More

    ಅಮ್ಮನ ಜಾತ್ರೆ ಬಂದ್ ಮಾಡಬೇಡಿ..!

    ಬಾಗಲಕೋಟೆ: ಕರೊನಾ ಇದೆ ಎಂದು ರಾಜ್ಯದಲ್ಲಿ ಯಾವುದಾದರೂ ಚುನಾವಣೆ ಬಂದ್ ಮಾಡಿದ್ದಾರಾ? ಮೀಸಲಾತಿಗಾಗಿ ಸಾವಿರಾರು ಜನರು ಸೇರಿ ಹೋರಾಟ, ಸಮಾವೇಶ ನಡೆಸುವುದನ್ನು ನಿಲ್ಲಿಸಿದ್ದಾರಾ? ಮದುವೆ, ಮುಂಜಿ ಯಾವುದಾದರೂ ನಿಂತಿವೆಯಾ? ಹೀಗಿದ್ದ ಮೇಲೆ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿರುವ ಶಕ್ತಿ ಪೀಠದ ಬನಶಂಕರಿ ಜಾತ್ರೆ ಮಾತ್ರ ರದ್ದು ಪಡಿಸುವುದೇಕೆ? ಇದು ಸರಿನಾ? ನ್ಯಾಯನಾ?

    ಹೀಗೆಂದು ಕಣ್ಣೀರು ಹಾಕುತ್ತಲೇ ರಾಜ್ಯ ಸರ್ಕಾರಕ್ಕೆ ಒಕ್ಕೂರಲ ಪ್ರಶ್ನೆ ಮಾಡಿದ್ದು ಬನಶಂಕರಿ ದೇವಸ್ಥಾನದ ಹೊರಗಡೆ ಇರುವ ಹೂವು, ಹಣ್ಣು, ಕಾಯಿ, ಕಲ್ಲು ಸಕ್ಕರೆ, ಕುಂಕುಮ, ಪಳಾರ, ಎಳೆನೀರು ಹೀಗಾಗಿ ನೂರಾರು ಸಣ್ಣಪುಟ್ಟ ವ್ಯಾಪಾರಸ್ಥರು.

    ಹೌದು. ಕರೊನಾ ಕಾರಣದಿಂದಾಗಿ ಈಗಾಗಲೇ ಅವರೆಲ್ಲ ಅನುಭವಿಸಿರುವ ತೊಂದರೆ ತಾಪತ್ರಯ ಅಷ್ಟಿಷ್ಟಲ್ಲ. ವ್ಯಾಪಾರ, ವಹಿವಾಟು ಬಂದ್ ಆಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ ನಡೆಸಿದ್ದೇವೆ. ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಏನೋ ದೇವಸ್ಥಾನದ ಟ್ರಸ್ಟ್ ಕಮೀಟಿ ಅವರ ನೆರವಿನಿಂದ ಒಂದೊತ್ತಿನ ಊಟ ಕಂಡಿದ್ದೇವೆ. ಈಗ ಒಂದು ತಿಂಗಳು ನಡೆಯುವ ಅಮ್ಮನ ಜಾತ್ರೆ ನಿಲ್ಲಿಸಿಬಿಟ್ಟರೆ ನಮ್ಮ ಬದುಕು ನರಕಯಾತನೆಯೇ ಸರಿ. ಜಿಲ್ಲಾಡಳಿತದ ಈ ನಿರ್ಧಾರ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ನೀತಿಯಾಗಿದೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬನಶಂಕರಿ ಜಾತ್ರೆ ಸಾವಿರಾರು ಕುಟುಂಬಗಳಿಗೆ ಅನ್ನಕ್ಕೆ ದಾರಿಮಾಡಿ ಕೊಡುವುದಾಗಿದೆ. ಭಕ್ತಿ, ಮನರಂಜನೆ, ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಜಾತ್ರೆ ಇದಾಗಿದೆ. ಕನಿಷ್ಠ ಎರಡೂವರೆಯಿಂದ ಮೂರು ಸಾವಿರ ಅಂಗಡಿ, ಮುಂಗಟ್ಟುಗಳು ಇರುತ್ತವೆ. ಉಪ್ಪಿನಗಳು ಸೇರಿ ಮನೆ ಬಾಗಿಲುವರೆಗೂ ಎಲ್ಲ ವಸ್ತುಗಳು ಸಿಗುವ ಜಾತ್ರೆ ಇದಾಗಿದೆ. ಈ ಜಾತ್ರೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ.

    ಇದೀಗ ಜನವರಿಯಲ್ಲಿ ಕರೊನಾ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಬನಶಂಕರಿ ದೇವಸ್ಥಾನದ ಜಾತ್ರೆಯನ್ನು ಜಿಲ್ಲಾಡಳಿತ ರದ್ದುಗೊಳಿಸುವಂತೆ ಟ್ರಸ್ಟ್ ಕಮೀಟಿಯವರಿಗೆ ಸೂಚಿಸಿದೆ. ಹಾಗೆಯೇ ದೇವಸ್ಥಾನ, ಪಂಚಾಯಿತಿ, ಖಾಸಗಿ ಜಾಗೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟು ಹಾಕಲು ಪರವಾನಗಿ ಕೊಡಬಾರದು. ನಾಟಕ, ಥೇಟರ್ ಎಲ್ಲವೂ ಬಂದ್ ಬಂದ್ ಎಂದು ತಿಳಿಸಿದೆ. ಇದರಿಂದ ಈ ಎಲ್ಲ ವಲಯದ ಜನರು ಕಂಗಾಲಾಗಿದ್ದಾರೆ.

    ಬನಶಂಕರಿ ಜಾತ್ರೆ ಒಂದು ತಿಂಗಳು ಆಹೋರಾತ್ರಿ ನಡೆಯುವುದರಿಂದ ಎರಡ್ಮೂರು ತಿಂಗಳು ಮೊದಲೇ ವ್ಯಾಪಾರಸ್ಥರು ವಸ್ತುಗಳನ್ನು ಖರೀದಿಸಲು ಮುಂಗಡ ಹಣ ಕೊಟ್ಟಿರುತ್ತೇವೆ. ಕಳೆದ ಒಂಬತ್ತು ತಿಂಗಳು ವಹಿವಾಟು ಇಲ್ಲದ್ದರಿಂದ ಜಾತ್ರೆಯಲ್ಲಿ ದುಡಿಮೆ ಮಾಡಿಕೊಂಡು ಮಾಡಿರುವ ಸಾಲ ತೀರಿಸಬಹುದಿತ್ತು. ಈಗ ಜಾತ್ರೆ ನಡೆಯದಿದ್ದರೆ ನಮ್ಮ ಬದುಕು ಹೇಗೆ? ಕರೊನಾದಿಂದಾಗಿಯೇ ಜಾತ್ರೆ ಬಂದ್ ಮಾಡುತ್ತೇವೆ ಎನ್ನುವುದಾದರೆ ಮಾಡಲಿ, ಆದರೆ, ಜಿಲ್ಲೆಯಲ್ಲಿ ಜನರು ಸೇರುವ ಸಂತೆ, ಮದುವೆ, ಸಮಾವೇಶ, ಚುನಾವಣೆ ಯಾವುದನ್ನು ನಡೆಸಬಾರದು ಎಂದು ನೇರವಾಗಿಯೇ ಪ್ರಶ್ನೆ ಮಾಡುತ್ತಾರೆ ಕಾಯಿ ವ್ಯಾಪಾರ ಮಾಡುವ ಲಕ್ಷ್ಮೀ ವಸ್ತ್ರದ, ಹೂವಿನ ವ್ಯಾಪಾರಿ ರಾಜೇಶ್ವರಿ ಹೂಗಾರ.

    ಕರೊನಾದಿಂದ ಬನಶಂಕರಿ ಜಾತ್ರೆ ಬಂದ್ ಮಾಡಿರುವ ಜಿಲ್ಲಾಡಳಿತ, ನ.29 ರಂದು ಬಾಗಲಕೋಟೆ ನಗರದಲ್ಲಿ ಲಕ್ಷ ಜನರು ಭಾಗವಹಿಸಿದ್ದ ಸಮಾವೇಶಕ್ಕೆ ಪರವಾನಗಿ ಹೇಗೆ ಕೊಟ್ಟರು? ಅದನ್ನೇಕೆ ಬಂದ್ ಮಾಡಿಸಲಿಲ್ಲ? ಇದು ನ್ಯಾಯನಾ? ಸಾವಿರಾರು ಬಡವರು ಬದುಕುವ ಬನಶಂಕರಿ ಜಾತ್ರೆಯನ್ನು ನಡೆಸಲು ಅವಕಾಶ ಕೊಡಬೇಕು.
    – ಮಮತಾ ಕರ್ನಾಚಿ, ಬಸಮ್ಮ ಗಣಾಚಾರಿ, ಶಂಕ್ರಮ್ಮ ವೀರಲಿಂಗನಗೌಡರ ಬನಶಂಕರಿ ದೇವಸ್ಥಾನದ ಎದುರು ಹಣ್ಣು, ಹೂವು, ಕಾಯಿ ಮಾರಾಟಗಾರರು

    ಕರೊನಾ ಹಿನ್ನೆಲೆಯಲ್ಲಿ ಬನಶಂಕರಿ ಜಾತ್ರೆ ರದ್ದು ಪಡಿಸುವಂತೆ ಜಿಲ್ಲಾಡಳಿತವು ನಿರ್ದೇಶನ ನೀಡಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಎಂದಿದ್ದಾರೆ. ಅದಕ್ಕೆ ಭಾರವಾದ ಮನಸ್ಸಿನಿಂದ ನಾವು ಒಪ್ಪಿದ್ದೇವೆ. ಜಾತ್ರೆ ಅವಲಂಬಿಸಿರುವ ಸಾವಿರಾರು ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಭದ್ರತೆಗೆ ಸಹಕಾರಿ ಆಗುತ್ತಿತ್ತು. ಈಗ ಜಾತ್ರೆ ನಿಷೇಧ ಮಾಡಲಾಗಿದೆ. ಜನೆವರಿ ಒಳಗಾಗಿ ಕರೊನಾಗೆ ಲಸಿಕೆ ಬಂದಲ್ಲಿ ಆಗ ಜಿಲ್ಲಾಡಳಿತಕ್ಕೆ ಜಾತ್ರೆ ನಡೆಸಲು ಅವಕಾಶ ಕೊಡಿ ಎಂದು ಟ್ರಸ್ಟ್ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ.
    ಮಹೇಶ ಪೂಜಾರ ಬನಶಂಕರಿ ದೇವಸ್ಥಾನದ ಟ್ರಸ್ಟ್ ಸದಸ್ಯರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts