More

    ಸಂಪುಟ ವಿಸ್ತರಣೆಯಲ್ಲೂ “ವಿ” ಗುರುತು ತೋರಿದ ಬಿಎಸ್​ವೈ! ಇದು ಬೊಮ್ಮಾಯಿ ಸಂಪುಟದ ಇನ್​ಸೈಡ್​ ಸ್ಟೋರಿ

    ಒಂದು ವಾರದ ಸರ್ಕಸ್ ನಂತರ ಕೊನೆಗೂ ರಾಜ್ಯ ಸಂಪುಟ ವಿಸ್ತರಣೆ ಆಗಿದೆ. ಬೊಮ್ಮಾಯಿ ಸಂಪುಟಕ್ಕೆ 29 ಸದಸ್ಯರ ಹೊಸ ಬಲ ಸಿಕ್ಕಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದ್ರೆ, ಸಿಎಂ ಸೀಟ್​ಗೆ ಆಪ್ತನನ್ನ ಕೂರಿಸಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಯಲ್ಲೂ “ವಿ” ಗುರುತು (ವಿಜಯದ ಸಂಕೇತ) ತೋರಿದ್ದಾರೆ. ಬಹುತೇಕ ತಾವು ಹೊಂದಿದ್ದ ಸಂಪುಟವನ್ನೇ ಮುಂದುವರಿಸುವಂತೆ ನೋಡಿಕೊಂಡ ಬಿಎಸ್​ವೈ, ತಮ್ಮ ವಿರುದ್ಧ ಬಂಡೆದ್ದ ಅತೃಪ್ತರಿಗೂ ಶಾಕ್ ಕೊಟ್ಟಿದ್ದಾರೆ.

    ಕೊನೆಗೂ ಸಚಿವ ಸಂಪುಟ ಪ್ರಮಾಣ ವಚನ!
    ಕೊನೆಗೂ ಬೊಮ್ಮಾಯಿ ಸರ್ಕಾರ ಟೇಕ್ ಆಫ್ ಆಗಿದೆ. ಸಿಎಂ ಆಗಿ ಪದಗ್ರಹಣ ಮಾಡಿದ ಒಂದು ವಾರದಲ್ಲಿ ಬೊಮ್ಮಾಯಿಗೆ ಕ್ಯಾಬಿನೆಟ್ ಸಿಕ್ಕಿದೆ. 29 ಸದಸ್ಯರ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ರಾಜಭವನದಲ್ಲಿ ರಾಜ್ಯಪಾಲ ತಾವರ್​ಚಂದ್ ಗೆಲ್ಹೋಟ್ ನೂತನ ಸಂಪುಟ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಿದ್ದಾರೆ.

    ಇಲ್ಲಿ ಸಂಪುಟದ ವಿಶೇಷ ಅಂದ್ರೆ, ಬಿಎಸ್​ವೈ ಸಂಪುಟದಲ್ಲಿದ್ದ ಬಹುತೇಕರಿಗೆ ಸಿಕ್ಕಿದೆ ಪುನರಪಿ ಅವಕಾಶಂ.! ಹೊಸ ಚಿಗುರು..ಹಳೇ ಬೇರು ಎಂಬಂತಹ ಸಮಭಾವ ಹೊಂದಿರೋದು ಬಸವರಾಜ ಬೊಮ್ಮಾಯಿ ಸಂಪುಟ ಸ್ಪೆಷಲ್! ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಎಂದ್ರೆ, ಪುತ್ರ ಬಿವೈ ವಿಜಯೇಂದ್ರಗೆ ಸಚಿವ ಸ್ಥಾನ ಸಿಗದೇ ಹಿನ್ನಡೆ ಅನುಭವಿಸಿದರೂ, ಶತ್ರುಗಳನ್ನ ಸಂಪುಟಕ್ಕೆ ಎಂಟ್ರಿ ಕೊಡದಂತೆ ತಡೆಗೋಡೆ ಕಟ್ಟಿದ್ದಾರೆ ಯಡಿಯೂರಪ್ಪ. ಈ ಮುಖಾಂತರ ಈ ಸಲ ಸೋತು ಗೆದ್ದಿದ್ದಾರೆ ರಾಜಾಹುಲಿ ಬಿಎಸ್​ವೈ!

    ಹೌದು. ವಯಸ್ಸಿನ ಕಾರಣದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಎಸ್ ಯಡಿಯೂರಪ್ಪ, ಆನಂತರವೂ ಪಕ್ಷದಲ್ಲಿನ ತಮ್ಮ ಹಿಡಿತ ಎಂಥದ್ದು ಅನ್ನೋದನ್ನ ಎರಡು ಬಾರಿ ನಿರೂಪಿಸಿದ್ದಾರೆ. ಯಡಿಯೂರಪ್ಪರಿಂದ ತೆರವಾದ ಸಿಎಂ ಸ್ಥಾನಕ್ಕೆ ತಮ್ಮ ಪರಮಾಪ್ತ ಬಸವರಾಜ ಬೊಮ್ಮಾಯಿರನ್ನೇ ಕೂರಿಸೋದರಲ್ಲಿ ಸಕ್ಸಸ್ ಆದ ಬಿಎಸ್​ವೈ, ಇದೀಗ ಎರಡನೇ ಯುದ್ಧದಲ್ಲೂ ವಿಜಯದ ನಗೆ ಬೀರಿದ್ದಾರೆ. ತಮ್ಮ ಜೊತೆ ಇದ್ದ ಸಂಪುಟ ಸದಸ್ಯರಲ್ಲಿ ಬಹುತೇಕರಿಗೆ ಮತ್ತೆ ಚಾನ್ಸ್ ಸಿಗುವಂತೆ ನೋಡಿಕೊಂಡಿದ್ದಾರೆ ಮಾತಿಗೆ ತಪ್ಪದ ನಾಯಕ ಬಿಎಸ್​ ಯಡಿಯೂರಪ್ಪ. ಇದಲ್ಲದೇ, ತಮ್ಮ ಆಪ್ತರಿಗೆ, ಬಹುತೇಕ ವಲಸಿಗರಿಗೆ ಅವಕಾಶ ಸಿಗುವಂತೆ ಮಾಡಿದ್ದಾರೆ ರಾಜಾಹುಲಿ.

    ಬಿಎಸ್​ವೈ ಸಂಪುಟದ 23 ಮಂದಿಗೆ ಚಾನ್ಸ್!
    ಇನ್ನ, ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ ಬೊಮ್ಮಾಯಿ ಸೇರಿದಂತೆ ಒಟ್ಟು 24 ಸದಸ್ಯರು ಹೊಸ ಕ್ಯಾಬಿನೆಟ್​​ನಲ್ಲಿದ್ದಾರೆ. ಸಿಎಂ ಬೊಮ್ಮಾಯಿ ಹೊರತುಪಡಿಸಿದ್ರೆ 23 ಹಳಬರಿಗೆ ನೂತನ ಸಂಪುಟದಲ್ಲಿ ಮತ್ತೆ ಅವಕಾಶ ಸಿಕ್ಕಿದೆ. ಇಲ್ಲಿ ಸರ್ಕಾರರಚನೆಗೆ ಕಾರಣರಾದ ವಲಸಿ ಗರಿಗೆ, ಸಂಘನಿಷ್ಠರು, ದಿಲ್ಲಿ ನಿಷ್ಠರು, ಬಿಎಸ್ ಯಡಿಯೂರಪ್ಪ ಬೆಂಬಲಿಗರು..ಹೀಗೆ ಎಲ್ಲಾ ಆಯಾಮಗಳಲ್ಲೂ ಹೈಕಮಾಂಡ್ ನೋಟ ಬೀರಿದೆ.

    ಆರು ಹೊಸ ತಲೆಗಳ ಸಂಪುಟ ಎಂಟ್ರಿ
    7 ದಿನಗಳ ಕಾಲ ಎಲ್ಲವನ್ನೂ ತೂಗಿ ಫೈನಲಿ ಕ್ಯಾಬಿನೆಟ್​ ರಚನೆಗೆ ಅವಕಾಶಕೊಟ್ಟ ಬಿಜೆಪಿ ಹೈಕಮಾಂಡ್, ಹೊಸ-ಹಳೇ ತಲೆಗಳ ಮಿಶ್ರಣ ಮಾಡಿದೆ. ಸಂಘನಿಷ್ಠ, ಪಕ್ಷ ನಿಷ್ಠ ಕೋಟಾದಲ್ಲಿ ಅರಗ ಜ್ಞಾನೇಂದ್ರ ಹಾಗೂ ಕಾರ್ಕಳ ಶಾಸಕರಿಗೆ ಹೈ ಮನ್ನಣೆ ಕೊಟ್ಟಿದೆ. ಇನ್ನ, ಪಕ್ಷ ಹಾಗೂ ಸಂಘದ ಹಿರಿಯರ ಆಶೀರ್ವಾದದಿಂದ ಬಿಸಿ ನಾಗೇಶ್​​ಗೆ ಕೂಡ ಸಚಿವ ಸ್ಥಾನ ಸಿಕ್ಕಿದೆ. ಇನ್ನುಳಿದಂತೆ ವಲಸಿಗ ಕೋಟಾದಲ್ಲಿ ಬಾಕಿ ಉಳಿದಿದ್ದ ರಾಜರಾಜೇಶ್ವರಿ ಕ್ಷೇತ್ರದ ಶಾಸಕರಿಗೆ ಕೊನೆಗೂ ಲಕ್ ಖುಲಾಯಿಸಿದೆ. ಇನ್ನ, ಹಾಲಪ್ಪ ಆಚಾರ್ ಪಕ್ಷನಿಷ್ಠೆ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಸೇರ್ಪಡೆಗೆ ಬೇರೆಯದ್ದೇ ಕಾರಣ ಇದೆ. ಪಂಚಮಸಾಲಿ ಸಮುದಾಯದ ಮುನೇನಕೊಪ್ಪ ಪರ ಬಿಎಸ್​ವೈ, ಶೆಟ್ಟರ್ ಇಬ್ಬರೂ ಬ್ಯಾಟ್ ಬೀಸಿದ್ದು ಅದೃಷ್ಟ ತಂದಿದೆ.

    ಹಳಬರಲ್ಲಿ ಏಳು ಮಂದಿಗೆ ಕೊಕ್!
    ಸದ್ಯ ಹಿರಿಯ ನಾಯಕರಲ್ಲಿ ಸಂಪುಟಕ್ಕೆ ಎಂಟ್ರಿ ಕೊಟ್ಟಿರೋದು ಕೆಎಸ್ ಈಶ್ವರಪ್ಪ ಮಾತ್ರ. ಇನ್ನುಳಿದಂತೆ ಏಳು ಮಂದಿ ಬೊಮ್ಮಾಯಿ ಸಂಪುಟ ದಲ್ಲಿ ಸ್ಥಾನ ಪಡೆದಿಲ್ಲ. ಸಂಪುಟದಿಂದ ಡ್ರಾಪ್ ಆದವರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಪುಟದಿಂದ ಸ್ವಯಂ ಆಗಿ ವಿಆರ್​ಎಸ್​​ ತೆಗೆದುಕೊಂಡ್ರೆ, ಮತ್ತೋರ್ವ ಹಿರಿಯ ನಾಯಕ ಸುರೇಶ್​ಕುಮಾರ್​ಗೆ ಪಕ್ಷವೇ ರೆಸ್ಟ್ ಕೊಟ್ಟಿದೆ. ಇನ್ನುಳಿದಂತೆ ಪರೀಕ್ಷೆ ಬರೆದಿದ್ದೇನೆ ಅಂತಾ ಬಂಡಾಯ ಸಾರಿದ ಚನ್ನಪಟ್ಟಣದ ಸೈನಿಕನಿಗೆ ಕಮಲ ಎಕ್ಸಾಂ ಬೋರ್ಡ್​ ಫೇಲ್ ಅಂತಾ ರಿಸಲ್ಟ್​ ಅನೌನ್ಸ್ ಮಾಡಿದೆ.

    ಇನ್ನ, ಕಳೆದ ಸಲ ಸೋತರೂ ಅನಿರೀಕ್ಷಿತವಾಗಿ ಡಿಸಿಎಂ ಪದವಿ ಗಿಟ್ಟಿಸಿದ್ದ ಲಕ್ಷ್ಮಣ ಸವದಿಗೆ ಕೊಕ್ ಕೊಟ್ಟಿರೋದು ಅಚ್ಚರಿ ಮೂಡಿಸಿದೆ. ಮತ್ತೋರ್ವ ಹಿರಿಯ ಶಾಸಕ ಅರವಿಂದ್​ ಲಿಂಬಾವಳಿ ಸಚಿವಾಕಾಂಕ್ಷೆಗೆ ಲಿಂಬೆ ಹುಳಿ ಹಿಂಡಲಾಗಿದೆ. ಹಾಗೆಯೇ ಆಪರೇಷನ್ ಆಪ ತ್ಬಾಂಧವ ಕೋಟಾದಲ್ಲಿ ಈ ಹಿಂದೆ ಸಚಿವರಾಗಿದ್ದ ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್​​ ಸಚಿವ ಸಂಪುಟ ಜಂಗುಳಿಯಲ್ಲಿ ಒಳ ತೂರಲಾಗಿಲ್ಲ. ತಮ್ಮನ್ನ ನಂಬಿಬಂದ ವಲಸಿಗರನ್ನ ಕೂಡ ಕೈಹಿಡಿಯೋದನ್ನ ಯಡಿಯೂರಪ್ಪ ಮರೆತಿಲ್ಲ. 10 ಮಂದಿಗೆ ಸಚಿವ ಸ್ಥಾನ ದೊರಕಿಸಿಕೊಡು ವಲ್ಲಿ ಬಿಎಸ್​ವೈ ಸಫಲರಾಗಿದ್ದಾರೆ. ವಲಸಿಗರಲ್ಲಿ ಇಬ್ಬರನ್ನ ತೆಗೆದು ರಾಜರಾಜೇಶ್ವರಿನಗರ ಶಾಸಕರಿಗೆ ಮಂತ್ರಿಗಿರಿ ಕೊಡಲಾಗಿದೆ. ಈ ಮೂಲಕ ಆಪರೇಷನ್​​ ಬಾಂಧವರಾದ ಎಚ್​​ವಿಶ್ವನಾಥ್, ಮಹೇಶ್ ಕುಮಟಳ್ಳಿ ಹೊರತುಪಡಿಸಿದ್ರೆ ಉಳಿದೆಲ್ಲರಿಗೂ ಸಚಿವಸ್ಥಾನ ಸಿಕ್ಕಂ ತಾಗಿದೆ. ಎಚ್​​ವಿಶ್ವನಾಥ್ ಸೇರ್ಪಡೆಗೆ ಕೋರ್ಟ್​ ಆದೇಶದ ಕಾನೂನಾತ್ಮಕ ಅಡಚಣೆ ಇದೆ.

    ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಾತಿವಾರು, ಪ್ರಾಂತ್ಯವಾರು, ಸಂಘ, ಪಕ್ಷ, ಬಿಎಸ್​ವೈ..ಹೀಗೆ ಎಲ್ಲಾ ಕೋಟಾಗಳ ಮಾನದಂಡಗಳನ್ನೂ ಪರಿಗಣಿಸಿರೋದು ರಾಚುತ್ತಿದೆ. ಈಸಲವೂ ಕ್ಯಾಬಿನೆಟ್​​ನಲ್ಲಿ ಲಿಂಗಾಯತರಿಗೆ 8 ಸ್ಥಾನ ನೀಡೋ ಮೂಲಕ ಸಿಂಹಪಾಲು ದೊರೆತಿದೆ. ಇನ್ನ, 7 ಒಕ್ಕಲಿಗರು, 7 ಒಬಿಸಿ, ಮೂವರು ದಲಿತರು, ಇಬ್ಬರು ಬ್ರಾಹ್ಮಣರು, ಎಸ್​ಟಿ, ರಜಪೂತ ಹಾಗೂ ರೆಡ್ಡಿ ಸಮಾಜಗಳಿಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಜತೆಗೆ ಓರ್ವ ಮಹಿಳೆಗೆ ಕೂಡ ಅವಕಾಶ ಕೊಡಲಾಗಿದೆ. ಹೀಗೆ ಬೊಮ್ಮಾಯಿ ಮೊದಲ ಸಂಪುಟ ವಿಸ್ತರಣೆಯಲ್ಲಿ ಸಮಭಾವ ಸಮಚಿತ್ತ ಸೂತ್ರ ಅನುಸರಿಸಲಾಗಿದೆ.

    ಹಾಗೆಯೇ ಕಳೆದ ಬಾರಿಯಂತೆ ಬೆಂಗಳೂರಿಗೆ ಗರಿಷ್ಠ 8 ಸ್ಥಾನ ಸ್ಥಾನ ಸಿಕ್ರೆ, ಮೈಸೂರು, ಕಲಬುರಗಿ, ದಾವಣಗೆರೆ, ಚಾಮರಾಜನಗರ, ಹಾಸನ, ರಾಮನಗರ, ಕೊಡಗು, ಕೋಲಾರ ಮುಂತಾದ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನ, ವಿಧಾನ ಪರಿಷತ್ ಸದಸ್ಯರಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಎಂಟಿಬಿ ನಾಗರಾಜ್ ಗೆ ಅವಕಾಶ ಲಭಿಸಿದೆ. ಹೀಗೆ ಎಲ್ಲಾ ಕೋನಗಳಿಂದಲೂ ಬೊಮ್ಮಾಯಿ ಸಂಪುಟ, ಸಿಎಂ ಆಯ್ಕೆ ವೇಳೆಯಲ್ಲೂ ತಮ್ಮ ಆಪ್ತನಿಗೇ ಒಲಿಯುವಂತೆ ಪ್ರಭಾವ ಬೀರಿದ ಬಿಎಸ್​ವೈಗೆ ತಮ್ಮ ಪುತ್ರ ವಿಜಯೇಂದ್ರರನ್ನ ಸಂಪುಟ ಬಸ್ ಹತ್ತಿಸೋಕೆ ಅಡ್ಡಿಯಾಗಿದ್ದು ಏನು? ನೋಡುವುದಾದರೆ, ಬೊಮ್ಮಾಯಿರನ್ನೇ ಸಿಎಂ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಬಿಎಸ್​ ಯಡಿಯೂರಪ್ಪ, ಇದೀಗ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಎಂಟ್ರಿ ಕೊಡಿಸೋಕೆ ಫೇಲ್ ಆಗಿದ್ದಾರೆ. ಇಲ್ಲಿ ವಿಜಯೇಂದ್ರ ಸಂಪುಟ ಸೇರದಂತೆ ದೊಡ್ಡ ಗೋಡೆಯನ್ನೇ ಕಟ್ಟಿದ ವಿರೋಧಿಗಳು, ಈ ಮೂಲಕ ಬಿಎಸ್​ವೈ ನಾಗಾಲೋಟಕ್ಕೆ ಬ್ರೇಕ್ ಒಡ್ಡಿದ್ದಾರೆ. ಹಿಂದಿನ ದಿನದವರೆಗೂ ಸಂಪುಟ ಲಿಸ್ಟ್​ನಲ್ಲಿ ಸ್ಥಾನ ಪಡೆದಿದ್ದ ವಿಜಯೇಂದ್ರಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ಹೇಗೆ? ಇದೇ ಇವತ್ತಿನ ಕುತೂಹಲ.

    ವಿಜಯೇಂದ್ರಗೆ ತಪ್ಪಿದ್ಹೇಗೆ ಗೊತ್ತಾ ಮಂತ್ರಿಗಿರಿ?
    ಇಡೀ ರಾಜ್ಯದ ಜನರ ಕುತೂಹಲ ಕೆರಳಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಗಿದಿದೆ. ಮಂತ್ರಿ ಕನಸು ನನಸಾದ ಬೆನ್ನಲ್ಲೇ ಹೊಸ ಸೂಟ್ ತೊಟ್ಟ ಮಂದಿ ಗೂಟದ ಕಾರ್​ನಲ್ಲಿ ಕುಳಿತು ಸಂತಸಪಟ್ರೆ, ಕೊನೇ ಕ್ಷಣದಲ್ಲಿ ಬಸ್ ತಪ್ಪಿಸಿಕೊಂಡವರು ಅವರಿವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರಿಗೆ ಸಂತಸ..ಕೆಲವರಿಗೆ ದುಃಖ. ಇಲ್ಲಿ ಒಂದು ಪ್ರಮುಖ ಸಂಗತಿಯನ್ನ ಅವಲೋಕಸಿಬಹುದು. ಅದೆಂದ್ರೆ, ಇಲ್ಲಿ ಯಾರೇ ಆಟವಾಡಿದ್ರೂ ತಾನೇ ಸುಪ್ರೀಂ ಅನ್ನೋದನ್ನ ನಿರೂಪಿಸಿದೆ ಬಿಜೆಪಿ ಹೈಕಮಾಂಡ್! ಅಚ್ಚರಿಗಳಿಗೆ ಸಾಕ್ಷಿಯಾದ ಕಮಲ ಕಮ್ಯಾಂಡ್, ಇಲ್ಲೂ ಸೂತ್ರ ಕೈಲಿ ಹಿಡಿದು ತೊಗಲು ಬೊಂಬೆಯಾಟ ಆಡಿದೆ. ಇದಕ್ಕೆ ಉದಾಹರಣೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಮಂತ್ರಿಗಿರಿ ಸಿಗದಂತೆ ಕೈಯಾಡಿಸಿದೆ ಹೈಕಮಾಂಡ್.

    ಇಡೀ ಸಂಪುಟ ವಿಸ್ತರಣೆಯಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ರಾಜಾಹುಲಿ, ತಮ್ಮ ಪುತ್ರನಿಗೇ ಸಚಿವ ಸ್ಥಾನ ಕೊಡಿಸೋದರಲ್ಲಿ ವಿಫಲವಾದರೇ? ಇಂಥಾ ಪ್ರಶ್ನೆಯೊಂದು ಬಹಳಷ್ಟು ಜನರ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ವಾಸ್ತವವಾಗಿ ಹಿಂದಿನ ದಿನದವರೆಗೂ ಸಂಫುಟ ಲಿಸ್ಟ್​ನಲ್ಲಿತ್ತು ವಿಜಯೇಂದ್ರ ಹೆಸರು. ಆದ್ರೆ, ಕೊನೇ ಕ್ಷಣದಲ್ಲಿ ಜಸ್ಟ್ ಮಿಸ್ ಆಗಿದ್ಹೇಗೆ ಅಂತಾ ಅವಲೋಕಿಸಿದ್ರೆ ಕಾಣಸಿಗುತ್ತಿದೆ ಕಾಣದ ಕೈಗಳ ಚದುರಂಗದಾಟ. ವಿಜಯೇಂದ್ರ ರಾಜಕೀಯವಾಗಿ ಬೆಳೆಯೋದು ಕೆಲ ಬಿಜೆಪಿ ಹಿರಿಯ ನಾಯಕರಿಗೆ ಸುತಾರಾಂ ಇಷ್ಟವಿಲ್ಲ. ಎಲ್ಲಿ ವಿಜಯೇಂದ್ರಗೆ ಅವಕಾಶ ಕೊಟ್ರೆ, ಜನಬಲ ಹಾಗೂ ವರ್ಚಸ್ಸಿನೊಂದಿಗೆ ಬೇರೆಯವರನ್ನ ಮೀರಿ ಹೆಮ್ಮರವಾಗಿ ಬೆಳೆದು ನಿಲ್ಲೋದು ಶತಸಿದ್ಧ. ಹೀಗಾದ್ರೆ ಭವಿಷ್ಯದಲ್ಲಿ ತಮ್ಮ ಆಟ ನಡೆಯೋಲ್ಲ ಅನ್ನೋದು ಈ ಕೇಸರಿ ವಂಗಿಮಾಗಧರ ತೊಳಲಾಟ. ಹೀಗಾಗಿ ಈಗಾಗ್ಲೇ ತಮ್ಮದೇ ಆದ ವರ್ಚಸ್ಸು ಬೆಳೆಸಿ ಕೊಂಡಿರೋ ಬಿಎಸ್​ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಅಡ್ಡಗಾಲು ಹಾಕಿದ್ದಾರೆ ಈ ವಿಘ್ನಸಂತೋಷಿಗಳು.!

    ಇಲ್ಲಿ ಇನ್ನೊಂದು ಟಿಟ್ ಫಾರ್ ಟ್ಯಾಟ್ ಗೇಮ್ ನಡೆದಿದೆ. ದಿಲ್ಲಿ ಮಟ್ಟದಲ್ಲಿ ಪ್ರಭಾವಶಾಲಿಗಳಾದ ಕೆಲವರು, ಇತ್ತ ಮಗುವನ್ನೂ ಚಿವುಟಿ ತೊಟ್ಟಿಲು ತೂಗೋ ಆಟ ಆಡ್ತಿರೋದು ಗೊತ್ತೇ ಇದೆ. ಈಗ ಬೊಮ್ಮಾಯಿ ಸಂಪುಟದಲ್ಲೂ ಅತೃಪ್ತರ ಸೇರ್ಪಡೆ ಮೂಲಕ ಬಿಎಸ್​ವೈ ಓಟಕ್ಕೆ ಬ್ರೇಕ್ ಅಳವಡಿಸೋಕೆ ಇವೇ ಶಕ್ತಿಗಳು ಭಾರಿ ಸರ್ಕಸ್ ನಡೆಸಿವೆ. ಆದ್ರೆ, ಇಲ್ಲಿ ಹಠಕ್ಕೆ ಬಿದ್ದ ಯಡಿಯೂರಪ್ಪ, ತಮಗೆ ಇನ್ನಿಲ್ಲದ ಕಾಟ ಕೊಟ್ಟ ಅತೃಪ್ತರಿಗೆ ಯಾವುದೇ ಕಾರಣಕ್ಕೂ ಸಂಪುಟದಲ್ಲಿ ಚಾನ್ಸ್ ಕೊಡಬಾರದು ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೂ ದೆಹಲಿಯಲ್ಲಿ ಪ್ರಭಾವ ಬೆಳೆಸಿಕೊಂಡ ಕೆಲ ಅತೃಪ್ತರು, ಇನ್ನೇನು ಸಂಪುಟದಲ್ಲಿ ಚಾನ್ಸ್ ಪಡೆದೇಬಿಟ್ಟರು ಅನ್ನುವಾಗ ಅಲರ್ಟ್​ ಆದರು ಅನುಭವೀ ಬಿಎಸ್​ವೈ. ಈ ಕಡೆಯಿಂದ ವಿಜಯೇಂದ್ರಗೂ ಕೊಡಬೇಕು ಅಂತಾ ಚೆಕ್​ಮೇಟ್​ ಇಟ್ಟರು ಯಡಿಯೂರಪ್ಪ.

    ಇಂಥಾ ಸಮಯದಲ್ಲಿ ನಿಜಕ್ಕೂ ಸಂದಿಗ್ನತೆಗೆ ಸಿಲುಕಿತ್ತು ಬಿಜೆಪಿ ಹೈಕಮಾಂಡ್. ಇಲ್ಲಿ ಮೇಕೆಗಳನ್ನ ಮುಂದೆ ಬಿಡೋ ಧಾವಂತದಲ್ಲಿ ಹುಲಿ ಒಳಹೊಕ್ಕೀತು ಎಂಬ ಭಯ ಕೆಲವರಲ್ಲಿ ಆವರಿಸಿದೆ. ವಿಜಯೇಂದ್ರ ಒಮ್ಮೆ ಎಂಟ್ರಿ ಕೊಟ್ರೆ, ಸೆಂಟ್ರಲ್ ಆಫ್ ಅಟ್ರ್ಯಾಕ್ಷನ್ ಆಗೋದು ಅವರೇ. ಇದರಿಂದ ತಾವೆಲ್ಲಿ ಸೈಡ್​ಲೈನ್ ಆಗಬೇಕಾದೀತು ಅಂತಾ ಆತಂಕಪಟ್ಟ ಈ ನಾಯಕರು ಹೈಕಮಾಂಡ್​​ ಬಳಿ ವಿಜಯೇಂದ್ರ ಓಟ ತಡೆ ಯೋಕೇ ಫಸ್ಟ್ ಫ್ರಿಫರೆನ್ಸ್​ ಕೊಡುವಂತೆ ಅಂಗಲಾಚಿದ್ದಾರೆ. ಇದರಂತೆ ಹೈಕಮಾಂಡ್​​ ಬಿಎಸ್​ವೈ ಮಾತಿಗೂ ಮನ್ನಣೆ ಕೊಟ್ಟು ಬಂಡುಕೋರರಿಗೆ ಮಿನಿಸ್ಟರ್​ಶಿಪ್ ನಿರಾಕರಿಸಿದೆ. ಜತೆಗೆ ವಿಜಯೇಂದ್ರರನ್ನೂ ತಡೆದಿದೆ.

    ಆದ್ರೂ ಯಡಿಯೂರಪ್ಪ ಅಷ್ಟು ಸುಲಭವಾಗಿ ತಲೆಬಾಗಿಲ್ಲ. ಕೊನೆಗೆ ಎಲ್ಲಿ ಎಡವಟ್ಟಾದೀತು ಅಂತಾ ಎಚ್ಚೆತ್ತ ಬಿಜೆಪಿ ಹೈಕಮಾಂಡ್​ ಬಿಎಸ್​ವೈಗೆ ಅಭಯವೊಂದನ್ನ ನೀಡಿದೆ. ಇನ್ನೂ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಬಿಡಲಾಗಿದೆ. ನೀವು ಪಕ್ಷ ಸಂಘಟನೆಯತ್ತ ಚಿತ್ತ ಹರಿಸಿ. ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಿ. ಮುಂದಿನ ದಿನಗಳಲ್ಲಿ ವಿಜಯೇಂದ್ರಗೆ ಪಕ್ಷದಲ್ಲೂ ಉನ್ನತ ಸ್ಥಾನಮಾನ ಗ್ಯಾರೆಂಟಿ ಅಂತಾ ಪ್ರಾಮಿಸ್ ಮಾಡಿದ ಬಿಜೆಪಿ ಹೈಕಮಾಂಡ್. ಬಿಜೆಪಿ ವರಿಷ್ಠರ ಮೇಲೆ ವಿಶ್ವಾಸವಿಟ್ಟ ಬಿಎಸ್ ಯಡಿ ಯೂರಪ್ಪ ಓಕೆ ಎಂದಿದ್ದಾರೆ. ಆದ್ರೂ ಬಿಎಸ್​ವೈ ಸುಮ್ಮನಾಗೋ ಜಾಯಮಾನದ ನಾಯಕರಲ್ಲ..!

    ಒಟ್ಟಾರೆ, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ಬಳಿಕವೂ ಹೊಸ ಸಂಪುಟ ವಿಸ್ತರಣೆಯಲ್ಲಿ ತಮ್ಮ ಶಕ್ತಿ ಏನೆಂಬುದನ್ನ ನಿರೂಪಿಸಿ ದ್ದಾರೆ. ವಿಜಯೇಂದ್ರಗೆ ಸಚಿವ ಸ್ಥಾನ ಕೈತಪ್ಪಿದರೂ, ಎದುರಾಳಿಗಳು ಮೇಲೇಳದಂತೆ ಬಿಎಸ್​ವೈ ಹೊಡೆತ ಕೊಟ್ಟಿದ್ದಾರೆ . ಪರೀಕ್ಷೆ ಬರೆದ ರೆಬೆಲ್ ಸೈನಿಕನ್ನ ಖುದ್ದು ಎಕ್ಸಾಂ ಬೋರ್ಡೇ ಫೇಲ್ ಮಾಡಿದೆ. ಗಡ್ಡಬಿಟ್ಟು ಉನ್ನತ ಸ್ಥಾನ ಪಡೆಯೋಕೆ ಯತ್ನ ನಡೆಸಿದ ಶಾಸಕರನ್ನೂ ಹೈ ಸೀರಿಯಸ್ ಆಗಿ ಪರಿಗಣಿಸಿಲ್ಲ. ಬೆಲ್ಲದ ನಿರೀಕ್ಷೆಯಲ್ಲಿದ್ದ ಅತೃಪ್ತ ಶಾಸಕರಿಗೂ ಬೇವಿನ ಕಹಿ ಲಭಿಸಿದೆ. ಹೀಗೆ ಕಂದಕ ಕೊರೆದ ಭಿನ್ನರಿಗೆ ತಾವೇ ತೋಡಿದ ಖೆಡ್ಡಾಗೆ ಬೀಳುವಂತೆ ಮಾಡಿದ್ದಾರೆ ಅನುಭವೀ ಬಿಎಸ್​ಯಡಿಯೂರಪ್ಪ.

    ಸಂಪುಟ ರಚನೆ ಸಮಸ್ಯೆ ದಾಟೋದರಲ್ಲಿ ಬೊಮ್ಮಾಯಿ ಪಾಸ್ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಅತೃಪ್ತಿ ಶಮನಕ್ಕೂ ಕೈಹಾಕಿರೋ ಬೊಮ್ಮಾಯಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯೋ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ, ಭಿನ್ನಮತದ ಕಂದಕ ಸೃಷ್ಟಿಸಿದ ಮಂದಿಗೆ ತಾವೇ ತೋಡಿದ ಖೆಡ್ಡಾಗೆ ಬೀಳುವಂತೆ ಮಾಡಿದ್ದಾರೆ ರಾಜಾಹುಲಿ.

    ಬೊಮ್ಮಾಯಿಗೆ ಈಗ ಸಂಪುಟ ಪವರ್ ಬಂದಿದೆ. ಒಂದು ವಾತ ಕಾಲ ದೆಹಲಿ-ಬೆಂಗಳೂರು ರೌಂಡ್ಸ್ ಹೊಡೆದ ಬೊಮ್ಮಾಯಿ, ಹೈ ಕಮಾಂಡ್ ಮನವೊಲಿಸಿ ಶೀಘ್ರವೇ ಸಂಪುಟ ವಿಸ್ತರಣೆ ಆಗುವಂತೆ ನಿಗಾ ವಹಿಸಿದ್ದಾರೆ. ಹೀಗೆ ಆರಂಭದಲ್ಲೇ ಜಾಣ್ಮೆ ಪ್ರದರ್ಶಿಸಿರೋ ಬೊಮ್ಮಾಯಿಗೆ ಈಗ ಜನಪರ ಸರ್ಕಾರ ನೀಡೋದೇ ಪ್ರಥಮ ಗುರಿ. ಸಂಪುಟ ವಿಸ್ತರಣೆ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ರಿಲೀಫ್ ಆಗಿದ್ದಾರೆ. ಇನ್ನ 2-3 ದಿನಗಳಲ್ಲಿ ಎಲ್ಲರಿಗೂ ಖಾತೆ ಹಂಚಿಕೆ ಮಾಡೋ ಬಗ್ಗೆ ಬೊಮ್ಮಾಯಿ ಇರಾದೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇಂಥದ್ದೇ ಖಾತೆ ಬೇಕು ಅಂತಾ ಯಾವುದೇ ಸಚಿವರು ಒತ್ತಡ ಹಾಕಿಲ್ಲ ಅಂತಾ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸಂಪುಟದಲ್ಲಿ ಸ್ಥಾನವಂಚಿತರಲ್ಲಿ ನಿರಾಸೆ ಆಗೋದು ಸಹಜ. ಸಚಿವ ಸಂಪುಟದಲ್ಲಿ ತಮಗೆ ಅವಕಾಶ ತಪ್ಪಿದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಜೆಪಿಯಲ್ಲೂ ಇದೇ ಬೆಳವಣಿಗೆ ನಡೆದಿರೋ ಮಧ್ಯೆಯೇ ಸಿಎಂ ಬೊಮ್ಮಾಯಿ ಸಚಿವ ಸ್ಥಾನ ವಂಚಿತ ಶಾಸಕರನ್ನ ಸಮಾಧಾನಪಡಿಸೋಕೆ ಮುಂದಾಗಿದ್ದಾರೆ. ಎಲ್ಲರನ್ನ ಒಟ್ಟಿಗೇ ಕರೆದೊಯ್ಯೋ ವಿಶ್ವಾಸದಲ್ಲಿ ಬೊಮ್ಮಾಯಿ ಇದ್ದಾರೆ. ಇದರ ಜತೆಜತೆಗೇ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ 13 ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕೊಡೋ ಅಭಯವನ್ನೂ ಬೊಮ್ಮಾಯಿ ನೀಡಿದ್ದಾರೆ. ಇನ್ನೊಂದೆಡೆ, ಸಂಪುಟದಲ್ಲಿ ಸ್ಥಾನ ಪಡೆದ ಸಚಿವರು ಹೊಸ ಜೋಷ್​​ನಲ್ಲಿದ್ದಾರೆ. ಸಿಎಂ ಯಾವುದೇ ಖಾತೆ ಕೊಟ್ರೂ ನಿಭಾಯಿಸೋ ಆಸಕ್ತಿ ತೋರಿದ್ದಾರೆ.

    ಒಟ್ಟಿನಲ್ಲಿ ತಾಳ್ಮೆ, ಕಾರ್ಯತಂತ್ರ, ಬದ್ಧತೆ ಮೂಲಕ ಬೊಮ್ಮಾಯಿ ಹೊಸ ಭರವಸೆ ಮೂಡಿಸಿದ್ದಾರೆ. ಬಿಎಸ್​ವೈ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡೋ ಕುರುಹನ್ನ ತೋರಿದ್ದಾರೆ ಬೊಮ್ಮಾಯಿ. ತಾಳ್ಮೆಯಿಂದ ದೆಹಲಿಯಲ್ಲಿ ವರಿಷ್ಠರ ಮನವೊಲಿಕೆ ಮಾಡಿದ ಬೊಮ್ಮಾಯಿ, ಮುಂದೆ ತಾವು ಯಾವ ರೀತಿ ಆಡಳಿತ ನಡೆಸ್ತೀನಿ ಅನ್ನೋದರ ಬಗ್ಗೆ ಹೆಜ್ಜೆ ಗುರುತು ಮೂಡಿಸಿದ್ದಾರೆ. ಬಿಎಸ್​ವೈ ನೆರಳಿನಲ್ಲಿ ಬೊಮ್ಮಾಯಿ, ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯೋ ವಿಶ್ವಾಸ ಮೂಡಿಸಿರೋದು ಸತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts