More

    ಶಿರಸಿ ಜಾತ್ರೆಯ ಹಿಂದಿನ ಶಕ್ತಿ ಬಾಬುದಾರರು

    ಶಿರಸಿ: ಗದ್ದುಗೆಯಲ್ಲಿ ಆಸೀನಳಾದ ತಾಯಿ ಮಾರಿಕಾಂಬಾ ದೇವಿಯ ದರ್ಶನಕ್ಕೆ ಪ್ರತಿ ದಿನ ಲಕ್ಷ ಲಕ್ಷ ಭಕ್ತರು ಆಗಮಿಸಿದರೂ ವ್ಯವಸ್ಥೆಯಲ್ಲಿ ಒಂದಿನಿತೂ ಕೊರತೆ ಆಗುವುದಿಲ್ಲ. ತೆಂಗಿನ ಕಾಯಿ ಒಡೆಯುವಿಕೆ, ಉಡಿ ತುಂಬುವಿಕೆ, ಪ್ರಸಾದ ವಿತರಣೆ ಎಲ್ಲವೂ ಪ್ರತಿ ಜಾತ್ರೆಯಲ್ಲಿಯೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಜಾತ್ರೆಯ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿಯೇ ಬಾಬುದಾರರು.
    ಬಾಬುದಾರ ಶಬ್ದದ ಅರ್ಥ “ತನ್ನ ಕುಟುಂಬ ಅಥವಾ ವರ್ಗದ ಪದ್ಧತಿಯಲ್ಲಿ ಪರಂಪರೆಗೆ ಅನುಸಾರವಾಗಿ ಶ್ರೀ ದೇವಸ್ಥಾನದಲ್ಲಿ ಸೇವೆ ಮಾಡುವವನು”. ಪ್ರತಿಫಲಾಪೇಕ್ಷೆ ಇಲ್ಲದೇ, ತಾಯಿಯ ಸೇವೆಗಾಗಿ ಭಕ್ತರು ಅರ್ಪಿಸಿದ ತೆಂಗಿನ ಕಾಯಿಯ ಒಂದು ಭಾಗವನ್ನು ಪಡೆದುಕೊಳ್ಳುತ್ತ ಬಾಬುದಾರರು ತಲೆ ತಲಾಂತರದಿAದ ಮಾರಿಕಾಂಬೆಯ ಸೇವೆ ಮಾಡಿಕೊಂಡು ಬಂದಿದ್ದಾರೆ.
    ಶಿರಸಿ ಮಾರಿಕಾಂಬೆಗೆ ಅದರಲ್ಲೂ ವಿಶೇಷವಾಗಿ ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ದೇವಿಗೆ 29 ವಿಧದ ಬಾಬುದಾರ ಕುಟುಂಬಗಳು ಅನಾದಿಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿಗರ ಕುಟುಂಬದ ಬಾಬುದಾರರು ದೇವಿಯ ಜಾತ್ರೆ ದಿನಾಂಕ ನಿಗದಿಯಾದ ತಕ್ಷಣ ದೇವಿಗೆ ಮಂಗಳಾರತಿ ಮಾಡಿ ಸಮಸ್ತೆ ಭಕ್ತರ ಪರವಾಗಿ ಪ್ರಾರ್ಥಿಸಿಕೊಳ್ಳುವುದರೊಂದಿಗೆ ಬಾಬುದಾರರ ಜಾತ್ರಾ ಸೇವೆ ಆರಂಭಗೊಳ್ಳುತ್ತದೆ. ಕಲ್ಯಾಣ ಪ್ರತಿಷ್ಠೆ, ದೇವಿಯ ಸಿಂಗಾರ, ಗದ್ದುಗೆಯಲ್ಲಿ ಆಸೀನಳಾದ ದೇವಿಗೆ ಪ್ರಥಮ ಪೂಜೆಯಿಂದ ಜಾತ್ರಾ ಮುಕ್ತಾಯವಾಗಿ ದೇವಿ ಯುಗಾದಿಯ ದಿನದಂದು ದೇವಾಲಯದಲ್ಲಿ ಪುನಃ ಪ್ರತಿಷ್ಠೆ ಆಗುವವರೆಗೂ ನಾಡಿಗ ಕುಟುಂಬದ ಸೇವೆ ಗಮನಾರ್ಹವಾಗಿರುತ್ತದೆ. ಶಿರಸಿ ಕಸಬೆ ಗೌಡರ ಕುಟುಂಬದ ಬಾಬುದಾರರು ರೈತರು ಸಲ್ಲಿಸುವ ಎಲ್ಲ ಸೇವೆಗಳ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿದೆ. ಕಟ್ಟೇರ ಕುಟುಂಬದ ಬಾಬುದಾರರು ಹೊರಬೀಡು, ಗಡಿ ಮಾರಿಕಾಂಬೆಯ ಜವಾಬ್ದಾರಿ ಹೊತ್ತಿದ್ದರೆ, ಕಾರ್ತೀಕ ದೀಪೋತ್ಸವದಲ್ಲಿಯೂ ಅವರ ಜವಾಬ್ದಾರಿ ಇರುತ್ತದೆ. ಮೂವರು ರೈತ ಮುಖ್ಯಸ್ಥ ಬಾಬುದಾರರಿರುತ್ತಾರೆ. ಜಾತ್ರಾ ಕಾರ್ಯಕ್ರಮಗಳಿಗೆ ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ಪೂರೈಸುವ ಜವಾಬ್ದಾರಿ ಚಕ್ರಸಾಲಿ ಬಾಬುದಾರರದ್ದಾಗಿದೆ. ಕೇದಾರಿ ಕುಟುಂಬ ಬಾಬುದಾರರು ರೈತರ ವತಿಯಿಂದ ಚೌತಮನೆ ಪೂಜೆ, ಮಡಿವಾಳ ಕುಟುಂಬ ಬಾಬುದಾರರು ಜಾತ್ರಾ ಚಪ್ಪರದಲ್ಲಿ ಮೇಲ್ಛಾವಣಿ ವಸ್ತರ ಕಟ್ಟಿವಿಕೆ ಜವಾಬ್ದಾರಿ ಹೊತ್ತಿದ್ದರೆ ಕುರುಬ ಕುಟುಂಬ ಬಾಬುದಾರರು ಪಲ್ಲಕ್ಕಿ ಮತ್ತು ಇತರ ಉತ್ಸವಗಳಲ್ಲಿ ಡೊಳ್ಳು ಬಾರಿಸುವ ಜವಾಬ್ದಾರಿ ಹೊತ್ತಿದ್ದಾರೆ.
    ಟಿಕಾರೆ ಬಾಬುದಾರರು ಪಲ್ಲಕ್ಕಿ ವಸ್ತç ದುರಸ್ತಿ ಜವಾಬ್ದಾರಿ, ಮಾರಿಗುಡಿ ಶೆಟ್ಟಿ, ಅಣವೇಕರ ಶೆಟ್ಟಿ ಕುಟುಂಬ ದೇವಿಯ ಆಭರಣಗಳ ರಿಪೇರಿ, ಸ್ವಚ್ಛಗೊಳಿಸುವ ಜವಾಬ್ದಾರಿ ಹೊತ್ತಿದ್ದಾರೆ. ಉಪ್ಪಾರ ಕುಟುಂಬದ ಬಾಬುದಾರರು ರಥದ ಗೂಡನ್ನು ತಯಾರಿಸುವುದು, ಪೂಜಾರಿ, ಆಚಾರಿ ಕುಟುಂಬದ ಬಾಬುದಾರರು ದೇವಿಯ ವಿಗ್ರಹವನ್ನು ಕಳಚುವುದು, ಕೂಡಿಸುವ ಜವಾಬ್ದಾರಿ ಹೊತ್ತಿದ್ದಾರೆ. ಶಿರಸಿ ಸೀಮೆಯ 9 ಗ್ರಾಮಗಳ ಮುಖ್ಯಸ್ಥ ಬಾಬುದಾರರು ಹೆಬ್ಬಾಗಿಲು ತೋರಣ, ತುಲಾಭಾರ ಸೇರಿದಂತೆ ವಿವಿಧ ಸೇವೆಗಳನ್ನು ಪೂರೈಸುತ್ತಾರೆ. ಮೇಟಿ ಕುಟುಂಬದ ಬಾಬುದಾರರು ಜಾತ್ರೆಯಲ್ಲಿ ಅಂಕೆ ಹಾಕುವ ದಿನದಿಂದ ಮೇಟಿ ದೀಪವನ್ನು ಕಾಯ್ದುಕೊಳ್ಳುತ್ತಾರೆ. ಚಲವಾದಿ ಕುಟುಂಬ ತೋರಣಕ್ಕೆ ಅಗತ್ಯ ಮಾವಿನ ಸೊಪ್ಪು ಪೂರೈಸುತ್ತಾರೆ.
    ಮೇತ್ರಿ ಬಾಬುದಾರರ ಫಕೀರಾ ಕುಟುಂಬ ಕೋಣನಿಗೆ ಉಡಿ ಸಾಮಾನು ಕಟ್ಟುವುದು, ಮಾತಂಗಿ ಪೂಜೆ ಮಾಡುವಿಕೆ, ಬೇವಿನ ಉಡುಗೆ ಬಿಚ್ಚುವ ಕಾರ್ಯ ನೆರವೇರಿಸಿದರೆ ಆಯಿತ್ರಾ ಕುಟುಂಬ ಉತ್ಸವದ ಪ್ರಸಂಗದಲ್ಲಿ ಹಲಿಗೆ ಬಾರಿಸುತ್ತದೆ. ಎಸಳೆ ಮೇದಾರ ಕುಟುಂಬ ಪ್ರತಿಷ್ಠೆ ಪೂಜೆಗೆ ಬೇಕಾಗುವ ಬುಟ್ಟಿ, ಬಿದಿರು ಸಾಮಾನು ಪೂರೈಸುತ್ತದೆ. ನೀಲೇಕಣಿ ಗುಡಿಗಾರ ಕುಟುಂಬ ಶ್ರೀ ದೇವಿಯ ಕಲ್ಯಾಣ ಉತ್ಸವಕ್ಕೆ ಬೆಂಡಿನ ಬಾಸಿಂಗ, ಬೆಂಡಿನ ಮಾಲೆ ಪೂರೈಸುತ್ತದೆ. ಇನ್ನು ಚರ್ಮದ ಸಾಮಾನು ಪೂರೈಸುವ ಬಾಬುದಾರರು ಸೇವೆ ಮಾಡುತ್ತಾರೆ. ಬೇಡರ ಜೋಗುತಿ ನಾಲ್ಕು ಕುಟುಂಬಗಳು ಉತ್ಸವಗಳಲ್ಲಿ ಚಾಮರ ಬೀಸಿ ಸೇವೆ ಸಲ್ಲಿಸುತ್ತವೆ. ಚಲುವಾದಿ ಜೋಗುತಿಯರ ಐದು ಕುಟುಂಬಗಳು ಹೊರಬೀಡುಗಳಲ್ಲಿ ಪಡಲಿಗೆ ಹೊರುವ ಕಾರ್ಯ ಮಾಡಿದರೆ, ಮೇತ್ರಿ ಜೋಗುತಿ ಕುಟುಂಬಗಳು ವಿವಿಧ ಸೇವೆ ಸಲ್ಲಿಸುತ್ತಿವೆ.
    ಆಸಾದಿ ಬಾಬುದಾರರ ಕುಟುಂಬದ ಜವಾಬ್ದಾರಿ ಜಾತ್ರೆಯ ವೇಳೆ ಮುಖ್ಯವಾಗಿರುತ್ತದೆ. ಜಾತ್ರಾ ಚಪ್ಪರದಲ್ಲಿ ರಂಗವಲ್ಲಿ ಇಡುವುದು, ದೇವಿಯ ಎದುರು ಹಾಡು, ಕುಣಿಯುವುದು, ಮಾರಿಕಾಂಬೆ ಗದ್ದುಗೆಯಿಂದ ಎದ್ದ ಬಳಿಕ ಹುಲುಸು , ಗಾವ, ಹೆಪ್ಪು ವಿಸರ್ಜನ ವಿಧಿಗಳನ್ನು ನಡೆಸುವುದು, ಹಾರುಗೋಳಿ ಹಾರಿಸುವುದು ಅವರ ಜವಾಬ್ದಾರಿಯಾಗಿದೆ. ಕಾಳಿ ಕುಟುಂಬದ ಬಾಬುದಾರರು ಅವರ ಸೇವೆ ನೆರವೇರಿಸಿದರೆ ಉಗ್ರಾಣಿ ಕುಟುಂಬದವರು ಆಮಂತ್ರಣ, ಮಾರಿಪಟ್ಟಿ ವಿತರಣೆ ಕಾರ್ಯ ಮಾಡುತ್ತಾರೆ. 18 ಗ್ರಾಮಗಳ ಗ್ರಾಮ ಬಾಬುದಾರರು ತಮಗೆ ನಿಗದಿಪಡಿಸಿದ ಸೇವೆ ಪೂರೈಸುತ್ತಾರೆ.
    ಮಾರಿಕಾಂಬಾ ದೇವಿ ಜಾತ್ರೆ ಘೋಷಣೆಯಾಗುತ್ತಿದ್ದಂತೆಯೇ ಈ ಬಾಬುದಾರ ಕುಟುಂಬಗಳು ಸ್ವ ಪ್ರೇರಣೆಯಿಂದ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಯಾವ ಫಲಾಪೇಕ್ಷೆ ಇಲ್ಲದೇ ತಮ್ಮ ಕುಟುಂಬಾಗತವಾಗಿ ಬಂದ ಸೇವಾ ಕಾರ್ಯವನ್ನು ಚಾಚೂ ತಪ್ಪದೇ ನೆರವೇರಿಸುತ್ತಿದ್ದಾರೆ.

    ಇದನ್ನೂ ಓದಿ: ಬೋನಿಗೆ ಬಿದ್ದ ಆತಂಕ ಹುಟ್ಟಿಸಿದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts