More

    ಧನ್ವಂತರಿ: ಸಹಜ ವೈದ್ಯಪದ್ಧತಿ ಆಯುರ್ವೇದ

    ಧನ್ವಂತರಿ: ಸಹಜ ವೈದ್ಯಪದ್ಧತಿ ಆಯುರ್ವೇದ

    ‘ಇಂಗ್ಲಿಷ್ ಮೆಡಿಸನ್’! ಬಹುಶಃ ಭಾರತದಲ್ಲಿ ಈ ಪದಗಳನ್ನು ಕೇಳದ ವ್ಯಕ್ತಿ ಇರಲಿಕ್ಕಿಲ್ಲ. ಬ್ರಿಟಿಷರು ಭಾರತವನ್ನು ಆಕ್ರಮಿಸಿ, ಆಳಿ ಹೋದಲ್ಲಿಗೆ ಈ ಪದಗಳು ಹುಟ್ಟಿಕೊಂಡವು. ಭಾರತಕ್ಕೆ ಅಲೋಪತಿಯನ್ನು ತಂದ ಬ್ರಿಟಿಷರನ್ನು ಇಂಗ್ಲಿಷರೆಂದು ಕರೆಯುವುದು ಇಂದಿಗೂ ರೂಢಿ. ನಮಗೆ ಇಂಗ್ಲಿಷ್ ಹೇಳಿಕೊಟ್ಟವರೂ ಅವರೇ. ಆ ಇಂಗ್ಲಿಷರು ತಂದ ಔಷಧ ಪದ್ಧತಿಗೆ ಲೋಕಭಾಷೆಯಲ್ಲಿ ‘ಇಂಗ್ಲಿಷ್ ಮೆಡಿಸನ್’ ಎಂದು ಹೇಳಿದ್ದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಅಲೋಪತಿಗೆ ‘ಇಂಗ್ಲಿಷ್ ಮೆಡಿಸನ್’ ಎಂದು ಕರೆದರೆ ಆಯುರ್ವೇದವನ್ನು ಏನೆಂದು ಹೇಳುವುದು? ಅದು ನಮ್ಮ ನೆಲದ ಚಿಕಿತ್ಸಾಪದ್ಧತಿ. ಆಯುರ್ವೆದ ಆಲ್ಟರ್ ನೇಟಿವ್ ವೈದ್ಯಪದ್ಧತಿಯಲ್ಲ! ಅದು ನೇಟಿವ್ ಚಿಕಿತ್ಸಾ ಪದ್ಧತಿ. ಹಾಗಾಗಿ ಅದನ್ನು ‘ಕನ್ನಡ ಔಷಧ’ ಎಂದು ಕರೆದರೆ ಸರಿಯಾದೀತು. ಮೂಲಗ್ರಂಥಗಳೆಲ್ಲ ಸಂಸ್ಕೃತದಲ್ಲಿ ಇರುವುದರಿಂದ, ಸಂಸ್ಕೃತವೇ ಮನೆಮಾತಾಗಿದ್ದ ಕಾಲದಿಂದ ಬೆಳೆದು ಬಂದಿರುವುದರಿಂದ, ಆಯುರ್ವೇದದ ಗುಳಿಗೆಗಳನ್ನು ‘ಸಂಸ್ಕೃತ ಔಷಧ’ವೆಂದು ಹೇಳಿದರೂ ತಪ್ಪಾಗಲಾರದು.

    ಈ ಅಡ್ಡನಾಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಆಧುನಿಕ ಚಿಕಿತ್ಸಾಪದ್ಧತಿಯ ಮೊರೆಹೋದವರು ಆಯುರ್ವೇದ ವೈದ್ಯರಲ್ಲಿಗೆ ಬಂದಾಗ ಉಸುರುವ ಜನಜನಿತವಾದ ಕೆಲವು ಮಾತುಗಳಿವೆ. ‘ಕಳೆದ ಮೂರು ವರ್ಷಗಳಿಂದ ‘‘ನಾರ್ಮಲ್ ಮೆಡಿಸಿನ್’’ ತೆಗೆದುಕೊಳ್ಳುತ್ತ ಇದ್ದೇನೆ’ ಎಂದು ಚಿಕಿತ್ಸೆಯ ಇತಿಹಾಸವನ್ನು ಬಿಚ್ಚಿಡುತ್ತಾರೆ! ಹಾಗಿದ್ದರೆ ಉಳಿದ ಮದ್ದುಗಳೆಲ್ಲ ಪ್ರಾಕೃತ ಅಲ್ಲ ಎಂದರ್ಥವೇ? ಇನ್ನೂ ಮುಂದುವರಿದು ‘ದೊಡ್ಡ ಆಸ್ಪತ್ರೆಗೆ ತೆರಳಿ ಅಲ್ಲಿ ‘‘ನಾರ್ಮಲ್ ಡಾಕ್ಟರ್’’ ಬಳಿ ಪರೀಕ್ಷಿಸಿಕೊಂಡು ಇದೇ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದೇನೆ. ಈಗ ಆಯುರ್ವೆದದಲ್ಲಿ ಏನಾದರೂ ಚಿಕಿತ್ಸೆಯಿದೆಯೇ ಎಂದು ತಿಳಿದುಕೊಂಡು ಮುಂದಡಿಯಿಡಲು ಬಂದಿದ್ದೇನೆ’ ಎಂದು ತಮ್ಮ ಚಿಕಿತ್ಸೆಯ ಪೂರ್ವಾಪರ ಮಂಡಿಸುತ್ತಾರೆ! ಹಾಗಿದ್ದರೆ ತನ್ನ ಮುಂದೆ ಕುಳಿತಿರುವ ವೈದ್ಯರೂ ಸೇರಿದಂತೆ ಉಳಿದೆಲ್ಲ ಪದ್ಧತಿಗಳ ವೈದ್ಯರು ‘ನಾರ್ಮಲ್ ಡಾಕ್ಟರ್’ಗಳಲ್ಲವೇ ಎಂದು ಈ ಜನರು ಯೋಚಿಸದೆ ಇರುವುದು ಪರಮಾಶ್ಚರ್ಯ. ಈ ‘ನಾರ್ಮಲ್ ಡಾಕ್ಟರ್’ ಶಬ್ದಗಳ ಬದಲು ‘ರೆಗ್ಯುಲರ್ ಡಾಕ್ಟರ್’ ಅಥವಾ ‘ರೆಗ್ಯುಲರ್ ಮೆಡಿಸಿನ್’ ಎಂಬ ಪದಪ್ರಯೋಗಗಳನ್ನು ಮಾಡುವವರೂ ಅನೇಕರಿದ್ದಾರೆ. ಇವರ ಪಾಲಿಗೆ ಉಳಿದೆಲ್ಲ ಪದ್ಧತಿಗಳು ಇರೆಗ್ಯುಲರ್, ಔಷಧವೂ ಇರೆಗ್ಯುಲರ್!

    ಸರ್ಕಾರಿ ಕೃಪಾಕಟಾಕ್ಷದಲ್ಲೇ ಬೆಳೆದ ಆಧುನಿಕ ವೈದ್ಯಪದ್ಧತಿಯನ್ನು ಸ್ವಾತಂತ್ರ್ಯ ಬಂದ ನಂತರವೂ ಪ್ರತಿಯೊಂದು ಕುಟುಂಬವೂ ಅವಲಂಬಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದದ್ದು ಈಗ ಇತಿಹಾಸ. ಸರ್ಕಾರಿ ಕೆಲಸದಲ್ಲಿರುವ ವ್ಯಕ್ತಿಗೆ ಅಲೋಪತಿ ಚಿಕಿತ್ಸೆ ಪಡೆಯಲು ಮಾತ್ರ ಲಾಗಾಯ್ತಿನಿಂದಲೂ ಅವಕಾಶ ನೀಡಲಾಗಿತ್ತು. ಒಬ್ಬ ವೈದ್ಯರು ಅಥವಾ ಆಸ್ಪತ್ರೆ ಚೆನ್ನಾಗಿ ಪರಿಚಿತವಾಗಿ ನಮ್ಮವರೇ ಆಗಿರುವುದರಿಂದ ಈ ಸರ್ಕಾರಿ ಕೆಲಸದ ವ್ಯಕ್ತಿಯನ್ನು ಮನೆಮಂದಿಯೂ ಅನುಸರಿಸಿದರು. ಹಾಗಾಗಿ ಅದಕ್ಕೆ ಬಂದ ಇನ್ನೊಂದು ರೂಢನಾಮವೇ ‘ಗವರ್ನ್​ವೆುಂಟ್ ಮೆಡಿಸಿನ್’! ಅಂದಮೇಲೆ ಉಳಿದ ಚಿಕಿತ್ಸಾ ಪದ್ಧತಿಗಳದ್ದೆಲ್ಲ ಪ್ರೈವೇಟ್ ಮೆಡಿಸಿನ್ ಆಗಿಬಿಟ್ಟವೇ? ಆಯುರ್ವೇದ ಭರತಭೂಮಿಯ ಸಹಜ, ಪ್ರಾಕೃತ, ಅಧಿಕೃತ ವೈದ್ಯಪದ್ಧತಿ ಎಂಬುದು ಸಾರ್ವಕಾಲಿಕ ವಾಸ್ತವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts