More

    ಬಡವರಿಗೂ ಆರೋಗ್ಯದ ಹಕ್ಕು ನೀಡಿದ ಆಯುಷ್ಮಾನ್ ಭಾರತ್

    ಈ ಹಿಂದೆ ಸಾಮಾನ್ಯ ಜನರು ಹೆಚ್ಚು ವೆಚ್ಚದ ಚಿಕಿತ್ಸೆಗಳನ್ನು ಪಡೆಯಬೇಕೆಂದರೆ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದರು. ಹೆಚ್ಚು ಖರ್ಚಿನ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆೆ ಹೋಗಲು ಕೂಡ ಬಡ ಕುಟುಂಬಗಳು ಹಿಂಜರಿಯುತ್ತಿದ್ದವು. ಆದರೆ, ಆಯುಷ್ಮಾನ್ ಭಾರತ್ ವಿಮೆಯಿಂದಾಗಿ ಸರ್ಕಾರಿ ಮಾತ್ರವಲ್ಲದೆ, ಖಾಸಗಿಯಲ್ಲೂ ಉಚಿತವಾಗಿ ಚಿಕಿತ್ಸೆ ಪಡೆಯುವಂತಾಗಿದೆ.

    ಬಡವರಿಗೂ ಆರೋಗ್ಯದ ಹಕ್ಕು ನೀಡಿದ ಆಯುಷ್ಮಾನ್ ಭಾರತ್‘ಪ್ರಧಾನ ಸೇವಕ’ರಾಗಿ ಎಂಟು ವರ್ಷಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿಯವರು, ತಮ್ಮ ಆಡಳಿತಾವಧಿಯಲ್ಲಿ ತಂದ ಅತ್ಯಂತ ಜನಪ್ರಿಯ ಯೋಜನೆ ಆಯುಷ್ಮಾನ್ ಭಾರತ್. ದೇಶದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಭರವಸೆ ನೀಡುವ ಈ ಯೋಜನೆ, ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ವಿಮೆ ಕಾರ್ಯಕ್ರಮ ಎಂಬುದು ಹೆಗ್ಗಳಿಕೆ. ಕಳೆದ 60 ವರ್ಷಗಳಲ್ಲಿ, ಇಂತಹ ಯೋಜನೆಯೊಂದು ಜನರಿಗೆ ಬೇಕು ಎಂಬ ಚಿಂತನೆ ಯಾರಲ್ಲೂ ಬಂದಿರಲಿಲ್ಲ. ಭಾರತದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು 1/3 ಭಾಗದಷ್ಟು ಜನಸಂಖ್ಯೆಯನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿವೆ ಎಂಬ ಅಂಶವನ್ನು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ಆದರೆ, ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ತಳಮಟ್ಟದಲ್ಲಿ ಅನೇಕ ದಶಕಗಳ ಕಾಲ ಕೆಲಸ ಮಾಡಿದ್ದ ಪ್ರಧಾನಿ ಮೋದಿಯವರಿಗೆ, ಬಡ ಕುಟುಂಬವೊಂದು ಯಾವುದಕ್ಕಾಗಿ ಹೆಚ್ಚು ಹಣ ವ್ಯಯಿಸುತ್ತಿದೆ ಎಂಬುದು ಸ್ವ ಅನುಭವದಿಂದಲೇ ತಿಳಿದುಬಂದಿತ್ತು. ಈ ಕಾರಣಕ್ಕಾಗಿಯೇ ಅವರು 50 ಕೋಟಿ ಜನರ ಆರೋಗ್ಯ ರಕ್ಷಣೆಯ ಗುರಿ ಇಟ್ಟುಕೊಂಡು 2018ರ ಸೆಪ್ಟೆಂಬರ್ 23 ರಂದು ಜಾರಿಮಾಡಿದ ಆಯುಷ್ಮಾನ್ ಭಾರತ್ ಎಂಬ ಭವ್ಯ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಯಶಸ್ಸು ಕಂಡು, 5 ನೇ ವರ್ಷಕ್ಕೆ ಕಾಲಿಡುತ್ತಿದೆ.

    ಈ ಹಿಂದೆ ಸಾಮಾನ್ಯ ಜನರು ಹೆಚ್ಚು ವೆಚ್ಚದ ಚಿಕಿತ್ಸೆಗಳನ್ನು ಪಡೆಯಬೇಕೆಂದರೆ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದರು. ಹೆಚ್ಚು ಖರ್ಚಿನ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆೆ ಹೋಗಲು ಕೂಡ ಬಡ ಕುಟುಂಬಗಳು ಹಿಂಜರಿಯುತ್ತಿದ್ದವು. ಆದರೆ, ಆಯುಷ್ಮಾನ್ ಭಾರತ್ ವಿಮೆಯಿಂದಾಗಿ ಸರ್ಕಾರಿ ಮಾತ್ರವಲ್ಲದೆ, ಖಾಸಗಿಯಲ್ಲೂ ಉಚಿತವಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಇದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚು ಸಕಾರಾತ್ಮಕ ಪರಿಣಾಮ ಬೀರಿದೆ. ಆರೋಗ್ಯಕ್ಕಾಗಿ ಸಾಲ ಮಾಡುವ ಸನ್ನಿವೇಶಗಳು ಕಡಿಮೆಯಾಗಿವೆ.

    2013-14 ರಲ್ಲಿ ಪ್ರತಿ ಭಾರತೀಯನ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದ್ದ ಹಣ 1,042 ರೂ. ಮಾತ್ರ. 2018-19 ರ ವೇಳೆಗೆ ಈ ಮೊತ್ತ 1,815 ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 74ರಷ್ಟು ಹೆಚ್ಚಳ. ಅದೇ ರೀತಿ ಆರೋಗ್ಯ ವಿಮೆಗಾಗಿ ಸರ್ಕಾರ ಮಾಡುತ್ತಿದ್ದ ಖರ್ಚು 4,757 ಕೋಟಿ ರೂ. ನಿಂದ 12,680 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಶೇ. 166ರಷ್ಟು ಹೆಚ್ಚು ಹಣ ನೀಡಲಾಗಿದೆ. ಇವೆಲ್ಲ ಕಾರಣಗಳಿಂದ ದೇಶದಲ್ಲಿ ಈಗ ಜನರು ಆರೋಗ್ಯಕ್ಕಾಗಿ ಮಾಡುತ್ತಿರುವ ಖರ್ಚು ಶೇ. 64.2 ರಿಂದ ಶೇ. 48.2ಕ್ಕೆ ಇಳಿಕೆಯಾಗಿದೆ.

    ಇಷ್ಟೇ ಅಲ್ಲದೆ, ಏಕೀಕೃತ ಆಯುಷ್ಮಾನ್ ಕಾರ್ಡ್ ನೀಡಿ, ಎಲ್ಲಾ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ವಿಮೆ ಯೋಜನೆಗಳನ್ನು ಒಂದೇ ಕಾರ್ಡ್ ಮೂಲಕ ಪಡೆಯುವಂತೆ ಮಾಡಲು ಸಿದ್ಧತೆ ನಡೆದಿದೆ. ಇದರಿಂದಾಗಿ ಯೋಜನೆಗಳ ಕುರಿತಾದ ಗೊಂದಲ ತಪ್ಪಲಿದೆ.

    ಕೋವಿಡ್​ನಲ್ಲಿ ಆಶಾಕಿರಣ: ಈ ಶತಮಾನದ ತುರ್ತು ಆರೋಗ್ಯ ಪರಿಸ್ಥಿತಿ ಕೋವಿಡ್​ನಲ್ಲಿ ಅನೇಕರು ನೋವು, ನಷ್ಟಕ್ಕೊಳಗಾದರು. ಕೋವಿಡ್ ಜನರ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಪರಿಸ್ಥಿತಿಯ ಮೇಲೂ ದುಷ್ಪರಿಣಾಮ ಬೀರಿತು. ಆರ್ಥಿಕ ಚಟುವಟಿಕೆಗಳು ಅನಿವಾರ್ಯವಾಗಿ ಸ್ಥಗಿತಗೊಂಡಿದ್ದರಿಂದ ಕೂಲಿ ಕಾರ್ವಿುಕರು, ಹಮಾಲಿಗಳು, ಚಾಲಕರು ಸೇರಿದಂತೆ ಕಡು ಬಡ ಹಾಗೂ ಬಡವರ್ಗದ ಜನರು ಸಂಕಷ್ಟಕ್ಕೊಳಗಾದರು. ಈ ರೀತಿ ಕೈಯಲ್ಲಿ ಹಣವಿಲ್ಲದ ಸ್ಥಿತಿ ಎದುರಾದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಹಂತಗಳಲ್ಲಿ ಪರಿಹಾರ ಪ್ಯಾಕೇಜ್​ಗಳನ್ನು ನೀಡಿ ಅವರಿಗೆ ಆತ್ಮವಿಶ್ವಾಸ ತುಂಬಲಾಗಿತ್ತು. ಈ ನಡುವೆ ಅನೇಕರು ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿದರು. ಇಂತಹ ಸಮಯದಲ್ಲಿ ಬಡಜನರ ಆಶಾಕಿರಣವಾಗಿ ಆಯುಷ್ಮಾನ್ ಭಾರತ್ ಯೋಜನೆ ಕೆಲಸ ಮಾಡಿತು.

    ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 36.38 ಲಕ್ಷ ಜನರು ಈ ಯೋಜನೆಯ ಲಾಭ ಪಡೆದಿದ್ದು, ಇವರ ಚಿಕಿತ್ಸೆಗಾಗಿ 4,620.20 ಕೋಟಿ ರೂ. ಒದಗಿಸಲಾಗಿದೆ. 2020-21ನೇ ಸಾಲಿನಲ್ಲಿ 8.29 ಲಕ್ಷ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದು, ಅವರಿಗಾಗಿ 1,233 ಕೋಟಿ ರೂ. ನೀಡಲಾಗಿದೆ. 2021-22 ನೇ ಸಾಲಿನಲ್ಲಿ, 13.16 ಲಕ್ಷ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದು, 1,692 ಕೋಟಿ ರೂ. ಖರ್ಚು ಭರಿಸಲಾಗಿದೆ. ಅಂದರೆ, ಕಳೆದೆರಡು ವರ್ಷಗಳ ತೀವ್ರವಾದ ಕೋವಿಡ್ ಕಾಲದಲ್ಲಿ 21 ಲಕ್ಷ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಈ ಮೂಲಕ ಬಡ ಕುಟುಂಬಗಳು ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ಪ್ರಧಾನಿ ಮೋದಿ ತಪ್ಪಿಸಿದ್ದಾರೆ.

    ಕೋವಿಡ್ ಬಂದ ಆರಂಭದಲ್ಲಿ ಈ ರೋಗಕ್ಕೆ ಚಿಕಿತ್ಸಾ ವಿಧಾನ ಯಾರಿಗೂ ತಿಳಿದಿರಲಿಲ್ಲ. ಈ ಸೋಂಕಿನ ಜೊತೆಗೆ ಹೃದಯ ಸಂಬಂಧಿ, ಶ್ವಾಸಕೋಶ ಸಂಬಂಧಿ ಸಮಸ್ಯೆಗಳೂ ಸೇರಿಕೊಂಡು ರೋಗಿಗಳ ಜೀವಕ್ಕೆ ಅಪಾಯ ಒಡ್ಡಿತ್ತು. ಅದರಲ್ಲೂ 60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗೂ ಆಯುಷ್ಮಾನ್​ನಿಂದ ವಿಮೆ ನೀಡುವ ಕ್ರಮವನ್ನು ಜಾರಿ ಮಾಡಿ, ಅನೇಕರ ಜೀವಕ್ಕೆ ಸಂಜೀವಿನಿ ಒದಗಿಸಲಾಯಿತು. ಒಂದು ಹಾಗೂ ಎರಡನೇ ಅಲೆಯ ವೇಳೆ ಕೋವಿಡ್ ಸೋಂಕಿಗೊಳಗಾದ ಕುಟುಂಬಗಳನ್ನು ಸರ್ಕಾರ ಕೈ ಹಿಡಿದು ನಡೆಸಿ ಬಲ ತುಂಬಿತು.

    ಕೋವಿಡ್ ಮೊದಲನೇ ಅಲೆಯಲ್ಲಿ, ಈ ಯೋಜನೆಯಡಿ 2020 ರ ಮಾರ್ಚ್​ನಿಂದ 2021 ರ ಮಾರ್ಚ್​ವರೆಗೆ 391.26 ಕೋಟಿ ರೂ., ಎರಡನೇ ಅಲೆಯಲ್ಲಿ, 2021ರ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ 376.76 ಕೋಟಿ ರೂ. ಹಾಗೂ ಮೂರನೇ ಅಲೆಯ ವೇಳೆ, 2022 ರ ಜನವರಿಯಿಂದ ಮಾರ್ಚ್​ವರೆಗೆ 11.80 ಕೋಟಿ ರೂ. ಮೊತ್ತವನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪಾವತಿಸಲಾಗಿದೆ.

    ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಜಾರಿಯಲ್ಲಿ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಯೋಜನೆಯಡಿ ವಿರಳ ಕಾಯಿಲೆಗಳನ್ನೂ ಸೇರಿಸಿ, ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಪಿಇಟಿ ಸ್ಕಾ್ಯನ್​ಗೆ 10,000 ರೂ., ಅಸ್ಥಿಮಜ್ಜೆ ಕಸಿಗೆ ಎರಡು ವಿಧಾನಗಳಲ್ಲಿ 7 ಲಕ್ಷ ರೂ. ಹಾಗೂ 21 ಲಕ್ಷ ರೂ., ರೋಬೋಟಿಕ್ ಸರ್ಜರಿಗೆ 1.50 ಲಕ್ಷ ರೂ. ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವೆಚ್ಚ ನಿಗದಿ ಮಾಡಿ ಆರೋಗ್ಯದ ಲಾಭವನ್ನು ಇನ್ನಷ್ಟು ವಿಸ್ತರಿಸಲಾಗಿದೆ.

    ಆರೋಗ್ಯ ಮತ್ತು ಕ್ಷೇಮ ಕೇಂದ್ರ: ಆಯುಷ್ಮಾನ್ ಭಾರತ್ ಯೋಜನೆಯಡಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ವಿುಸಲಾಗುತ್ತಿದೆ. 2020-21 ನೇ ಸಾಲಿನಲ್ಲಿ, ಈ ಕಾರ್ಯಕ್ರಮದ ಜಾರಿಯಲ್ಲಿ ದೇಶದಲ್ಲೇ ಕರ್ನಾಟಕ ನಂ.1 ಸ್ಥಾನ ಗಳಿಸಿದೆ ಎಂಬುದು ಹೆಮ್ಮೆಯ ಸಂಗತಿ. ಪ್ರಸಕ್ತ ಅಸ್ತಿತ್ವದಲ್ಲಿರುವ 11,595 ಆರೋಗ್ಯ ಕೇಂದ್ರಗಳನ್ನು, ಎಚ್​ಡಬ್ಲು್ಯಸಿ ಆಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಆರೋಗ್ಯ ಇಲಾಖೆಯಡಿ, 8,871 ಉಪಕೇಂದ್ರಗಳಿದ್ದು, 2021-22 ನೇ ಸಾಲಿಗೆ 4,664 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಪೈಕಿ 4,464 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಶೇ. 96ರಷ್ಟು ಗುರಿ ಸಾಧಿಸಲಾಗಿದೆ. 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ, 2,228 ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಕೇಂದ್ರ ನೀಡಿದ್ದು, 2,166 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಶೇ. 98ರಷ್ಟು ಸಾಧಿಸಲಾಗಿದೆ. 365 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲವನ್ನೂ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಗುರಿ ನೀಡಿದ್ದು, 364 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 2023 ರ ಮಾರ್ಚ್​ಗೆ ಎಲ್ಲಾ 11,595 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ.

    ‘ನವ ಭಾರತಕ್ಕಾಗಿ ನವ ಕರ್ನಾಟಕ’ ನಿರ್ವಿುಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸು ಸಾಕಾರವಾಗಲು ಆರೋಗ್ಯಯುತ ಸಮಾಜ ನಿರ್ಮಾಣ ಅಗತ್ಯ. ಇದಕ್ಕಾಗಿ ಜನರಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯದಿಂದ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯವರೆಗೂ ನೆರವು ನೀಡುವುದು ಸರ್ಕಾರದ ಗುರಿ. ಈ ಗುರಿ ಮುಟ್ಟಲು ಆಯುಷ್ಮಾನ್ ಭಾರತ್ ಪ್ರಮುಖ ದಾರಿಯಾಗಿದೆ. ಈ ಯೋಜನೆಯು ಭವ್ಯ ಭಾರತದಲ್ಲಿ ಆರೋಗ್ಯವಂತ ಪ್ರಜೆಗಳನ್ನು ರೂಪಿಸಲು ಸಹಾಯಕ.

    (ಲೇಖಕರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts