More

    ಶೇ.50 ಬೆಡ್ ಸೋಂಕಿತರಿಗೆ ಮೀಸಲಿಡಿ

    ಬಾಗಲಕೋಟೆ: ಮಹಾಮಾರಿ ಕೋವಿಡ್ ಸೋಂಕು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.50 ರಿಂದ 70 ರಷ್ಟು ಬೆಡ್‌ಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು, ಲಸಿಕೆ ವಿತರಣೆ, ಕುಡಿಯುವ ನೀರಿನ ಸಮಸ್ಯೆ ಕುರಿತು ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಜೂಮ್ ಮೀಟ್ ಮೂಲಕ ಶನಿವಾರ ಸಭೆ ನಡೆಸಿದ ಅವರು, ಕೋವಿಡ್ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಹಾಗೂ ಹೊರ ಜಿಲ್ಲೆಗಳಿಂದಲೂ ರೋಗಿಗಳು ದಾಖಲಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಚಿಕಿತ್ಸೆಗೆ ಸಮಸ್ಯೆ ಉಂಟಾಗಬಾರದು. ಸೋಂಕಿತರಿಗಾಗಿ ಬೆಡ್‌ಗಳ ಮೀಸಲಿಡುವ ಬಗ್ಗೆ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

    ಕೋವಿಡ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸಕ್ಕರೆ, ಹೃದಯ, ಕ್ಯಾನ್ಸರ್ ಕಾಯಿಲೆ ಇರುವವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದಲ್ಲಿ ತಕ್ಷಣಕ್ಕೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಬೆಡ್‌ಗಳ ಸಂಖ್ಯೆ ಹೆಚ್ಚಿಸಬೇಕು. ಬಾಗಲಕೋಟೆಯಲ್ಲಿ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಉಪಯೋಗ ಪಡೆಯಬೇಕು. ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್‌ಗೆ ಒಳಪಡಿಸಬೇಕು. ಉಸಿರಾಟ ಸಮಸ್ಯೆ, ಜ್ವರ, ಕೆಮ್ಮು ಸೇರಿ ತೀವ್ರ ಆರೋಗ್ಯ ಸಮಸ್ಯೆ ಇರುವ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ತಿಳಿಸಿದರು.

    ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಲಸಿಕೆ ವಿತರಣೆ ಬಗ್ಗೆ ಪ್ರತಿ ದಿನ ಪ್ರಗತಿ ಸಾಧಿಸಬೇಕು. ಮದುವೆ, ಉಪ ನಯನ ಕಾರ್ಯಕ್ರಮಗಳಿಗೆ ನಿಯಮಾನುಸಾರ ಮಾತ್ರ ಅನುಮತಿ ನೀಡಬೇಕು. ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕು. ಕೋವಿಡ್ ಸೋಂಕು ಕಡಿಮೆಯಾಗುವ ತನಕ ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ರಜೆ ನೀಡಬಾರದು ಎಂದು ಸೂಚನೆ ನೀಡಿದರು.

    ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ್, ಡಿಎಚ್‌ಒ ಡಾ.ಅನಂತ ದೇಸಾಯಿ, ಡಾ.ಅರವಿಂದ ಪಟ್ಟಣಶೆಟ್ಟಿ ಇದ್ದರು.

    ನೀರಿನ ಕೊರತೆ ಆಗದಿರಲಿ
    ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಕೊರತೆ ಆಗಬಾರದು. ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ನರೇಗಾ ಯೋಜನೆಯಡಿ ಪ್ರತಿಯೊಂದು ಗ್ರಾಮದಲ್ಲಿ ಕೆಲಸ ನೀಡುವ ವ್ಯವಸ್ಥೆ ಮಾಡಬೇಕು. ಪ್ರಮುಖವಾಗಿ ನಾಲಾಗಳ ದುರಸ್ತಿ, ಸ್ವಚ್ಛತಾ ಕಾರ್ಯ ನರೇಗಾದಲ್ಲಿ ಮಾಡಬೇಕು. ವಿದ್ಯುತ್ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಆಕ್ಸಿಜನ್, ಬೆಡ್‌ಗಳ ಕೊರತೆ ಇಲ್ಲ
    ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 664 ಸಕ್ರಿಯ ಪ್ರಕರಣಗಳು ಇವೆ. ಆರ್‌ಟಿಪಿಸಿಆರ್‌ನಲ್ಲಿ ಪರೀಕ್ಷೆಯಲ್ಲಿ 128 ಪಾಸಿಟಿವ್ ದೃಢಪಟ್ಟಿವೆ. 73 ಐಎಲ್‌ಐ, ಸಾರಿ ಪ್ರಕರಣಗಳು ಇವೆ. ಈ ಪೈಕಿ 24 ಸೋಂಕಿತರು ಐಸಿಯುನಲ್ಲಿ ಇದ್ದಾರೆ. 32 ಸೋಂಕಿತರು ಆಕ್ಸಿಜನ್ ಮೇಲೆ ಅವಲಂಬನೆಯಾಗಿದ್ದಾರೆ. ಇಬ್ಬರ ರೋಗಿಗಳ ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌ಗಾಗಿ ಮೀಸಲಿಟ್ಟ ಪರಿಣಾಮ ಬೇರೆ ರೋಗಿಗಳನ್ನು ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದರು.

    ಖಾಸಗಿ, ಸರ್ಕಾರಿ ಸೇರಿ 105 ಐಸಿಯು ಬೆಡ್, 600 ಸಾಮಾನ್ಯ ಬೆಡ್‌ಗಳು ಇದ್ದು, ಸದ್ಯಕ್ಕೆ ಚಿಕಿತ್ಸೆಗೆ ಯಾವುದು ಸಮಸ್ಯೆ ಇಲ್ಲ. ಆಕ್ಸಿಜನ್ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಬೃಹತ್ ಟ್ಯಾಂಕ್ ಇದ್ದು, ಅದನ್ನು ಭರ್ತಿ ಮಾಡಲಾಗುತ್ತಿದೆ. 153 ಜಂಬೂ ಸಿಲಿಂಡರ್ ಇದ್ದು, ಜಮಖಂಡಿ, ಮುಧೋಳಕ್ಕೆ ಪೂರೈಕೆ ಮಾಡಲಾಗಿದೆ. ಆಕ್ಸಿಜನ್ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಬೇಡಿಕೆ ಸಲ್ಲಿಸಲಾಗುವುದು. ಔಷಧಗಳ ಕೊರತೆ ಇಲ್ಲ. ರೆಮ್‌ಡಿಸಿವಿರ್ ಔಷಧ ದುರುಪಯೋಗ ತಡೆಗಟ್ಟಲು ಕ್ರಮ ತೆಗದುಕೊಳ್ಳಲಾಗಿದೆ. ಪ್ರತಿ ದಿನ 10 ಸಾವಿರ ವ್ಯಾಕ್ಸಿನ್ ನೀಡಲಾಗುತ್ತಿತ್ತು, ಆದರೆ, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸದ್ಯಕ್ಕೆ 5 ಸಾವಿರ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. 6 ಸಾವಿರ ವ್ಯಾಕ್ಸಿನ್ ಸಂಗ್ರಹ ಮಾಡಲಾಗಿದೆ. ಭಾನುವಾರ ಮತ್ತೆ 5 ಸಾವಿರ ವ್ಯಾಕ್ಸಿನ್ ಆಗಮಿಸುತ್ತಿದೆ ಎಂದು ಹೇಳಿದರು.

    ಯಾವುದೇ ಕಾರಣಕ್ಕೂ ಕೋವಿಡ್ ಸೋಂಕಿತರಿಗೆ ಬೆಡ್, ಆಕ್ಸಿಜನ್ ಸಮಸ್ಯೆ ಉಂಟಾಗಬಾರದು. ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ಸಮರ್ಪಕವಾದ ಚಿಕಿತ್ಸೆ ನೀಡಬೇಕು. ಲಸಿಕೆ, ಆಕ್ಸಿಜನ್ ಅಗತ್ಯಕ್ಕೆ ತಕ್ಕಂತೆ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳಬೇಕು. ಸಾರ್ವಜನಿಕರು ಎಚ್ಚರದಿಂದ ಇರಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
    ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ

    ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಮದುವೆ, ಸಭೆ, ಸಮಾರಂಭಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದವರಿಗೆ ದಂಡ ವಿಧಿಸಲಾಗುತ್ತಿದೆ. ಅಲ್ಲದೆ, ಪ್ರಕರಣ ಕೂಡ ದಾಖಲಿಸಲಾಗುವುದು.
    ಲೋಕೇಶ ಜಗಲಾಸರ್ ಎಸ್ಪಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts