More

    ಗ್ಯಾಂಗ್​​​ಸ್ಟರ್​ ವಿಕಾಸ್​ ದುಬೆ ಮನೆಯನ್ನು ಕೆಡವಿ, ಎರಡು ಕಾರನ್ನು ಧ್ವಂಸ ಮಾಡಿದ ಕಾನ್ಪುರ ಜಿಲ್ಲಾಡಳಿತ

    ಕಾನ್ಪುರ: ಬಂಧಿಸಲು ಬಂದ ಎಂಟು ಪೊಲೀಸರನ್ನು ಹತ್ಯೆಗೈದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಸದ್ಯ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು 100 ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ಚುರುಕಾಗಿ ನಡೆಯುತ್ತಿದೆ.

    ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ಮೇಲೆ ಒಟ್ಟು 60 ಕ್ರಿಮಿನಲ್​ ಕೇಸ್​ ಇವೆ. ಬಿಕ್ರು ಗ್ರಾಮದಲ್ಲಿ ಅಡಗಿದ್ದ ಆತನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆಗ ಆತನ ಬೆಂಬಲಿಗರು ಪೊಲೀಸರ ವಿರುದ್ಧ ಹೋರಾಟಕ್ಕೆ ಇಳಿದು, ಗುಂಡಿನ ದಾಳಿ ನಡೆಸಿದ್ದರು. ಇದರಿಂದಾಗಿ ಎಂಟು ಮಂದಿ ಪೊಲೀಸರು ಮೃತರಾಗಿದ್ದಾರೆ.

    ಅತ್ತ ದುಬೆಯನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರೆ, ಇತ್ತ ಕಾನ್ಪುರ ಸ್ಥಳೀಯ ಆಡಳಿತ ಬಿಥೂರ್​​ನಲ್ಲಿರುವ ವಿಕಾಸ್​ ದುಬೆ ಮನೆಯನ್ನು ಕೆಡವಿ ಹಾಕಿದೆ. ಜೆಸಿಬಿ ಮೂಲಕ ಸಂಪೂರ್ಣ ಧ್ವಂಸ ಮಾಡಿದೆ.
    ದುಬೆ ಮನೆಯ ಗೋಡೆಗಳೆಲ್ಲ ನೆಲಸಮ ಆಗಿದ್ದರ ಮತ್ತು ಎರಡು ಎಸ್​ಯುವಿ ಕಾರುಗಳು ಧ್ವಂಸ ಆಗಿದ್ದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಇದನ್ನೂ ಓದಿ:  ಗ್ಯಾಂಗ್​​ಸ್ಟರ್​ ವಿಕಾಸ್ ದುಬೆ ಪರಾರಿ ಆಗಿರುವುದೆಲ್ಲಿಗೆ- ನೇಪಾಳಕ್ಕೋ, ಚಂಬಲ್ ಕಣಿವೆ ಪ್ರದೇಶಕ್ಕೋ?

    ಸ್ಥಳೀಯ ಆಡಳಿತ ದುಬೆ ಮನೆಯನ್ನು ಕೆಡವುವಾಗ ಅಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರೂ ಇದ್ದರು. ಆ ಸಮಯದಲ್ಲಿ ಇಡೀ ಏರಿಯಾವನ್ನು ಲಾಕ್ ಮಾಡಲಾಗಿತ್ತು. ಉಳಿದ ಮನೆಯಲ್ಲಿರುವವರಿಗೆ ಯಾವ ಕಾರಣಕ್ಕೂ ಹೊರಗೆ ಬರಬೇಡಿ ಎಂದು ಸೂಚನೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಅಷ್ಟೇ ಅಲ್ಲ, ದುಬೆಯ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಲು, ಬ್ಯಾಂಕ್ ಅಕೌಂಟ್​​ಗಳನ್ನು ಜಪ್ತಿ ಮಾಡಲು ಸಂಬಂಧಪಟ್ಟ ತನಿಖಾ ದಳಗಳು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ.  ಅಡಗಿರುವ ದುಬೆ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ.ಬಹುಮಾನ ನೀಡುವುದಾಗಿ ಕಾನ್ಪುರ ಐಜಿ ಘೋಷಿಸಿದ್ದಾರೆ.

    ದುಬೆಯದ್ದು ಮಿತಿಮೀರಿದ ಕ್ರೌರ್ಯವಾಗಿತ್ತು. ಆತ ತನ್ನ ಸುತ್ತಲಿನ ಜನರಿಗೆ ಜೀವ ಬೆದರಿಕೆ ಹಾಕಿ ಅವರ ಭೂಮಿಗಳನ್ನು ಕಬಳಿಸುತ್ತಿದ್ದ. ಈ ಬಗ್ಗೆ ಅವನ ಮನೆಯ ಸಮೀಪ ವಾಸವಾಗಿರುವ, ಅವನಿಂದ ಸಂಕಷ್ಟಕ್ಕೀಡಾದ ಜನರೇ ಮಾಹಿತಿ ನೀಡಿದ್ದಾರೆ ಎಂದು ಐಜಿ ಮೋಹಿತ್​ ಅಗರ್​​ವಾಲ್​ ತಿಳಿಸಿದ್ದಾರೆ. ಇದನ್ನೂ ಓದಿ: ದುಬೆಗೆ- ದಾಳಿಯ ಸುಳಿವು ಪೊಲೀಸರೇ ಕೊಟ್ರಾ?

    ದುಬೆಗೆ ಆತನ ಬಂಧನದ ಸುಳಿವು ನೀಡಿ, ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿ ಚೌಬೆಪುರ್​ ಪೊಲೀಸ್​ ಠಾಣೆಯ ಅಧಿಕಾರಿ ವಿನಯ್ ತಿವಾರಿಯನ್ನು ಇಂದು ಬೆಳಗ್ಗೆಯಷ್ಟೇ ಸಸ್ಪೆಂಡ್ ಮಾಡಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts