More

    ಕೊನೆಗೂ ರೈಟ್ ರೈಟ್: ಸಾರಿಗೆ ಮುಷ್ಕರ ಅಂತ್ಯ, ಬೇಡಿಕೆ ಈಡೇರಿಕೆಗೆ 3 ತಿಂಗಳ ಗಡುವು..

    ಬೆಂಗಳೂರು: ಪ್ರತಿಷ್ಠೆಯ ಹಗ್ಗಜಗ್ಗಾಟಕ್ಕೆ ಸಿಲುಕಿ, ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯ ಕಂಡಿದೆ. ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸರ್ಕಾರಕ್ಕೆ 3 ತಿಂಗಳ ಗಡುವು ನೀಡುವ ಮೂಲಕ ನೌಕರರು ಮುಷ್ಕರ ಹಿಂಪಡೆದಿದ್ದಾರೆ. ಇದರಿಂದ ಸಾರಿಗೆ ಸೇವೆ ಸ್ಥಗಿತದಿಂದ ತೊಂದರೆಗೀಡಾಗಿದ್ದ ಲಕ್ಷಾಂತರ ಪ್ರಯಾಣಿಕರೂ ನಿಟ್ಟುಸಿರು ಬಿಟ್ಟಿದ್ದಾರೆ.

    ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, 6ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿ ಒಟ್ಟು 10 ಬೇಡಿಕೆಗಳನ್ನು ಮುಂದಿಟ್ಟು ಕಳೆದ ಶುಕ್ರವಾರದಿಂದ 1.26 ಲಕ್ಷ ಸಾರಿಗೆ ನೌಕರರು ಮುಷ್ಕರದಲ್ಲಿ ತೊಡಗಿದ್ದರು. ಭಾನುವಾರ ಸಂಜೆ ಮುಷ್ಕರನಿರತ ನೌಕರರ ಮುಖಂಡ ರೊಂದಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಹಲವು ಸಚಿವರು ಮಾತುಕತೆ ನಡೆಸಿದರೂ, ಮುಖಂಡರು ಸರ್ಕಾರದ ಭರವಸೆ ಯನ್ನು ಒಪ್ಪಿರಲಿಲ್ಲ. ಹೀಗಾಗಿ ಸೋಮವಾರವೂ ಮುಷ್ಕರ ಮುಂದು ವರಿಸುವುದಾಗಿ ಘೋಷಿಸಿದ್ದರು. ನೌಕರರ ಮುಖಂಡರ ಆಗ್ರಹದಂತೆ ಸೋಮವಾರ ಮಧ್ಯಾಹ್ನ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಲಿಖಿತವಾಗಿ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ ನಂತರ ಮುಷ್ಕರ ಹಿಂಪಡೆಯಲಾಯಿತು. ಮಂಗಳವಾರದಿಂದ ಎಂದಿನಂತೆ ಸಾರಿಗೆ ವ್ಯವಸ್ಥೆ ಮುಂದುವರಿಯಲಿದೆ.

    ಕೊನೆಗೂ ರೈಟ್ ರೈಟ್: ಸಾರಿಗೆ ಮುಷ್ಕರ ಅಂತ್ಯ, ಬೇಡಿಕೆ ಈಡೇರಿಕೆಗೆ 3 ತಿಂಗಳ ಗಡುವು..
    ಮುಷ್ಕರ ಅಂತ್ಯವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಬಸ್​ ಸಂಚಾರ ಆರಂಭವಾಯಿತು.

    ಸಂಜೆ ವೇಳೆಗೆ ಬಸ್ ಸಂಚಾರ ಆರಂಭ: ಮುಷ್ಕರ ಅಂತ್ಯವಾಗಿದೆ ಎಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಘೋಷಣೆಯಾಗುತ್ತಿದ್ದಂತೆ, ಮನೆಯಲ್ಲಿದ್ದ ನೌಕರರು ಒಬ್ಬೊಬ್ಬರಾಗಿ ಡಿಪೋಗಳತ್ತ ಬಂದರು. ಸಂಜೆ 4.30ರ ನಂತರ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರ ಆರಂಭವಾಯಿತು.

    ಸ್ಪಷ್ಟತೆಯಿಲ್ಲದ ಅಂಶ

    6ನೇ ವೇತನ ಆಯೋಗದ ಶಿಫಾರಸು ಜಾರಿ ನೌಕರರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಸಚಿವ ಲಕ್ಷ್ಮಣ ಸವದಿ ನೀಡಿರುವ ಲಿಖಿತ ಭರವಸೆಯಲ್ಲಿ ಈ ಅಂಶ ಸ್ಪಷ್ಟವಾಗಿಲ್ಲ. ಆರ್ಥಿಕ ಅಂಶಗಳನ್ನು ಪರಿಗಣಿಸಿ ನಿರ್ಧಾರ ಮಾಡಲಾಗುತ್ತದೆ ಎನ್ನುವುದು ನೌಕರರ ಅಸಮಾಧಾನಕ್ಕೆ ಕಾರಣವಾಯಿತು. ಮುಷ್ಕರ ನಿರತರ ಜತೆಗೆ ಸರ್ಕಾರ ಮಾತುಕತೆ ನಡೆಸುವ ವೇಳೆ, ಜನವರಿಯಿಂದ ಆರನೇ ವೇತನ ಆಯೋಗ ಶಿಫಾರಸು ಪರಿಗಣಿಸಲಾಗುತ್ತದೆ ಎಂದು ಮೌಖಿಕವಾಗಿ ಹೇಳಲಾಗಿತ್ತು. ಆದರೆ ಲಿಖಿತವಾಗಿ ನೀಡುವಾಗ ಆ ಅಂಶ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.

    ನೌಕರರ ಎಚ್ಚರಿಕೆ

    ಮುಷ್ಕರ ಬಿಸಿ ಸದ್ಯಕ್ಕೆ ತಣ್ಣಗಾದರೂ ಸರ್ಕಾರ ಭರವಸೆ ಈಡೇರಿಸದಿದ್ದರೆ 3 ತಿಂಗಳ ನಂತರ ಪ್ರತಿಭಟನೆ ಮತ್ತೆ ಉಲ್ಬಣವಾಗುವ ಸಾಧ್ಯತೆಗಳಿವೆ. 6ನೇ ವೇತನ ಆಯೋಗದ ಶಿಫಾರಸನ್ನು ಆರ್ಥಿಕ ಪರಿಸ್ಥಿತಿ ಆಧರಿಸಿ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಶಿಫಾರಸು ಅನುಷ್ಠಾನಗೊಳಿಸುವ ಸ್ಪಷ್ಟ ಭರವಸೆಗೆ ನೌಕರರು ಪಟ್ಟು ಹಿಡಿದಿದ್ದರು. ಅಂತಿಮವಾಗಿ, ಮುಂದಿನ 3 ತಿಂಗಳ (ಮಾರ್ಚ್ ಅಂತ್ಯದೊಳಗೆ) ಒಳಗಾಗಿ 6ನೇ ವೇತನ ಆಯೋಗದ ಶಿಫಾರಸಿನ ಅನುಷ್ಠಾನ ಮತ್ತಿತರ ಭರವಸೆ ಈಡೇರಿಸದಿದ್ದರೆ ಮತ್ತೆ ಮುಷ್ಕರ ನಡೆಸುವುದಾಗಿ ನೌಕರರು ಎಚ್ಚರಿಸಿದ್ದಾರೆ.

    ಮುಷ್ಕರ ತಡೆಯಲು ಕ್ರಮ?

    ಸದ್ಯ ಮುಷ್ಕರ ಅಂತ್ಯಗೊಂಡರೂ ಮುಂದೆ ಮುಷ್ಕರ ನಡೆಯದಂತೆ ತಡೆಯಲು ಸರ್ಕಾರ ಈಗಲೇ ಸಿದ್ಧತೆ ಮಾಡಲಿದೆ. ನೌಕರ ಸಂಘಟನೆಗಳನ್ನು ದುರ್ಬಲಗೊಳಿಸುವುದು, ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು, ಮುಷ್ಕರಕ್ಕೆ ಮನಸು ಮಾಡಿದಾಗಲೆಲ್ಲ ನೌಕರರ ಮೇಲೆ ಹಿಡಿತ ಹೆಚ್ಚಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನೇ ಬದಲಿಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಬೇಕಿದೆ. ಅದನ್ನು ಮಾಡಲು ಈಗಾಗಲೆ ಚರ್ಚೆಗಳು ಶುರುವಾಗಿವೆ.

    ನೌಕರರಿಂದಿಲ್ಲ ಸ್ಪಂದನೆ

    ಎಐಟಿಯುಸಿ ಸಂಯೋಜಿತ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್​ನ ಸೋಮವಾರದಿಂದ ತನ್ನ ಸದಸ್ಯ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ನೀಡಿತ್ತು. ನೌಕರರು ಮಾತ್ರ ಆ ಕರೆಗೆ ಸ್ಪಂದನೆ ನೀಡಲಿಲ್ಲ. ಹೀಗಾಗಿ ಮುಷ್ಕರ ಅಂತ್ಯವಾಗುವವರೆಗೆ ರಾಜ್ಯಾದ್ಯಂತ ಇರುವ 22 ಸಾವಿರ ಬಸ್​ಗಳ ಪೈಕಿ 1,100 ಬಸ್​ಗಳಷ್ಟೇ ಸಂಚರಿಸಿದವು. ಆ ಮೂಲಕ ಸಾರಿಗೆ ನಿಗಮಗಳಲ್ಲಿ ಒಂದು ಸಂಘಟನೆ ದುರ್ಬಲವಾಗುವಂತಾಯಿತು.

    44 ಬಸ್​ಗಳು ಜಖಂ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಸೇವೆ ನೀಡಿದ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆದಿವೆ. ಡಿ. 11ರಂದು ಆರಂಭವಾದ ಮುಷ್ಕರ ಸೋಮವಾರ ಅಂತ್ಯಗೊಂಡಿದ್ದು, ಈ ನಾಲ್ಕು ದಿನಗಳಲ್ಲಿ 44 ಬಸ್​ಗಳು ಜಖಂಗೊಂಡಿವೆ.

    ಸರ್ಕಾರದ ಲಿಖಿತ ಭರವಸೆಗಳು

    1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ

    2. ಕರೊನಾದಿಂದ ಮೃತಪಟ್ಟ ಕುಟುಂಬದ ವರಿಗೆ 30 ಲಕ್ಷ ರೂ. ಪರಿಹಾರ

    3. ಅಂತರ ನಿಗಮ ವರ್ಗಾವಣೆ ಕುರಿತು ನೀತಿ ರಚನೆ

    4. ನೌಕರರ ತರಬೇತಿ ಅವಧಿ 2ರಿಂದ 1 ವರ್ಷಕ್ಕೆ ಇಳಿಕೆ

    5. ನಿಗಮಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವ್ಯವಸ್ಥೆ(ಎಚ್​ಆರ್​ಎಂಎಸ್) ಜಾರಿ ಮಾಡುವುದು

    6. ಸಿಬ್ಬಂದಿಗೆ ಭತ್ಯೆ (ಬಾಟಾ)ನೀಡುವುದು

    7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗಾಗುವ ಕಿರುಕುಳ ತಪ್ಪಿಸಲು ಆಡಳಿತ ವ್ಯವಸ್ಥೆ ಬದಲಾವಣೆ

    8. ಎನ್.ಐ.ಎನ್.ಸಿ. (ನಾಟ್ ಇಶ್ಯೂಡ್-ನಾಟ್ ಕಲೆಕ್ಟೆಡ್) ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ

    9. ವೇತನಕ್ಕೆ ಸಂಬಂಧಿಸಿ ಆರನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು, ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುತ್ತದೆ. 

    ಈಡೇರದ ಭರವಸೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts