More

    ಕೊನೆಗೂ ಜಿಲ್ಲೆಯಲ್ಲಿ ಸಡಿಲಿಕೆ

    ಧಾರವಾಡ ಹಲವು ದಿನಗಳಿಂದ ಲಾಕ್​ಡೌನ್​ನಿಂದ ಬಂಧಿಯಾಗಿದ್ದ ಜಿಲ್ಲೆ ಸೋಮವಾರದಿಂದ ಬಂಧಮುಕ್ತವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಘೋಷಿಸಿದ್ದ ಜಿಲ್ಲೆಗಳ ಪಟ್ಟಿಯಲ್ಲಿ ಧಾರವಾಡ ಇರಲಿಲ್ಲ. ಭಾನುವಾರ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳ ನಂತರ ಧಾರವಾಡ ಜಿಲ್ಲೆ ಅನ್​ಲಾಕ್ ಪಟ್ಟಿಗೆ ಸೇರ್ಪಡೆಯಾಗಿದೆ.
    ಜಿಲ್ಲೆಯ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇದ್ದರೂ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಜಿಲ್ಲಾಧಿಕಾರಿ, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ಜರುಗಿಸಿದರು. ಕಳೆದ ಒಂದು ವಾರದಿಂದ ಜಿಲ್ಲೆಯ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ಸಂಜೆ ಪರಿಷ್ಕೃತ ಆದೇಶ ಹೊರಡಿಸಿದ್ದು, ಜೂ. 21ರಿಂದ ಜು. 5ರವರೆಗೆ ಲಾಕ್​ಡೌನ್ ನಿರ್ಬಂಧಗಳು ಸಡಿಲಿಕೆಗೊಳ್ಳಲಿವೆ.
    ಮನೆ ಮುಂದೆ ಮದುವೆ: ಪೂರ್ವನಿಯೋಜಿತ ಮದುವೆಗಳನ್ನು ಮನೆಗಳ ಮುಂದೆ ನೆರವೇರಿಸಿ ಕೊಳ್ಳಬಹುದು. ಇದಕ್ಕೆ ಜಿಲ್ಲಾಡಳಿತದ ಪೂರ್ವಾನು ಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಮನೆ ಮುಂದೆ ಜರುಗುವ ಮದುವೆಗಳಲ್ಲಿ ಗರಿಷ್ಠ 40 ಜನ ಪಾಲ್ಗೊಳ್ಳಬಹುದು.
    ನೈಟ್ ಕರ್ಫ್ಯೂ ಮುಂದುವರಿಕೆ: ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 5ರವರೆಗೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಸಾರ್ವಜನಿಕರ ಅನಗತ್ಯ ಸಂಚಾರ ನಿರ್ಬಂಧಿಸಲಾಗಿದೆ. ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಚಿಕಿತ್ಸೆಗೆ ಈ ಅವಧಿಯಲ್ಲಿ ವಿನಾಯಿತಿ ಇದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಉದ್ಯಮ, ಕಂಪನಿಗಳಿಗೆ ಅನುಮತಿಸಲಾಗಿದೆ. ಆದರೆ, ಸಿಬ್ಬಂದಿ ಉದ್ಯಮದ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಈ ಸಮಯದಲ್ಲಿ ಅಂಗಡಿ- ಮುಂಗಟ್ಟುಗಳ ವಹಿವಾಟಿಗೆ ನಿರ್ಬಂಧವಿದ್ದರೂ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳ ಚಟುವಟಿಕೆಗಳು ಅಬಾಧಿತ.
    ವಾರಾಂತ್ಯ ನಿಷೇಧಾಜ್ಞೆ: ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿರ್ಬಂಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಅವಕಾಶವಿದೆ. ದಿನಸಿ ಅಂಗಡಿ, ಹಣ್ಣು, ತರಕಾರಿ, ಮಾಂಸ ಮೀನು, ಡೇರಿ, ಬೀದಿಬದಿ ವ್ಯಾಪಾರ, ಹಾಲಿನ ಬೂತ್, ಜಾನುವಾರುಗಳ ಮೇವು ಮಾರಾಟ ಕೇಂದ್ರಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸಬಹುದು. ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಕೈಗಾರಿಕೆ, ಕಂಪನಿ, ಸಂಸ್ಥೆಗಳ ಕಾರ್ಯಾಚರಣೆಗೆ ಅನುಮತಿ ಇದೆ. ನ್ಯಾಯಬೆಲೆ ಅಂಗಡಿ, ಮದ್ಯದ ಅಂಗಡಿ ಪಾರ್ಸೆಲ್ ವ್ಯವಸ್ಥೆಯೊಂದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ತೆರೆಯಬಹುದು. ಬಸ್, ರೈಲು, ವಿಮಾನ ಕಾರ್ಯಾಚರಣೆಗೆ ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಕಾರ್ಯನಿರ್ವಹಿಸಬಹುದು.
    ಅಂತ್ಯಸಂಸ್ಕಾರಕ್ಕೆ 5 ಜನ: ಜಿಲ್ಲೆಯಲ್ಲಿ ಅನ್​ಲಾಕ್ ಪ್ರಕ್ರಿಯೆ ಜಾರಿಯಾಗಿದ್ದರೂ ಅಂತ್ಯಸಂಸ್ಕಾರಕ್ಕೆ ಕೇವಲ 5 ಜನರಿಗೆ ಅವಕಾಶವಿದೆ. ಅಂತ್ಯಸಂಸ್ಕಾರ ದಲ್ಲಿ ಪಾಲ್ಗೊಳ್ಳುವವರು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.<

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts