More

    ಎಚ್​ಐವಿ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಅಭಿಮತ

    ಬೆಂಗಳೂರು ಗ್ರಾಮಾಂತರ: ಎಚ್​ಐವಿ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಆವರಣ, ಜಾತ್ರೆಗಳು ನಡೆಯುವ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕಿನ ಬಗ್ಗೆ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ. ನಾಯಕ್ ಹೇಳಿದರು.

    ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಏಡ್ಸ್ ನಿಯಂತ್ರಣ ಕುರಿತ ತ್ರೖೆಮಾಸಿಕ ಸಭೆಯಲ್ಲಿ ಮಾತನಾಡಿದರು.

    ಸರ್ಕಾರಿ ಇಲಾಖೆಗಳಲ್ಲಿ ಎಚ್​ಐವಿ ಸೋಕಿಂತರಿಗೆ ಇರುವ ಸೌಲಭ್ಯಗಳ ಕುರಿತು ಉಚಿತ ಸಮಾಲೋಚನಾ ಸಭ ಆಯೋಜಿಸುವ ಮೂಲಕ ಸೋಂಕಿತರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಎಚ್​ಐವಿ ಸೋಂಕು ಹರಡುವುದು ಹೇಗೆ, ಸೋಂಕಿನಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳೇನು, ಸೋಂಕಿತರಿಗೆ ಇರುವ ಚಿಕಿತ್ಸಾ ವಿಧಾನ ಹಾಗೂ ಸವಲತ್ತುಗಳ ಅರಿವು ಮೂಡಿಸಬೇಕು, ಎಚ್​ಐವಿ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು ಎಂದು ಹೇಳಿದರು.

    ಸಂಪೂರ್ಣ ಮಾಹಿತಿ ಕಲೆಹಾಕಿ: ಎಚ್​ಐವಿ ಸೋಂಕಿತರ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದು ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು. ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬ ಮಾಹಿತಿ ಇರಬೇಕು. ಎಚ್​ಐವಿ ಸೋಂಕಿತರ ದೂರವಾಣಿ ಸಂಖ್ಯೆ ಪಡೆದು ಅವರ ಸಂಪೂರ್ಣ ಮಾಹಿತಿ ಕಲೆಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

    ಜಿಲ್ಲೆಯಲ್ಲಿ 3,695 ಮಂದಿಯಲ್ಲಿ ಎಚ್​ಐವಿ ಸೋಂಕಿತರು ದೃಢಪಟ್ಟಿದ್ದು, ಇವರಲ್ಲಿ 1,830 ಸೋಂಕಿತರು ಪಕ್ಕದ ಜಿಲ್ಲೆಗಳಲ್ಲಿರುವ ಎಆರ್​ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಎಆರ್​ಟಿ ಮತ್ತು ಲಿಂಕ್ ಎಆರ್​ಟಿ ಕೇಂದ್ರಗಳಲ್ಲಿ 1,249 ಮಂದಿ ಚಿಕಿತ್ಸೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, ಎಚ್​ಐವಿ ಸೋಂಕು ಪರೀಕ್ಷೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ತಾಲೂಕು ಆರೋಗ್ಯ ಅಧಿಕಾರಿಗಳಿಂದ ತರಬೇತಿ ಪಡೆದ ಸಮಾಲೋಚಕರು ಸೋಂಕಿತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಕರೊನಾ ಪರೀಕ್ಷೆಗಳು ನಡೆಯುತ್ತವೆ. ಆದರೆ ಕರೊನಾ ಪರೀಕ್ಷೆ ಒತ್ತಡದ ಕಾರಣ ನೀಡಿ ಎಚ್​ಐವಿ ಪರೀಕ್ಷೆ ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕರೊನಾ ನಿಯಮ ಕಡ್ಡಾಯ: ಸೋಂಕಿತರನ್ನು ಪತ್ತೆ ಹಚ್ಚಿ ಅವರಿಗೆ ಸವಲತ್ತು ನೀಡಬೇಕು. ಪ್ರತಿ ತಾಲೂಕಿನಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಕ್ಯಾಂಪ್​ಗಳನ್ನು ಏರ್ಪಡಿಸಬೇಕು ಎಂದು ಡಾ. ಮಂಜುಳಾ ದೇವಿ ಹೇಳಿದರು.

    ಇಂಥ ಶಿಬಿರಗಳನ್ನು ಆಯೋಜಿಸುವಾಗ ಎಚ್ಚರಿಕೆ ವಹಿಸಬೇಕು. ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮುಖ್ಯವಾಗಿ ಶುಚಿತ್ವಕ್ಕೆ ಗಮನ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಾಕೀತು ಮಾಡಿದರು.

    ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಸಂಚಾಲಕಿ ಡಾ. ಶಕೀಲಾ ಮಾತನಾಡಿ, ರಕ್ತದಾನ ಶಿಬಿರಗಳನ್ನು ಆಯೋಜಿಸುವಾಗ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts