More

    ಆಪೂಸಿಗೆ ಆಪತ್ತಾದ ಅಕಾಲಿಕ ಮಳೆ

    ಬೆಳಗಾವಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯು ಮಾವು ಬೆಳೆಗಾರರ ನೆಮ್ಮದಿ ಕಸಿದಿದೆ. ತೇವಾಂಶ ಹೆಚ್ಚಾಗಿ ‘ಬೂದಿ ರೋಗ’ಕ್ಕೆ ತುತ್ತಾಗಿ ಹೂವು ಹಾಗೂ ಪೀಚು ಗಾತ್ರದ ಕಾಯಿಗಳು ಉದುರುವ ಆತಂಕ ಎದುರಾಗಿದೆ.

    ಈ ಬಾರಿ ಮುಂಗಾರಿನಲ್ಲಿ ವಾಡಿಕೆಗೂ ಹೆಚ್ಚು ಉತ್ತಮ ಮಳೆಯಾಗಿದ್ದರಿಂದ ಮಾವಿನ ಮರಗಳಲ್ಲಿ ಮೈತುಂಬ ಹೂವು ಗೊಂಚಲುಗಳು ಅರಳಿವೆ. ಇನ್ನೂ ಕೆಲವು ಕಡೆ ಪೀಚು ಗಾತ್ರದ ಕಾಯಿಗಳಾಗಿ ಬೆಳೆದಿದ್ದರಿಂದ ಬೆಳೆಗಾರರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಅಕಾಲಿಕ ಮಳೆಯಿಂದಾಗಿ ಹೂವಿನ ಜತೆಗೆ ಬೆಳೆಗಾರರ ನಿರೀಕ್ಷೆಯೂ ಕಮರಿದೆ.

    4,472 ಹೆಕ್ಟೇರ್ ಪ್ರದೇಶದಲ್ಲಿ ಮಾವು: ಜಿಲ್ಲಾದ್ಯಂತ 28 ಸಾವಿರ ಮಾವು ಬೆಳೆಗಾರರಿದ್ದು, 4,472 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಎರಡು ತಿಂಗಳ ಹಿಂದೆ ಸುರಿದ ಮಳೆಯೇ ಮಾವಿನ ಮರಗಳಿಗೆ ಸಾಕಾಗಿತ್ತು. ಉತ್ತಮ ಮಳೆಯಿಂದಾಗಿ ಸಾಕಷ್ಟು ಕಡೆ ಕಾಯಿ ಸಹ ಬಂದಿದ್ದವು. ಆದರೆ, ಈಗ ಬೀಳುತ್ತಿರುವ ಮಳೆ ಹೀಗೆಯೇ ಇನ್ನೆರಡು ದಿನ ಮುಂದುವರಿದರೆ ಅರ್ಧಕ್ಕಿಂತ ಹೆಚ್ಚು ಬೆಳೆ ಹಾನಿಯಾಗುವ ಸಾಧ್ಯತೆ ಇದೆ.

    ಬೂದಿ ರೋಗ ಸಾಧ್ಯತೆ: ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ಅವರು, ಜಿಲ್ಲೆಯಲ್ಲಿ ಹೆಚ್ಚಾಗಿ ಆಪೂಸ್ ಮಾವು ಬೆಳೆಯಲಾಗುತ್ತದೆ. ಮಾವು ಹೂ ಬಿಟ್ಟಿರುವ ಕಾರಣ ಈ ಅವಧಿಯಲ್ಲಿ ಮಳೆ ಅವಶ್ಯಕತೆ ಇರಲಿಲ್ಲ. ತೇವಾಂಶ ಹೆಚ್ಚಾದಷ್ಟು ಹೂವು ಉದುರುವುದರ ಜತೆಗೆ ‘ಬೂದಿ ರೋಗ’ ಹರಡುವ ಸಾಧ್ಯತೆ ಇದೆ. ಫಸಲು ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಔಷಧೋಪಚಾರ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದರು.

    ತರಕಾರಿಗೂ ಭೀತಿ: ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ತೋಟಗಾರಿಕೆ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ರೋಗ ಕಾಡುವ ಆತಂಕ ಹೆಚ್ಚಾಗಿದೆ. ಬದನೆ, ಟೊಮ್ಯಾಟೋ, ಹೂ-ಕೋಸು, ಕ್ಯಾಪ್ಸಿಕಂ ಹಾಗೂ ಹೀರೆಕಾಯಿ ಸೇರಿದಂತೆ ಹಲವು ತರಕಾರಿಗಳಿಗೆ ಹುಳುಬಾಧೆ ಕಾಡುವ ಸಾಧ್ಯತೆ ಇದೆ.

    ಕಳೆದ ಮಾರ್ಚ್ ನಂತರ ಬಂದ ಫಸಲಿನಿಂದ ಲಾಭ ಕಂಡುಕೊಳ್ಳಲು ಕರೊನಾ ಲಾಕ್‌ಡೌನ್ ಅಡ್ಡಿಯಾಗಿ ಮಾರುಕಟ್ಟೆಯೇ ಸಿಗಲಿಲ್ಲ. ಇದೀಗ ಮಾವಿನ ಮರಗಳು ಹೆಚ್ಚು ಹೂವು-ಕಾಯಿ ಬಿಟ್ಟಿದ್ದರಿಂದ ಲಾಭದ ನಿರೀಕ್ಷೆಯಲ್ಲಿದ್ದೇವೆ. ಆದರೆ, ಮಳೆ ಸುರಿಯುತ್ತಿರುವುದರಿಂದ ರೋಗ ಅಂಟಿ ಹೂವು ಉದುರುವ ಆತಂಕ ಎದುರಾಗಿದೆ.
    | ಮಲ್ಲಪ್ಪ ಪಾಟೀಲ, ಸಂತೋಷ ದೊಡಮನಿ
    ಕಿತ್ತೂರು-ಅಮಬಡಗಟ್ಟಿ ಗ್ರಾಮದ ಮಾವು ಬೆಳೆಗಾರರು

    ಮಾವು ರಕ್ಷಣೆಗೆ ಔಷಧೋಪಚಾರ ಸಂಭವನೀಯ ಹೂವು ತೆನೆ ಕಪ್ಪಾಗುವ ರೋಗ ಹಾಗೂ ‘ಬೂದಿ ರೋಗ’ ತಡೆಗಟ್ಟಲು ಹಾಕೊನಾಜೊಲ್ 2 ಮಿ.ಲೀ. ಅಥವಾ ಮಿಥೈಲ್ ಥಯೋಫಿನೈಟ್ 1 ಗ್ರಾಂ ಅಥವಾ ಕಾರ್ಬನ್‌ಡೈಜಿಮ್ 1 ಗ್ರಾಂ ಮತ್ತು ಹೂವು ಮತ್ತು ಮಿಡಿಕಾಯಿ ಉದುರುವುದನ್ನು ನಿಯಂತ್ರಿಸಲು 0.50 ಮಿ.ಲೀ. ಪ್ಲಾನೋಪಿಕ್ಸ್‌ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹಾನಿ ತಡೆಗಟ್ಟಬಹುದು ಎಂದು ಉಪನಿರ್ದೇಶಕ ರವಿಂದ್ರ ಹಕಾಟೆ ಸಲಹೆ ನೀಡಿದ್ದಾರೆ.

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts