ಗಂಗಾವತಿ: ನಗರದ ಕಂಪ್ಲಿ ರಸ್ತೆಯಲ್ಲಿರುವ ಆಟೋ ಚಾಲಕರ ಸಂಘಕ್ಕೆ ಮಂಜೂರಾದ ಭೂಮಿಯನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ದಸಂಸ (ಭೀಮವಾದ) ನೇತೃತ್ವದಲ್ಲಿ ಜೈ ಭೀಮ ಆಟೋ ಚಾಲಕರ ಸಂಘ ಶುಕ್ರವಾರ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಪೌರಾಯುಕ್ತ ಅರವಿಂದ ಜಮಖಂಡಿಗೆ ಮನವಿ ಸಲ್ಲಿಸಿದರು.’
ಸಂಘದ ರಾಜ್ಯ ಸಂಚಾಲಕ ಹುಸೇನಪ್ಪ ಹಂಚಿನಾಳ ಮಾತನಾಡಿ, 20 ವರ್ಷಗಳ ಹಿಂದೆ ಸರ್ವೇ ನಂ.165/1ರಲ್ಲಿನ 4 ಎಕರೆ ಭೂಮಿಯನ್ನು ಆಟೋ ಚಾಲಕರ ಸಂಘದವರಿಗಾಗಿ ಮೀಸಲಿಟ್ಟಿದ್ದು, ನಿರ್ವಹಣೆ ಕೊರತೆಯಿಂದ ತ್ಯಾಜ್ಯ ಸಂಗ್ರಹ ಪ್ರದೇಶವಾಗಿದೆ. ನಗರದ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿಯೇ ಉದ್ದೇಶಿತ ಭೂಮಿಯಲ್ಲಿ ಹಾಕುತ್ತಿದ್ದಾರೆ. ಅಭಿವೃದ್ಧಿ ಕೊರತೆಯಿಂದ ಒತ್ತುವರಿಯಾಗಿದೆ. ಕುಡಿವ ನೀರು, ವಿದ್ಯುತ್, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಆಟೋ ಚಾಲಕರ ಸಂಘದ ಸದಸ್ಯರಿಗೆ ಮೀಸಲಾದ ಪ್ರದೇಶದ ಬಗ್ಗೆ ಕಂದಾಯ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದ್ದು, ತ್ಯಾಜ್ಯ ಹಾಕುವುದನ್ನು ನಿಲ್ಲಿಸಲಾಗುವುದು. ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗುವುದು ಎಂದು ಪೌರಾಯುಕ್ತ ಅರವಿಂದ ತಿಳಿಸಿದರು.