More

    ಬರಹಗಾರನಿಗೆ ಭಾಷೆ, ಸಂಸ್ಕೃತಿ ಮೇಲಿನ ಎಚ್ಚರಿಕೆ ಪ್ರಜ್ಞೆ ಮುಖ್ಯ: ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ

    ಬೆಂಗಳೂರು ಸವಲತ್ತು, ಐಷಾರಾಮಿ ಬದುಕಿನ ಪ್ರಲೋಭನೆಗಳಿಗೆ ಒಳಗಾಗದೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಹಿಡಿತವನ್ನು ಕಾಯ್ದುಕೊಳ್ಳುವ ಎಚ್ಚರಿಕೆಯ ಪ್ರಜ್ಞೆ ಬರಹಗಾರರಿಗೆ ಇರಬೇಕು ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಸಲಹೆ ನೀಡಿದರು.

    ನಗರದ ಬಬ್ಬೂರುಕಮ್ಮೆ ಸೇವಾಸಮಿತಿ ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ 2023ನೇ ಸಾಲಿನ ಆಚಾರ್ಯ ಬಿಎಂಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜನ ಜೀವನದ ಆಚಾರ-ವಿಚಾರ, ಜನಪದೀಯ ಸಂಸ್ಕೃತಿ ಅಧ್ಯಯನದ ಜತೆಗೆ ಜನರೊಂದಿಗಿನ ಒಡನಾಟದ ಸಾಕ್ಷಾತ್ ಅನುಭವವನ್ನು ದಕ್ಕಿಸಿಕೊಂಡಿದ್ದೇ ನನ್ನ ಕಾದಂಬರಿಗಳ ಯಶಸ್ಸಿನ ಗುಟ್ಟಾಗಿದೆ ಎಂದರು.

    ಭಾರತೀಯರ ಸಾಹಿತ್ಯ ಸಂವೇದನೆ ಮತ್ತು ಸಾಂಸ್ಕೃತಿಕ ಮೌಲ್ಯಗಳು ವೈವಿಧ್ಯಮಯವಾಗಿದ್ದರೂ ತಾತ್ವಿಕ ಚಿಂತನೆ ಮತ್ತು ಜೀವನಾಶಯಗಳು ಏಕತ್ರವಾಗಿವೆ. ಹಾಗಾಗಿ, ಯಾವುದೇ ಭಾಷೆಯ ಮೂಲಕ ಆಯಾ ಕಾಲಘಟ್ಟದ ಜೀವನಕ್ರಮ ಕಟ್ಟಿಕೊಡುವುದು ಬಹಳ ಮುಖ್ಯ. ಈ ಕಾರಣದಿಂದಲೇ ನಾನು ಕನ್ನಡದಲ್ಲಿ ಬರೆಯುವ ಭಾರತೀಯ ಬರಹಗಾರ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.

    ಬಿಎಂಶ್ರೀ ಅವರ ನವೋದಯ ಸಾಹಿತ್ಯವೇ ನಮ್ಮೆಲ್ಲ ಬರವಣಿಗೆಯ ಬುನಾದಿ. ಅವರ ಸಾಹಿತ್ಯದ ಹೆಗಲ ಮೇಲೆ ಕುಳಿತು ಅವರ ಕಾಣ್ಕೆಗಳ ದರ್ಶನ ಭಾಗ್ಯ ಪಡೆದವರಲ್ಲಿ ನಾನೂ ಒಬ್ಬ ಎಂದ ಅವರು, ಬಿಎಂಶ್ರೀ ಅವರ ಕರುಣಾಳು ಬಾ ಬೆಳಕೆ..ಕವಿತೆ ಜನಮನದ ನಿತ್ಯ ಪಾರ್ಥನಾ ಗೀತೆಯಾಗಬೇಕು
    ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಮಿತಿಯ ಅಧ್ಯಕ್ಷ ಡಾ.ಎ.ವಿ. ಪ್ರಸನ್ನ ಮಾತನಾಡಿ, ಆಚಾರ್ಯ ಬಿಎಂಶ್ರೀ ನವೋದಯ ಸಾಹಿತ್ಯಕ್ಕೆ ನಾಂದಿ ಹಾಡಿದ ಶ್ರೇಷ್ಠ ಕನ್ನಡ ಬರಹಗಾರರು. ಸರಳ ಗದ್ಯಪ್ರಕಾರದ ಮೂಲಕ ಕನ್ನಡವನ್ನು ಜನಪ್ರಿಯಗೊಳಿಸಿದವರು. ಅಂತಹವರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿಗೆ ಡಾ. ಭೈರಪ್ಪ ಅವರು ಭಾಜನರಾಗಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿ ಮತ್ತೊಬ್ಬರಿಲ್ಲ ಎಂದರು.

    ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರು, ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 125ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತದಲ್ಲಿ ಪರಿಣತಿ ಪಡೆದ ವಿದ್ಯಾರ್ಥಿಗಳಿಗೆ ಶಾರದಾ ಶಂಕರ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಸಮಿತಿಯ ಉಪಾಧ್ಯಕ್ಷ ಡಾ. ಬಿ.ಕೆ. ಪ್ರಭಾಕರ್, ಕಾರ್ಯದರ್ಶಿ ಡಾ. ಎನ್. ಸತ್ಯಪ್ರಕಾಶ್ ಸೇರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಾಹಿತಿಗಳ ಜವಾಬ್ಧಾರಿ ಸಮಾಜದ ಓರೆಕೋರೆಗಳನ್ನು ತಿದ್ದಿ ವಿವಿಧ ಕಾಲಘಟ್ಟಗಳ ಜನಜೀವನ, ಸಂಸ್ಕೃತಿಯನ್ನು ದಾಖಲಿಸುವುದೇ ಆಗಿದೆ. ಈ ಕೆಲಸವನ್ನು ಸಮರ್ಥವಾಗಿ ಮಾಡಿರುವ ಭೈರಪ್ಪನವರು ವಿಶ್ವಕವಿ.
    – ಬಿ.ಎನ್. ಕೃಷ್ಣ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts