More

    ರಾಷ್ಟ್ರಮಟ್ಟದ ಇನ್ಸ್‌ಪೈರ್ ಅವಾರ್ಡ್‌ಗೆ ಆಯನೂರು ವಿದ್ಯಾರ್ಥಿನಿಯ ಮಾದರಿ

    ಶಿವಕುಮಾರ್ ಆಯನೂರು
    ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಪ್ರತಿಭೆಗಳಿದ್ದು ಅವರಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಸಿಕ್ಕರೆ ಏನು ಬೇಕಾದರೂ ಸಾಧಿಸಬಲ್ಲರು. ಈ ನಡುವೆಯೂ ಸ್ವಂತ ಪರಿಶ್ರಮದಿಂದ ಇರುವ ವಸ್ತುಗಳನ್ನೇ ಬಳಸಿಕೊಂಡು ಸಾಧನೆ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. ಇದಕ್ಕೆ ಒಂದು ತಾಜಾ ಉದಾಹರಣೆ ಆಯನೂರಿನ ಹಾರನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥನಾ ಎಸ್.ಶೆಟ್ಟಿ.

    ಇನ್ಸ್‌ಪೈರ್ ಅವಾರ್ಡ್ ರಾಷ್ಟ್ರೀಯ ಹಂತಕ್ಕೆ ಈಕೆ ಆವಿಷ್ಕರಿಸಿರುವ ಸ್ವಯಂಚಾಲಿತ ಕಸ ತೆಗೆಯುವ ಯಂತ್ರದ ಮಾದರಿ ಆಯ್ಕೆಯಾಗಿದೆ. ಜು.24, 25ರಂದು ಸುರತ್ಕಲ್‌ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ನಂತರ ರಾಷ್ಟ್ರೀಯ ಹಂತದ ಸ್ಪರ್ಧೆ ನಡೆಯಲಿದೆ. ಶಾಲೆಯ ವಿಜ್ಞಾನದ ಶಿಕ್ಷಕಿ ಜಿ.ಎಚ್.ರಶ್ಮಿ ಅವರ ಮಾರ್ಗದರ್ಶನದಲ್ಲಿ ಈಕೆ ತಯಾರಿಸಿದ ಮಾದರಿ ಪ್ರದರ್ಶನಗೊಳ್ಳಲಿದೆ.
    ಈಕೆ ಒಂದು ಮರದ ಅಥವಾ ಪ್ಲಾಸ್ಟಿಕ್ ಕೋಲು, ಒಂದು ಮುರಿದ ಹೋಗಿರುವ ಬ್ರಷ್, ಎರಡು ಡಿಸಿ ಮೋಟಾರ್, 2 ಬ್ಯಾಟರಿ, ಸ್ವಿಚ್ ಬಳಸಿ ಸ್ವಯಂಚಾಲಿತ ಕಸ ತೆಗೆಯುವ ಯಂತ್ರ ಆವಿಷ್ಕಾರ ಮಾಡಿದ್ದಾಳೆ. ಇದಕ್ಕಾಗಿ ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿರುವುದು ವಿಶೇಷತೆ.
    ಈ ಯಂತ್ರವನ್ನು ವಿಶೇಷವಾಗಿ ರಾಸಾಯನಿಕ ಕಸ ಸಂಗ್ರಹಿಸಲು ಬಳಕೆ ಮಾಡಬಹುದು. ಆಸ್ಪತ್ರೆಯಲ್ಲಿನ ತ್ಯಾಜ್ಯ ಸಂಗ್ರಹಕ್ಕೆ, ದೇಹಕ್ಕೆ ಹಾನಿ ಉಂಟು ಮಾಡುವಂತಹ ಕಸ ಸಂಗ್ರಹಿಸುವಲ್ಲಿ ಅಂದರೆ ಒಡೆದ ಗಾಜಿನ ಚೂರು, ಹಾನಿಕಾರಕ ಕೆಮಿಕಲ್ಸ್ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ವಯೋವೃದ್ಧರು, ವಿಶೇಷ ಚೇತನರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುತ್ತಾಳೆ ಪ್ರಾರ್ಥನಾ.
    ಇನ್ಸ್‌ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಪ್ರಾರ್ಥನಾ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಮುಂದೆ ಇವಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಸಿಗಬೇಕು. ಆಗ ಖಂಡಿತವಾಗಿ ಸಾಧನೆಯನ್ನು ಮಾಡುವುದು ಖಚಿತ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕಿ ಆರ್.ವಿಜಯಾ.
    ಈ ವಿದ್ಯಾರ್ಥಿನಿ ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾಳೆ. ಹಾಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತೀರುವ ಪ್ರಾರ್ಥನಾ ಆಯನೂರು ಸಮೀಪದ ಹೊಸೂರು ಗ್ರಾಮದ ಡ್ರೈವರ್ ಶ್ರೀಧರ ಹಾಗೂ ಶ್ರೀಲಕ್ಷ್ಮೀ ದಂಪತಿ ಪುತ್ರಿ. ಬಡ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ್ದರೂ ಜೀವನದಲ್ಲಿ ಏನನ್ನಾದರೂ ಸಾಧಿಸಿಬೇಕೆಂಬ ಹಂಬಲ ಇದೆ. ಸರ್ಕಾರದಿಂದ ಇವಳಿಗೆ ಸೂಕ್ತ ಸಹಾಯ ಸಿಕ್ಕರೆ, ಉತ್ತಮ ಮಾರ್ಗದರ್ಶನ ಸಿಕ್ಕರೆ ಮುಂದಿನ ದಿನಗಳಲ್ಲಿ ಅನ್ವೇಷಣೆಯಲ್ಲಿ ತೊಡಗಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಈಕೆ ವಿಜಯಶಾಲಿ ಆಗಲಿ ಎಂಬುದು ಸಹಪಾಠಿಗಳ, ಶಿಕ್ಷಕರ ಮತ್ತು ಗ್ರಾಮಸ್ಥರ ಹಾರೈಕೆ.

    ಮನೆಯಲ್ಲಿ ಹಿರಿಯರು, ಆಸ್ಪತ್ರೆಗಳಲ್ಲಿ ಗ್ಲೌಸ್ ಧರಿಸಿ ಕಸ ಸಂಗ್ರಹಿಸುವುದು ನೋಡಿದಾಗ ಇಂತಹ ವಿಚಾರ ಹೊಳೆಯಿತು. ರಶ್ಮಿ ಟೀಚರ್ ಬಳಿ ವಿಷಯ ಪ್ರಸ್ತಾಪಿಸಿದ್ದೆ. ಅವರ ಮಾರ್ಗದರ್ಶನದಲ್ಲಿ ಮಾದರಿಯನ್ನು ತಯಾರಿಸಿದ್ದೇನೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ತುಂಬ ಖುಷಿಯಾಗಿದೆ.
    ಪ್ರಾರ್ಥನಾ ಎಸ್.ಶೆಟ್ಟಿ
    ವಿದ್ಯಾರ್ಥಿನಿ

    ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಈ ವಿದ್ಯಾರ್ಥಿನಿಯಲ್ಲಿದೆ. ವಿನಯವಂತೆ, ಹೇಳಿದ್ದನ್ನು ಸೂಕ್ಷ್ಮತೆಯಿಂದ ಅರಿತುಕೊಳ್ಳುತ್ತಾಳೆ. ನಾನು ಮಾರ್ಗದರ್ಶನ ನೀಡಿದ್ದರೂ ಅವಳದೇ ಕಲ್ಪನೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನೇ ಬಳಸಿ ಮಾದರಿ ತಯಾರಿಸಿದ್ದಾಳೆ.
    ಜಿ.ಎಚ್.ರಶ್ಮಿ
    ಮಾರ್ಗದರ್ಶಕ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts