More

    ಸಂಸ್ಕರಿಸಿದ ನೀರಿನ ಸದ್ಬಳಕೆ; ಬಿಎಎಫ್‌-ಬೆಂಗಳೂರು ಜಲಮಂಡಳಿ ಒಪ್ಪಂದ

    ಬೆಂಗಳೂರು: ನಗರದಲ್ಲಿ ಸಂಸ್ಕರಿಸಿದ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ ಜತೆ ಜಲಮಂಡಳಿ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕರ, ನಗರದ ಪರಿಸರ ಹಾಗೂ ನೀರಿನ ಸಂರಕ್ಷಣೆಯ ಹಿತಾಸಕ್ತಿಯಿಂದ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

    ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ ಪದಾಧಿಕಾರಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ನಂತರ ಮಾತನಾಡಿದರು. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಇಂತಹ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ನಗರದಲ್ಲಿ 1200 ಎಂ.ಎಲ್‌.ಡಿ ಯಷ್ಟು ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಿಂದಲೂ ಅಪಾರ ಪ್ರಮಾಣದ ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಇದನ್ನ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆ ಮಾಡಿದ ನಂತರವೂ ಬಹಳಷ್ಟು ನೀರು ಉಳಿಯುತ್ತಿತ್ತು ಹಾಗೂ ಅದನ್ನು ಅನಿವಾರ್ಯವಾಗಿ ನಾಲೆಗಳಿಗೆ ಹರಿಯ ಬಿಡಲಾಗುತ್ತಿತ್ತು.

    ಇದನ್ನು ತಡೆಯುವ ಹಾಗೂ ಸಂಸ್ಕರಿಸಿದ ನೀರಿನ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮೂರನೇ ವ್ಯಕ್ತಿಗೆ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದೇಶದ ನಂತರ ಸಂಸ್ಕರಿಸಿದ ನೀರನ್ನು ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಫೆಸಿಲಿಟೆಟರ್ ಸಂಸ್ಥೆಯ ಕೊರತೆ ಎದುರಾಗಿತ್ತು. ಇದನ್ನು ಮನಗೊಂಡ ಜಲಮಂಡಳಿ, ಬಿಎಎಫ್‌ ಮತ್ತು ಬಳಕೆದಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ ಎಂದು ಹೇಳಿದರು.

    ಸಂಸ್ಕರಿಸಿದ ನೀರನ್ನು ಗ್ರಾಹಕರಿಗೆ ಅವರ ಬೇಡಿಕೆಯ ಅನ್ವಯ ಸರಬರಾಜು ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಮೊದಲ ಹಂತದಲ್ಲಿ ಟ್ಯಾಂಕರ್‌ಗಳನ್ನು ಉಪಯೋಗಿಸಿಕೊಂಡು ಸಮೀಪದ ಅಪಾರ್ಟ್‌ಮೆಂಟ್‌ಗಳಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ. ಮುಂದಿನ ಹಂತದಲ್ಲಿ ಸತತವಾಗಿ ಬೇಡಿಕೆ ಇರುವ ಗ್ರಾಹಕರಿಗೆ ಪೈಪ್‌ಲೈನ್‌ ಮೂಲಕವೂ ಸಂಸ್ಕರಿಸಿದ ನೀರು ಪೂರೈಸುವ ನಿಟ್ಟಿನಲ್ಲಿ ಜಲಮಂಡಳಿ ಚಿಂತಿಸಲಿದೆ.

    ಇದರಿಂದ ಬೆಂಗಳೂರು ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವಂತಹ ಸಂಸ್ಕರಿಸಿ ನೀರನ್ನ ಸದ್ಬಳಕೆ ಮಾಡಲು, ನೀರನ್ನ ಸಂಸ್ಕರಿಸಲು ಆದ ಖರ್ಚನ್ನು ಅಪಾರ್ಟ್‌ಮೆಂಟ್‌ಗಳು ಸರಿದೂಗಿಸಲು, ಕಾವೇರಿ ಮತ್ತು ಕೊಳವೆ ಬಾವಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಅನುಕೂಲವಾಗಲಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು ಮುಂದಿನ ದಿನಗಳಲ್ಲಿ ಜಲಮಂಡಳಿಗೂ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts