More

    ದೇವರಗೆಣ್ಣೂರಲ್ಲಿ ಬೋನಿಗೆ ಬಿದ್ದ ಚಿರತೆ

    ವಿಜಯಪುರ: ಕಳೆದೊಂದು ವಾರದಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಕಾಡು ಪ್ರಾಣಿ ಕೊನೆಗೂ ಸೆರೆಸಿಕ್ಕಿದ್ದು ಸಾರ್ವಜನಿಕರ ಹೇಳಿಕೆಯಂತೆ ಅದು ಚಿರತೆ ಎಂಬುದು ಸಾಬೀತಾಗಿದೆ.
    ಶುಕ್ರವಾರ ಬೆಳಗಿನ ಜಾವ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಹೊರವಲಯದಲ್ಲಿ ಇರಿಸಲಾದ ಬೋನಿಗೆ ಚಿರತೆ ಬಿದ್ದಿದೆ. ಅಂದಾಜು 4 ವರ್ಷದ ಚಿರತೆ ಇದಾಗಿದ್ದು ಇನ್ನೂ ಬೆಳವಣಿಗೆ ಹಂತದಲ್ಲಿದೆ. ಏಕಾಂಗಿಯಾಗಿ ದಾಳಿ ಮಾಡುವ ಈ ಚಿರತೆ ಈಗಾಗಲೇ 6 ಕುರಿ ಮತ್ತು ಒಂದು ಎಮ್ಮೆ ಕರುವನ್ನು ತಿಂದು ಹಾಕಿದೆ.

    ದಾಂಡೇಲಿಯಿಂದ ಬಂದ ಶಂಕೆ

    ಬಯಲು ಸೀಮೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಚಿರತೆ ದಾಂಡೇಲಿ, ಖಾನಾಪುರ ಮಾರ್ಗವಾಗಿ ಬಬಲೇಶ್ವರದತ್ತ ಆಗಮಿಸಿರಬಹುದೆಂದು ಅರಣ್ಯ ಇಲಾಖೆ ಅಂದಾಜಿಸಿದೆ. ಕೃಷ್ಣಾ ತೀರದಲ್ಲಿರುವ ಬಬಲೇಶ್ವರ ಸುತ್ತಲಿನ ಪ್ರದೇಶದಲ್ಲಿ ಹಸಿರು ಮತ್ತು ನೀರಿನ ಸೆಲೆ ಇರುವ ಕಾರಣ ಇತ್ತ ಬಂದಿರಬಹುದೆನ್ನಲಾಗಿದೆ. ಸದ್ಯ ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಗಾರ ತಿಳಿಸಿದ್ದಾರೆ.

    ಹೇಗಿತ್ತು ಕಾರ್ಯಾಚರಣೆ?

    ದೇವರಗೆಣ್ಣೂರ, ಸುತಗಂಡಿ, ಬಬಲಾದಿ, ಬಿದರಿ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಈ ಚಿರತೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ವಾರದಿಂದ ಈ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದರು. ಜಮಖಂಡಿ ಅರಣ್ಯ ವಲಯದ ಬಿದರಿಯಲ್ಲಿ 1 ಬೋನ್ ಮತ್ತು ನಾಲ್ಕು ಸಿಸಿ ಕ್ಯಾಮೆರಾ ಹಾಗೂ ದೇವರಗೆಣ್ಣೂರನಲ್ಲಿ ಮೂರು ಬೋನ್ ಮತ್ತು ನಾಲ್ಕು ಕ್ಯಾಮೆರಾ ಅಳವಡಿಸಲಾಗಿತ್ತು. ರಾತ್ರಿ ಮೂರು ಮತ್ತು ಹಗಲು ನಾಲ್ಕು ಜನ ಅರಣ್ಯ ಇಲಾಖೆ ಸಿಬ್ಬಂದಿ ಸತತವಾಗಿ ಪೆಟ್ರೊಲಿಂಗ್ ನಡೆಸಿದ್ದರು. ಶುಕ್ರವಾರ ನಸುಕಿನ ಜಾವ ಬೋನ್ ಬಳಿ ಯಾರೂ ಇಲ್ಲದ್ದನ್ನು ಕಂಡ ಚಿರತೆ ಅದರಲ್ಲಿದ್ದ ಕುರಿಮರಿಯನ್ನು ತಿನ್ನಲು ಹೋಗಿ ಸಿಕ್ಕಿ ಬಿದ್ದಿದೆ.
    ಒಟ್ಟಿನಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದ್ದು ಜನ ನಿರುಮ್ಮಳರಾಗಿದ್ದಾರೆ. ಅದಾಗ್ಯೂ ಸುರಕ್ಷತಾ ದೃಷ್ಟಿಯಿಂದ ಇನ್ನೂ ಬೋನ್‌ಗಳನ್ನು ಇರಿಸಿ ಪೆಟ್ರೊಲಿಂಗ್ ಮುಂದುವರಿಸುವುದಾಗಿ ಡಿಎಫ್‌ಒ ಸರಿನಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಚಿರತೆ ಸಾಮೂಹಿಕವಾಗಿ ದಾಂಗುಡಿ ಇಡಲ್ಲ. ಇದೊಂದು ಏಕಾಂಗಿಯಾಗಿ ಬೇಟೆಯಾಡುವ ಪ್ರಾಣಿ. ಹೀಗಾಗಿ ಇದೊಂದೇ ಆಗಮಿಸಿರಲಿಕ್ಕೆ ಸಾಕು. ಆದರೂ ಇನ್ನೂ ಕೆಲ ದಿನ ಬೋನ್‌ಗಳನ್ನು ಇರಿಸಿ ಪೆಟ್ರೋಲಿಂಗ್ ಮುಂದುವರಿಸಲಾಗುವುದು.
    ಸರೀನಾ ಸಿಕ್ಕಲಗಾರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts