More

    ಬಾಲ್ಯ ವಿವಾಹ ತಡೆಗೆ ಸಮನ್ವಯ ಅಗತ್ಯ

    ಬಾಗಲಕೋಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಪ್ಟೆಂಬರ ಅಂತ್ಯಕ್ಕೆ ಒಟ್ಟು 46 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಬಾಲ್ಯ ವಿವಾಹ ತಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

    ಚೈಲ್ಡ್ ಲೈನ್‌ಗೆ ಸಂಬಂಧಿಸಿದಂತೆ 1098ಗೆ ಬರುವ ದೂರುಗಳ ಬಗ್ಗೆ ಮೇಲುಸ್ತುವಾರಿ ಕೆಲಸ ನಿರ್ವಹಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲರಿಗೆ ವಹಿಸಲಾಯಿತು. ದೂರು ಬಂದ ತಕ್ಷಣ ಬಾಲ್ಯ ವಿವಾಹ ತಡೆಗೆ ಕ್ರಮಕೈಗೊಳ್ಳಲು ಸೂಚಿಸಿದರು. ನಂತರ ಆ ಬಾಲಕಿಯ ಬಗ್ಗೆ ನಿಗಾವಹಿಸುವ ಕೆಲಸವಾಗಬೇಕು. ವಸ್ತು ಸ್ಥಿತಿಯ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕು. ಬಾಲ್ಯ ವಿವಾಹ ನಡೆಯದಂತೆ ಕಣ್ಗಾವಲಾಗಿ ಕೆಲಸ ನಿರ್ವಹಿಸಬೇಕು. ಅಲ್ಲದೆ ಈ ಬಗ್ಗೆ ಪ್ರತಿ ತಿಂಗಳು ಸಭೆ ನಡೆಸಲಾಗುವುದು ಎಂದು ಹೇಳಿದರು.

    ಬೇಟಿ ಬಚಾವೋ ಬೇಟಿ ಪಡಾವೋ
    ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಪ್ರಸಕ್ತ ಸಾಲಿಗೆ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳ ನೇಮಕ, ಸಂಚಾರಿ ವಾಹನಗಳ ಮೂಲಕ ಗ್ರಾ.ಪಂಗಳಲ್ಲಿ ವಿವಿಧ ಇಲಾಖೆಯ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯಕ್ರಮ, ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣ ಕುರಿತು ಕಾರ್ಯಕ್ರಮಗಳ ರೂಪು ರೇಷೆಗಳನ್ನು ತಯಾರಿಸಿ ನೀಡುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಸೂಚಿಸಿದರು. ಈ ವೇಳೆ ಜಿ.ಪಂ ಸಿಇಒ ಟಿ.ಭೂಬಾಲನ ಮಾತನಾಡಿ, ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ರೂಪುರೇಷೆಗಳನ್ನು ಹಾಕಿಕೊಳ್ಳಲು ತಿಳಿಸಿದರು.

    ಸ್ವಾಧಾರ ಕೇಂದ್ರ
    ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ, ವೃತ್ತಿ ತರಬೇತಿ, ವೈದ್ಯಕೀಯ ನೆರವು, ಕುಟುಂಬಕ್ಕೆ ಪುನರ್ ಮಿಲನ ಮತ್ತು ಕಾನೂನು ನೆರವನ್ನು ನೀಡುವ ಮೂಲಕ ಆರ್ಥಿಕ, ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡುವ ಯೋಜನೆ ಇದಾಗಿದ್ದು, ಸದ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಸ್ವಾಧಾರ ಕೇಂದ್ರಗಳಲ್ಲಿ 28 ಮಹಿಳೆಯರು ಹಾಗೂ 17 ಜನ ಮಕ್ಕಳು ಆಶ್ರಯ ಪಡೆದಿರುವುದಾಗಿ ವಿಷಯ ಮೇಲ್ವಿಚಾರಕಿ ಜಯಮಾಲಾ ದೊಡಮನಿ ಸಭೆಗೆ ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ಧ್ದಿ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts