More

    ಜಾತಿ ಪ್ರಮಾಣ ಪತ್ರಕ್ಕಾಗಿ ಜಟಾಪಟಿ

    ಬಾಗಲಕೋಟೆ: ಜಾತಿ ಪ್ರಮಾಣ ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಎಚ್.ವೈ. ಮೇಟಿ ನೇತೃತ್ವದಲ್ಲಿ ಬಾಗಲಕೋಟೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪ್ರವರ್ಗ ‘ಬ’ ಗೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯೆ ಜಯಶ್ರೀ ಇಂಗಳೆ ಅವರಿಗೆ ಮರಾಠ ಪಂಗಡಕ್ಕೆ ಸೇರಿದ ಪ್ರವರ್ಗ ಬ ಜಾತಿ ಪ್ರಮಾಣ ಪತ್ರ ನೀಡಲು ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನಿರಾಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೈ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದ ಪರಿಣಾಮ ತಹಸೀಲ್ದಾರ್ ಗುರುಸಿದ್ದಯ್ಯ ಅವರೊಂದಿಗೆ ಮಾತಿನ ಜಟಾಪಟಿ ನಡೆಸಿದರು.

    ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ತಮ್ಮ ಸರ್ಕಾರ ಇದೆ ಎಂದು ಕೆಲವರು ಬಾಗಲಕೋಟೆ ತಾಲೂಕಿನಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ತಹಸೀಲ್ದಾರರು ಕಾನೂನು ರೀತಿ ನಡೆದುಕೊಳ್ಳುತ್ತಿಲ್ಲ. ಗ್ರಾಮ ಸದಸ್ಯೆ ಜಯಶ್ರೀ ಇಂಗಳೆ ಪ್ರವರ್ಗ ಬ ಜಾತಿ ಪ್ರಮಾಣಕ್ಕಾಗಿ ಅರ್ಜಿ ಸಲ್ಲಿಸಿದರೂ ಪ್ರಮಾಣ ಪತ್ರ ನೀಡದೆ ದುರುದ್ದೇಶದಿಂದ ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಹಿರೇಮಠ ಪ್ರತಿಕ್ರಿಯೆ ನೀಡಿ, 2017 ರಲ್ಲಿ ಜಯಶ್ರೀ ಇಂಗಳೆ ಪ್ರವರ್ಗ ಅ ಮೀಸಲಾತಿ ಜಾತಿ ಪ್ರಮಾಣ ಪಡೆದುಕೊಂಡಿದ್ದಾರೆ. ಇದೀಗ ಪ್ರವರ್ಗ ಬ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆ. ಗ್ರಾಪಂ ಚುನಾವಣೆ ವೇಳೆ ಅರ್ಜಿಯಲ್ಲಿ ಜಯಶ್ರೀ ಇಂಗಳೆ ಗೊಂದಳಿ ಜಾತಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಅವರು ಅಂತರ್ ಜಾತಿ ವಿವಾಹವಾಗಿದ್ದು, ಇದೀಗ ಪ್ರವರ್ಗ ಅ ಮೀಸಲಾತಿ ಪಡೆದ ನಂತರ ಪ್ರವರ್ಗ ಬ ಕೇಳುತ್ತಿದ್ದಾರೆ. ಇದರಿಂದ ಗೊಂದಲವಾಗಿದೆ. ಅವರ ತಂದೆ ಕಡೆಯುವ ಸ್ಥಾನಿಕ ಚೌಕಾಶಿ ಪರಿಶೀಲನೆ ಮಾಡಲಾಗುವುದು. ಇದಕ್ಕೆ ಸ್ಪಷ್ಟವಾದ ದಾಖಲೆ ಇದ್ದರೆ ಜಾತಿ ಪ್ರಮಾಣ ನೀಡಲು ಸಾಧ್ಯವಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
    ರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಸ್ಥಾನಗಳಿದ್ದು, ಕಾಂಗ್ರೆಸ್ ಬೆಂಬಲಿತರು 7, ಬಿಜೆಪಿ ಬೆಂಬಲಿತರು 6 ಜನ ಇದ್ದಾರೆ. ಜ.29 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಪ್ರವರ್ಗ ಬ ಮೀಸಲಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿರುವ ಜಯಶ್ರೀ ಜಾತಿ ಪ್ರಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ತಹಸೀಲ್ದಾರ್ ಜಾತಿ ಪ್ರಮಾಣ ಪತ್ರ ನೀಡದಿರುವುದು ಜಟಾಪಟಿಗೆ ಕಾರಣವಾಗಿದೆ.

    ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡರಾದ ರಾಜು ಮನ್ನಿಕೇರಿ, ಜಕ್ಕಪ್ಪ ಮಾದಾಪುರ, ಕುಮಾರ ವೈಜಾಪುರ, ಲಕ್ಷ್ಮಣ ದಡ್ಡಿ, ಉಮೇಶ ಮೇಟಿ ಇದ್ದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಜಾತಿ ಪ್ರಮಾಣ ಪತ್ರ ಬೇಕಾಗಿದೆ. ಆದರೆ ದುರುದ್ದೇಶಪೂರ್ವಕವಾಗಿ ನನಗೆ ತಹಶೀಲ್ದಾರವರು ಜಾತಿಪ್ರಮಾಣ ಪತ್ರವನ್ನು ನೀಡಲು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಜಾತಿಪ್ರಮಾಣ ಪತ್ರವನ್ನು ಈ ವರೆಗೆ ಪಡೆದಿಲ್ಲ.
    ಜಯಶ್ರೀ ಇಂಗಳೆ ರಾಂಪೂರ ಗ್ರಾ.ಪಂ. ಸದಸ್ಯೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts