More

  ಅಂಕಣ, ಬದಲಾದ ಭಾರತ; ದಿಲ್ಲಿ ಬಜೆಟ್ ಭಾಗ್ಯ ಶೇ.20 ಮಂದಿಗೆ ಮಾತ್ರ! 

  ದಿಲ್ಲಿ ಬಜೆಟ್ ಬಂತು; ಹೋಯಿತು. ನಮಗೆ ನಿಮಗೆ ಏನು ಬಂತು? ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ ನಮಗೆ ನಿಮಗೆ. ದಿಲ್ಲಿ ಬಜೆಟ್ ಏನಿದ್ದರೂ ದೇಶದ ಶೇ. 20 ಮಂದಿಗೆ ಮಾತ್ರ ದೊಡ್ಡದು. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ! ಶೇ. 30 ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇವರಿಗೆ ಉಂಟು ಬಜೆಟ್ ಪಾಲು. ಶೇ. 70ರಷ್ಟು ಇರುವ ಹಳ್ಳಿಗರಿಗೆ ಈ ಸಂಬಂಧವೇ ಇಲ್ಲ. ಹೀಗೆಂದು ಹೇಳಿದರೆ ನಿಮಗೆ ಸಮಂಜಸ ಅನ್ನಿಸುವುದಿಲ್ಲ.

  ನಮ್ಮಲ್ಲಿ ನೋಡಿ- ಸ್ವಂತ ಬಿಜಿನೆಸ್ ಮಾಡುವವರು ಶೇ. 50 ಮಂದಿ, ದಿನಗೂಲಿ – ಕಾಂಟ್ರಾಕ್ಟ್ ನೌಕರಿ ಮಾಡುವವರು ಶೇ. 30 ಮಂದಿ. ಈ ಶೇ. 80 ಮಂದಿಗೆ ಬಜೆಟಿನಲ್ಲಿ ಏನಿದೆ? ಉದಾರೀಕರಣ ಯುಗದ ದೊಡ್ಡ ಪರಿಣಾಮ ಎಂದರೆ ಬಜೆಟ್​ಗೂ ಜನತೆಗೂ ಸಂಬಂಧ ಬಂದ್! ಈಗೇನಿದ್ದರೂ ಬಜೆಟ್ ಎಂಬುದು ಕಂಪನಿಗಾಗಿ ಕಂಪನಿಯಿಂದ ಮತ್ತು ಕಂಪನಿಗೋಸ್ಕರ ಎಂಬಂತೆ ಆಗಿದೆ.

  ಉದಾರೀಕರಣ ಯುಗ ತಂದ ದೊಡ್ಡ ಬದಲಾವಣೆ ಇದು. ಈ ಜಾಯಮಾನ 90ರ ದಶಕದಿಂದ ಬಂದು ಬೀಡುಬಿಟ್ಟಿದೆ. ಈಗಿರುವುದು ಮಾರ್ಕೆಟ್ ಅರ್ಥ ವ್ಯವಸ್ಥೆ. ಅದು ಹಣಕಾಸು ಹಾಗೂ ಪದಾರ್ಥ ಪೇಟೆ ಇರಬಹುದು – ಅದನ್ನು ಕಂಪನಿಗಳಿಗೆ ಹೊಂದಿಸಿಕೊಂಡವ ಕೆಲಸ ಬಜೆಟ್ ಕೆಲಸ ಎಂಬುದು ಉದಾರೀಕರಣದ ಮಂತ್ರ ಆಗಿದೆ.

  ಬಜೆಟ್ ಬಗ್ಗೆ ಮಾಧ್ಯಮಗಳಲ್ಲಿ ಬರುವ ದೊಡ್ಡ ದೊಡ್ಡ ಹೆಡ್ಡಿಂಗ್ ಗಳು ಖಂಡಿತ ವಸ್ತುಸ್ಥಿತಿ ತೋರುವುದಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2020-21 ರ ಬಜೆಟ್ ಗಾತ್ರ 30.42 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಎಲ್ಲ ಜನ ಸಮುದಾಯದ ಪಾಲಿಗೆ ಬರುವುದು 3.40 ಲಕ್ಷ ಕೋಟಿ ರೂಪಾಯಿ ಮಾತ್ರ! ಕೇವಲ ಶೇ. 10 ಮಾತ್ರ! ಇದು ದಿಟ.

  ಇದರಲ್ಲಿ ಗ್ರಾಮೀಣ ಉದ್ಯೋಗದ ನರೇಗಾ, ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ನೀಲಿ ಕ್ರಾಂತಿ, ಕಿಸಾನ್ ಸಮ್ಮಾನ, ತುಂತುರು ನೀರಾವರಿ, ಸ್ವಚ್ಛ ಭಾರತ, ಮಿಡ್ ಡೇ ಮೀಲ್, ಕಾಲು ಬಾಯಿ ರೋಗ, ರೈತರಿಗೆ ಬೆಂಬಲ ಬೆಲೆ, ರೈತರಿಗೆ ಬಡ್ಡಿ ಸಬ್ಸಿಡಿ, ಗ್ರಾಮೀಣ ರಸ್ತೆ, ಬಡವರ ಮನೆ, ಗ್ರಾಮ ಜ್ಯೋತಿ, ಶಿಕ್ಷಣ ಮಿಷನ್, ಆರೋಗ್ಯ ಮಿಷನ್, ಐಸಿಡಿಎಸ್, ಮಹಿಳಾ ಕಲ್ಯಾಣ, ಆಯುಷ್ಮಾನ್ ಭಾರತ, ಉದ್ಯೋಗ’ ಕೌಶಲ್ಯ, ಸ್ಮಾರ್ಟ್ ಸಿಟಿ, ಹರಿಜನರು, ಗಿರಿಜನರು, ಅಲ್ಪಸಂಖ್ಯಾತರು ಇತ್ಯಾದಿ ಇತ್ಯಾದಿ- ಹೀಗೆ ಸಕಲ ಸಮುದಾಯಕ್ಕೆ 3.40 ಲಕ್ಷ ಕೋಟಿ ರೂಪಾಯಿ ಸಾಕು! ಇದರಲ್ಲಿ ರೈಲ್ವೆ ಇದೆ. ಹೆದ್ದಾರಿ ಇದೆ. ಮೆಟ್ರೊ ಇದೆ. ಏನೇನೂ ಇದೆ. ಎಲ್ಲದಕ್ಕೂ ಇಷ್ಟು ಸಾಕು!

  ಅದೂ ಕೇಂದ್ರ ಸರ್ಕಾರದ 30.4.2 ಲಕ್ಷ ಕೋಟಿ ರೂಪಾಯಿ ಖರ್ಚಿನಲ್ಲಿ ! ಅಲ್ಲಿಗೆ ಜನತಾ ಜನಾರ್ದನನ ಸೇವೆ ಮುಗಿದೇಹೋಯಿತು! ಉಳಿದುದೆಲ್ಲ ಸರ್ಕಾರಿ ಖರ್ಚು- ರಾಜ್ಯದ್ದು, ಕೇಂದ್ರದ್ದು, ತನ್ಮೂಲಕ ಕಂಪನಿಗಳಿಗೆ ಹಣಕಾಸು- ಮಾರುಕಟ್ಟೆ ಪೂರೈಸಲು, ಕಂಪನಿಗಳ ಪಾಲನೆ-ಪೋಷಣೆ- ತುಷ್ಟೀಕರಣ ಇತ್ಯಾದಿಗಳಿಗೆ ಬೇಕು.

  ಭಾರತದ ಇಡೀ ಜನಸಮುದಾಯಕ್ಕೆ 3. 4 0 ಲಕ್ಷ ಕೋಟಿ ರೂಪಾಯಿ ಇದೆ ತಾನೆ? ಇದರಲ್ಲಿ ನೇರವಾಗಿ ಜನರಿಗೆ ತಲುಪುವುದು ಎಷ್ಟು? ಲಾಗಾಯ್ತಿನಿಂದಲೂ ಈ ಪ್ರಶ್ನೆ ಇದೆ. ಉದಾರೀಕರಣಕ್ಕೆ ಮುನ್ನ ದಿಲ್ಲಿ ಕೊಡುವ ಹಣದಲ್ಲಿ ಶೇ. 15 ಮಾತ್ರ ಹಳ್ಳಿ ತಲುಪುತ್ತದೆ ಎಂಬುದು ವೇದವಾಕ್ಯ ಆಗಿತ್ತು. ಈಗ ಪರಿಸ್ಥಿತಿ ಸುಧಾರಿಸಿಲ್ಲ. ಪರಿಸ್ಥಿತಿ ಇನ್ನೂ ವಿಷಮವಾಗಿರಬಹುದು. ಪ್ರಧಾನಿ ನರೇಂದ್ರ ಮೋದಿಯವರ ಹೆಬ್ಬಯಕೆ ಕಾರ್ಯಕ್ರಮ- ರೈತರ ರಾಯಧನ – ಕೃಷಿ ಸಮ್ಮಾನ್ ಯೋಜನೆ.

  ವರ್ಷಕ್ಕೆ 6000 ರೂಪಾಯಿ ರೈತರಿಗೆ ನೀಡುವ ಈ ಕೆಲಸ ಹೇಗಾಗಿದೆ ಎಂಬುದನ್ನು ನೋಡಿ. ದೇಶದಲ್ಲಿ 14.5 ಕೋಟಿ ರೈತ ಕುಟುಂಬಗಳಿವೆ ಎಂಬುದು ಒಂದು ಲೆಕ್ಕಾಚಾರ. 75,000 ಕೋಟಿ ರೂಪಾಯಿ ಕೊಡಲು ಸರ್ಕಾರ ಇಟ್ಟಿರುವ ನಿಧಿ. ಕೊನೆಗೆ ಆಗಿದ್ದು ಏನು? 6.5. ಕೋಟಿ ರೈತರಿಗೆ 54,000 ಕೋಟಿ ರೂಪಾಯಿ ಹಂಚಲು ಮಾತ್ರ ಸಾಧ್ಯವಾಗಿದೆ! ಅಂದರೆ ಜನತೆಗೆ ಹಂಚಲು ಸೂಕ್ತವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅದು ಕಂಪನಿಗಳಿಗೆ ಇದೆ. ಉಳಿದವರಿಗೆ ಈಗ ರೈತರ ರಾಯಧನದಿಂದ ಆರಂಭವಾಗಿದೆ. ಹೀಗಾಗಿ ಜನಸಾಮಾನ್ಯರಿಗೆ ಹಂಚುವ ಹಣವು ಬಜೆಟ್ ನಲ್ಲಿ 3.40 ಕೋಟಿ ಲಕ್ಷ ಕೋಟಿ ರೂಪಾಯಿ ಮಟ್ಟಕ್ಕೇ ಉಳಿದುಬಿಟ್ಟಿದೆ.

  ಮುಖ್ಯವಾದ ಒಂದು ಸಂಗತಿ ಇಲ್ಲಿದೆ. ಸರ್ಕಾರಿ ನೌಕರರ ವಿಚಾರ ಅಲ್ಲ, ಕೇವಲ ಸರ್ಕಾರಿ ಪಿಂಚಣಿದಾರರಿಗೇ 2.1.1 ಲಕ್ಷ ಕೋಟಿ ರೂಪಾಯಿ ಬೇಕು! ಇದರ ಮುಂದೆ ರೈತರ ರಾಯಧನ 75,000 ರೂಪಾಯಿ, ಹಾಗೆಯೇ ನರೇಗದಲ್ಲಿ ಹಂಚುವ 61,500 ಕೋಟಿ ರೂಪಾಯಿ ಯಾವ ಲೆಕ್ಕ ನೀವೇ ಹೇಳಿ? ಇದು ಬರೀ ಪಿಂಚಣಿ ಬಾಬ್ತು. ಇನ್ನು ಉದ್ಯೋಗಿಗಳಿಗೆ ಕೊಡುವ ಸಂಬಳ 2.4.8 ಲಕ್ಷ ಕೋಟಿ ರೂಪಾಯಿ ಇದೆ. ಅಂದರೆ ನೌಕರ ಸೇನೆ ಖರ್ಚು 4.5 9 ಲಕ್ಷ ಕೋಟಿ ರೂಪಾಯಿ ಆಯಿತು.

  ಆದೇ ಜನಸಮುದಾಯಕ್ಕೆ ಕೊಡುವುದು ನೋಡಿ 3.40 ಲಕ್ಷ ಕೋಟಿ ಇದೆ. ಇಲ್ಲಿ ಎಲ್ಲಿದೆ ತಾಳ-ಮೇಳ? ಇದು ಉದಾರೀಕರಣ ಯುಗದ ಶಾಪ. ಏಕೆಂದರೆ ಕಂಪನಿಗಳ ಕುಮ್ಮಕ್ಕಿನಿಂದ 2006ರಿಂದ ನೌಕರಸೇನೆಯ ಖರ್ಚು ಏಳು ಪಟ್ಟು ಜಾಸ್ತಿ ಆಗಿದೆ! ಎಲ್ಲಾದರೂ ಉಂಟೆ!

  ಕೇಂದ್ರ ಸರ್ಕಾರದ ಮತ್ತು ರಾಜ್ಯಗಳಿಗೆ ಹಂಚುವ ಬಾಬ್ತು 15 ಲಕ್ಷ ಕೋಟಿ ರೂಪಾಯಿಗಳಿಗೆ ಬಂದಿದೆ. ಅಂದರೆ ಬಜೆಟ್ ಹಣದಲ್ಲಿ ಅರ್ಧ ಇಲ್ಲಿಗೇ ಮುಗಿದು ಹೋಯಿತು! ನೌಕರಸೇನೆ ಖರ್ಚು ತೆಗೆದರೆ ಉಳಿದ ಹಣದಲ್ಲಿ ಬಹಳಷ್ಟು ಕಂಪನಿಗಳ ಕಿಸೆಗೆ ಹೋಗುತ್ತದೆ. ಇನ್ನು ಜನಸಾಮಾನ್ಯರಿಗೆ ಕೊಡಲು ಏನಿದೆ? ಅದಕ್ಕೆ ನಾನು ಹೇಳಿದ್ದು- ದಿಲ್ಲಿ ಬಜೆಟ್ ಏನಿದ್ದರೂ ಶೇ. 20 ಮಂದಿಗೆ ಮಾತ್ರ ಎಂದು.

  ಬಜೆಟ್ ಅಂದರೆ ಉದಾರೀಕರಣದ ಮುಂಚೆ ಬೇರೆಯೇ ಪರಿಸ್ಥಿತಿ ಇತ್ತು. ಅಂಚೆಚೀಟಿ ಬೆಲೆ ಏರಿಕೆ- ರೈಲು ದರ ಏರಿಕೆ ಇಂಥವು ಆಗ ದೊಡ್ಡದಾಗಿತ್ತು. ಈಗ ಈ ಮಾತೇ ಇಲ್ಲ

  ಅಲ್ಲದೆ ಈಗ ಬಜೆಟ್ ಒಂದು ಶಾಸ್ತ್ರ ಆಗಿಬಿಟ್ಟಿದೆ! ವರ್ಷದ ನಾನಾ ಕಾಲದಲ್ಲಿ ಬಜೆಟ್ ಘೊಷಣೆ ಬರುವುದೂ ಉಂಟು. ಜಿಎಸ್ ಟಿ ಬಂದ ಮೇಲೆ ಕಥೆಯೇ ಬೇರೆ. ತೆರಿಗೆ ಯಾವಾಗ ಬೇಕಾದರೂ ಬದಲಾಗಬಹುದು. ಇನ್ನು ಕಂಪನಿ ತೆರಿಗೆ ವಿಚಾರ. ದುರ್ಬಲ ವಿತ್ತ ಸಚಿವರು ಎಂದು ಕಂಪನಿ ಕೂಟವು ಆರ್ಥಿಕ ಮುಗ್ಗಟ್ಟು ಎಂಬ ಗುಮ್ಮವನ್ನು ಹೋದ ವರ್ಷಾಂತ್ಯದಲ್ಲಿ ಸೃಷ್ಟಿಸಿದವು.

  ಹೆದರಿದ ವಿತ್ತ ಸಚಿವರು ಕಂಪನಿಗಳಿಗೆ ಆಗ 1. 45 ಲಕ್ಷ ಕೋಟಿ ರೂಪಾಯಿ ತೆರಿಗೆ ಮನ್ನಾ ಮಾಡಿದರು. ಆಗ 20 ಲಕ್ಷ ಕೋಟಿ ರೂಪಾಯಿ ಕಂಪನಿ ತೆರಿಗೆ ಬಾಕಿ ಇಟ್ಟುಕೊಂಡವರು 4 ಲಕ್ಷ ಕೋಟಿ ರೂಪಾಯಿಗೂ ಕಡಿಮೆ ಹಣ ತೀರಿಸಿದ್ದರೂ ಅವರಿಗೆ 1. 45 ಲಕ್ಷ ಕೋಟಿ ರೂಪಾಯಿ ಮನ್ನಾ ಆಯಿತು! ಇದು ಹೇಗೇ. ದಿಲ್ಲಿಯಲ್ಲಿ 30ವರ್ಷಗಳಿಂದ ಕಂಪನಿ ಸರ್ಕಾರ ಇದೆ ಎಂಬುದು ಸರ್ವವಿಧಿತ.

  2014 -19ರ ಅವಧಿ ಅವಧಿಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರವು ಕಂಪನಿಗಳ ಮೇಲೆ ಗದಾ ಪ್ರಹಾರ ಮಾಡಿದ್ದು ಒಂದು ಅಪವಾದ. ಆದರೆ ಪುನಃ ಕಂಪನಿಗಳೇ ದಿಲ್ಲಿಯಲ್ಲಿ ಮೇಲುಗೈ ಸಾಧಿಸಿವೆ! ಅದರ ಒಂದು ಕುರುಹು ಇಲ್ಲಿದೆ ನೋಡಿ: ಕಂಪನಿಗಳ ಹಣಕಾಸು ಮೋಸವು ಕ್ರಿಮಿನಲ್ ಆಗುವುದಿಲ್ಲ; ಅದು ಸಿವಿಲ್ ಮಾತ್ರ ಎಂಬುದು ಬಜೆಟ್ನ ಮಾರ್ಪಾಡು! ಇದು ವಿಶ್ವದಲ್ಲಿ ಕಂಪನಿಲೋಕದ ಜಾಯಮಾನ.

  ಜಾಗತಿಕ ಕಂಪನಿಗಳು ನಮ್ಮಲ್ಲಿ ಆಡಿಟ್ ಮಾಡುತ್ತವೆ. ಆ ಹೆಸರೇ ದೊಡ್ಡ ಅಸ್ಗ. ಒಮ್ಮೆ ನಮ್ಮ ಒಂದು ಕಂಪನಿಯ ಮಾಲಿಕನು ಹತ್ತು ಸಹಸ್ರ ಉದ್ಯೋಗಿಗಳ ನಕಲಿಯಾದಿ ಸೃಷ್ಟಿಸಿ ಆ ಹಣವನ್ನು ಸ್ವಂತಕ್ಕೆ ಬರೆದುಕೊಳ್ಳುತ್ತಾನೆ! ಅನೇಕ ವರ್ಷಗಳು, ಹತ್ತಿರ ಹತ್ತಿರ ಒಂದು ದಶಕ ಈ ಅಕ್ರಮ ಸಾಗುತ್ತದೆ. ಆದರೆ ಆಡಿಟ್ ಮಾಡಿರುವುದು ಒಂದು ವಿಶ್ವವಿಖ್ಯಾತ ಕಂಪನಿ. ಅದು ಒಕೆ ಅನ್ನುತ್ತದೆ. ಅದು ಹೇಳಿದ ಮೇಲೆ ಯಾರೂ ಚಕಾರ ಎತ್ತುವಂತಿಲ್ಲ.

  ಇದೇ ಕಾನೂನು. ಇದೇ ಶಾಸನ. ಇದೇ ನಮ್ಮಲ್ಲಿ ನಡೆಯುತ್ತಲೇ ಇತ್ತು. ಕರ್ಮಕಾಂಡ ಒಂದು ಬಹಿರಂಗವಾದಾಗ ಈ ಅಕ್ರಮ- ಮೋಸ ಬಯಲಾಗಿತ್ತು. ತಪ್ಪಿಗೆ ಶಿಕ್ಷೆ ಆಯಿತೇ? ಇನ್ನು ಇಲ್ಲ! ಆಗುವುದು ಇಲ್ಲ! ದಂಡ ಕಟ್ಟಿದರೆ ಈ ಪ್ರಕರಣ ಮುಗಿಯಿತು! ಅದೇ ಕಾನೂನು. ದಂಡ ಕಟ್ಟಿ ನಮ್ಮಲ್ಲಿ ಮನೆ ಅಕ್ರಮ ಸಕ್ರಮ ಮಾಡುವುದು ನಮಗೆಲ್ಲ ತಿಳಿದಿದೆ. ಅದೇ ಕಂಪನಿ ಲೋಕದಲ್ಲಿ ನಡೆದು ಬಂದಿದೆ. ಹೀಗಾಗಿ ಈ ಬಜೆಟ್ನಲ್ಲಿ ಕಂಪನಿಗಳ ಕೈವಾಡ ದೊಡ್ಡದಾಗಿಯೇ ಇದೆ

  ಇನ್ನೂ ಒಂದು ನಿದರ್ಶನ ನೋಡಿ: ಹೋದ ಸಾಲಿನಲ್ಲಿ ಕಂಪನಿಗಳ ತೆರಿಗೆ ಪಾಲು ಬಜೆಟ್ ನ ಒಟ್ಟು ಆದಾಯದಲ್ಲಿ ಶೇ. 21 ಇತ್ತು. ಅದು ಈಗ ಶೇ. 18ಕ್ಕೆ ತಿಳಿಯುತ್ತಿದೆ! ಹೀಗೆಯೇ ಕಂಪನಿಗಳು ನೀಡುವ ಎಕ್ಸೈಸ್ ಸುಂಕ ಬಾಬ್ತು ಶೇ. 8ರಿಂದ ಶೇ. 7ಕ್ಕೆ ಬರುತ್ತೆ!

  ನಮ್ಮ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಹೆಡ್ಡಿಂಗಿನಲ್ಲೇ ಕಂಡಿದ್ದು ಮಧ್ಯಮ ವರ್ಗಕ್ಕೆ ಹೆಚ್ಚು ಹಣ, ಕಡಿಮೆ ವರಮಾನ ತೆರಿಗೆ ಎಂಬುದಾಗಿ ಇತ್ತು. ಇದರಿಂದಾಗಿ ಜನರಲ್ಲಿ ಜಾಸ್ತಿ ಹಣ ಉಳಿದು, ಖರೀದಿ ಜಾಸ್ತಿ ಆಗಿ, ಅದರಿಂದ ಬೇಡಿಕೆ ಹೆಚ್ಚುತ್ತದೆ, ಮುಗ್ಗಟ್ಟು ಮುಗಿಯುತ್ತೆ ಎಂಬುದು ಆಗಿತ್ತು.

  ಆದರೆ ನಿಜಸ್ಥಿತಿ ತದ್ವಿರುದ್ಧ ಇದೆ! ಹೇಗೆ ಗೊತ್ತೇ? 2019-20 ರಲ್ಲಿ ಕೇಂದ್ರ ತೆರಿಗೆ ಬಾಬ್ತಿನಲ್ಲಿ ವರಮಾನ ತೆರಿಗೆ ಪಾಲು ಶೇ.16 ಇತ್ತು. ಅದು ಈಗ ಶೇ.18ಕ್ಕೆ ಏರುವುದಂತೆ! ಅಂದರೆ ಜನಸಾಮಾನ್ಯರಿಂದ ತೆರಿಗೆ ವಸೂಲಿ ಜಾಸ್ತಿ ಆದಂತಾಯಿತು. ಆದರೆ ಅದೇ ಕಂಪನಿಗಳು ನೀಡುವ ಅಬಕಾರಿ ಸುಂಕ ಇಳಿದಿದೆ!

  ಬಜೆಟ್ನಿಂದ ಜನರ ಭಾಗ್ಯ ಬೆಳೆಯುವುದಿಲ್ಲ. ಏಕೆಂದರೆ ಸರ್ಕಾರದ ಖರ್ಚಿನಲ್ಲಿ ರೀತಿ ನೋಡಿ. 30. 4. 2 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ. ಇದರಲ್ಲಿ ಕೇಂದ್ರದ ಖರ್ಚು- ರಾಜ್ಯಗಳ ಪಾಲು 15 ಲಕ್ಷ ಕೋಟಿ ರೂಪಾಯಿ! ಇನ್ನು ಬಡ್ಡಿ ಬಾಬ್ತು 7 ಲಕ್ಷ ಕೋಟಿ ರೂಪಾಯಿ!! ಇಲ್ಲೇ 22 ಲಕ್ಷ ಕೋಟಿ ರೂಪಾಯಿ ಹೋಯಿತು. ವಿಶೇಷ ಅಂದರೆ 2020- 21 ನೇ ಸಾಲಿನಲ್ಲಿ ಸಾಲ ತರುವುದು 7.96 ಲಕ್ಷ ಕೋಟಿ ರೂಪಾಯಿ ಇದ್ದಾಗ ಸರ್ಕಾರವು ಕೊಡುವ ಬಡ್ಡಿ 7.08 ಲಕ್ಷ ಕೋಟಿ ರೂಪಾಯಿ! ಪರಿಸ್ಥಿತಿ ಹೀಗಿರುವಾಗ ಜನ ಜನಸಮುದಾಯದ ಖರ್ಚು ಕೇವಲ 3.40 ಲಕ್ಷ ಕೋಟಿಗೆ ಸೀಮಿತವಾಗುವುದು ಸಹಜ ಹಾಗೂ ಅನಿವಾರ್ಯ.

  ಇನ್ನೂ ನೋಡಿ. ವರಮಾನ ತೆರಿಗೆದಾರರು ಸರ್ಕಾರ ನಡೆಸಲು 6.38 ಲಕ್ಷ ಕೋಟಿ ರೂಪಾಯಿ ನೀಡುತ್ತಾರೆ. ಆದರೆ ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲಿ ವ್ಯವಹರಿಸುವ ಕುಬೇರ ಕಂಪನಿಗಳು ಕೊಡುವುದು 6.81 ಲಕ್ಷ ಕೋಟಿ ರೂಪಾಯಿ ಮಾತ್ರ! ಅಂದರೆ ಜನಸಾಮಾನ್ಯರೇ ಬೇಕು- ಸಂಪತ್ತು ಸಂಗ್ರಹಣೆಗೆ; ಕಂಪನಿಗಳೇ ಬೇಕು ಸಂಪತ್ತು ಗೋರಿಕೊಳ್ಳುದಿಕ್ಕೆ!

  ಇದಕ್ಕೆ ಇನ್ನೂ ಒಂದು ಉದಾಹರಣೆ ನೋಡಿ: ನಾವು ನೀವು ಕೊಡುವ ಜಿಎಸ್ಟಿ ಸಂಗ್ರಹ 6. 91 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಆದರೆ ಕಂಪನಿ ತೆರಿಗೆ ಬಿಟ್ಟು ಕಂಪನಿಗಳು ಕಸ್ಟಮ್್ಸ ಸುಂಕ 1.38 ಲಕ್ಷ ಕೋಟಿ ರೂಪಾಯಿ ಹಾಗೂ ಅಬಕಾರಿ ಸುಂಕ 2.67 ಲಕ್ಷ ಕೋಟಿ ರೂಪಾಯಿ ಮಾತ್ರ! ಸರ್ಕಾರದ 24.23 ಲಕ್ಷ ಕೋಟಿ ರೂಪಾಯಿ ತೆರಿಗೆ ಆದಾಯದಲ್ಲಿ ಜಿಎಸ್ಟಿ ಹಾಗೂ ವರಮಾನ ತೆರಿಗೆ ಸೇರಿ 13.29 ಲಕ್ಷ ಕೋಟಿ ಆಗುತ್ತದೆ. ಉಳಿದ ಇನ್ನೂ ಕಡಿಮೆ ಪಾಲು ಕಂಪನಿಲೋಕದ್ದು!

  ಒಂದು ಮಾತು. ಕಂಪನಿಗಳು ಪಡೆಯುವ ಸರ್ಕಾರಿ ಹಾಗೂ ಬ್ಯಾಂಕ್ ಹಣದಿಂದ ಏನಾದರೂ ಪ್ರಯೋಜನ ಆಗಿದೆಯೇ ಎಂಬುದು ಅಸಲಿ ಪ್ರಶ್ನೆ? ಏಕೆಂದರೆ 2014’-19 ಅವಧಿಯಲ್ಲಿ 54 ಲಕ್ಷ ಕೋಟಿ ರೂಪಾಯಿಯನ್ನು, ಅದಕ್ಕೂ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 58 ಲಕ್ಷ ಕೋಟಿ ರೂಪಾಯಿ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ! ಇದರಿಂದ ಏನು ಬಂತು ಭಾಗ್ಯ? 2019ರಲ್ಲಿ ಕಂಪನಿಗಳ ಘೊಷಣೆಯ ಪ್ರಕಾರ ಅದು ‘ಆರ್ಥಿಕ ಮುಗ್ಗಟ್ಟು’! ಈಗ

  ಮುಂದಿನ ಐದು ವರ್ಷಗಳಲ್ಲಿ- 103 ಲಕ್ಷ ಕೋಟಿ ರೂಪಾಯಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡುವ ಲೆಕ್ಕಾಚಾರ ಇದೆ. ಇದಕ್ಕೆಲ್ಲಾ ಅರ್ಥ ಉಂಟೆ? ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಇದು. ಬಜೆಟ್ ನ ಖರ್ಚು ಹಳ್ಳಕ್ಕೆ ಹರಿಯುತ್ತಿದೆ. ಈ ಬಗ್ಗೆ ಪರಾಮರ್ಶೆ ಈಗ ತುರ್ತು ಅಗತ್ಯ ಆಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts