More

    ಬಂಕಾಪುರದ ಕಲಾವಿದನಿಗೆ ಪ್ರಶಸ್ತಿ ಗರಿ

    ಬಂಕಾಪುರ: ಪಟ್ಟಣದ ಭಜನೆ ಪದಗಳ ಕಲಾವಿದ ಸಿದ್ದಲಿಂಗಪ್ಪ ಚನ್ನಬಸಪ್ಪ ನರೇಗಲ್ಲ ಅವರು ತತ್ವಪದ ವಿಭಾಗದಡಿ ಕರ್ನಾಟಕ ಜಾನಪದ ಅಕಾಡೆಮಿ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಸಿದ್ದಲಿಂಗಪ್ಪ ನರೇಗಲ್ಲ ಅವರು 1957ರಲ್ಲಿ ಬಂಕಾಪುರದ ಕೃಷಿ ಕುಟುಂಬದಲ್ಲಿ ಜನಿಸಿದ್ದು, ಬಾಲ್ಯದಲ್ಲಿ ಇವರ ಕಲಾಸಕ್ತಿಯನ್ನು ಗುರುತಿಸಿದ ತಂದೆ ಚನಬಸಪ್ಪ ಅವರು ಸಹಕಾರ ನೀಡಿದ್ದರಿಂದ ಇಂದು ಅಪ್ಪಟ ಜಾನಪದ ಹಾಡುಗಾರ, ಹಾಮೋನಿರ್ಯಂ ಕಲಾವಿದರಾಗಿ ಜನಾನುರಾಗಿಯಾಗಿದ್ದಾರೆ.

    ಕೃಷಿ ಕಾಯಕ ಮುಗಿಯುತ್ತಿದ್ದಂತೆ ನಿತ್ಯ ಸಂಜೆ ಹಾಮೋನಿಯಂ ನುಡಿಸುವುದನ್ನು ಕಲಿತು, ಭಜನೆ, ತತ್ವಪದ ಹಾಡುಗಾರಿಕೆ ಕಲಿತರು. ಬಂಕಾಪುರದ ಬೂದಿಬಸವೇಶ್ವರ ದೇವಸ್ಥಾನ ಜಗದ್ಗುರು ಪಂಚಾಚಾರ್ಯ ಭಜನಾ ಸಂಘ ರಚಿಸಿಕೊಂಡು ಹಾಡು ಹೇಳುವ ಕಾಯಕದಲ್ಲಿ ತೊಡಗಿಕೊಂಡಿದ್ದರು. 1986-96ರವರೆಗೆ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಭಜನೆ, ತತ್ವಪದ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಹಾನಗಲ್ಲ ತಾಲೂಕು ಮಾರನಬೀಡ ಭಜನಾ ಸ್ಪರ್ಧೆ ಸೇರಿದಂತೆ, ಉಳವಿ, ಮಲೆಬೆನ್ನೂರ, ಶಿರಾಳಕೊಪ್ಪ, ಶಿರಹಟ್ಟಿ, ಬಾಳೆಹೊನ್ನೂರ, ಕಪ್ಪತ್ತಗಿರಿ, ಮುಕ್ತಿಮಂದಿರ, ಯಾದಗಿರಿ ಜಿಲ್ಲೆ ಮೈಲಾಪುರ, ಸವಣೂರ ಸೇರಿದಂತೆ ಜಿಲ್ಲೆಯ ಹಲವು ತಾಲೂಕಿನ ಅನೇಕ ಗ್ರಾಮಗಳಲ್ಲಿ ವಾರಾಂತ್ಯ ಭಜನಾ, ತತ್ವಪದ ಹಾಡುಗಾರರಾಗಿ ಸೇವೆ ಸಲ್ಲಿಸಿದ್ದಾರೆ.

    ಸಿದ್ದಲಿಂಗಪ್ಪ ನರೇಗಲ್ಲ ಅವರು ಶರಣರು, ಸಂತರ ಕುರಿತು 90 ಹಾಡುಗಳನ್ನು ಮತ್ತು ನೂರಕ್ಕೂ ಹೆಚ್ಚು ತತ್ವಪದ, ಭಜನಾ ಪದಗಳನ್ನು ಸ್ವತಃ ರಚಿಸಿ, ಭಿನ್ನ-ವಿಭಿನ್ನ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಅವರ ಪ್ರತಿಭೆ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

    ನನ್ನ ನಿರಂತರ ಕಲಾ ಸೇವೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ, ಪ್ರಶಸ್ತಿಗೆ ಆಯ್ಕೆಗೊಳಿಸಿ ಇನ್ನೂ ಹೆಚ್ಚಿನ ಕಲಾ ಸೇವೆಗೆ ಅಕಾಡೆಮಿ ಪ್ರೋತ್ಸಾಹ ನೀಡಿದೆ. ಈ ಪ್ರಶಸ್ತಿಯು ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಬಂದಿದ್ದು, ಖುಷಿ ತಂದಿದೆ.

    | ಸಿದ್ದಲಿಂಗಪ್ಪ ನರೇಗಲ್ಲ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಭಾಜನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts