More

    ನಾಯಕರ ಪ್ರಲಾಪ, ನಡೆಯದ ಕಲಾಪ: ಮೇಲ್ಮನೆಯಲ್ಲೂ ಮುಂದುವರಿದ ಧ್ವಜ ಪ್ರಕರಣ ಹಗ್ಗಜಗ್ಗಾಟ; ಸಭಾಪತಿ ಬೇಸರ

    ಬೆಂಗಳೂರು: ‘ಧ್ವಜ’ ಪ್ರಕರಣದಲ್ಲಿ ಪ್ರತಿಪಕ್ಷ-ಆಡಳಿತ ಪಕ್ಷದ ನಡುವಿನ ಹಗ್ಗಜಗ್ಗಾಟ ಮುಂದುವರಿದಿದ್ದು, ಮೇಲ್ಮನೆಯಲ್ಲಿ ಕಾಂಗ್ರೆಸ್​ನ ಧರಣಿ, ಗದ್ದಲದಿಂದ ಕಲಾಪ ಸರಿಯಾಗಿ ನಡೆಯಲಿಲ್ಲ. ಸದನ ಸುಸೂತ್ರವಾಗಿ ನಡೆಯುವುದಕ್ಕೆ ಸಹಕರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕೋರಿದರು. ಅಧಿವೇಶನ ಫೆ.14ರಿಂದ ಶುರುವಾಗಿದ್ದು, ಈವರೆಗೆ 11 ಗಂಟೆಗಳ ಚರ್ಚೆಯಾಗಿದೆ ಎಂದು ಬೇಸರ ಹೊರಹಾಕಿದರು.

    ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆ ಘಟನೆ ಬಗ್ಗೆ ಪ್ರಸ್ತಾಪಿಸಿ, ಸಚಿವ ಈಶ್ವರಪ್ಪ ಅವರೇ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದಾಗ ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಇದರಿಂದ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಬಿಜೆಪಿ ಮಧ್ಯೆ ವಾಗ್ಯುದ್ಧ ನಡೆಯಿತು. ಈ ವಿಷಯ ಯಾವ ರೂಪದಲ್ಲಿ ಪ್ರಸ್ತಾಪಿಸುತ್ತಿದ್ದೀರಿ? ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಕೇಳಿದರು. ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಬಿಡುತ್ತಿಲ್ಲವೆಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಸಭಾನಾಯಕರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೇನೆ ಕೇಳೋಣ ಸುಮ್ಮನಿರಿ ಎಂದು ಸಭಾಪತಿ ಸಲಹೆ ನೀಡಿದರು.

    ಕೋಟ ಶ್ರೀನಿವಾಸ ಪೂಜಾರಿ ಮಾತು ಮುಂದುವರಿಸಿ, ನಿಲುವಳಿ ಸೂಚನೆಯನ್ನು ಸಭಾಪತಿ ತಳ್ಳಿ ಹಾಕಿದ್ದು, ಈಶ್ವರಪ್ಪ ವಿಷಯ ಮುಗಿದ ಅಧ್ಯಾಯ. ನದಿಗಳ ಜೋಡಣೆ, ಶಿವಮೊಗ್ಗ ಘಟನೆ ಸೇರಿ ವಿವಿಧ ವಿಷಯಗಳನ್ನು ಯಾವುದೇ ರೂಪದಲ್ಲಿ ತಂದರೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದರು. ಕಾಂಗ್ರೆಸ್​ನವರು ಇದನ್ನೊಪ್ಪದೆ ಧರಣಿ, ಈಶ್ವರಪ್ಪ ವಜಾಕ್ಕೆ ಒತ್ತಾಯ, ಧಿಕ್ಕಾರ ಘೋಷಣೆ ನಡುವೆ ಪ್ರಶ್ನೋತ್ತರ ಪೂರ್ಣಗೊಳಿಸಿದ ಸಭಾಪತಿ ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು. ಭೋಜನ ವಿರಾಮದ ಬಳಿಕ ಸದನ ಸೇರಿದಾಗ ಕಾಂಗ್ರೆಸ್​ನವರ ಧರಣಿ, ಗದ್ದಲದ ನಡುವೆ ಗಮನ ಸೆಳೆಯುವ ಸೂಚನೆ ಪ್ರಕ್ರಿಯೆಯನ್ನು ಸಭಾಪತಿ ಪೂರೈಸಿದರು.

    ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಭಾಪತಿ ಪೀಠದ ತೀರ್ಪು ಹೊರಬಿದ್ದ ನಂತರವೂ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದೆ. ಅವರ (ಕಾಂಗ್ರೆಸ್) ನಿಲುವಿಗೆ ಅವರು ಬದ್ಧರಾಗಿದ್ದು, ಈಶ್ವರಪ್ಪ ಅವರಿಂದ ರಾಜೀನಾಮೆ ಕೊಡಿಸುವುದಿಲ್ಲ ಎಂಬ ನಿರ್ಧಾರಕ್ಕೆ ಸರ್ಕಾರವೂ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

    ಪಿಯು ಕಾಲೇಜುಗಳಿಗಿಲ್ಲ ಬಿಸಿಯೂಟ: ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್​ನಲ್ಲಿ ಬಿಜೆಪಿಯ ಡಾ.ವೈ.ಎ.ನಾರಾಯಣಗೌಡ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದರು.

    ಹಂಪ್ ತೆರವಿಗೆ ಸೂಚನೆ: ರಾಜ್ಯಾದ್ಯಂತ ರಸ್ತೆ ಉಬ್ಬು ತೆರವು ಮಾಡಲಾಗುತ್ತಿದೆ. ಕೆಲವು ಕಡೆ ರಸ್ತೆ ಹಂಪ್ ಬೇಕೆಂಬ ಬಗ್ಗೆ ಗ್ರಾಮಸ್ಥರ ಒತ್ತಾಯವಿದೆ ಎಂದು ಕಂದಾಯ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. ಪ್ರಶ್ನೋತ್ತರ ವೇಳೆ ಶಾಸಕ ಕುಮಾರ್ ಬಂಗಾರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಅವೈಜ್ಞಾನಿಕವಾಗಿರುವ ಹಂಪ್ ತೆಗೆಯಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಕೆಲವು ಕಡೆ ಗ್ರಾಮಸ್ಥರ ಒತ್ತಡವಿದೆ ಎಂದರು. ಹಾಗೆಯೇ ರಸ್ತೆ ಕಾಮಗಾರಿಗಳಿಗೆ ಏಕರೂಪ ಎಸ್​ಆರ್ ದರ ನಿಗದಿ ಮಾಡುವ ಪ್ರಕ್ರಿಯೆ ನಡೆದಿದೆ. ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಹೇಳಿದರು

    ಪರಿಹಾರ ಹೆಚ್ಚಿಸಲು ಆಗ್ರಹ: ಅಕಾಲಿಕವಾಗಿ ಮೃತಪಡುವ ಕುರಿಗಳಿಗೆ 10 ಸಾವಿರ ರೂ.ನಂತೆ ಪರಿಹಾರವನ್ನು ಸಾಕಾಣಿಕೆದಾರರಿಗೆ ನೀಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹಾಗೂ ರಾಜೂಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ಬಂಡೆಪ್ಪ, 3-6 ತಿಂಗಳ ಕುರಿ ಮೇಕೆ ಮರಿ ಮೃತಪಟ್ಟರೆ 2,500 ರೂ., 6 ತಿಂಗಳ ಮೇಲ್ಪಟ್ಟ ಕುರಿಗೆ ಪರಿಹಾರವಾಗಿ 5 ಸಾವಿರ ರೂ. ನೀಡಲಾಗುತ್ತಿದೆ. ಈ ಮೊತ್ತ ಹೆಚ್ಚಿಸಬೇಕಾಗಿದೆ ಎಂದು ಒತ್ತಾಯಿಸಿದರು. ಈ ವೇಳೆ ದನಿಗೂಡಿಸಿದ ರಾಜೂಗೌಡ, ನಾನು ವೃತ್ತಿಯಲ್ಲಿ ಕುರುಬ, 7 ಸಾವಿರ ಕುರಿಗಳಿವೆ. ಇತ್ತೀಚೆಗೆ 1,400 ಕುರಿ ಮೃತಪಟ್ಟವು, ನಾನು ಹೇಗೋ ತಡೆದುಕೊಂಡೆ. ಸಾಮಾನ್ಯ ಸಾಕಾಣಿಕೆದಾರರಿಗೆ ಇದು ಕಷ್ಟವಾಗುತ್ತದೆ. ಹೀಗಾಗಿ 10 ಸಾವಿರ ರೂ.ವರೆಗೆ ಪರಿಹಾರ ಕೊಡಬೇಕೆಂದರು.

    ಶಿಕ್ಷಣ ಯೋಜನೆಗಳಿಗೆ 9,904 ಕೋಟಿ ರೂ. ನೆರವು

    ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಯೋಜನೆ, ಕಾರ್ಯಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಕಳೆದ 13 ವರ್ಷಗಳಲ್ಲಿ 9904.64 ಕೋಟಿ ರೂ.ಗಳ ನೆರವು ನೀಡಿದೆ. ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉತ್ತರಿಸಿ, ಸರ್ವ ಶಿಕ್ಷಣ ಅಭಿಪ್ರಾಯ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗಳಡಿ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 990464.16 ಲಕ್ಷ ರೂ. ಬಿಡುಗಡೆಯಾಗಿದೆ ಎಂಬ ಮಾಹಿತಿ ನೀಡಿದರು.

    ಸರ್ವ ಶಿಕ್ಷಣ ಅಭಿಯಾನ (2001-08)- 2,24,712.75 ಲಕ್ಷ ರೂ., ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (2009-17)- 5,24,991.64 ಲಕ್ಷ ರೂ., ಸಮಗ್ರ ಶಿಕ್ಷಣ ಕರ್ನಾಟಕ (2018-21)- 1,96,826.70 ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ (2021-22 ಅಪೂರ್ಣ)- 43,933.27 ಲಕ್ಷ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ಹೈಕೋರ್ಟ್ ಆದೇಶದಂತೆ ಸರ್ಕಾರಿ ಶಾಲೆಗಳಿಗೆ ಮೂಲ ಸವಲತ್ತು ಒದಗಿಸಲೆಂದು 2019-20ರಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದಿಂದ ವಿವಿಧ ಕಾಮಗಾರಿಗಳಿಗೆ 8826.95 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.

    4738 ಶಾಲೆಗಳಿಗೆ ಶೌಚಗೃಹಗಳಿಲ್ಲ: ರಾಜ್ಯದ 4738 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚ ಗೃಹಗಳಿಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ನ ಸುನೀಲಗೌಡ ಪಾಟೀಲ್ ಪ್ರಶ್ನೆಗೆ ಅವರು ಉತ್ತರಿಸಿದರು. ವಿಧಾನ ಪರಿಷತ್​ನಲ್ಲಿ ಬಿಜೆಪಿಯ ಡಾ.ವೈ.ಎ.ನಾರಾಯಣಗೌಡ ಪ್ರಶ್ನೆಗೆ ಉತ್ತರಿಸಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ತಿಳಿಸಿದರು.

    ಅರಣ್ಯ ಇಲಾಖೆ ಅಕ್ರಮ, ಅಗತ್ಯಬಿದ್ದರೆ ಎಸಿಬಿ ತನಿಖೆ: ಅರಣ್ಯ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಅಗತ್ಯಬಿದ್ದರೆ ಎಸಿಬಿಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ವೇಳೆ ಬಿಜೆಪಿಯ ಆಯನೂರು ಮಂಜುನಾಥ್ ಈ ವಿಷಯ ಪ್ರಸ್ತಾಪಿಸಿ, ಆರೋಪಿ ನೌಕರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ತನಿಖೆಗೆ ಪೂರ್ವಾನುಮತಿ ಕೋರಿ ಪತ್ರ ಬರೆದು ಆರು ತಿಂಗಳು ಕಳೆದರೂ ಪೂರ್ವಾನುಮತಿ ನೀಡದ ಕಾರಣವೇನು ಎಂದು ಕೇಳಿದರು. ಉಮೇಶ್ ಕತ್ತಿ ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆ ಈಗಾಗಲೇ ಮುಗಿದಿದ್ದು, ಆರೋಪಕ್ಕೆ ಒಳಗಾದ ನೌಕರರನ್ನು ಬೇರೆ ಕಚೇರಿಗಳಿಗೆ ನಿಯೋಜಿಸಿರುವ ಕಾರಣ ನೇಮಕಕ್ಕೆ ಸಂಬಂಧಿಸಿದ ಕಡಗಳನ್ನು ನಿರ್ವಹಿಸುತ್ತಿಲ್ಲ. ಹೀಗಾಗಿ ಸಾಕ್ಷ್ಯ ನಾಶಪಡಿಸಿ ಪ್ರಕರಣದ ತನಿಖೆಗೆ ಅಡ್ಡಿಪಡಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕೊರಗರ ಸೂರಿಗೆ ಅಡ್ಡಿಯಾದ ಮಾನದಂಡ: ಕೊರಗ ಸಮುದಾಯದವರಿಗೆ ವಸತಿ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡುತ್ತಿದ್ದರೂ ರಾಜೀವ್ ಗಾಂಧಿ ವಸತಿ ನಿಗಮದ ಮಾನದಂಡ ಹಾಗೂ ಮಾರ್ಗಸೂಚಿಯು ಫಲಾನುಭವಿಯಾಗಲು ಅಡ್ಡಿಯಾಗುತ್ತಿವೆ ಎಂಬ ಸಂಗತಿಯನ್ನು ಶಾಸಕ ರಘುಪತಿ ಭಟ್ ವಿಧಾನಸಭೆ ಗಮನಕ್ಕೆ ತಂದರು. ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ಕೊರಗ ಸಮುದಾಯದವರು ಅತ್ಯಂತ ಹಿಂದುಳಿದಿದ್ದಾರೆ. ವಸತಿ ಯೋಜನೆಯಡಿ ಮನೆಗಳನ್ನು ಪಡೆದುಕೊಳ್ಳಲು ಅವರಿಗೆ ಷರತ್ತುಗಳೇ ಅಡ್ಡಿಯಾಗುತ್ತಿದೆ. ಈ ಕಾರಣಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯಕ್ಕೆ ವಸತಿ ವಿತರಿಸುವ ಜವಾಬ್ದಾರಿ ನೀಡಲು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತು.

    ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹ: ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರು ಪ್ರತಿಭಟಿಸಿದರು. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರ ಮತ್ತು ರಾಷ್ಟ್ರ ಧ್ವಜಕ್ಕೆ ಅಪಮಾನವನ್ನು ಕಾಂಗ್ರೆಸ್ ಯಾವತ್ತೂ ಸಹಿಸುವುದಿಲ್ಲ. ಸಚಿವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕಠಿಣ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಅರ್ಜಿ ಸಲ್ಲಿಕೆ ಸಮಸ್ಯೆಗೆ ಪರಿಹಾರ: ಮಳೆಹಾನಿಯಿಂದ ಉಂಟಾದ ಕೃಷಿ, ತೋಟಗಾರಿಕೆ, ಕಾಫಿ ಬೆಳೆಗಳ ಹಾನಿಗೆ ಈವರೆಗೆ 3900 ಕೋಟಿ ರೂ. ಪರಿಹಾರ ನೀಡಲಾಗಿದೆ. ಹೆಚ್ಚುವರಿಯಾಗಿ 1100 ಕೋಟಿ ರೂ.ನೀಡಲಾಗಿದೆ. ಸರ್ವರ್ ಸಮಸ್ಯೆಯಿಂದ ರೈತರು ಇನ್ನೂ ಸಹ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಹೇಳಿದರು. ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳೆಹಾನಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ವ್ಯವಸ್ಥಿತವಾಗಿ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

    ಜೆಡಿಎಸ್ ಶಾಸಕರ ಧರಣಿ

    ವಿಧಾನಮಂಡಲದ ಉಭಯ ಸದನಗಳ ಕಲಾಪವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಾಳು ಮಾಡುತ್ತಿವೆ ಎಂದು ಆರೋಪಿಸಿ ಜೆಡಿಎಸ್ ಶಾಸಕರು ವಿಧಾನಸೌಧ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಧರಣಿ ನಡೆಸಿದರು. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡದ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರತಿಭಟನಾಕಾರರು ಘೊಷಣೆಗಳನ್ನು ಕೂಗಿ, ಭಿತ್ತಿ ಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

    ಧರಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಸಮಸ್ಯೆಗಳು ಹಾಗೂ ಜನರ ಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ನಾವು ಚರ್ಚೆ ಮಾಡಬೇಕಿತ್ತು. ಆದರೆ, ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಹದಗೆಟ್ಟ ಜನಜೀವನ ಇನ್ನೂ ಸುಧಾರಿಸಿಲ್ಲ. ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳಿಂದ ಎರಡು ಧರ್ಮಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಉಂಟಾಗಿದೆ. ಈ ಎಲ್ಲ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಬಿಜೆಪಿ ಸರ್ಕಾರಕ್ಕೂ ಹೊಣೆಗಾರಿಕೆ ಇದೆ. ಪ್ರತಿಭಟನಾ ನಿರತರನ್ನು ಮನವೊಲಿಸಬೇಕು. ಇಲ್ಲವೆ ಸದನದಿಂದ ಹೊರ ಹಾಕಿ ಕಲಾಪ ನಡೆಸಬೇಕು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts