More

    9 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೇ ವಾಲ್ಮೀಕಿ ಜಯಂತಿ ಆಚರಣೆ

    9 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೇ ವಾಲ್ಮೀಕಿ ಜಯಂತಿ ಆಚರಣೆ
    ಚಿತ್ರದುರ್ಗ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿರುವ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ, ಹೋರಾಟ ಮುಂದುವರೆಯಲಿದೆ ಎಂದು ನಾಯಕ ಸಮುದಾಯದ ಹಾಗೂ ಬಹುಜನ ಸಮಾಜ ಪಾರ್ಟಿ ಮುಖಂಡರು ಗುರುವಾರ ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ತಿಳಿಸಿದರು.

    ನಾಯಕ ಸಮುದಾಯದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ,ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನದಲ್ಲಿ ಕಳೆದ 238 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ.

    ಆದ್ದರಿಂದ ಸರ್ಕಾರ ಆಯೋಜಿಸುವ ಶ್ರೀ ವಾಲ್ಮೀಕಿ ಜಯಂತಿ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಬಾರದೆಂದು ನಾಯಕ ಸಮುದಾಯದ ಯಾವೊಬ್ಬ ಜನಪ್ರತಿನಿಧಿಗಳಿಗೆ ಆಗ್ರಹಿಸುವುದಾಗಿ ಹೇಳಿದರು. ಅ.9 ರಂದು ಶ್ರೀಗಳ ನೇತೃತ್ವದಲ್ಲಿ ಉದ್ಯಾನದಲ್ಲೇ ಧರಣಿ ಜತೆ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಇದಕ್ಕಾಗಿ ನಾಡಿನ ಮೂಲೆ ಮೂಲೆಗಳಿಂದ ಸಮುದಾಯದ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ.

    ಇದು ನಿನ್ನೆ ಮೊನ್ನೆಯ ಹೋರಾಟವಲ್ಲ. 15 ವರ್ಷಗಳಿಂದ ನಡೆಸಲಾಗುತ್ತಿದ್ದು,ರಾಜ್ಯ ಸರ್ಕಾರ ಸ್ಪಂದಿಸದಿದ್ದಲ್ಲಿ ಕೇಂದ್ರವನ್ನು ಒತ್ತಾಯಿಸಿ ಹೊಸದಿಲ್ಲಿಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

    ಸಮುದಾಯದ ಮುಖಂಡ ಬಿ.ಕಾಂತರಾಜ್ ಮಾತನಾಡಿ,ಪರಿಶಿಷ್ಟ ಪಂಗಡಕ್ಕೆ ಹೊಸದಾಗಿ ಯಾವ ಸಮುದಾಯವನ್ನು ಸರ್ಕಾರ ಸೇರಿಸ ಬಾರದು. ಇದರ ವಿರುದ್ಧವಾಗಿ ತೀರ್ಮಾನಿಸಿದರೆ ಮೀಸಲಾತಿ ನೀಡುವ ಅಗತ್ಯವಿಲ್ಲವೆಂದರು. ಮುಖಂಡರಾದ ಡಿ.ಗೋಪಾಲಸ್ವಾಮಿ ನಾಯಕ,ಲಿಂಗವ್ವನಾಗತೀಹಳ್ಳಿ ತಿಪ್ಪೇಸ್ವಾಮಿ,ಕಾಟೀಹಳ್ಳಿ ಕರಿಯಪ್ಪ ಇದ್ದರು.

    ಸ್ವಾತಂತ್ರ್ಯ ಉದ್ಯಾನ
    ನಾಗಮೋಹನ್ ದಾಸ್ ಸಮಿತಿ ವರದಿ ಸಲ್ಲಿಸಿ ಎರಡು ವರ್ಷಗಳಾಗಿವೆ. ಸರ್ಕಾರ ಇನ್ನಾದರೂ ಎಚ್ಚೆತ್ತು ವರದಿ ಜಾರಿಗೊಳಿಸುವುದಾಗಿ ಘೋಷಿಸಿದರೆ, ಶ್ರೀ ವಾಲ್ಮೀಕಿ ಜಯಂತಿ ಹಾಗೂ ಬಿಎಸ್‌ಬಿ ಸಂಸ್ಥಾಪಕ ಕಾನ್ಶಿರಾಮ್ ಪರಿನಿಬ್ಬಾಣ ದಿನವನ್ನು ಆಚರಿಸುತ್ತೇವೆ.

    ಇಲ್ಲದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದ್ದು,ರಾಜ್ಯದ ಪ್ರತಿ ಹಳ್ಳಿಯಲ್ಲೂ ಜನರನ್ನು ಜಾಗೃತಗೊಳಿಸುತ್ತೇವೆ ಎಂದು ಬಿಎಸ್‌ಪಿ ರಾಜ್ಯಪ್ರಧಾನ ಕಾರ‌್ಯದರ್ಶಿ ಅಶೋಕ ಚಕ್ರವರ್ತಿ ಹೇಳಿದರು.

    ಎಸ್‌ಸಿ,ಎಸ್‌ಟಿ ಸಮುದಾಯಗಳ ಸ್ವಾಮೀಜಿಗಳು,ಸಮುದಾಯದವರು ಒಂದೆಡೆ ಸೇರಿ ಪ್ರತಿಭಟಿಸುತ್ತಿದ್ದು,ನಮ್ಮ ಶಕ್ತಿ ಪ್ರದರ್ಶಿಸಲಿದ್ದೇವೆ. ಕಾನ್ಶಿರಾಮ್ ಅವರ ಪರಿನಿಬ್ಬಾಣ ದಿನವನ್ನೂ ಸ್ವಾತಂತ್ರೃ ಉದ್ಯಾನದಲ್ಲೇ ಆಚರಿಸುವುದಾಗಿ ತಿಳಿಸಿದರು.

    ರಾಜ್ಯ ಘಟಕದ ಪ್ರಧಾನ ಕಾರ‌್ಯದರ್ಶಿ ಡಾ.ಬಿ.ಗಿರೀಶ್,ಮುಖಂಡರಾದ ಕೆ.ಎನ್.ದೊಡ್ಡೆಟ್ಟಪ್ಪ,ಕೆ.ತಿಮ್ಮಪ್ಪ,ಪ್ರಕಾಶ್,ಆಕಾಶ್,ರಂಗಸ್ವಾಮಿ, ಚಂದ್ರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts