More

    ಶಾಂತಿ ಕದಡಿದ ಆ ಘಟನೆ : ಅಂದು ಏನಾಯಿತು?

    ಹಲವು ದಶಕಗಳಿಂದ ವಿವಾದಕ್ಕೆ ಕಾರಣವಾಗಿದ್ದ ಆ ಕಟ್ಟಡ ಇನ್ನಿಲ್ಲ ಎಂಬ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ರಾಮಭಕ್ತರು ವಿಜಯೋತ್ಸವವನ್ನೂ ಆಚರಿಸಿದರು. ಆದರೆ, ಬಾಬ್ರಿ ಧ್ವಂಸ ಘಟನೆ ಮುಸಲ್ಮಾನರನ್ನು ಕೆರಳಿಸಿತು. ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಬೇಕಾಯಿತು. ಉತ್ತರ ಪ್ರದೇಶದಲ್ಲಿ 1992ರ ಡಿಸೆಂಬರ್ 6ರಂದೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಡಿ.16ರಂದು ವಿಧಾನಸಭೆ ವಿಸರ್ಜಿಸಲಾಯಿತು. ಕಟ್ಟಡ ಧ್ವಂಸ ಆಕ್ರೋಶದ ಹೆಸರಲ್ಲಿ ಗಲಭೆಗಳು ಭುಗಿಲೆದ್ದವು. ಕೋಮು ಸಂಘರ್ಷ ದೇಶದಲ್ಲೆಲ್ಲ ಹರಡಿ, 2 ಸಾವಿರ ಜನರು ಬಲಿಯಾದರು. ಮುಂಬೈ, ಸೂರತ್, ಅಹ್ಮದಾಬಾದ್ ಮುಂತಾದ ನಗರಗಳು ಮತ್ತು ಕಾನ್ಪುರ ಸೇರಿ ಉತ್ತರ ಪ್ರದೇಶದ ಹಲವು ನಗರಗಳು ದಂಗೆಗೆ ಬೆಂದವು. ಮುಂಬೈ ಮಹಾನಗರವೊಂದರಲ್ಲೇ 900 ಜನರು ದಂಗೆಗಳಿಗೆ ಬಲಿಯಾದರು. ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಹಿಂದುವಿರೋಧಿ ದಂಗೆಗಳು ಭುಗಿಲೆದ್ದು ಹಿಂದು ಮಂದಿರಗಳನ್ನು ಕೆಡವಲಾಯಿತು. ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಹಿಂದು ಮಂದಿರಗಳನ್ನು ಕೆಡವಲಾಯಿತು ಅಲ್ಲದೆ ಹಿಂದು ಮಹಿಳೆಯರ ಮಾನಭಂಗ ಮಾಡಲಾಯಿತು.

    ಅಂದು ಏನಾಯಿತು?
    1991ರಲ್ಲಿ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರ ಪತನವಾಗಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೇಂದ್ರದಲ್ಲಿ ಆಗ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ಆಯೋಜಿಸಲಾಯಿತು. ಈ ಕರಸೇವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು, ನಿಗದಿಯಂತೆ ವಿಹಿಂಪ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಂಬಜನ್ನು ಏರಿ ನೋಡುನೋಡುತ್ತಿದ್ದಂತೆ ಅದನ್ನು ಧ್ವಂಸಗೊಳಿಸಿದರು. ಇದರಿಂದ ಭಾವೋದ್ರೇಕಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲ್ಲೇ ವಿವಾದಿತ ಕಟ್ಟಡವನ್ನು ಇಡಿಯಾಗಿ ನೆಲಸಮ ಮಾಡಿದ್ದರು. ಇತ್ತ ಲಾಲಕೃಷ್ಣ ಆಡ್ವಾಣಿ, ಸಾಧಿ್ವ ಉಮಾಭಾರತಿ ಸೂಚನೆ ನೀಡುತ್ತಿದ್ದರೂ ಅದಕ್ಕೆ ಕಿವಿಗೊಡದೆ ಕರಸೇವಕರ ಪಡೆ ಸಂಜೆ 7 ಗಂಟೆ ಹೊತ್ತಿಗೆ ಆ ಕಟ್ಟಡವನ್ನು ಧ್ವಂಸಗೊಳಿಸಿಯೇ ನಿರಾಳವಾಯಿತು.

    ಗುಂಬಜವೇರಿದ ರಾಮಭಕ್ತರ ಮೇಲೆ ಗುಂಡು ಹಾರಿಸಲು ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದರು. ಆದರೆ, ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಜವಾನರು ಗುಂಡು ಹಾರಿಸಿದ್ದರಿಂದ ಹಲವಾರು ಕರಸೇವಕರು ಸಾವನ್ನಪ್ಪಿದರು. ಘಟನೆಯ ಬಳಿಕ ಒಟ್ಟು 1.80 ಲಕ್ಷ ಜನರು ಪೊಲೀಸರಿಂದ ಬಂಧನಕ್ಕೊಳಗಾದರು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿಜಯರಾಜೇ ಸಿಂಧಿಯಾ, ಉಮಾಭಾರತಿ, ಬಿ.ಎಸ್.ಯಡಿಯೂರಪ್ಪ ಮುಂತಾದ ನಾಯಕರು ಸಹ ಪೊಲೀಸರಿಂದ ಬಂಧಿಸಲ್ಪಟ್ಟರು.

    ಲಿಬರ್​ಹಾನ್ ಆಯೋಗ: ಘಟನೆಯ 10 ದಿನಗಳ ಬಳಿಕ ಅಂದರೆ ಡಿ.16ರಂದು ಕೇಂದ್ರ ಸರ್ಕಾರ ಪ್ರಕರಣದ ಸಮಗ್ರ ತನಿಖೆಗಾಗಿ ಲಿಬರ್​ಹಾನ್ ಆಯೋಗ ರಚಿಸಿತು. ಈ ಆಯೋಗ 17 ವರ್ಷಗಳ ಬಳಿಕ 2009ರಲ್ಲಿ ವರದಿ ಸಲ್ಲಿಸಿತು. ಈ ಆಯೋಗ ಯಾವುದೇ ಸಂಘಟನೆ, ವ್ಯಕ್ತಿಯನ್ನು ಅಪರಾಧಿ ಎಂದು ಹೇಳದೆ ಹಲವು ಸಂಘಟನೆ, ವ್ಯಕ್ತಿಗಳದ್ದು ಸ್ವಲ್ಪ ಸ್ವಲ್ಪ ದೋಷವಿದೆ ಎಂದಿತು. ಆಯೋಗದ ವರದಿಯಲ್ಲಿ ಯಾವುದೇ ಹೊಸ ಮಾಹಿತಿಗಳಿರಲಿಲ್ಲ.

    ಪ್ರಕರಣ ನಡೆದುಬಂದ ಹಾದಿ

    ಡಿಸೆಂಬರ್ 1992: ಎರಡು ಎಫ್​ಐಆರ್​ಗಳನ್ನು ದಾಖಲಿಸಲಾಯಿತು. ಅಪರಿಚಿತ ಕರಸೇವಕರಿಂದ ಬಾಬ್ರಿ ಕಟ್ಟಡ ಧ್ವಂಸಗೊಳಿಸಿದ ಪ್ರಕರಣ ಮತ್ತು ಬಾಬ್ರಿ ಕಟ್ಟಡ ಕೆಡವಲು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಆಡ್ವಾಣಿ, ಜೋಷಿ ಮತ್ತು ಇತರರ ಮೇಲೆ ಎಫ್​ಐಆರ್ ದಾಖಲಿಸಲಾಯಿತು.

    *ಅಕ್ಟೋಬರ್ 1993: ಆಡ್ವಾಣಿ ಮತ್ತಿತರರ ಮೇಲೆ ಒಳಸಂಚು ರೂಪಿಸಿದ ಆರೋಪದ ಮೇಲೆ ಸಿಬಿಐ ಚಾರ್ಜ್​ಶೀಟ್ ದಾಖಲಿಸಿತು.

    *2001 ಮೇ 4: ತಾಂತ್ರಿಕ ಕಾರಣಗಳನ್ನು ಆಧರಿಸಿ ಸಿಬಿಐನ ವಿಶೇಷ ನ್ಯಾಯಾಲಯ ಆಡ್ವಾಣಿ, ಜೋಷಿ, ಉಮಾಭಾರತಿ, ಬಾಳ ಠಾಕ್ರೆ ಮತ್ತಿತರರ ಮೇಲಿದ್ದ ಆರೋಪವನ್ನು ವಜಾಗೊಳಿಸಿತು.

    *2004 ನವೆಂಬರ್ 2: ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಿಬಿಐ ಅಲಹಾಬಾದ್ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತು. ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು.

    *2010 ಮೇ 20: ಸಿಬಿಐನ ರಿವಿಷನ್ ಪಿಟಿಷನ್​ನಲ್ಲಿ ಯಾವುದೇ ಆಧಾರವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತು.

    *2011 ಫೆಬ್ರವರಿ: ಅಲಹಾಬಾದ್ ಹೈಕೋರ್ಟ್​ನ ತೀರ್ವನವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತು. ಇದಕ್ಕೆ ಸಿಬಿಐ 8 ತಿಂಗಳ ಸಮಯ ತೆಗೆದುಕೊಂಡಿತು.

    *2017 ಮಾರ್ಚ್ 6: ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಇರುವ ಆರೋಪಗಳ ಪರಿಶೀಲನೆ ನಡೆಸಬಹುದೆಂದು ಸುಪ್ರೀಂ ಮುನ್ಸೂಚನೆ ನೀಡಿತು.

    2017 ಮಾರ್ಚ್ 21: ಸುಪ್ರೀಂ ಕೋರ್ಟ್ ಅಯೋಧ್ಯಾ ವಿವಾದವನ್ನು ಬಗೆಹರಿಸುವ ಪ್ರಯತ್ನ ಮಾಡಿತು. ಮಾತುಕತೆ ನಡೆಸಿ ಒಮ್ಮತದಿಂದ ಈ ವಿವಾದವನ್ನು ಬಗೆಹರಿಸಲು ಸಾಧ್ಯವಿದೆಯೆಂದು ಸುಪ್ರೀಂ ಅಭಿಪ್ರಾಯಪಟ್ಟಿತು.

    *2017 ಏಪ್ರಿಲ್ 6: ಕಾಲಮಿತಿಯೊಳಗೆ ಪ್ರಕರಣದ ವಿಚಾರಣೆ ಅಂತ್ಯಗೊಳಿಸುವುದಾಗಿ ಸುಪ್ರೀಂ ಹೇಳಿತು. ಮತ್ತು ಸಿಬಿಐ ಅರ್ಜಿ ಕುರಿತಾದ ತೀರ್ಪನ್ನು ಕಾಯ್ದಿರಿಸಿತು.

    *2017 ಏಪ್ರಿಲ್ 19: ಬಿಜೆಪಿಯ 13ಕ್ಕೂ ಹೆಚ್ಚು ನಾಯಕರನ್ನು ವಿವಾದಿತ ಕಟ್ಟಡ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪದಡಿ ವಿಚಾರಣೆ ನಡೆಸಲು ಸುಪ್ರಿಂ ಕೋರ್ಟ್ ಆದೇಶಿಸಿತು.

    * 2020 ಸೆಪ್ಟೆಂಬರ್ 30: ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts