ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ವೃತ್ತಿ ಖಚಿತಪಡಿಸಿಕೊಂಡು ಪ್ರಮಾಣ ಪತ್ರ ನೀಡಲು ಸೂಚಿಸಿದರು. ಗ್ರಾಮೀಣ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲು ಜಿಪಂ ಉಪ ಕಾರ್ಯದರ್ಶಿಗಳಿಗೆ ಸೂಚಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts