More

    ಅತಿಸಣ್ಣ ರೈತರ ಜಮೀನಿಗೆ ಅರಣ್ಯ ಇಲಾಖೆ ಕ್ಯಾತೆ: ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

    ಬಿಡದಿ: ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯಆಡಳಿತದ ಅವಧಿಯಲ್ಲಿ ಬೈರಾಗಿ ಕಾಲನಿ ಮತ್ತು ವಾಜರಹಳ್ಳಿಯ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ಮಂಜೂರಾಗಿದ್ದ ಕೃಷಿ ಭೂಮಿ ತನಗೆ ಸೇರಿದ್ದೆಂದು ಅರಣ್ಯ ಇಲಾಖೆ ಕ್ಯಾತೆ ತೆಗೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಗಿ ಕಾಲನಿಯಲ್ಲಿ ಮಂಗಳವಾರ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ವಿವರಿಸಿದ್ದು, ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮದ ಹಿರಿಯ ಎಚ್.ಸಿ.ನಾಗರಾಜು ಮಾತನಾಡಿ, ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಜತೆಗೆ ವಾಜರಹಳ್ಳಿ ಗ್ರಾಮದ ಸರ್ವೇ ನಂಬರ್ 26, 30, 31 ಹಾಗೂ 34ರಲ್ಲಿರುವ ಜಮೀನಿನಲ್ಲಿ ನಮ್ಮಮುತ್ತಜ್ಜರ ಕಾಲದಿಂದಲೂ ಕೃಷಿ ಮಾಡುತ್ತ ಬರಲಾಗಿದೆ. ಸುಮಾರು 65 ವರ್ಷಗಳ ಹಿಂದೆ ಭೂಮಿ ಮಂಜೂರಾಗಿ ಸಾಗುವಳಿ ಸಹ ನಮ್ಮ ಹೆಸರಿಗೆ ಆಗಿದೆ. ಅನುಭವದಂತೆ ನಮ್ಮ ಹೆಸರಿಗೆ ವಿಸ್ತೀರ್ಣ ದಾಖಲಾಗಿ ಪಹಣಿ ಸಹ ಬರುತ್ತಿದೆ. ಆದರೆ, ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಅಧಿಕಾರಿಗಳು ನಾಮಫಲಕ ಅಳವಡಿಸಿ ತಗಾದೆ ತೆಗೆಯುತ್ತಿದ್ದಾರೆ. ಇದರ ಪರಿಣಾಮ ಬಡಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಡದಿ ಆರ್‌ಎಸ್‌ಎಸ್‌ಎಸ್‌ಬಿಎನ್ ನಿರ್ದೇಶಕ ವಿ.ಆರ್.ಮಹೇಶ್ ಮಾತನಾಡಿ, ಸಿ.ಎಂ.ಲಿಂಗಪ್ಪ ಶಾಸಕರಾಗಿದ್ದಾಗ ಬೈರಾಗಿ ಕಾಲನಿಯ ಬಡವರಿಗೆ ನಿವೇಶನ ಹಂಚಿದ್ದರು. ನಂತರದ ದಿನಗಳಲ್ಲಿ ಎಚ್.ಸಿ. ಬಾಲಕೃಷ್ಣ ಶಾಸಕರಾಗಿದ್ದ ವೇಳೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ತೊಂದರೆ ನೀಡಿದಾಗ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಅನುಕೂಲ ಕಲ್ಪಿಸಿದ್ದರು. ಆದರೂ ಸಮಸ್ಯೆ ಬೆಂಬಿಡದೆ ಕಾಡುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಚುನಾಯಿತ ಪ್ರತಿನಿಧಿಗಳ ಬಳಿ ಮನವಿ ಮಾಡುವುದಾಗಿ ತಿಳಿಸಿದರು.

    ಗ್ರಾಮಸ್ಥರಾದ ಮಾರಪ್ಪ, ಕೆಂಗಲ್‌ಹನುಮಂತಯ್ಯ, ಹೇಮಂತ್, ನಾಗರಾಜು, ಗಿರೀಶ್, ಮುನಿಯಪ್ಪ, ಮೋಹನ್, ನಾಗಮ್ಮ, ಈರಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ ಸೇರಿ ನೂರಾರು ಗ್ರಾಮಸ್ಥರು ಇದ್ದರು.

    ನಾಮಲಕ ಹೇಳುವುದೇನು?: ರೈತರ ಭೂಮಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ನಾಮಫಲಕದಲ್ಲಿ ಸರ್ಕಾರದ ಆದೇಶ ಸಂಖ್ಯೆ: 1762-5-ಎ್ಟಿ. 321-34-2 ದಿನಾಂಕ 26-30ನೇ ಆಗಸ್ಟ್ 1935ರ ಅನ್ವಯ ವಾಜರಹಳ್ಳಿ ಗ್ರಾಮದ ಸರ್ವೆ ನಂ. 26ರಲ್ಲಿ 37-36 ಎಕರೆ, 30 ರಲ್ಲಿ 0-33 ಎಕರೆ, 34ರಲ್ಲಿ 105-25 ಎಕರೆ ಭೂಮಿಯು ಕುಂಬಳಗೂಡು ರಾಜ್ಯ ಅರಣ್ಯದ ಎಕ್ಸ್‌ಟೆನ್ಸನ್ ಬ್ಲಾಕ್-111ರ ಅರಣ್ಯ ಪ್ರದೇಶವೆಂದು ಘೋಷಿತವಾಗಿದ್ದು,
    ಅಕ್ರಮ ಪ್ರವೇಶ, ಅರಣ್ಯ ಭೂಮಿ ಒತ್ತುವರಿ, ಉಳುಮೆ ಮಾಡುವುದು ನಿಷಿದ್ದವಾಗಿದ್ದು, ಉಲ್ಲಂಘಿಸಿದವರನ್ನು ಅರಣ್ಯ ಅಧಿನಿಯಮ 1963ರ ಕಲಂ 24ರಂತೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದೆ.

    ಮನವಿಗೆ ಸ್ಪಂದನೆ ಇಲ್ಲ: ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ನಾವು ಅತೀ ಸಣ್ಣ ರೈತರಾಗಿದ್ದು, ಗ್ರಾಮ ಸಹ ಅದೇ ಪರಿಮಿತಿಯಲ್ಲಿ ಬರುವುದರಿಂದ ಪಂಚಾಯಿತಿಯಲ್ಲಿ ಗಣಕೀಕೃತ ಖಾತಾ ದಾಖಲು ಸಹ ಆಗುತ್ತಿಲ್ಲ. ಗ್ರಾಮವನ್ನು ದತ್ತು ಪಡೆದು ಬಿಎಚ್‌ಇಎಲ್ ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗಿದೆ. 1500ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಎರಡು ಗ್ರಾಮಗಳಲ್ಲಿ ಸ್ಮಶಾನ ಸಹ ಮಂಜೂರಾಗಿಲ್ಲ. ಹಲವು ದಿನಗಳಿಂದ ಸಮಸ್ಯೆ ಕಾಡುತ್ತಿದೆ. ಚುನಾವಣೆ ಬಂದಾಗ ಬರುವ ಚುನಾಯಿತ ಪ್ರತಿನಿಧಿಗಳು ಆಶ್ವಾಸನೆ ನೀಡಿ ಹೋಗಿದ್ದು ಬಿಟ್ಟರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಇನ್ನು ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಶಾಸಕರು ಪರಿಶೀಲಿಸಲಿ: ಶಾಸಕ ಎ.ಮಂಜುನಾಥ್ ಅವರು ಸ್ಥಳ, ಮೂಲ ದಾಖಲೆಗಳನ್ನು ಪರಿಶೀಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡದಂತೆ ಸೂಚಿಸುವ ಮೂಲಕ ಎರಡು ಗ್ರಾಮಗಳ ಜನರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ವಾಜರಹಳ್ಳಿ ಗ್ರಾಮದ ಸರ್ವೇ ನಂಬರ್ 26, 30, 31, 34ರ ಭೂಮಿಯನ್ನು ಸರ್ಕಾರ 1935ರಲ್ಲಿಯೇ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಬಗ್ಗೆ ದಾಖಲೆ ಇದೆ. ಯಾವುದೇ ಡಿ-ನೋಟಿಫಿಕೇಷನ್ ಸಹ ಆಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಕೆಲವು ರೈತರಿಗೆ ಮಂಜೂರು ಸಹ ಮಾಡಿರುವುದು ಕ್ರಮವಲ್ಲ. 1980ಕ್ಕಿಂತ ಹಿಂದೆ ಸರ್ಕಾರ ಆದೇಶ ಮಾಡಿದ್ದರೆ ಮಾತ್ರ ರೈತರು ಭೂಮಿಯ ಮೇಲೆ ಹಕ್ಕು ಪಡೆಯುತ್ತಾರೆ. ಆದರೆ ರೈತರಲ್ಲಿ ಆ ರೀತಿಯ ಯಾವುದೇ ದಾಖಲೆಗಳಿಲ್ಲ.
    ದಾಳೇಶ್ ವಲಯ ಅರಣ್ಯಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts