More

    ಮಕ್ಕಳ ಸಾಗಣೆ ಮುಕ್ತ ಭಾರತ ಮಾಡಿ

    ಬಾಗಲಕೋಟೆ: ಬಾಲ್ಯ ವಿವಾಹ, ಮಕ್ಕಳ ಸಾಗಣೆ ಒಂದು ದುರಂತವಾಗಿ ಪರಿಣಮಿಸಿದ್ದು, ಮಕ್ಕಳ ಸಾಗಣೆ ಮುಕ್ತ ಭಾರತವನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಹೇಳಿದರು.

    ಜಿಲ್ಲಾಡಳಿತ ಭವನದ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ರೀಚ್ ಸಂಸ್ಥೆ, ಸ್ಪಂದನಾ ಬೆಳಗಾವಿ, ನವದೆಹಲಿಯ ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಷನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ಕುರಿತ ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ಆರ್ಥಿಕ ದುರ್ಬಲವಾಗಿರುವ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಮಾನವ ಸಾಗಣೆ ಚಟುವಟಿಕೆಗಳು ನಡೆಯುತ್ತಿವೆ. ಬಡವರನ್ನು ದಿನಗೂಲಿಗೆಂದು ಕರೆದೊಯ್ದು ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಜತೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೆ ಕಾನೂನಿನ ಅರಿವು ಸಹ ಅಗತ್ಯವಾಗಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ರೂಪಿಸಿದ ಕಾಯ್ದೆಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಕೆಲಸವಾಗಬೇಕು. ಅದಕ್ಕಾಗಿ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸಿದೆ ಎಂದರು.

    ಸ್ಪಂದನಾ ಸಂಸ್ಥೆ ನಿರ್ದೇಶಕಿ ವಿ.ಸುಶೀಲಾ ಮಾತನಾಡಿ, ಮಕ್ಕಳ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದ 200 ಜಿಲ್ಲೆಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೆಳಗಾವಿಯ ಸ್ಪಂದನಾ ಸಂಸ್ಥೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ 10 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಮಕ್ಕಳ ಸಾಗಣೆ ಕುರಿತಂತೆ ಸಂವಾದ ಕಾರ್ಯಕ್ರಮ ನಡೆಸಲಾಗಿದ್ದು, 10ನೇ ಜಿಲ್ಲೆಯಾಗಿ ಬಾಗಲಕೋಟೆಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಬಿರಾದಾರ, ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್. ಪಾಟೀಲ, ರೀಚ್ ಸಂಸ್ಥೆ ನಿರ್ದೇಶಕ ಜಿ.ಎನ್. ಸಿಂಹ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆಶಾ, ಅಂಗನವಾಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    8 ನಿಮಿಷಕ್ಕೆ ಒಂದು ಮಗು ಕಾಣೆ
    ಇಡೀ ದೇಶದಲ್ಲಿ ಅನೈತಿಕವಾಗಿ ಮಕ್ಕಳ ಸಾಗಣೆೆಗಳಾಗುತ್ತಿವೆ. ಪ್ರತಿ 8 ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿರುವುದು ದುರಂತದ ಸಂಗತಿ. ಈ ಕಾರ್ಯದಲ್ಲಿ 8 ಲಕ್ಷ ಜನ ತೊಡಗಿದ್ದಾರೆ ಎನ್ನುವ ಮಾಹಿತಿ ಇದೆ. ಶೇ.70 ರಷ್ಟು ದೇಶದೊಳಗೆ ಮಕ್ಕಳ ಸಾಗಣೆೆಯಾದರೆ, ಶೇ.30 ರಷ್ಟು ವಿದೇಶಗಳಿಗೆ ಸಾಗಣೆಯಾಗುತ್ತಿವೆ. ಶೇ.46 ರಷ್ಟು ಲೈಂಗಿಕ ವೃತ್ತಿಗೆ ಬಳಸಲಾಗುತ್ತಿದೆ. ಶೇ.24 ರಷ್ಟು ಭಿಕ್ಷಾಟಣೆ, ಬಾಲ ಕಾರ್ಮಿಕ, ಅಂಗಾಂಗಗಳ ಮಾರಾಟಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟುವುದು ನೆಮ್ಮೆಲ್ಲರ ಜವಾಬ್ದಾರಿ ಎಂದು ಸ್ಪಂದನಾ ಸಂಸ್ಥೆ ನಿರ್ದೇಶಕಿ ವಿ.ಸುಶೀಲಾ ಹೇಳಿದರು.

    ಜನ್ಮ ದಿನಾಂಕ ತಿದ್ದುತ್ತಾರೆ
    ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಬಾಲ್ಯ ವಿವಾಹ ತಡೆಗಟ್ಟಲು ಸಾಕಷ್ಟು ಕಾನೂನು, ಯೋಜನೆಗಳು ಇದ್ದರೂ ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಬಾಲಕಿಯರು ಜನ್ಮ ದಿನಾಂಕ ತಿದ್ದಿ ವಯಸ್ಸು ಬದಲಾಯಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಇದಕ್ಕೆ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇಂತಹ ಪ್ರಮಾದಕ್ಕೆ ಇಲಾಖೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.

    ಬಾಲ್ಯವಿವಾಹ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಬಾಲ ಕಾರ್ಮಿಕ ಹಾಗೂ ಜೀತ ಪದ್ಧತಿಗಳ ಬಗ್ಗೆ ಚರ್ಚೆ ನಡೆಯಿತು. ಜಾತ್ರೆಗಳಲ್ಲಿ ಬಾಲ್ಯವಿವಾಹ ಹಾಗೂ ಮಕ್ಕಳ ಕಳ್ಳತನವಾಗುತ್ತಿರುವ ಬಗ್ಗೆ ತಿಳಿಸಿದಾಗ ತಕ್ಷಣ ಮಾಹಿತಿ ತಿಳಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಬಾಲ್ಯವಿವಾಹ ತಡೆಯಲು ಹೋದಾಗ ಅಂಗನವಾಡಿ ಮೇಲ್ವಿಚಾರಕರಿಗೆ ರಕ್ಷಣೆ ಇಲ್ಲ. ಇದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts