More

    ಮುಷ್ಕರಕ್ಕೆ ಬಸವಳಿದ ಪ್ರಯಾಣಿಕರು

    ಬಾಗಲಕೋಟೆ: 6ನೇ ವೇತನ ಆಯೋಗ ಶಿಫಾರಸು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರ ಮೂರನೇ ದಿನವೂ ಮುಂದುವರಿದ ಪರಿಣಾಮ ಶುಕ್ರವಾರ ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರವಿಲ್ಲದೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

    ಬಾಗಲಕೋಟೆ ನಗರ, ಬೀಳಗಿ, ಮುಧೋಳ, ಬಾದಾಮಿ, ಇಳಕಲ್ಲ, ಜಮಖಂಡಿ, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಹುನಗುಂದ ಸೇರಿ ಜಿಲ್ಲೆಯ ಯಾವ ಭಾಗದಲ್ಲಿಯೂ ಬಸ್‌ಗಳ ಸಂಚಾರ ನಡೆಯಲಿಲ್ಲ. ಸೀಮಿತ ಸಂಖ್ಯೆಯಲ್ಲಿ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಜಿಲ್ಲೆಯ ಕೆಲವು ಮಾರ್ಗದಲ್ಲಿ ಮಾತ್ರ ಸಂಚರಿಸಿ ಸಾರಿಗೆ ಸೌಲಭ್ಯ ದೊರೆಯುವಂತಾಯಿತು. ಉಳಿದಂತೆ ಬಹುತೇಕ ಭಾಗದಲ್ಲಿ ಬಸ್ ಸೇವೆ ಸಂಪೂರ್ಣ ಸ್ತಬ್ಧಗೊಂಡಿತ್ತು.

    ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಬಸ್‌ಗಳು ಇಲ್ಲದೆ ತೀವ್ರ ರೀತಿಯಲ್ಲಿ ಪರಿತಪಿಸಿದರು. ಮುಷ್ಕರದಿಂದ ಜನ ಸಾಮಾನ್ಯರಿಗೆ ಅಷ್ಟೇ ಅಲ್ಲದೆ ಡ್ಯೂಟಿ ಮೇಲೆ ದೂರ ಊರಿನಿಂದ ಬಂದಿದ್ದ ಬಸ್‌ಗಳ ಚಾಲಕರು, ಕಾರ್ಯನಿರ್ವಹಕರು ಹೈರಾಣ ಆದರು. ಸಹೋದ್ಯೋಗಿಗಳು ನೆರವಿನೊಂದಿಗೆ ಊಟ, ವಸತಿಗೆ ಆಶ್ರಯ ಪಡೆದುಕೊಳ್ಳಬೇಕಾಯಿತು. ಮದುವೆ, ಉಪನಯನ, ಜಾತ್ರೆ ಇನ್ನಿತರ ಕಾರ್ಯಕ್ರಮಗಳಿಗೆ ಒಪ್ಪಂದದ ಮೇರೆಗೆ ಮುಂಗಡವಾಗಿ ಬಸ್ ಬುಕ್ ಮಾಡಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿ ಒದ್ದಾಡಿದರು. ಈ ವಿಷಯ ಸಾರಿಗೆ ಅಧಿಕಾರಿಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿತು.

    ಮುಷ್ಕರ ಪರಿಣಾಮ ಬಡವರು, ಮಧ್ಯಮ ವರ್ಗ, ಮಹಿಳೆಯರು, ಅಂಗವಿಕಲರು ಸಂಚರಿಸಲು ಪರದಾಡಿದರು. ಖಾಸಗಿ ವಾಹನಗಳು ಹೆಚ್ಚುವರಿ ಹಣ ವಸೂಲಿಗೆ ಬೇಸತ್ತು ಅನೇಕ ಜನರು ಪ್ರಯಾಣವನ್ನೆ ಮುಂದೂಡಿದರು. ಒಟ್ಟಾರೆ ಮೂರು ದಿನ ಬಸ್‌ಗಳ ಸಂಚಾರವಿಲ್ಲದೆ ಕೋಟೆನಾಡು ಅಕ್ಷರಶಃ ತಲ್ಲಣಗೊಂಡಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಸ್, ಜನ ಸಂಚಾರವಿಲ್ಲದೆ ಖಾಲಿ, ಖಾಲಿಯಾಗಿದ್ದವು.

    10 ಬಸ್‌ಗಳ ಸಂಚಾರ
    ಮುಷ್ಕರದ ನಡುವೆಯೂ ಕೆಲವು ಜನ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಜಿಲ್ಲೆಯ ಕೆಲವೆಡೆ ಬಸ್ ಸಂಚಾರ ಆರಂಭಗೊಂಡಿತು. ಬಾಗಲಕೋಟೆಯಿಂದ ಜಮಖಂಡಿ, ಇಳಕಲ್ಲ, ಗದಗ ಸೇರಿದಂತೆ ವಿವಿಧೆಡೆ ಬಸ್ ಸಂಚರಿಸಿತು. ಬಸ್‌ಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಬಾಗಲಕೋಟೆ 4, ಮುಧೋಳ, ಜಮಖಂಡಿ, ಹುನಗುಂದ, ಬೀಳಗಿ ಡಿಪೋ ತಲಾ 1, ಇಳಕಲ್ಲ ಡಿಪೋ ಸೇರಿದ 2 ಬಸ್‌ಗಳು ಸೇರಿ ಮೂರನೇ ದಿನ ಜಿಲ್ಲೆಯಲ್ಲಿ ಒಟ್ಟು 10 ಬಸ್‌ಗಳ ಸಂಚಾರ ನಡೆದಿದೆ.

    ಖಾಸಗಿ ವಾಹನಗಳು ದುಬಾರಿ
    ಬೆಂಗಳೂರು, ಮಂಗಳೂರು, ಉಡುಪಿಯಿಂದ ಆಗಮಿಸಿದ ಪ್ರಯಾಣಿಕರು ತಮ್ಮ ಊರುಗಳಿಗೆ ತಲುಪಲು ತೀವ್ರ ಸಂಕಷ್ಟ ಎದುರಿಸಿದರು. ಖಾಸಗಿಯವರು ನಿಗದಿ ದರಕ್ಕಿಂತ ಹೆಚ್ಚು ದರ ಪಡೆದುಕೊಂಡ ಪರಿಣಾಮ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿತು. ಇನ್ನು ಸಕ್ಕರೆ ಖಾಲಿಗೆ ತಪಾಸಣೆಗಾಗಿ ಯಾದಗಿರಿ ಜಿಲ್ಲೆಯ ನಾರಾಯಣಪುರದಿಂದ ಬಾಗಲಕೋಟೆಗೆ ಆಗಮಿಸಿದ್ದ ವೃದ್ಧಿ ಮರಳಿ ತಮ್ಮ ಊರು ತಲುಪಲು ಪರದಾಡಿದರು.



    
    
    ಮುಷ್ಕರಕ್ಕೆ ಬಸವಳಿದ ಪ್ರಯಾಣಿಕರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts