More

    ಬೀಳಗಿ ಮತಕ್ಷೇತ್ರಕ್ಕೆ 1500 ಕೋಟಿ ರೂ.ಬೇಡಿಕೆ

    ಬಾಗಲಕೋಟೆ: ಜಿಲ್ಲೆಯ ಬೀಳಗಿ ಮತಕ್ಷೇತ್ರಕ್ಕೆ ಕುಡಿಯುವ ನೀರು, ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಲು, ಹೊಸ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸೇರಿ ಇತರ ಯೋಜನೆಗಳಿಗೆ ಬಜೆಟ್‌ನಲ್ಲಿ 1500 ಕೋಟಿ ರೂ. ಮೀಸಲಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಮಾತನಾಡಿದರು. ಕೃಷ್ಣಾ ಜಲಾಶಯದ ಹಿನ್ನೀರಿನಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮುಳುಗಡೆ ಪ್ರದೇಶವಿರುವುದರಿಂದ ಹಸ್ತಾಂತರಗೊಂಡ ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಲು 85 ಕೋಟಿ ರೂ.ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದ್ದು,ಅನುಮೋದನೆ ಪಡೆಯಬೇಕಾಗಿದೆ. ಬೀಳಗಿ ಪಟ್ಟಣ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳು ಒಳಗೊಂಡಂತೆ ಮುಂದಿನ 10 ವರ್ಷಗಳ ಜನಸಂಖ್ಯೆಯನ್ನು ಆಧರಿಸಿ 70 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸಲು ಪ್ರಸ್ತಾಪಿಸಲಾಗುತ್ತಿದೆ ಎಂದರು.

    *ಹೆರಕಲ್ ಬಳಿ 70 ಕೋಟಿ ರೂ.ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ ಪೂರ್ಣಗೊಂಡಿದ್ದು, ಆಲಮಟ್ಟಿ ಅಣೆಕಟ್ಟೆ ಎತ್ತರಿಸಿದರೂ ಸೇತುವೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಮುಳುಗಡೆಯಾಗುವ ಗ್ರಾಮಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

    2012-13ನೇ ಸಾಲಿನಲ್ಲಿ ಕೆರೂರ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಹಿಂದಿನ ಸಮ್ಮಿಶ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದರೂ ಕಾರ್ಯ ಪ್ರಾರಂಭಿಸಲು ಅನುದಾನ ನೀಡಿರಲಿಲ್ಲ. ಈ ಯೋಜನೆ ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ 600 ಕೋಟಿ ರೂ. ಮೀಸಲಿಡಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ಇನ್ನು ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡು 18 ವರ್ಷಗಳು ಕಳೆದರೂ ಒಮ್ಮೆಯೂ ನೀರು ಹರಿಸಿಲ್ಲ. ಹೆರಕಲ್ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಸಂಗ್ರಹವಾಗುವ 3 ರಿಂದ 4 ಟಿಎಂಸಿ ನೀರನ್ನು ಹೂಲಗೇರಿಯಲ್ಲಿ ಚಾಕ್‌ವೆಲ್ ನಿರ್ಮಿಸಿ ಕಾಲುವೆಗಳಿಗೆ ನೀರು ಹರಿಸಲು 305 ಕೋಟಿ ರೂ. ಅನುದಾನ ಅಗತ್ಯವಿದ್ದು, ಅದನ್ನು ಸಹ ಬಜೆಟ್‌ನಲ್ಲಿ ಸೇರಿಸಲು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ಹೇಳಿದರು.

    ಸಭೆಯಲ್ಲಿ ಬೀಳಗಿ ತಾಲೂಕಿನ ತಹಸೀಲ್ದಾರ್ ಬಿ.ಪಿ.ಅಜೂರ, ಬಾಗಲಕೋಟೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಬಾದಾಮಿ ತಹಸೀಲ್ದಾರ್, ಎಸ್.ಎಸ್.ಇಂಗಳೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ವೈ.ಬಸರಿಗಿಡದ, ಎಂ.ಎ.ತೊದಲಬಾಗಿ, ಪುನೀತ್ ಸೇರಿ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಬೀಳಗಿ ಮತಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದೇವೆ. ಕ್ಷೇತ್ರದ ವ್ಯಾಪ್ತಿಗೆ ಬಾಗಲಕೋಟೆ, ಬಾದಾಮಿ, ಬೀಳಗಿ ತಾಲೂಕಿನ ಗ್ರಾಮಗಳು ಒಳಪಡುವುದರಿಂದ ಬಾಗಲಕೋಟೆಯಲ್ಲಿ ಸಭೆ ನಡೆಸಲಾಗಿದೆ. – – ಮುರುಗೇಶ ನಿರಾಣಿ ಬೀಳಗಿ ಶಾಸಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts