More

    ಮಾ.5-6ಕ್ಕೆ ಲೋಕಕಲ್ಯಾಣಾರ್ಥ ಅತಿರುದ್ರ ಮಹಾಯಾಗ

    ಶಿವಮೊಗ್ಗ: ಅತಿರುದ್ರ ಮಹಾಯಾಗ ಸಂಚಾಲನಾ ಸಮಿತಿ ಹಾಗೂ ಭಕ್ತ ವೃಂದದಿಂದ ಲೋಕ ಕಲ್ಯಾಣಾರ್ಥ ಹಾಗೂ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲೆಂದು ಪ್ರಾರ್ಥಿಸಿ ಅತಿರುದ್ರ ಮಹಾಯಾಗವನ್ನು ಮಾ. 5 ಮತ್ತು 6ರಂದು ವಿನೋಬನಗರ ಶಿವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಗೌರವಾಧ್ಯಕ್ಷ ಎನ್.ಜೆ.ರಾಜಶೇಖರ್ (ಸುಭಾಷ್) ತಿಳಿಸಿದರು.

    ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ತಂಡವು 121 ಪುರೋಹಿತರೊಂದಿಗೆ ಅತಿರುದ್ರ ಮಹಾಯಾಗವನ್ನು ನಡೆಸಿಕೊಡಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    5ರಂದು ಬೆಳಗ್ಗೆ 8ಕ್ಕೆ ಮಹಾಸಂಕಲ್ಪದೊಂದಿಗೆ ಗಂಗಾಪೂಜೆ, ಗಣಪತಿ, ನಾಂದಿ, ಪುಣ್ಯಾಹ, ಉಮಾಮಹೇಶ್ವರ, ಪಂಚಬ್ರಹ್ಮ ಕಲಶ, ಕದಶ ರುದ್ರ ಕಲಶಾರಾಧನೆ, ನವಗ್ರಹ ಹಾಗೂ ಪೂಜಾದಿಗಳು ಪ್ರಾರಂಭವಾಗಲಿವೆ. ಬೆಳಗ್ಗೆ 10ಕ್ಕೆ ಶ್ರೀ ಅತಿರುದ್ರ ಮಹಾಯಾಗ, ಶಿವಾಗ್ನಿ ಪ್ರತಿಷ್ಠೆ ನಡೆಯಲಿದ್ದು, ಅಂದು ಸಂಜೆ 4ಕ್ಕೆ ಉತ್ತರಾರ್ಧ ಪೂಜೆ ಆರಂಭಗೊಳ್ಳಲಿದೆ. ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗೇಶ್ವರ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಸ್ವಾಮೀಜಿ ಸಮ್ಮುಖದಲ್ಲಿ ಮಹಾಯಾಗವು ನೆರವೇರಲಿದೆ ಎಂದರು.
    6ರಂದು ಬೆಳಗ್ಗೆ 11.30ಕ್ಕೆ ನಡೆಯುವ ಧರ್ಮಸಭೆಯ ಸಾನ್ನಿಧ್ಯವನ್ನು ಉಜ್ಜಯನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ ವಹಿಸುವರು ಎಂದರು.
    ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ವಿದೇಶಾಂಗ ವ್ಯವಹಾರಗಳ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ವಿಶೇಷ ಆಹ್ವಾನಿತರಾಗಿರುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿಶೆಟ್ಟಿ ಭಾಗವಹಿಸುವರು ಎಂದರು.
    ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಸರ್ಜಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, 11 ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, 1,331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14,641 ಬಾರಿ ಮಾಡಿದರೆ ಅತಿರುದ್ರಾಭಿಷೇಕವಾಗುವುದು ಎಂದರು.
    ಉಪಾಧ್ಯಕ್ಷರಾದ ಎಚ್.ವಿ.ಮಹೇಶ್ವರಪ್ಪ, ಎಸ್.ದತ್ತಾತ್ರಿ, ಜ್ಞಾನೇಶ್ವರ್, ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ, ಸಹ ಸಂಚಾಲಕರಾದ ಮಹಾಲಿಂಗಯ್ಯ ಶಾಸ್ತ್ರಿ, ನಾಗಯ್ಯ ಶಾಸ್ತ್ರಿಗಳು, ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್, ಅನಿತಾ ರವಿಶಂಕರ್, ಮೋಹನ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts