More

    ಶೀಘ್ರ ಕಂದಾಯ ಗ್ರಾಮಗಳಾಗಿ ಪರಿವರ್ತನೆ

    ಬಾಗಲಕೋಟೆ: ರಾಜ್ಯದಲ್ಲಿನ ಎಲ್ಲ ತಾಂಡಾಗಳನ್ನು ಶೀರ್ಘದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಬಂಜಾರ ಸಮುದಾಯವರು ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

    ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದು, ಶಿವನ ಆಶೀರ್ವಾದದಿಂದ ಹುಟ್ಟಿ ಬಂದ ಸೇವಾಲಾಲ್ ತಪ್ಪಸ್ಸು ಮಾಡಿ ಪವಾಡ ಪುರುಷ ಎನಿಸಿದರು. ಸಮಾಜ ಸುಧಾರಣೆಗೆ ಹತ್ತು ಹಲವಾರು ಪವಾಡಗಳನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು. ಸರ್ಕಾರ, ರಾಜಕೀಯ ಹಾಗೂ ಇತರ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಬಂಜಾರ ಸಮಾಜ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದು ತಿಳಿಸಿದರು.

    ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಬಂಜಾರ ಸಮಾಜದವರು ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದಾರೆ. ಈ ಸಮುದಾಯಕ್ಕೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಲಾಗಿದ್ದು, ಬರುವ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಸರ್ಕಾರ ಮೀಸಲಿಡಲಿದೆ. ಬರುವ ದಿನಗಳಲ್ಲಿ ಬಂಜಾರ ಸಮುದಾಯಕ್ಕೆ ಒಂದು ವಿಧಾನ ಪರಿಷತ್‌ನ ಸ್ಥಾನವನ್ನು ಸಹ ನೀಡಲಾಗುತ್ತಿದೆ ಎಂದು ಭರವಸೆ ನೀಡಿದರು.

    ಬೀಳಗಿ ಮತಕ್ಷೇತ್ರದಲ್ಲಿ ಒಟ್ಟು 22 ತಾಂಡಾಗಳು ಬರುತ್ತಿದ್ದು, ಪ್ರತಿ ತಾಂಡದಲ್ಲಿ ಸಮುದಾಯ ಭವನ ನಿರ್ಮಿಸಲಿಕ್ಕೆ ತಲಾ 25 ಲಕ್ಷ ರೂ. ಅನುದಾನ ನೀಡಲಾಗುವುದು. ಅಲ್ಲದೆ, ಪ್ರತಿಯೊಂದು ತಾಂಡಾಗಳಿಗೆ ವಿಶೇಷ ಅನುದಾನಡಿ ತಾಂಡಾ ಕಾಲನಿಗಳಲ್ಲಿ ಸಿಸಿ ರಸ್ತೆ, ಬೋರ್‌ವೆಲ್‌ಗಳನ್ನು ಹಾಕಿಸಲಾಗಿದೆ. ನಿರಾಣಿ ಫೌಂಡೇಷನ್ ವತಿಯಿಂದ 1 ಲಕ್ಷ ಜನರಿಗೆ ವಿಮೆ ಸೌಲಭ್ಯ ಒದಗಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

    ಪ್ರೊ.ಸ್ವತಂತ್ರ ಸಿಂಧೆ ಉಪನ್ಯಾಸ ನೀಡಿ, ಸೇವಾಲಾಲರು ಬಾಲಬ್ರಹ್ಮಚಾರಿಯಾಗಿದ್ದರು. ಅನೇಕ ಪವಾಡಗಳೊಂದಿಗೆ ಮಾನವರನ್ನು ಪಾವನರನ್ನಾಗಿ ಮಾಡಿದ್ದಾರೆ. ಸಮಾಜದಲ್ಲಿ ಬದಲಾವಣೆ ತಂದರು. ತತ್ವಜ್ಞಾನಿ ಹಾಗೂ ಕಾಲಜ್ಞಾನಿ ಕೂಡ ಆಗಿದ್ದರು ಎಂದರು.

    ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನಗೌಡ ಪರನಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಸಮಾಜದ ಮುಖಂಡರಾದ ಬಲರಾಮ ನಾಯಕ, ರಂಗನಗೌಡ ಗೌಡ್ರ, ಹೂವಪ್ಪ ರಾಠೋಡ, ಗಣಪತಿ ಪೂಜಾರಿ, ವಿಷ್ಣು ಪೂಜಾರಿ, ನಾಗೇಶ ಪೂಜಾರಿ, ಗೋಪಾನ ನಾಯಕ, ಸತೀಶ ನಾಯಕ, ರಾಜು ಲಮಾಣಿ, ಸುಭಾಷ ಲಮಾಣಿ, ನಿಂಗಪ್ಪ ಚವಾಣ್ ಇತರರು ಉಪಸ್ಥಿತರಿದ್ದರು.

    ಶರಣರು, ಸಂತರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಸೇವಾಲಾಲರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ತತ್ವಾದರ್ಶಗಳಿಂದ ಪ್ರಭಾವಿತಗೊಳ್ಳದಿರುವವರು ಯಾರೂ ಇಲ್ಲ. ಬಾಲ್ಯದಲ್ಲಿಯೇ ದೈವಿಭಕ್ತಿ, ಸಂಸ್ಕಾರ ಹಾಗೂ ಪ್ರಕೃತಿ ಮೇಲೆ ಅಪಾರ ಕಾಳಜಿ ಹೊಂದಿದವರಾಗಿದ್ದರು. ಆದ್ದರಿಂದ ನಾವೆಲ್ಲರೂ ಸೇವಾಲಾಲರ ಜೀವನ, ಸಂಸ್ಕೃತಿ ಅನುಕರಣೆ ಮಾಡಬೇಕು.
    – ಗಂಗೂಬಾಯಿ ಮಾನಕರ ಜಿಪಂ ಸಿಇಒ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts