More

    ಜನ ಆಶೀರ್ವಾದ ಮಾಡಿ, ಹೈಕಮಾಂಡ್ ಒಪ್ಪಿದ್ರೆ…

    ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಯ ಮೇಲೆ ಟಾವಲ್ ಹಾಕುವ ಕೆಲಸ ಭರದಿಂದ ಸಾಗಿದೆ. ಇತ್ತ ಸಿದ್ದರಾಮಯ್ಯ ಅವರು ಸಹ ಮತ್ತೊಮ್ಮೆ ಸಿಎಂ ಆಗುವ ತಮ್ಮ ಮನದಿಚ್ಛೆಯನ್ನು ಆಗಾಗ ಪರೋಕ್ಷವಾಗಿ ಹೊರಹಾಕುತ್ತಲೇ ಇದ್ದಾರೆ.

    ಇದೀಗ ಎರಡು ದಿನಗಳ ತಮ್ಮ ಸ್ವಕ್ಷೇತ್ರ ಬಾದಾಮಿ ಪ್ರವಾಸದಲ್ಲಿ ಇರುವ ಸಿದ್ದರಾಮಯ್ಯ, ಮೊದಲ ದಿನವೇ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಕನಸು ಹರಿಬಿಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡುತ್ತಲೇ ಜನರು ಆಶೀರ್ವಾದ ಮಾಡಬೇಕು. ಎಂಎಲ್ಎಗಳು ಒಪ್ಪಬೇಕು. ಆ ಮೇಲೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಷ್ಟೆಲ್ಲ ಪ್ರೋಸೆಸ್ ಇದೆ. ಇದೆಲ್ಲ ಆದರೆ ನೋಡೋಣ ಎನ್ನುವ ಮೂಲಕ ಸಿಎಂ ರೇಸ್‌ನಲ್ಲಿ ತಾವು ಮುಂಚೂಣಿಯಲ್ಲಿ ಇರುವ ಬಗ್ಗೆ ಸುಳಿವು ನೀಡಿದ್ದಾರೆ.

    ಸಿದ್ದರಾಮಯ್ಯ ಅವರು ಬಾದಾಮಿ ಶಾಸಕರಾಗಿ ಎರಡು ವರ್ಷ ಒಂಬತ್ತು ತಿಂಗಳು ಆಗಿವೆ. ಈ ಅವಧಿಯಲ್ಲಿ ಸಾಕಷ್ಟು ಸಲ ಕ್ಷೇತ್ರ ಪ್ರವಾಸ ಮಾಡಿದ್ದಾರೆ. ಆದರೆ, ಈ ವರೆಗೂ ತಮ್ಮ ಇಡೀ ಪ್ರವಾಸವನ್ನು ಸಂಪೂರ್ಣ ರಾಜಕೀಯ ಭಾಷಣಕ್ಕೆ ಸೀಮಿತ ಮಾಡಿರಲಿಲ್ಲ. ಆದರೆ, ಗುರುವಾರ ಮಾತ್ರ ಅವರು ಹೋದ ಕಡೆಗೆಲ್ಲ ರಾಜಕೀಯಕ್ಕೆ ಮೀಸಲಿಟ್ಟಿದ್ದರು.

    ಸಿಎಂ ಇದ್ದಿದ್ರೆ ಕಥೆ ಬೇರೆ ಇರ್ತಿತ್ತು
    ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಎರಡು ಕೋಟಿ ರೂ. ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ಮಾಡಿದ ಸಿದ್ದರಾಮಯ್ಯ, ವೇದಿಕೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಗುಟುರು ಹಾಕಿದರು. ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲ. ಈ ಮಂತ್ರಿಗಳನ್ನು ನಂಬಿದರೆ ಯಾವ ಕೆಲಸನೂ ಆಗಲ್ಲ. ಹೀಗಾಗಿ ನಾನು ಅಧಿಕಾರಿಗಳನ್ನು ಹಿಡಿದು ಕ್ಷೇತ್ರದ ಕೆಲಸ ಮಾಡಿಸುತ್ತಿದ್ದೇನೆ ಎಂದರು.

    ಇನ್ನು ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆಯ ಬಳಿಕ ಸಭೆಯಲ್ಲಿ, ನಾವು ಅಧಿಕಾರಕ್ಕೆ ಬರಲೇಬೇಕು. ಅಧಿಕಾರ ಮೋಜು ಮಾಡಲು ಅಲ್ಲ. ನಾನು ಸಿಎಂ ಇದ್ದಾಗ, ಅದಕ್ಕೂ ಮೊದಲು, ಈಗ ಒಂದೇ ತೆರ ಇದ್ದೇನೆ. 1994ರಿಂದ ಪಂಚೆ ಉಟ್ಟುಕೊಳ್ಳಲು ಶುರುಮಾಡಿದ್ದೇನೆ. ನನಗೆ ಪಂಚೆ, ಕುರ್ತಾ ಬಿಟ್ಟು ಬೇರೆ ಏನು ಗೊತ್ತಿಲ್ಲ. ನಾನೇನಾದ್ರು ಮತ್ತೆ ಸಿಎಂ ಆಗಿದ್ರೆ ಬಾದಾಮಿ ತಾಲೂಕು ರಾಜ್ಯದಲ್ಲಿ ನಂಬರ್ ಒನ್ ಆಗ್ತಿತ್ತು. ಅಷ್ಟೊಂದು ದುಡ್ಡು ಕೊಟ್ಟು ಬಿಡುತ್ತಿದ್ದೆ. ಮುಂದೆ ಏನಾಗುತ್ತವೆ ಎಂದು ಗೊತ್ತಿಲ್ಲ. ಜನ ಆಶೀರ್ವಾದ ಮಾಡಿದ್ರೆ ನೋಡೋಣ. ಆದರೆ, ನಾನು ಮತ್ತೆ ಸಿಎಂ ಆಗಿದ್ದರೆ ಆ ಕಥೆ ಬೇರೆನೇ ಆಗುತ್ತಿತ್ತು. ಇಡೀ ಚಿತ್ರಣವೇ ಬದಲಾಗುತಿತ್ತು ಎಂದು ಹೇಳಿದರು.

    ಬಾದಾಮಿಯಲ್ಲಿ ಹೈಕಮಾಂಡ್ ತೀರ್ಮಾನ ಮಾಡಬೇಕು ಅಂದ್ರು
    ಗೋವನಕೊಪ್ಪ, ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಎರಡು ವರ್ಷದಲ್ಲಿ ತಮ್ಮದೆ ಸರ್ಕಾರ, ಮತ್ತೆ ಸಿಎಂ ಆಗುವುದು ನೋಡೋಣ ಎಂದಿದ್ದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ನಾನು ಸಿಎಂ ಅಂತ ತಿರುಗಿಕೊಂಡು ಹೋಗಲು ಆಗಲ್ಲ. ಮೊದಲು ಜನರು ಆಶೀರ್ವಾದ ಮಾಡಬೇಕು. ಎಲ್ಲ ಎಂಎಲ್ಎಗಳು ಒಪ್ಪಬೇಕು. ಆ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು, ನೋಡೋಣ ಎಂದು ಮತ್ತೆ ಸಿಎಂ ಆಗುವ ಕನಸನ್ನು ಜೀವಂತ ಇಟ್ಟಿದ್ದಾರೆ.

    ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ
    ಗೋವನಕೊಪ್ಪ ಗ್ರಾಮದಲ್ಲಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯ ರಾಜ್ಯ ಸರ್ಕಾರ, ಬಿಜೆಪಿ ವಿರುದ್ಧ ಗುಟುರು ಹಾಕುತ್ತಲೇ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ಅಲ್ರಯ್ಯ, ಏನೇ ಮಾಡಿದ್ರು ಮತ್ತೆ ಬಜೆಪಿ-ಮೋದಿ, ಬಿಜೆಪಿ-ಮೋದಿ ಅಂತಿರಲ್ರಯ್ಯ. ನೀವು ಯಾರಿಗಾದ್ರೂ ಓಟು ಹಾಕಿ, ಕೆಲಸ ಮಾಡುವ ಸರ್ಕಾರಕ್ಕೆ ಹಾಕಿ. ಅಲ್ರಯ್ಯ, ಮೋದಿ ಇಲ್ಲಿ ಕೆಲಸ ಮಾಡಾಕ ಬಂದಾನೇನ್ರಿ? ಎಲ್ಲಿ ಬಂದಿದ್ದ? ಅಂವಾ ಇಲ್ಲಿ ಕೆಲಸ ಮಾಡಾಕ ಬಂದಿದ್ನಾ? ಅಂವಾ ಕೈಗೆ ಸಿಕ್ಕಿದ್ನೇನ್ರಿ? ಅಂವಾ ಏಳು ಕೋಟೆ ಕಟ್ಟಿಕೊಂಡು ಅವನ್ಪಾಡಿಗೆ ಅಂವಾ ಅಲ್ಲಿರ್ತಾನಲ್ಲಿ ಎಂದು ಕಿಡಿಕಾರಿದರು.

    ಕೋಳಿ ಸಾರು ತಿನ್ನಾಕ ಹೋಗಿದ್ದೆ
    ಇನ್ನು ಈಶ್ವರಪ್ಪ ಅವರ ಎಸ್ಟಿ ಹೋರಾಟದ ವಿರುದ್ಧ ಹಿಂದ್ ಸಮಾವೇಶ ನಡೆಸಲು ಪ್ಲಾೃನ್ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ, ಯಾವುದೇ ಗುಟ್ಟು ಬಿಟ್ಟು ಕೊಡಲಿಲ್ಲ. ನಾನು ಮಹಾದೇವಪ್ಪನ ಮನೆಗೆ ಹೋಗಿದ್ದೆ ಅಂದ ಮಾತ್ರಕ್ಕೆ ಅದೇ ಸಭೆ ಮಾಡಲು ಹೋಗಿದ್ದೆ ಅಂತ ಹೇಗೆ ಹೇಳ್ತೀರಿ? ನಾನು ಕೋಳಿ ಸಾರು ತಿನ್ನಲು ಹೋಗಿದ್ದೆ ಎಂದ ಸಿದ್ದರಾಮಯ್ಯ, ಸಮಾವೇಶ ನಡೆಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

    ಈಶ್ವರಪ್ಪಗೆ ಮಿದುಳು, ನಾಲಿಗೆಗೆ ಲಿಂಕ್ ಇಲ್ರಿ
    ಎಸ್ಟಿ ಹೋರಾಟ ವಿಚಾರವಾಗಿ ಮತ್ತೆ ಮತ್ತೆ ತಮ್ಮ ಕಾಲೆಳೆಯುತ್ತಿರುವ ಈಶ್ವರಪ್ಪಗೆ ತಮ್ಮ ಮಾತಿನ ಮೂಲಕವೇ ಸಿದ್ದರಾಮಯ್ಯ ತಿವಿದರು. ಈಶ್ವರಪ್ಪ ಬಗ್ಗೆ ನಾನು ಮಾತನಾಡಲ್ಲ. ಅವನಿಗೆ ಮಿದುಳು, ನಾಲಿಗೆಗೆ ಲಿಂಕ್ ಇಲ್ಲ ಎಂದು ಛೇಡಿಸಿದರು.

    ಮುಂದುವರಿದು ನನ್ನ ವಿರುದ್ಧ ಮಾತನಾಡಿದರೆ ತಾನು ದೊಡ್ಡ ಲೀಡರ್ ಆಗುತ್ತೇನೆ ಎಂದು ಈಶ್ವರಪ್ಪ ತಿಳಿಸಿದ್ದಾನೆ ಪಾಪ. ಆದರೆ ಅದು ಭ್ರಮೆ ಎಂದು ಚುಚ್ಚಿದರು. ಕುರುಬ ಸಮಾಜದಲ್ಲಿ ನಾನು ಒಬ್ಬಂಟಿಯಲ್ಲ, ಇವರೆಲ್ಲ ಯಾರು? ನನ್ನ ಜೊತೆ ಇಲ್ವಾ ಅಂತ ತಮ್ಮ ಸುತ್ತಲು ಇರುವ ಜನರನ್ನು ತೋರಿಸಿದರು. ನಾನು ಸಿಎಂ ಇದ್ದಾಗ ಅಹಿಂದ ಜನರಿಗೆ ಏನು ಮಾಡಿದ್ದೇನೆ ಎಂದು ಈ ಈಶ್ವರಪ್ಪ, ವಿಶ್ವನಾಥ ಬಳಿ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಅದನ್ನು ಜನರು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

    ಎಚ್ಡಿಕೆ ಸಿಎಂ ಮಾಡಿದ್ದಾೃರು?
    ಬಾದಾಮಿ ಅಭಿವೃದ್ಧಿಗೆ ನಾನೇ ಅನುದಾನ ಕೊಟ್ಟಿದ್ದು ಎಂದಿದ್ದ ಮಾಜಿ ಸಿಎಂ ಎಚ್ಡಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ, ಮೊದಲು ಅವರನ್ನು ಸಿಎಂ ಮಾಡಿದ್ದಾೃರು? 80 ಜನ ಎಂಎಲ್‌ಎ ಇರೋ ನಾವು 37 ಜನ ಎಂಎಲ್ಎ ಇರುವ ಅವರನ್ನು ಸಿಎಂ ಮಾಡಿದ್ದಲ್ವಾ? ಅವರು ಸಿಎಂ ಆಗದಿದ್ದರೆ ಅನುದಾನ ಎಲ್ಲಿಂದ ಕೊಡುತ್ತಿದ್ದರು. ಅವರು ಸಿಎಂ ಆಗಿದ್ದು, ನಾನು ಎಂಎಲ್ಎ ಅಂತ ಅನುದಾನ ಕೊಟ್ಟಿದ್ದಾರೆ. ಎಂಎಲ್ಎ ಆಗಿ ಅನುದಾನ ತರುವುದು ನನ್ನ ಹಕ್ಕು, ಅದು ಅವರ ಕೊಟ್ಟ ಭಿಕ್ಷೆಯಲ್ಲ. ನಾನು ಕೇಳಿದಷ್ಟು ಕೊಟ್ಟಿಲ್ಲ. ಸ್ವಲ್ಪ ಮಾತ್ರ ಕೊಟ್ಟಿದ್ದಾರೆ ಎಂದು ಎಚ್ಡಿಕೆಗೆ ತಿರುಗೇಟು ಕೊಟ್ಟರು.

    ಚರ್ಮ ಸುಲಿತೀನಿ, ಲ್ಯಾಂಡ್ ಆರ್ಮಿ ಅಧಿಕಾರಿಗೆ ಸಿದ್ದು ವಾರ್ನಿಂಗ್
    ಇನ್ನು ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕೆ ಅಡಿಗಲ್ಲು ನೆರವೇರಿಸಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯ, ಲ್ಯಾಂಡ್ ಆರ್ಮಿ ಅಧಿಕಾರಿಗೆ ಸರಿಯಾಗಿ ಕೆಲಸ ಮಾಡದಿದ್ದರೆ ನಿನ್ನ ಚರ್ಮ ಸುಲಿತೀನಿ ಎಂದು ಖಡಕ್ ಎಚ್ಚರಿಕೆ ನೀಡಿದರು. ನಾಳೆಯೇ ಕೆಲಸ ಪ್ರಾರಂಭಿಸಬೇಕು. ಸರಿಯಾಗಿ ಕೆಲಸ ಮಾಡದಿದ್ದರೆ ನಿನ್ನ ಚರ್ಮ ಸುಲಿತೀನಿ ಹುಷಾರ್ ಆಗಿರು ಎಂದರು.



    ಜನ ಆಶೀರ್ವಾದ ಮಾಡಿ, ಹೈಕಮಾಂಡ್ ಒಪ್ಪಿದ್ರೆ…



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts