ಕಾರವಾರ:ಜಿಲ್ಲೆಯ 6 ಜನರಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗಳು ಲಭಿಸಿವೆ.
ಸಾಹಿತಿಗಳಾದ ಡಾ.ಎಂ.ಎಸ್.ಆಶಾದೇವಿ, ಭೈರಮಂಗಲ ರಾಮೆಗೌಡ ಹಾಗೂ ಚಂದ್ರಿಕಾ ಪುರಾಣಿಕ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ಮೂರು ವರ್ಷಗಳ ಪ್ರಶಸ್ತಿಗಳನ್ನು ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಿಸಿದರು.
ಜು.23 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಹೊನ್ನಾವರ ಮೂಲದ ಮಾಧವಿ ಭಂಡಾರಿ ಅವರಿಗೆ 2022 ನೇ ಸಾಲಿನ ಕೆ.ಟಿ.ಬನಶಂಕರಮ್ಮ ಪ್ರಶಸ್ತಿ, ಹೊನ್ನಾವರದ ವೈದ್ಯೆ ಡಾ.ಎಚ್.ಎಸ್.ಅನುಪಮಾ ಅವರಿಗೆ 2022 ನೇ ಸಾಲಿನ ಪ್ರೇಮಾ ಭಟ್ ಮತ್ತು ಎ.ಎಸ್.ಭಟ್(ಪ್ರಕಾಶಕಿ ಮತ್ತು ಲೇಖಕಿ) ದತ್ತಿ ಪ್ರಶಸಿ ಲಭಿಸಿದೆ.
ನಾಗರೇಖಾ ಗಾಂವಕರ್ ಅವರ `ದಿ.ಡೈರಿ ಆಫ್ ಎ ಯಂಗ್ ಗರ್ಲ್’ ಕೃತಿಗೆ 2021 ನೇ ಸಾಲಿನ ಭಾಷಾಂತರ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಶ್ರೀದೇವಿ ಕೆರೆಮನೆ ಅವರ `ಚಿತ್ತ ಚಿತ್ತಾರ’ ಕಥಾ ಸಂಕಲನಕ್ಕೆ, 2020 ರ ಹಾಗೂ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರ `ಅಬ್ಬೊಲಿ’ ಕಥಾ ಸಂಕಲನಕ್ಕೆ 2021 ನೇ ಸಾಲಿನ ತ್ರಿವೇಣಿ ದತ್ತಿ ನಿಧಿ ಬಹುಮಾನ ಲಭಿಸಿದೆ.
ಇದನ್ನೂ ಓದಿ:ಏಷ್ಯಾಕಪ್ 2023 ವೇಳಾಪಟ್ಟಿ ಪ್ರಕಟ; ಸೆ.2ರಂದು ಭಾರತ-ಪಾಕ್ ಹಣಾಹಣಿ
ಉಪನ್ಯಾಸಕಿ ಕಾವ್ಯಶ್ರೀ ನಾಯ್ಕ ಮನ್ಮನೆ ಅವರ `ಆನು ದೇವಾ ಹೊರಗಣಳು ‘ ಕೃತಿಗೆ ನಿರುಪಮಾ ಮುದ್ರಣ ಮಾಧ್ಯಮ ಪ್ರಶಸ್ತಿ ಲಭಿಸಿದೆ.