More

    30 ವರ್ಷ ದಾಟಿದ್ರೂ ಮದ್ವೆಯಾಗದ ಹಿನ್ನೆಲೆ ದೇವರ ಮೊರೆ: ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು!

    ಮಂಡ್ಯ: ಒಂದು ಹೆಣ್ಣಿಗೆ ಒಂದು ಗಂಡು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಇಂದು ಎಷ್ಟೋ ಯುವಕರಿಗೆ ಮದುವೆ ಆಗಲು ಒಂದು ಹೆಣ್ಣು ಸಿಗದೇ ಪರದಾಡುತ್ತಿದ್ದಾರೆ. ವಯಸ್ಸು ದಾಟಿ ಬಿಳಿಗೂದಲೂ ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು ಸಹ ನಮ್ಮ ನಡುವೆ ಇದ್ದಾರೆ. ಇದೀಗ ತಮಗೆ ವಧುವನ್ನು ಕರುಣಿಸಪ್ಪಾ ಅಂತಾ ಬ್ರಹ್ಮಚಾರಿಗಳೆಲ್ಲ ದೇವರ ಮೊರೆ ಹೋಗಿದ್ದಾರೆ.

    ಹೌದು, 30 ವರ್ಷ ದಾಟಿದ್ರೂ ಮದ್ವೆಯಾಗದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬ್ರಹ್ಮಚಾರಿಗಳೆಲ್ಲ ಸೇರಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ವಧು ಸಿಗಲಿ ಎಂದು ಪ್ರಾರ್ಥನೆ ಮಾಡಿ ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಇಂದು (ಫೆ.23) ಮಂಡ್ಯದ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿದೆ. ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಶುರುವಾಗಿದೆ.

    ಇದನ್ನೂ ಓದಿ: ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    Photo of Mandya Bramhacharies Padayatra

    ಅವಿವಾಹಿತ ಯುವಕರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ ಚಾಲನೆ ನೀಡಿ ಸ್ವಲ್ಪ ದೂರ ಅವರೊಂದಿಗೆ ಹೆಜ್ಜೆ ಹಾಕಿದರು. ಮುಂದಿನ ವರ್ಷದೊಳಗೆ ಎಲ್ಲರಿಗೂ ಮದುವೆ ಆಗಲಿ ಅಂತ ಧನಂಜಯ್​ ಶುಭ ಹಾರೈಸಿದರು. ಟಗರು ಪಲ್ಯ ಚಿತ್ರದ ನಾಯಕ ನಟ ನಾಗಭೂಷಣ ಕೂಡ ಪಾದಯಾತ್ರೆಯಲ್ಲಿ ಭಾಗಿಯಾದರು. ನಾಗಭೂಷಣ ಅವರು ಇಂದು ಮಧ್ಯಾಹ್ನದವೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿ ಅವಿವಾಹಿತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ.

    ಇಂದಿನಿಂದ ಮೂರು ದಿನ ನಡೆಯಲಿರುವ ಪಾದಯಾತ್ರೆಗೆ ಉತ್ತಮ ಬೆಂಬಲ ಸಿಕ್ಕಿದೆ. ಕೇರಳ, ಆಂಧ್ರಪ್ರದೇಶದಿಂದಲೂ ಇಬ್ಬರು ಅವಿವಾಹಿತರು ಪಾದಯಾತ್ರೆಗೆ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಯುವ ರೈತರಾಗಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂತಾ ಬೇಸರದಲ್ಲೇ ದೇವರ ಮೊರೆ ಹೋಗಿದ್ದಾರೆ. ರೈತರ ಮಕ್ಕಳಿಗೂ ಹೆಣ್ಣು ಕೊಡುವ ಬುದ್ಧಿಯನ್ನು ದೇವರು ಕೊಡಲಿ ಎಂದು ಪಾರ್ಥಿಸುತ್ತಿದ್ದಾರೆ.

    ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರ ತಂಡ ಈ ಪಾದಯಾತ್ರೆಯನ್ನು ಆಯೋಜಿಸಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ಆಯೋಜಕರಿಂದ 3 ಷರತ್ತು ಹಾಕಲಾಗಿದೆ. ಮೊದಲನೆಯದು ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಎರಡನೆಯದು ವಿವಾಹಿತರಿಗೆ ಪಾದಾಯಾತ್ರೆಯಲ್ಲಿ ಅವಕಾಶ ಇಲ್ಲ ಮತ್ತು ಮೂರನೆಯದು ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಗೆ ಬರುವಂತಿಲ್ಲ.

    ಇದನ್ನೂ ಓದಿ: ರಷ್ಯಾ-ಯೂಕ್ರೇನ್ ಸಮರಕ್ಕೆ ವರ್ಷ; ಯಾರಿಗೂ ಇಲ್ಲ ಹರ್ಷ

    Photo of Mandya Bramhacharies Padayatra

    ಅವಿವಾಹಿತರನ್ನು ಸಂಘಟಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಶಿವಪ್ರಸಾದ್ ಹಾಗೂ ವೆಂಕಟೇಶ್ ಎಂಬುವರ ನೇತೃತ್ವದಲ್ಲಿ ಈ ಬ್ರಹ್ಮಚಾರಿಗಳ ಪಾದಯಾತ್ರೆಯನ್ನು ಆಯೋಜನೆ ಮಾಡಲಾಗಿದೆ. ಮೂರು ದಿನ ಕಾಲ್ನಡಿಗೆಯಲ್ಲಿ ಮಾದಪ್ಪನ ಸನ್ನಿಧಿಗೆ ತೆರಳುವ ಬ್ರಹ್ಮಚಾರಿಗಳು ದೇವರ ದರ್ಶನ ಪಡೆಯಲಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ಪಾನೀಯ ಹಾಗೂ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟವನ್ನು ಬ್ರಹ್ಮಚಾರಿಗಳು ತಲುಪಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಂಡ್ಯದಲ್ಲಿ ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ! 30 ವರ್ಷ ದಾಟಿದ್ರೂ ಮದ್ವೆಯಾಗದ ಹಿನ್ನೆಲೆ ದೇವರ ಮೊರೆ

    ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts