More

    ಗಡಿ ಭಾಗಗಳ ಚೆಕ್‌ಪೋಸ್ಟ್‌ ಮೇಲೆ ಖಾಕಿ ನಿಗಾ

    ಶಿವಮೊಗ್ಗ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು ಜಿಲ್ಲಾದ್ಯಂತ ಗಡಿ ಭಾಗಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ಎಲ್ಲ ವಾಹನಗಳ ತಪಾಸಣೆ ಕೈಗೊಂಡಿದ್ದು ತೀವ್ರ ನಿಗಾ ವಹಿಸಿದ್ದಾರೆ. ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುತ್ತಿದ್ದಂತೆ ಚುನಾವಣೆ ಆಯೋಗದ ಕಟ್ಟುನಿಟ್ಟಿನ ಆದೇಶ ಪಾಲನೆ ಆಗುತ್ತಿದೆ. ಈಗಾಗಲೇ ಹಲವು ರೀತಿಯ ತಪಾಸಣೆ ಆರಂಭಗೊಂಡಿದೆ.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪ್ರತ್ಯೇಕವಾಗಿ ನಗರ ಮತ್ತು ಗ್ರಾಮಾಂತರ ಚೆಕ್‌ಪೋಸ್ಟ್‌ಗಳಿಗೆ ಗುರುವಾರ ತಡರಾತ್ರಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನ ಸುತ್ತುಕೋಟೆ, ಅತ್ತಿಬೈಲು, ಮಡಿಕೆ ಚೀಲೂರು, ಹೊಳಲೂರು ಚೆಕ್‌ಪೋಸ್ಟ್‌ಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಾ. ಆರ್.ಸೆಲ್ವಮಣಿ ಭೇಟಿ ನೀಡಿ ಪರಿಶೀಲಿಸಿದರು.
    ಗ್ರಾಮಾಂತರ ಭಾಗದಲ್ಲಿ ರಾತ್ರಿ 8.30ರಿಂದ ಆರಂಭವಾದ ಜಿಲ್ಲಾಧಿಕಾರಿಗಳ ತಪಾಸಣೆ ಕಾರ್ಯಾಚರಣೆ ತಡರಾತ್ರಿವರೆಗೂ ಸಾಗಿತ್ತು. ನಗರದಲ್ಲಿರುವ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗ್ರಾಮಾಂತರ ಭಾಗದಲ್ಲಿ ನಡೆದ ತಪಾಸಣೆ ವೇಳೆ ನೂತನ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಸಿಡಿಪಿಒ ಚಂದ್ರಪ್ಪ ಇದ್ದರು.
    ಇತ್ತ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಕೂಡ ಜಿಲ್ಲೆಯ ಹಲವು ಚೆಕ್‌ಪೋಸ್ಟ್‌ಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು, ದಾಖಲೆ ಇಲ್ಲದ ಹಣ, ಇತರ ಬೆಲೆ ಬಾಳುವ ವಸ್ತುಗಳಿದ್ದರೆ ವಾಹನ ಮತ್ತು ಅದರಲ್ಲಿದ್ದವರನ್ನು ವಶಕ್ಕೆ ಪಡೆಯುವಂತೆ ಸೂಚಿಸಿದರು. ಎಸ್ಪಿ ನಿರ್ದೇಶನದ ಮೇರೆಗೆ ಡಿವೈಎಸ್ಪಿಗಳು, ವೃತ್ತ ನಿರೀಕ್ಷಕರು, ಇನ್‌ಸ್ಪೆಕ್ಟರ್‌ಗಳು ಮತ್ತು ಪಿಎಸ್‌ಐಗಳು ತಮ್ಮ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts