More

    ಡಾಂಬರೀಕರಣ ಕಾಣದ ಕೊಟ್ಟೂರು-ಚಿರಬಿ ರಸ್ತೆ

    ಧಾರಾಕಾರ ಮಳೆಗೆ ಮತ್ತಷ್ಟು ಹದಗೆಟ್ಟ ಮಾರ್ಗ | ತಗ್ಗು-ಗುಂಡಿಗಳ ನಡುವೆ ವಾಹನ ಸಂಚಾರ ದುಸ್ತರ

    ಕೊಟ್ಟೂರು: ಕೊಟ್ಟೂರು-ಚಿರಬಿ ಸಂಪರ್ಕ ರಸ್ತೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ.

    ಮೂರು ನಾಲ್ಕು ವರ್ಷಗಳಿಂದ ಚಿರಬಿ ರಸ್ತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಜನರ ಒತ್ತಾಯದ ಮೇರೆಗೆ ಕೊಟ್ಟೂರಿನಿಂದ ಬೋರನಹಳ್ಳಿ ಕ್ರಾಸ್ ಅರ್ಧಫರ್ಲಾಂಗವರೆಗೆ ಡಾಂಬರೀಕರಣ ಮಾಡಲಾಗಿದೆ. ಕೆಮ್ಮಣ್ಣುಗುಂಡಿ ದಾಟಿ ಚಿರಬಿ ಕಾದಿಟ್ಟ ಅರಣ್ಯ ಮುಕ್ತಾಯದವರೆಗೆ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ದ್ವಿಚಕ್ರ ವಾಹನ, ಕಾರು, ಬಸ್, ಲಾರಿಗಳ ಸಂಚಾರ ಕಷ್ಟವಾಗಿದೆ. ರಸ್ತೆ ತಗ್ಗು- ಗುಂಡಿಗಳಿಂದ ಆವೃತವಾಗಿದ್ದು, ರಾತ್ರಿ ವೇಳೆ ಬೈಕ್ ಸವಾರರು ಜಾರಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ. ಇದೇ ಕಾರಣಕ್ಕೆ ಮೊಳಕಾಲ್ಮೂರಿನಿಂದ ವಾಹನಗಳು ಕೂಡ್ಲಿಗಿ ಮೂಲಕ ಕೊಟ್ಟೂರಿಗೆ ಬರುವ ಅನಿವಾರ್ಯ ಉಂಟಾಗಿದೆ. ಈ ಹಿಂದೆ ಶಾಸಕರಾಗಿದ್ದ ಭೀಮಾನಾಯ್ಕ, ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಏನೂ ಮಾಡಲಿಲ್ಲ. ಈಗ ಆಯ್ಕೆಯಾದ ಶಾಸಕ ನೇಮಿರಾಜ ನಾಯ್ಕ ಸಹ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ಮಾರ್ಗದ ಮೂಲಕ ಚಿರಬಿ, ಗಂಗಮ್ಮನಹಳ್ಳಿ, ಸೂಲದಹಳ್ಳಿ, ಅಗ್ರಹಾರ, ಗುಣಸಾಗರ ಸೇರಿ ಸುತ್ತಲಿನ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದು ನಿತ್ಯ ಕೊಟ್ಟೂರಿಗೆ ಬಂದು ಹೋಗುತ್ತಿದ್ದಾರೆ. ಆದ್ದರಿಂದ ಲೋಕೋಪಯೋಗಿ ಇಲಾಖೆ ತಕ್ಷಣ ರಸ್ತೆ ರಿಪೇರಿ ಮತ್ತು ಡಾಂಬರೀಕರಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಕೊಟ್ಟೂರು ಮತ್ತು ಚಿರಬಿ ಸಂಪರ್ಕ ರಸ್ತೆ ಎರಡು ಕಿಮೀವರೆಗೆ ಹದಗೆಟ್ಟಿದ್ದು, ಗಮನಕ್ಕೆ ಬಂದಿದೆ. ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಮಾಡಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತೀಚೆಗೆ ಘೋಷಿಸಿದ ಬಜೆಟ್‌ನಲ್ಲಿ ಈ ರಸ್ತೆ ಕಾಮಗಾರಿ ಸೇರಿದೆ. ಹಣ ಬಿಡುಗಡೆಗೊಂಡ ತಕ್ಷಣ ಕೆಲಸ ಆರಂಭಿಸಲಾಗುವುದು.
    | ಕೆ.ನಾಗನಗೌಡ ಪ್ರಭಾರ ಎಇಇ, ಪಿಡಬ್ಲುೃಡಿ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts