More

    ಅಕ್ರಮ ದಂಧೆ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

    ಬಾಗಲಕೋಟೆ: ಬಿಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವುದು ಕಾಲೇಜುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಎಬಿವಿಪಿ ಕಾರ್ಯಕರ್ತರು ಖಾಸಗಿ ಬಿಇಡಿ ಕಾಲೇಜುಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ದೇಶಕ್ಕೆ ಮಾದರಿಯಾಗಿತ್ತು. ಆದರೇ ಇದೀಗ ವ್ಯವಸ್ಥೆ ಹದಗೆಡುತ್ತಿದೆ. ಬಿಇಡಿ ಸೀಟುಗಳು ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ ತೆಲೆ ತಗ್ಗಿಸುವಂತಾಗಿದೆ. ಬಿಇಡಿ ಸೀಟುಗಳಿಗೆ ಬಹು ಬೇಡಿಕೆ ಅರಿತುಕೊಂಡ ಕೆಲ ಶಿಕ್ಷಣ ಸಂಸ್ಥೆಗಳು ಅಕ್ರಮವಾಗಿ ಹಣ ಸಂಪಾದಿಸಲು ಸೀಟುಗಳನ್ನು ಮಾರಾಟ ಮಾಡುತ್ತಿದೆ. ಇದು ಭವಿಷ್ಯದ ಶಿಕ್ಷಣ ವ್ಯವಸ್ಥೆ, ಮಕ್ಕಳ ಮೇಲೆ ಕರಿ ನೆರಳು ಆವರಿಸಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಎಬಿವಿಪಿ ನಗರ ಕಾರ್ಯದರ್ಶಿ ಉನ್ನತ್ ಬೇವಿನಕಟ್ಟಿ ಮಾತನಾಡಿ, ಬಿಇಡಿ ಕೋರ್ಸ್ ಮಾಡಲು ಬಯಸುವ ಕೆಲವರು ತರಗತಿಗೆ ಹಾಜರಾಗಲು ಒಪ್ಪುವದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಅಕ್ರಮವಾಗಿ ಪ್ರಮಾಣಪತ್ರ ನೀಡಲಾಗುತ್ತಿದೆ . ಈ ಅಕ್ರಮಕ್ಕಾಗಿ ವಿದ್ಯಾರ್ಥಿಗಳಿಂದ ಶುಲ್ಕ ಮಾತ್ರವಲ್ಲದೆ ಹೆಚ್ಚುವರಿ ಹಣ ಪಡೆದುಕೊಳ್ಳಲಾಗುತ್ತದೆ. ಇದಲ್ಲದೆ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಬಂದ ವಿದ್ಯಾರ್ಥಿಗಳಿಂದ ಖಾಸಗಿ ಬಿ.ಇಡಿ ಕಾಲೇಜುಗಳು ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿವೆ ಎಂದು ಕಿಡಿಕಾರಿದರು.

    ಬಿರಿ ಪದವಿ ಪಡೆದುಕೊಳ್ಳಲು ಅಕ್ರಮ ಮಾರ್ಗ ಕಂಡುಕೊಂಡವರು ಕಾಲಕಾಲಕ್ಕೆ ಸಲ್ಲಿಸಬೇಕಾದ ಆಸೈನ್ಮೆಂಟ್‌ಗಳನ್ನು ಕೂಡ ಕಾಲೇಜಿನವರೇ ಒದಗಿಸುತ್ತಾರೆ . ಅದನ್ನೇ ನೋಡಿಕೊಂಡು ವಿದ್ಯಾರ್ಥಿಗಳು ಆಸೈನ್ಮೆಂಟ್ ಬರೆದುಕೊಡುತ್ತಾರೆ. ಈ ರೀತಿ ಅಸೈನ್ಮೆಂಟ್ ಒದಗಿಸಿದ್ದಕ್ಕೆ ಹಣ ಫಿಕ್ಸ್ ಮಾಡಿಕೊಳ್ಳಲಾಗುತ್ತದೆ. ಒಂದು ದಿನವೂ ತರಗತಿಗೆ ಹಾಜರಾಗಿ ಪಾಠ ಕೇಳದೆ ಕೇವಲ ಪರೀಕ್ಷೆ ಬರೆದು ಬಿಇಡಿ ಪದವಿ ಪ್ರಮಾಣಪತ್ರ ಪಡೆದುಕೊಳ್ಳುತ್ತಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವೇ ? ಇಂತಹ ಅಕ್ರಮದ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಕೂಡಲೇ ಬಿ.ಇಡಿ ಕಾಲೇಜುಗಳಲ್ಲಿನ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ತನಿಖೆ ನಡೆಸಬೇಕು. ಬಿಇಡಿ ಸೀಟುಗಳು ಸರ್ಕಾರದ ವ್ಯಾಪ್ತಿಗೆ ಬರಬೇಕು. ಕಠಿಣ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಬಿವಿಪಿ ತಾಲೂಕು ಸಂಚಾಲಕ ಪ್ರಕಾಶ್ ಚವ್ಹಾನ್, ಸಹ ಸಂಚಾಲಕ ಪನಿ ರಾಘವೇಂದ್ರ, ಮುಖಂಡರಾದ ಪ್ರಮುಖ ಹಯವದನ, ಶ್ರೇಯಸ್ ಬಿ., ಸಹ ಕಾರ್ಯದರ್ಶಿ ರುದ್ರೇಶ ಬಿ, ಮುತ್ತು, ವಿಶ್ವನಾಥ, ಧೀರಜ್.ಬಿ. ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts