More

    ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಆಯುರ್ವೇದ: ಇಂದು ಧನ್ವಂತರಿ ಜಯಂತಿ, ಆಯುರ್ವೇದ ದಿನ

    ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಆಯುರ್ವೇದ: ಇಂದು ಧನ್ವಂತರಿ ಜಯಂತಿ, ಆಯುರ್ವೇದ ದಿನಪ್ರತಿಯೊಬ್ಬರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಅದರಲ್ಲೂ ಅನಾರೋಗ್ಯ ಉಂಟಾದಾಗ ಗಿಡಮೂಲಿಕೆ ಆಧಾರಿತವಾದ ಔಷಧೋಪಚಾರಗಳನ್ನು ಹೊಂದಲು ಆದ್ಯತೆ ನೀಡಲಾರಂಭಿಸಿದ್ದಾರೆ. ಗಿಡಮೂಲಿಕೆಗಳಿಂದ ತಯಾರಾದ ಔಷಧಗಳು ತೀವ್ರ ಸ್ವರೂಪದ ಅಡ್ಡಪರಿಣಾಮಗಳಿಗೆ ಆಸ್ಪದ ನೀಡದೆ ಸುರಕ್ಷಿತವಾಗಿ ಉಪಶಮನ ಒದಗಿಸುತ್ತವೆ ಎಂಬ ನಂಬಿಕೆಯೇ ಇದಕ್ಕೆ ಆಧಾರವಾಗಿದೆ. ಹಾಗಾಗಿ ನಿತ್ಯಬಳಕೆಯ ವಸ್ತುಗಳು ಕೂಡ ಆಯುರ್ವೇದ ಆಧಾರಿತ ಸೂತ್ರದಿಂದಲೇ ತಯಾರಾಗಿರಬೇಕು ಎಂದು ಜನರು ಬಯಸಲಾರಂಭಿಸಿದ್ದಾರೆ.

    ಜನರ ಈ ಮನೋಭಾವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಸರ್ಕಾರಗಳು ಕೂಡ ಆಯುರ್ವೆದ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ಆದ್ಯತೆಯ ಮೇರೆಗೆ ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಆಚರಣೆಗೊಳ್ಳುತ್ತಿರುವ ರಾಷ್ಟ್ರೀಯ ಆಯುರ್ವೆದ ದಿನವನ್ನು ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಆಯುರ್ವೆದ ಎಂಬ ಧ್ಯೇಯವಾಕ್ಯದ ಜತೆಗೆ ಪ್ರತಿದಿನವೂ ಪ್ರತಿಯೊಬ್ಬರಿಗೂ ಆಯುರ್ವೆದ ಎಂಬ ಟ್ಯಾಗ್​ಲೈನ್​ನಲ್ಲಿ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಧನ್​ತೇರಸ್ ದಿನದಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಸಮುದ್ರ ಮಂಥನದ ಸಂದರ್ಭದಲ್ಲಿ ಭಗವಾನ್ ಶ್ರೀ ವಿಷ್ಣುವಿನ ರೂಪವಾಗಿ ಅಮೃತ ಕಳಶವನ್ನು ಹಿಡಿದು ಆಯುರ್ವೆದದ ಅಧಿದೇವತೆ ಶ್ರೀ ಧನ್ವಂತರಿಯು ಮೂಡಿ ಬಂದರು. ಬಳಿಕ ತಮ್ಮ ಕೈಯಲ್ಲಿದ್ದ ಅಮೃತ ಕಳಶದಲ್ಲಿನ ಅಮೃತವನ್ನು ಬಳಸಿ, ಜಗತ್ತಿನ ಸಕಲ ಜೀವಾತ್ಮರನ್ನು ಅನಾರೋಗ್ಯಮುಕ್ತರನ್ನಾಗಿಸಲು, ಅಕಾಲಿಕ ಮರಣದಿಂದ ಪಾರು ಮಾಡಿ ದೀರ್ಘಾಯುಷಿಗಳನ್ನು ಮಾಡಲು ಮುಂದಾದರು ಎಂದು ಪುರಾಣಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಆಯುರ್ವೆದ ಚಿಕಿತ್ಸಕರೆಲ್ಲರೂ ಶ್ರೀ ಧನ್ವಂತರಿಯನ್ನು ಪೂಜಿಸುವುದನ್ನು ರೂಢಿಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲ, ಶ್ರೀ ಧನ್ವಂತರಿಯನ್ನು ಭಕ್ತಿಯಿಂದ ಪೂಜಿಸುವುದರಿಂದ, ವ್ಯಕ್ತಿಯು ರೋಗಮುಕ್ತನಾಗುತ್ತಾನೆ ಎಂಬ ನಂಬಿಕೆಯೂ ಇದೆ.

    ಭಾರತೀಯ ಸಂಸ್ಕೃತಿಯಲ್ಲಿ ವೇದಗಳು, ವೇದಗಳಿಂದ ಉಪವೇದಗಳು, ತತ್ವಶಾಸ್ತ್ರ ಇತ್ಯಾದಿಗಳು ಪ್ರಚಲಿತಕ್ಕೆ ಬಂದಿವೆ. ಆಯುರ್ವೆದ ಕೂಡ ಉಪವೇದ ಎಂದೇ ಹೇಳಲಾಗುತ್ತದೆ. ಭಗವಾನ್ ಶ್ರೀ ಧನ್ವಂತರಿಯು ಮಹಾವಿಷ್ಣುವಿನ ಅವತಾರ ಎಂಬುದು ಭಾಗವತಾದಿ ಪುರಾಣಗಳು ವರ್ಣಿಸುತ್ತವೆ. ಭಗವಾನರು ಧಾರಣೆ ಮಾಡಿರುವ ಅಮೃತ ಕಳಶವು ಆರೋಗ್ಯ ಮತ್ತು ದೀರ್ಘಾಯುವಿನ ಸಂಕೇತವಾಗಿದೆ. ಜಲೌಕ ಅಥವಾ ಜಿಗಣೆ ಹಲವು ರೋಗಗಳಿಗೆ ರಾಮಬಾಣವೆನಿಸಿಕೊಂಡಿದೆ. ಧನ್ವಂತರಿ ಹಸ್ತದಲ್ಲಿ ಕಾಣುವ ಗ್ರಂಥವು ಆಳವಾದ ಶಾಸ್ತ್ರಾಧ್ಯಯನದ ಸಂಕೇತವಾಗಿದೆ. ಧನ್ವಂತರಿಯ ಕೈಯಲ್ಲಿರುವ ಶಂಖವು ಶುಭಸೂಚಕವಾಗಿದ್ದು, ಆಯುರ್ವೆದವು ವೇದ-ಮಂತ್ರಗಳಿಂದ, ಗದ್ಯ-ಪದ್ಯಗಳಿಂದ ಕೂಡಿರುವ ಶಾಸ್ತ್ರವಾಗಿದೆ. ಅದು ಶಂಖಾನಾದ ಮತ್ತು ಶಂಕದಿಂದ ಬರುವ ತೀರ್ಥದಲ್ಲಿ ಹರಿದುಬರುತ್ತದೆ ಎಂಬುದರ ಸೂಚಕವಾಗಿದೆ.

    ಆಯರ್ವೇದ ಶಾಸ್ತ್ರವು ಪೖಥ್ವಿ, ಆಪ (ಜಲತತ್ವ), ಅಗ್ನಿ, ವಾಯು, ಹಾಗೂ ಆಕಾಶ ತತ್ವಗಳು ಎಂಬ ಪಂಚಮಹಾಭೂತದ ತಳಹದಿಯ ಮೇಲೆ ನಿಂತಿದೆ. ಪ್ರತಿ ಜೀವಿಯ ಶರೀರವು ಈ ಪಂಚಮಹಾಭೂತಗಳಿಂದ ಮಾಡಲ್ಪಟ್ಟಿದೆ. ಪಂಚಮಹಾಭೂತಗಳಿಂದ ತ್ರಿದೋಷ ಉತ್ಪತ್ತಿ (ವಾತ, ಪಿತ್ತ, ಕಫ) ಸತ್ವ, ರಜಸ್, ತಮಸ್​ಗಳೆಂಬ ತ್ರಿಗುಣಗಳು, ಪಂಚಜ್ಞಾನೇಂದ್ರಿಯಗಳು, ಪಂಚಕಮೇಂದ್ರಿಗಳು ಹಾಗೂ ಉಭಯಾತ್ಮಕ ಮನಸ್ ಇವುಗಳು ಶರೀರ ರಚನೆ ಮತ್ತು ಶರೀರ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ಆಯರ್ವೇದ ಶಾಸ್ತ್ರವು ಸ್ವಸ್ಥಪುರುಷನ ಸ್ವಾಸ್ಥ್ಯ ಸಂರಕ್ಷಣೆ ಹಾಗೂ ರೋಗಿಯ ರೋಗ ನಿವಾರಣೆ ಎಂಬ ಪ್ರಮುಖ ಧ್ಯೇಯ ಮತ್ತು ಉದ್ದೇಶಗಳನ್ನು ಹೊಂದಿದೆ. ಸ್ವಾಸ್ಥ್ಯ ಸಂರಕ್ಷಣೆ ಮತ್ತು ರೋಗ ನಿವಾರಣೆ ದೖಷ್ಟಿಯಿಂದ ಈ ಶಾಸ್ತ್ರವು ಕಾಯಚಿಕಿತ್ಸಾ, ಬಾಲರೋಗ, ಗ್ರಹಚಿಕಿತ್ಸಾ, ಉರ್ದ್ಭಾಂಗ ಚಿಕಿತ್ಸಾ, ಶಲ್ಯತಂತ್ರ, ವಿಷಚಿಕಿತ್ಸಾ (ಧಂಷ್ಟಾŠ ಚಿಕಿತ್ಸಾ), ರಸಾಯನ ಚಿಕಿತ್ಸಾ (ಶಾಲಾಕ್ಯತಂತ್ರ), (ಜರಾ ಚಿಕಿತ್ಸೆ) ಮತ್ತು ವಾಜೀಕರಣ ಚಿಕಿತ್ಸಾ ಎಂದು ಪ್ರತ್ಯೇಕ ವಿಭಾಗಗಳಾಗಿ ವಿಭಾಗಿಸಲ್ಪಟ್ಟಿದೆ. ಗಿಡಮೂಲಿಕೆಗಳ ಅಪಾರವಾದ ಜ್ಞಾನ, ಖನಿಜಸಂಪತ್ತುಗಳ ಜ್ಞಾನ, ದ್ರವ್ಯಗುಣ ವಿಜ್ಞಾನ, ರಸಶಾಸ್ತŠ ಭೈಷಜ್ಯ ಕಲ್ಪನಾ ಇತ್ಯಾದಿ ವಿವಿಧ ಪಠ್ಯ ವಿಭಾಗಗಳ ಮೂಲಕ ಆಳಅಧ್ಯಯನಕ್ಕೆ ದಾರಿ ಮಾಡಿಕೊಟ್ಟು, ನಿಖರವಾಗಿ ರೋಗಿಯ ರೋಗ ನಿರ್ಣಯಿಸಿ, ಉತ್ತಮ ಚಿಕಿತ್ಸೆ ಕೊಡಲು ಅವಕಾಶ ಮಾಡಿಕೊಡುತ್ತದೆ.

    ಪ್ರಾಚೀನವಾದ ಆಯುರ್ವೆದ ವಿಜ್ಞಾನ ಈಗ ಆಧುನಿಕ ಯುಗದಲ್ಲಿ ತನ್ನ ಹರಿವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆರೋಗ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಅದು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಆರೋಗ್ಯವನ್ನು ಬೆಳೆಸುವ, ಧೀರ್ಘಾಯುಷ್ಯಕ್ಕೆ ಎಡೆಮಾಡಿಕೊಡುವ ಸಾಧನವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಆಯುರ್ವೆದ ದಿನ ಹಾಗೂ ಧನ್ವಂತರಿಯ ಜಯಂತಿಯ ಸಂದರ್ಭದಲ್ಲಿ ಈ ಅಮೃತಮಯ ವಿಜ್ಞಾನವನ್ನು ಗೌರವಿಸುತ್ತಾ ಉತ್ತಮ ಜೀವನ ಸಾಗಿಸುವ ದಿಕ್ಕಿನಲ್ಲಿ ಸಾಗೋಣ.

    (ಲೇಖಕರು ಆಯುರ್ವೇದ ವೈದ್ಯರು)

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಅವರ ಮುಂದಿರುವ ಸವಾಲುಗಳು ಯಾವುವು?

    ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ಪಟ್ಟ; ರಾಜ್ಯದಲ್ಲಿ ತಗ್ಗಿಲ್ಲ ರಾಜಾಹುಲಿ ಪ್ರಭಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts