More

    ಶೆಟ್ಟರ್​ಗೆ ಪಕ್ಷ ಯಾವ ಅನ್ಯಾಯ ಮಾಡಿದೆ? ಸವದಿ, ಶೆಟ್ಟರ್ ಬಂಡವಾಳ ಬಯಲು ಮಾಡ್ತೇನೆ: ಬಿಎಸ್​ವೈ ಎಚ್ಚರಿಕೆ

    ಬೆಂಗಳೂರು: ಜಗತ್ತಿನ ಯಾವುದೇ ಶಕ್ತಿ ಕೂಡ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಹೊಸ ಪ್ರಯೋಗವನ್ನು ಮಾಡಲಾಗಿದೆ. ಹೀಗಾಗಿ ಟಿಕೆಟ್​ ವಂಚಿತ ನಾಯಕರು ಬಿಜೆಪಿಯ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್​ ಹಾಗೂ ಲಕ್ಷ್ಮಣ ಸವದಿ ನಡೆಯನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪ ಅವರು ಕಟುವಾಗಿ ಟೀಕಿಸಿದರು.

    ಬಿಜೆಪಿ ‌ಕಾರಣ‌
    ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್​. ಯಡಿಯೂರಪ್ಪ, ಹಳೆ ಬೇರು, ಹೊಸ ಚಿಗುರು ಸೇರಿ ಈ ದೊಡ್ಡ‌ ಪಕ್ಷವನ್ನು ಬೆಳೆಸಬೇಕಿದೆ. ನನಗೆ, ಶೆಟ್ಟರ್​ಗೆ, ‌ಸವದಿಗೆ ಹಾಗೂ ಈಶ್ವರಪ್ಪಗೆ ಎಲ್ಲರಿಗು ಎಲ್ಲ ಅವಕಾಶವನ್ನು ಪಕ್ಷ ಕೊಟ್ಟಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ರಾಜ್ಯದ ಉದ್ದಗಲಕ್ಕೆ ಎಲ್ಲೇ ಹೋದರೂ ಪ್ರೀತಿ ಗಳಿಸುವುದಕ್ಕೆ ಬಿಜೆಪಿ ‌ಕಾರಣ‌ ಎಂದು ಬಿಎಸ್​ವೈ ಹೇಳಿದರು.

    ಇದನ್ನೂ ಓದಿ: ಮರ್ಯಾದಾ ಹತ್ಯೆ; ಪ್ರೀತಿಯ ವಿಷಯ ತಿಳಿದು ಹೆಣ್ಣು ಮಕ್ಕಳಿಬ್ಬರನ್ನು ಕೊಂದೇ ಬಿಟ್ಟ ದಂಪತಿ!

    ಇದು ಜನರಿಗೆ ‌ಮಾಡಿದ‌ ದ್ರೋಹ
    ಸವದಿ ಅವರು ಚುನಾವಣೆಯಲ್ಲಿ ಸೋತ ಮೇಲೆಯೂ ಅವರನ್ನು ಎಂಎಲ್​​ಸಿ ಮಾಡಿ,‌ ಉಪ‌ಮುಖ್ಯಮಂತ್ರಿ‌ ಮಾಡಿ ಕೋರ್ ಕಮಿಟಿ ಸದಸ್ಯ ಮಾಡಿದೆವು. ನಾವು ಅವರಿಗೆ ಏನು ಕಡಿಮೆ ಮಾಡಿದ್ವಿ? 10 ತಿಂಗಳು ಆಗಿದೆ. ಎಂಎಲ್​ಸಿ ಆಗಿ ಮುಂದುವರಿಯಬಹುದಿತ್ತು. ಮತ್ತೊಮ್ಮೆ ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಅವರ ಬೆಂಬಲಿಗರನ್ನು ಕೇಳುತ್ತೇನೆ. ಇದು ಜನರಿಗೆ ‌ಮಾಡಿದ‌ ದ್ರೋಹ. ನಂಬಿಕೆ ದ್ರೋಹ ಮತ್ತು ‌ವಿಶ್ವಾಸ ದ್ರೋಹ ಎಂದು ಟೀಕಾ ಪ್ರಹಾರ ನಡೆಸಿದರು.

    ನಂಬಿಕೆಗೆ ತದ್ವಿರುದ್ಧವಾಗಿದೆ
    ಜಗದೀಶ ಶೆಟ್ಟರ್ ಅವರು ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿದ್ದವರು. ಶೆಟ್ಟರ್ ಅವರನ್ನ ವಿರೋಧ ಪಕ್ಷದ‌ ನಾಯಕರನ್ನಾಗಿ ಮತ್ತು ಸಿಎಂ ಆಗಿ ಮಾಡಿದೆವು. ಬಿಬಿ ಶಿವಪ್ಪ ಅವರನ್ನು ಎದುರು ಹಾಕಿಕೊಂಡು ‌ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಮಾಡಿದೆವು. ನಾನೇ‌ ಮುಂದೆ ನಿಂತು ಅನಂತ್ ಕುಮಾರ್ ಜೊತೆಯಾಗಿ ಶೆಟ್ಟರ್​ ಅವರನ್ನು ಸಿಎಂ ಮಾಡಿದೆವು. ಇಂತಹ ಸಮಯದಲ್ಲಿ ಶೆಟ್ಟರ್‌ ನಿರ್ಧಾರ‌ ಅವರ‌ ನಂಬಿಕೆಗೆ ತದ್ವಿರುದ್ಧವಾಗಿದೆ, ಸ್ಥಾನಮಾನ ಸಿಗಲಿ, ಬಿಡಲಿ ದೇಶಕ್ಕಾಗಿ ‌ಕೆಲಸ‌ ಮಾಡಬೇಕು. ಇದು ನಾವು ನಂಬಿಕೊಂಡು ಬಂದ ದಾರಿ. ಶೆಟ್ಟರ್ ಅವರನ್ನು ಗುರುತಿಸಿ ದೊಡ್ಡವರನ್ನಾಗಿ ಮಾಡಿದ್ದು ಬಿಜೆಪಿ ಎಂದು ಶೆಟ್ಟರ್​ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

    ಅಕ್ಷಮ್ಯ ಅಪರಾಧ
    ಪಕ್ಷದ‌ ಸಹಾಯವಿಲ್ಲದೆ ಯಾರೂ ಬೆಳೆಯೋಕೆ ಆಗುವುದಿಲ್ಲ. ನಿನ್ನೆ ಜೋಶಿ ಅವರು ಹೋಗಿ ಮಾತನಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ‌ಮಾಡಿ ‌ಕೇಂದ್ರದ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಸೇರುತ್ತಿರುವುದು ಅಕ್ಷಮ್ಯ ಅಪರಾಧ. ನಾವು ಏನು ಕಡಿಮೆ ಮಾಡಿದ್ದೀವಿ? ಇದನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ಇದನ್ನೂ ಓದಿ: ಜಗದೀಶ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನ ವಿಫಲ; 4 ದಶಕಗಳ ಬಿಜೆಪಿ ನಂಟು ಕಳಚಿಕೊಂಡ ಮಾಜಿ ಸಿಎಂ

    ಋಣ ತೀರಿಸುವ ಕೆಲಸ ಮಾಡಬೇಕು
    ನನಗೆ 80 ವರ್ಷ ಆದರೂ ಸಹ ಹೋರಾಟ ಮಾಡ್ತಿರೋದು ದೇಶದ ಬಲಿಷ್ಠ ಸರ್ಕಾರಕ್ಕಾಗಿ. ಜಗತ್ತಿನ ಯಾವುದೇ ಶಕ್ತಿ ಕೂಡ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದನ್ನ ತಡೆ ಯೋಕೆ ಸಾಧ್ಯವಿಲ್ಲ. ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಹೊಸ ಪ್ರಯೋಗ ಮಾಡಿದೆ. ಹೀಗಾಗಿ ಟಿಕೆಟ್​ ವಂಚಿತ ನಾಯಕರು ಬಿಜೆಪಿಯ ಋಣ ತೀರಿಸುವ ಕೆಲಸ ಮಾಡಬೇಕು. ನಾನಿನ್ನೂ ಗಟ್ಟಿ ಇದ್ದೇನೆ. ರಾಜ್ಯಾದ್ಯಂತ ಓಡಾಡಿ ಇವರ ಬಣ್ಣ ಬಯಲು ಮಾಡ್ತೀನಿ ಎಂದು ಎಚ್ಚರಿಸಿದರು. ಕಾರ್ಯಕರ್ತರು ನಮ್ಮ ಜತೆ ಇದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತೀವಿ ಎಂದು ಪರೋಕ್ಷವಾಗಿ ಸವದಿ ಹಾಗೂ ಶೆಟ್ಟರ್​ಗೆ ಸವಾಲು ಹಾಕಿದರು.

    ವೀರಶೈವ ಲಿಂಗಾಯತ ಒಡೆಯಲು ಮುಂದಾಗಿದ್ದರು
    ಸೂಕ್ತ ಅಧ್ಯಯನ ನಡೆಸಿ ‌ಬಿಜೆಪಿ ಎಲ್ಲರಿಗೂ‌ ನ್ಯಾಯ ಒದಗಿಸಿದೆ. ದಶಕಗಳ ಕಾಲದ ಮೀಸಲಾತು ಬೇಡಿಕೆ ಈಡೇರಿಸಿದ್ದೇವೆ. ಮೀಸಲಾತಿ ಬದಲಾವಣೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದೇವೆ. ಕೇಂದ್ರ,‌ ರಾಜ್ಯ‌ ನಾಯಕರ ಶ್ರಮದಿಂದ ಮೀಸಲಾತಿ ಕಲ್ಪಿಸಲಾಗಿದೆ. ಕಾಂಗ್ರೆಸ್‌ ವೀರಶೈವ ಲಿಂಗಾಯತ ಒಡೆಯಲು ಮುಂದಾಗಿದ್ದರು ಎಂದು ಕಾಂಗ್ರೆಸ್​ ವಿರುದ್ಧ ಗುಡುಗಿದರು.

    ಮೆಚ್ಚಿಸಲು ಮಾತನಾಡೋದಿಲ್ಲ
    ರಘುಪತಿ ಭಟ್, ಅಂಗಾರ ಅವರಿಗೆ ಅಭಿನಂದನೆಗಳು. ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ನಾನು‌ ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಲೋಕಸಭೆಯಲ್ಲಿ 25 ಸೀಟ್‌ ಗೆಲ್ತೇವೆ ಅಂತಾ ಹೇಳಿದ್ದೆ ಅದರಂತೆ‌ ಗೆದ್ದೆವು. ನಾನು ಎಂದೂ ಮೆಚ್ಚಿಸಲು ಮಾತನಾಡೋದಿಲ್ಲ. ಯಾವ ಶಕ್ತಿಯೂ ಬಿಜೆಪಿ ಅಧಿಕಾರಕ್ಕೆ ಬರೋದನ್ನ ತಡೆಯೋಕೆ‌ ಆಗಲ್ಲ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮನೆಯಲ್ಲಿ ಯಾರನ್ನಾದರೂ ಹೇಳಿ‌ ಅವರಿಗೆ ಟಿಕೆಟ್ ಕೊಡ್ತೇವೆ ಎಂದು ಕೇಳಿದೆವು ಅಥವಾ ಅಥವಾ ಕೇಂದ್ರದಲ್ಲಿ ಮಂತ್ರಿ ಮಾಡ್ತೇವೆ ಎಂದೆವು. ಯಾವುದಕ್ಕೂ ಒಪ್ಪಿಲ್ಲ. ಆ‌ಭಾಗದ‌ ಜನರು ಎಂದೂ ಅವರನ್ನು ಕ್ಷಮಿಸಲ್ಲ ಎಂದರು.

    ಕಾಂಗ್ರೆಸ್ ಹೇಳಿಕೆ ರಾಜಕೀಯ ಪ್ರೇರಿತ
    ಸುರೇಶ್ ಕುಮಾರ್ ಹಾಗೂ ಶೆಟ್ಟರ್ ಇಬ್ಬರಿಗೂ ಒಂದೇ ವಯಸ್ಸು. ಆದ್ರೆ ಸುರೇಶ್ ಕುಮಾರ್ ಅವರಿಗೆ ಟಿಕೆಟ್ ಸಿಗುತ್ತೆ, ಶೆಟ್ಟರ್​ಗೆ ಟಿಕೆಟ್ ತಪ್ಪುತ್ತೆ ಯಾಕೆ? ಟಿಕೆಟ್ ‌ನೀಡುವಲ್ಲಿ ಲಿಂಗಾಯತರ ಕಡೆಗಣನೆ ಆಗಿದೆಯಾ ಎಂಬ ಪ್ರಶ್ನೆ ಉತ್ತರಿಸಿದ ಬಿಎಸ್​ವೈ, ಇದಕ್ಕೆಲ್ಲ ಬೆಲೆ‌ಕೊಡುವ ಅಗತ್ಯವಿಲ್ಲ. ಸ್ವ ಇಚ್ಚೆಯಿಂದ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಂತ ನಾನು ಈಗಾಗಲೇ ವೀರಶೈವ ಲಿಂಗಾಯತರಿಗೆ‌ ಹೇಳಿದ್ದೇ‌ನೆ. ಈ ವಿಚಾರದಲ್ಲಿ ಕಾಂಗ್ರೆಸ್ ಅವರ ಹೇಳಿಕೆ ರಾಜಕೀಯ ಪ್ರೇರಿತ ಎಂದು ಹೇಳಿದರು.

    ಇದನ್ನೂ ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

    ಯಾವ ಅನ್ಯಾಯವೂ ಮಾಡಿಲ್ಲ
    ಪಕ್ಷ ಬಿಟ್ಟವರು ಮತ್ತೆ ಬಿಜೆಪಿ ಕದ ತಟ್ಟಿದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್​ವೈ, ಮತ್ತೆ ಅದೇ ಸ್ಥಾನಮಾನ ಗೌರವದೊಂದಿಗೆ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇನೆ. ನಾನು ಸ್ವಾಗತ ಬಯಸುತ್ತೇನೆ ಎಂದರು. ಶೆಟ್ಟರ್ ಕಾಂಗ್ರೆಸ್ ಹೋಗ್ತಿದ್ದಾರೆ. ಪಕ್ಷ ಅವರಿಗೆ ಯಾವ ಅನ್ಯಾಯವೂ ಮಾಡಿಲ್ಲ. ನಿವೃತ್ತಿಯಾಗಿ ಅಂತ ಶೆಟ್ಟರ್ ಅವರಿಗೆ ಯಾರೂ ಹೇಳಿಲ್ಲ. ಯಾರೇ ಪಕ್ಷ ಬಿಟ್ರೂ ನಮಗೆ ಸಮಸ್ಯೆ ಆಗಲ್ಲ ಎಂದು ಬಿಎಸ್​ವೈ ತಿಳಿಸಿದರು.

    ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣ: ಆಂಧ್ರ ಸಿಎಂ ಜಗನ್ ರೆಡ್ಡಿ ಚಿಕ್ಕಪ್ಪ ಬಂಧನ

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts