More

    ಸರ್ಕಾರದಿಂದ ಬಿಆರ್‌ಎಸ್ ಆಸ್ಪತ್ರೆ ನಿರ್ವಹಣೆ: ಉಸ್ತುವಾರಿ ಸಚಿವ ಬೊಮ್ಮಾಯಿ ಉಪಸ್ಥಿತಿಯ ಸಭೆಯಲ್ಲಿ ನಿರ್ಣಯ

    ಉಡುಪಿ: ನಗರದ ಬಿಆರ್‌ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರ ವಶಕ್ಕೆ ಪಡೆದು, ನಿರ್ವಹಣೆ ಮಾಡಲು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ಜಿಪಂ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಬಿಆರ್‌ಎಸ್ ಆಸ್ಪತ್ರೆಯನ್ನು ಸರ್ಕಾರವೇ ನಿರ್ವಹಿಸುವಂತೆ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ. ಅದರಂತೆ ಸಭೆಯಲ್ಲಿ ಕೈಗೊಂಡ ನಿರ್ಣಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಎಂದು ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲೆಯ ಕಡಲ್ಕೊರೆತ ಶಾಶ್ವತ ಕಾಮಗಾರಿಗಾಗಿ 100 ಕೋಟಿ ರೂ.ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ವರದಿ ಸಿದ್ಧವಪಡಿಸುವಂತೆಯೂ ಅವರು ಸೂಚಿಸಿದರು.

    3ನೇ ಅಲೆಗೆ ಮುನ್ನೆಚ್ಚರಿಕೆ ವಹಿಸಿ: ಕೋವಿಡ್ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ತಕ್ಷಣದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದರು. ತುರ್ತಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್, ವೆಂಟಿಲೇಟರ್ ಸಹಿತ 50 ಬೆಡ್‌ಗಳು ಸಿದ್ಧವಾಗಬೇಕು. ಜಿಲ್ಲಾದ್ಯಂತ ಮಕ್ಕಳ ಆರೋಗ್ಯ ಶಿಬಿರ ನಡೆಸಿ, ಪೌಷ್ಟಿಕಾಹಾರ ಕಡಿಮೆ ಇರುವ ಮಕ್ಕಳ ಪರಿಶೀಲನೆ ನಡೆಸಬೇಕು. ಸಮಸ್ಯೆ ಇರುವ ಮಕ್ಕಳನ್ನು ಆದ್ಯತೆ ಮೇರೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕು. ಗಂಭೀರ ಸ್ವರೂಪದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆಯುಷ್ಮಾನ್ ಭಾರತ್ ಯೋಜನೆಯೆಡಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಇದ್ದ ಕುಟುಂಬದವರಿಗೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
    ಶಾಸಕರಾದ ಸುನಿಲ್ ಕುಮಾರ್, ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಡಿಸಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ.ನವೀನ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಎಸ್‌ಪಿ ವಿಷ್ಣುವರ್ಧನ್ ಸಭೆಯಲ್ಲಿದ್ದರು.

    ಹೋಂ ಐಸೊಲೇಷನ್, ಸೀಲ್‌ಡೌನ್ ಬಗ್ಗೆ ಅಸಮಾಧಾನ
    ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕೈಗೊಂಡ ಬಗ್ಗೆ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಸಭೆಯಲ್ಲಿ ವಿವರಣೆ ನೀಡಿದರು. ಹೋಂ ಐಸೋಲೇಷನ್, ಮನೆ ಸೀಲ್‌ಡೌನ್ ಮಾಡುವ ಜಿಲ್ಲಾಡಳಿತ ಕ್ರಮದ ಬಗ್ಗೆ ಸಚಿವ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಮನೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದ್ದರೂ ಸುತ್ತಮುತ್ತ ಕಂಟೈನ್‌ಮೆಂಟ್ ಜೋನ್ ಮಾಡುವ ಮೂಲಕ ನಾಲ್ಕೈದು ಮನೆಗಳನ್ನಾದರೂ ಕಣ್ಗಾವಲಿನಲ್ಲಿರಿಸಬೇಕು. ಪಾಸಿಟಿವ್ ಬಂದವರನ್ನು ಕೋವಿಡ್ ಸೆಂಟರ್‌ನಲ್ಲಿಟ್ಟರೆ ಸೋಂಕು ಹಬ್ಬುವ ಪ್ರಮಾಣ ಕಡಿಮೆ. ಈ ರೀತಿ ಆರಂಭದಿಂದಲೇ ಮಾಡಿದ್ದರೆ ಎರಡು ವಾರಗಳ ಹಿಂದೆಯೇ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ಸಚಿವರು ಹೇಳಿದರು. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಬಗ್ಗೆ, ದಿನಕ್ಕೆ ಎರಡು ಸಲ ಅವರ ಆರೋಗ್ಯ ತಪಾಸಣೆ ಮಾಡುವ ಬಗ್ಗೆ ಸರಿಯಾದ ಯೋಜನೆ ರೂಪಿಸಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು.

    ಎಸ್‌ಡಿಆರ್‌ಎಫ್ ಕುಡ್ಲದಿಂದ ಉಡುಪಿಗೆ ಶಿಫ್ಟ್
    ಮಳೆ ವಿಕೋಪ ಪರಿಸ್ಥಿತಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿರುವ ಎಸ್‌ಡಿಆರ್‌ಎಫ್ ತಂಡವನ್ನು ಉಡುಪಿಗೆ ಸ್ಥಳಾಂತರಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಳೆಗಾಲದ ಅನಾಹುತ ತಡೆಯಲು ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಂಡು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಪರಿಹಾರ ನೀಡುವಾಗ ನಮ್ಮ ಮನೆ ಎಂಬ ಕಲ್ಪನೆಯಲ್ಲಿ ಕೆಲಸ ಮಾಡಬೇಕು. ಸಂಸತ್ರಸ್ತರಿಗೆ ಎರಡು ದಿನಗಳಲ್ಲಿ ಪರಿಹಾರ ನೀಡಬೇಕು. ವಿಳಂಬವಾದಲ್ಲಿ ಭ್ರಷ್ಟಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts