More

    ಗುಮ್ಮಟನಗರಿಯಲ್ಲಿ ಮತ್ತೆ ಭೂ ಕಂಪನ

    ವಿಜಯಪುರ: ಕಳೆದ ಮೂರ‌್ನಾಲ್ಕು ದಿನಗಳಿಂದ ಗುಮ್ಮಟ ನಗರಿಯಲ್ಲಿ ಭೂ ಕಂಪನದ ಅನುಭವವಾಗುತ್ತಿದ್ದು, ಗುರುವಾರ ರಾತ್ರಿ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಮತ್ತೆ ಭೂಮಿ ಕಂಪಿಸಿದಂತಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
    ಒಂದೇ ದಿನ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಜನ ಬೆಳಗಿನವರೆಗೂ ಜಾಗರಣೆ ನಡೆಸಿದ್ದಾರೆ. ಭಾರೀ ಪ್ರಮಾಣದಲ್ಲಿ ಶಬ್ದ ಕೇಳಿ ಬರುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಮಕ್ಕಳ ರೋದನ ಹೆಚ್ಚಿದ್ದು ಮಹಿಳೆಯರು ಅವರನ್ನು ಸಂಭಾಳಿಸಲು ಹೆಣಗಾಡಬೇಕಾಯಿತೆಂದು ಗ್ರಾಮಸ್ಥರು ತಿಳಿಸಿದ್ದಾರೆ.
    ಸತತ ಮೂರು ದಿನಗಳಿಂದ ಭಾರಿ ಶಬ್ದ ಕೇಳಿ ಬರುತ್ತಿದ್ದು ಭೂಮಿ ಕಂಪಿಸಿದೆ. ಈ ಭಾಗದ ಮಲಘಾಣ, ಮಸೂತಿ, ಕೂಡಗಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದೀಗ ಅಡವಿ ಸಂಗಾಪುರದಲ್ಲೂ ಆ ಅನುಭವವಾಗಿದೆ. ಗುರುವಾರ ಸಂಜೆ 7ಕ್ಕೆ, ರಾತ್ರಿ 10ಕ್ಕೆ ಹಾಗೂ ತಡರಾತ್ರಿ 1 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ. ಮನೆಗಳಲ್ಲಿನ ಸಾಮಗ್ರಿಗಳು ಕೆಳಗೆ ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
    ಗ್ರಾಮದಲ್ಲಿನ್ನೂ ಆತಂಕ ಮನೆ ಮಾಡಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಯುವಕರು ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಹೇಳಿಕೆ ಹರಿಬಿಟ್ಟರು. ಜತೆಗೆ ಮಕ್ಕಳು ಅಳುತ್ತಿರುವ ದೃಶ್ಯಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಅಧಿಕಾರಿಗಳ ಗಮನ ಸೆಳೆದರು.
    ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ್ದು ಶೀಘ್ರ ಈ ಬಗ್ಗೆ ಬೆಂಗಳೂರಿನ ಭೂ ವಿಜ್ಞಾನಿಗಳಿಗೆ ಪತ್ರ ಬರೆದು ಪರಿಶೀಲನೆಗೆ ಆಹ್ವಾನಿಸುವುದಾಗಿ ಭರವಸೆ ನೀಡಿದ್ದಾರೆ. ತಹಸೀಲ್ದಾರ್ ಎಂ. ಎಸ್. ಅರಕೇರಿ, ಗ್ರಾಮ ಸಹಾಯಕರು ಹಾಗೂ ಕಂದಾಯ ನಿರೀಕ್ಷಕರು ಇದ್ದರು.

    ಜನ ಆತಂಕ ಪಡುವ ಅಗತ್ಯವಿಲ್ಲ. ಭೂಮಿ ಕಂಪಿಸಿದ ಬಗ್ಗೆ ಯಾವುದೇ ಕುರುಹುಗಳಿಲ್ಲ. ಭಾರೀ ಪ್ರಮಾಣ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಈ ಭಾಗದಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ಇಲ್ಲ. ಈ ಬಗ್ಗೆ ಬೆಂಗಳೂರಿನ ಭೂ ವಿಜ್ಞಾನಿಗಳ ಜತೆಗೂ ಸಂಪರ್ಕದಲ್ಲಿದ್ದು ಅವರಿಗೆ ಪತ್ರ ಕೂಡ ಬರೆಯಲಾಗಿದೆ. ಅಗತ್ಯ ಬಿದ್ದರೆ ಅವರನ್ನು ಸ್ಥಳಕ್ಕೆ ಆಹ್ವಾನಿಸಿ ಪರಿಶೀಲಿಸಲಾಗುವುದು.
    ಬಲರಾಮ ಲಮಾಣಿ, ಉಪ ವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts